ಇಂದು ಕೆಎಲ್‌ಇ ಮೆಡಿಕಲ್‌ ಕಾಲೇಜ್‌ ಲೋಕಾರ್ಪಣೆ

KannadaprabhaNewsNetwork |  
Published : Sep 19, 2026, 02:15 AM IST
ಕೆಎಲ್‌ಇ  | Kannada Prabha

ಸಾರಾಂಶ

ಕೆಎಲ್‌ಇ ಜ. ಗಂಗಾಧರ ಮಹಾಸ್ವಾಮೀಜಿ ಮೂರುಸಾವಿರಮಠ ವೈದ್ಯಕೀಯ ಮಹಾವಿದ್ಯಾಲಯ (ಜೆಜಿಎಂಎಂಎಂಸಿ) ಮತ್ತು 1,200 ಹಾಸಿಗೆಗಳ ಕೆಎಲ್‌ಇ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರ (ಕೆಎಲ್‌ ಇ-ಎಚ್‌ಎಂಆರ್‌ಸಿ)ವನ್ನು ಸೆ.19ರಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಲೋಕಾರ್ಪಣೆಗೊಳಿಸಲಿದ್ದಾರೆ.

ಹುಬ್ಬಳ್ಳಿ:

ಉತ್ತರ ಕರ್ನಾಟಕದ ವೈದ್ಯಕೀಯ ಶಿಕ್ಷಣ ಹಾಗೂ ಆರೋಗ್ಯ ಸೇವಾ ಕ್ಷೇತ್ರಕ್ಕೆ ಹೊಸ ಆಯಾಮ ನೀಡುವ ಇಲ್ಲಿನ ಗಬ್ಬೂರು ಕ್ರಾಸ್‌ನಲ್ಲಿ ಕೆಎಲ್‌ಇ ಜ. ಗಂಗಾಧರ ಮಹಾಸ್ವಾಮೀಜಿ ಮೂರುಸಾವಿರಮಠ ವೈದ್ಯಕೀಯ ಮಹಾವಿದ್ಯಾಲಯ (ಜೆಜಿಎಂಎಂಎಂಸಿ) ಮತ್ತು 1,200 ಹಾಸಿಗೆಗಳ ಕೆಎಲ್‌ಇ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರ (ಕೆಎಲ್‌ ಇ-ಎಚ್‌ಎಂಆರ್‌ಸಿ)ವನ್ನು ಸೆ.19ರಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಲೋಕಾರ್ಪಣೆಗೊಳಿಸಲಿದ್ದಾರೆ. ಇದಕ್ಕಾಗಿ ಸಕಲ ಸಿದ್ಧತೆಗಳು ಪೂರ್ಣಗೊಂಡಿದ್ದು ಮುಂಜಾಗ್ರತಾ ಕ್ರಮವಾಗಿ ಬಿಗಿಭದ್ರತೆ ಏರ್ಪಡಿಸಲಾಗಿದೆ.

ಶುಕ್ರವಾರ ರಾತ್ರಿ 9 ಗಂಟೆಗೆ ಹುಬ್ಬಳ್ಳಿಗೆ ಆಗಮಿಸಿದ ಅಮಿತ್‌ ಶಾ ಅವರನ್ನು ಬಿಜೆಪಿ ನಾಯಕರು ಸ್ವಾಗತಿಸಿದರು. ನಗರದ ಖಾಸಗಿ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಕಾರ್ಯಕ್ರಮದ ಹಿನ್ನೆಲೆ ಗಬ್ಬೂರು ವೃತ್ತದಲ್ಲಿರುವ ಕೆಎಲ್‌ಇ ಜೆಜಿಎಂಎಂ ವೈದ್ಯಕೀಯ ಕಾಲೇಜು ಕಟ್ಟಡ ಎದುರು ಬೃಹತ್ ಪೆಂಡಲ್ ನಿರ್ಮಿಸಲಾಗಿದೆ. 10 ಸಾವಿರ ಜನರಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಸನ ವ್ಯವಸ್ಥೆ ಮಾಡಲಾಗಿದೆ. ಬೆಳಿಗ್ಗೆ 11.30ಕ್ಕೆ ಸಮಾರಂಭದ ಸ್ಥಳಕ್ಕೆ ಆಗಮಿಸುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಒಂದೂವರೆ ಗಂಟೆಗೂ ಹೆಚ್ಚು ಕಾಲ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಸಂಸದರಾದ ಜಗದೀಶ ಶೆಟ್ಟರ್‌, ಬಸವರಾಜ ಬೊಮ್ಮಾಯಿ ಸಾಥ್‌ ನೀಡಲಿದ್ದಾರೆ. ಮೂರುಸಾವಿರ ಮಠದ ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು ಅತಿಥಿಯಾಗಿ ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ ಪಾಟೀಲ, ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್, ವಿಪ ಸದಸ್ಯ ಬಸವರಾಜ ಹೊರಟ್ಟಿ, ರಾಜ್ಯಸಭಾ ಸದಸ್ಯ ಎಂ. ನಾಗರಾಜ, ಶಾಸಕರಾದ ಪ್ರಸಾದ ಅಬ್ಬಯ್ಯ, ಅರವಿಂದ ಬೆಲ್ಲದ, ಮಹೇಶ ಟೆಂಗಿನಕಾಯಿ, ಎಂ.ಆರ್. ಪಾಟೀಲ ಭಾಗವಹಿಸಲಿದ್ದಾರೆ.

ಬೆಳಗಾವಿ ಕೆಎಲ್‌ಇ ಸಂಸ್ಥೆ ಅಧ್ಯಕ್ಷ ಮಹಾಂತೇಶ ಕೌಜಲಗಿ ಅಧ್ಯಕ್ಷತೆ ವಹಿಸಲಿದ್ದು, ಕಾಹೇರ್ ಕುಲಾಧಿಪತಿ ಡಾ. ಪ್ರಭಾಕರ ಕೋರೆ, ಅಮಿತ್ ಕೋರೆ, ಸಂದೀಪ ಶ್ರೀವಾಸ್ತವ, ಶಂಕರಣ್ಣ ಮುನವಳ್ಳಿ, ಮಂಜುನಾಥ ಮುನವಳ್ಳಿ ಭಾಗವಹಿಸಲಿದ್ದಾರೆ.

ಭರ್ಜರಿ ತಯಾರಿ:

ಸಮಾರಂಭದ ಹಿನ್ನೆಲೆ ಗಬ್ಬೂರು ವೃತ್ತದಿಂದ ಬಂಕಾಪುರ ಚೌಕ ವರೆಗೂ ರಸ್ತೆಯಲ್ಲಿ ಬ್ಯಾನರ್‌, ಬಾವುಟ ರಾರಾಜಿಸುತ್ತಿವೆ. ಕೆಎಲ್‌ಇ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಯ (ಕಾಹೇರ್) ಜೆಜಿಎಂಎಂ ವೈದ್ಯಕೀಯ ಕಾಲೇಜು ಕಟ್ಟಡ, ಕೆಎಲ್‌ಇ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರಕ್ಕೆ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ.

ಬಿಗಿ ಭದ್ರತೆ:

ಕೇಂದ್ರ ಸಚಿವ ಅಮಿತ್ ಶಾ ಕಾರ್ಯಕ್ರಮದಲ್ಲಿ ಭಾಗವಹಿಸುವ ಹಿನ್ನೆಲೆ ಹು-ಧಾ ಪೊಲೀಸ್ ಆಯುಕ್ತ ಭೂಷಣ ಬೊರಸೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಬಿಗಿ ಬಂದೋಬಸ್ತ್ ನಿಯೋಜಿಸುವಂತೆ ಕಾನೂನು ಸುವ್ಯವಸ್ಥೆ ಡಿಸಿಪಿ ಶ್ರುತಿ ಎನ್. ಹಾಗೂ ಇತರ ಸಿಬ್ಬಂದಿಗೆ ಸೂಚಿಸಿದರು. ಸೆಂಟ್ರಲ್ ಏಜೆನ್ಸಿ ತಂಡವೂ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಹು-ಧಾ ಪೊಲೀಸ್ ಕಮಿಷನರೇಟ್ ಘಟಕದಿಂದ ನಿಯೋಜಿಸಲಾಗಿದೆ. ಅದರಲ್ಲಿ ಎಸಿಪಿ 1, ಪೊಲೀಸ್ ಇನ್‌ಸ್ಪೆಕ್ಟರ್‌ 3, ಪಿಎಸ್‌ಐ 3, ಎಎಸ್‌ಐ 6, ಎಚ್‌ಸಿ 16, ಪಿಸಿ 69 ಸೇರಿ ಸುಮಾರು 91ಕ್ಕೂ ಹೆಚ್ಚು ಅಧಿಕಾರಿಗಳು ಬಂದೋಬಸ್ತ್‌ಗೆ ನಿಯೋಜಿಸಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸ್ಥಳೀಯ ಚುನಾವಣೆಗಳಿಗೆ ಕಾಂಗ್ರೆಸ್ ಸಿದ್ಧತೆ: ಮಲ್ಲಿಕಾರ್ಜುನ ನಾಗಪ್ಪ
ಎಲ್ಲರಿಗೂ ಕಾನೂನು ದೊರೆಯಲಿ: ಹುಲ್ಲೂರ ಹೇಮಲತಾ ಬಸಪ್ಪ