ದಾಬಸ್‍ಪೇಟೆ: ಐತಿಹಾಸಿಕ ಹಿನ್ನೆಲೆ ಹೊಂದಿರುವ ಸೋಂಪುರ ಹೋಬಳಿಯ ನಿಜಗಲ್ ಸಿದ್ದರಬೆಟ್ಟದಲ್ಲಿ ಡಿ.2ರಂದು ಮಂಗಳವಾರ ಅದ್ಧೂರಿ ಹನುಮ ಜಯಂತಿ ಆಚರಿಸುತ್ತಿದ್ದು ಹತ್ತು ಸಾವಿರಕ್ಕೂ ಅಧಿಕ ಹನುಮ ಮಾಲಾಧಾರಿಗಳು ಆಗಮಿಸುವ ನಿರೀಕ್ಷೆಯಿದೆ.
ಕನ್ನಡ ಸಂಸೃತಿ ಇಲಾಖೆ ವತಿಯಿಂದ ಸಾಂಸ್ಕೃತಿಕ ಕಲಾ ತಂಡಗಳಿಂದ ಜಾನಪದ ನೃತ್ಯ, ವೀರಗಾಸೆ, ಡೊಳ್ಳು ಕುಣಿತ ಆಯೋಜಿಸಿದೆ. ಮಹಿಳಾ ಸಂಘಗಳು ಪೂರ್ಣಕುಂಭ ಸ್ವಾಗತ ಕೋರಲಿದ್ದಾರೆ. ಮಧ್ಯಾಹ್ನ 2 ಗಂಟೆಗೆ ಶ್ರೀ ರಾಮಾಂಜನೇಯ ಕೃಪಾಪೋಷಿತ ನಾಟಕ ಮಂಡಳಿಯಿಂದ "ಸಂಪೂರ್ಣ ರಾಮಾಯಣ " ಪೌರಾಣಿಕ ನಾಟಕ ಪ್ರದರ್ಶನವಿದೆ. ಸಂಜೆ 6 ಗಂಟೆಗೆ ವೇದಿಕೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಭಕ್ತರಿಗೆ ವಿವಿಧ ಸಂಘ ಸಂಸ್ಥೆಗಳಿಂದ ದಾಸೋಹದ ವ್ಯವಸ್ಥೆ ಮಾಡಲಾಗಿದೆ.
ನೆಲಮಂಗಲ ತಾಲೂಕಾದ್ಯಂತ ಐದು ಸಾವಿರಕ್ಕೂ ಹೆಚ್ಚು ಹನುಮ ಮಾಲದಾರಿಗಳು ಪಾದಯಾತ್ರೆ ಬರುವುದರಿಂದ ಹಾಗೂ ಪಟ್ಟಣದಲ್ಲಿ ಸಂಚರಿಸುವುದರಿಂದ ರಾಷ್ಟ್ರೀಯ ಹೆದ್ದಾರಿ-48ರ ಉದ್ದಕ್ಕೂ ಮತ್ತು ಬೆಟ್ಟದ ಮೇಲಿರುವ ದರ್ಗಕ್ಕೂ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಮುಖ್ಯವಾಗಿ ಸೂಕ್ಷ್ಮ ಸ್ಥಳಗಳಲ್ಲಿ ಸಿಸಿ ಕ್ಯಾನರಾಗಳನ್ನು ಅಳವಡಿಸಲಾಗಿದೆ. ಭದ್ರತೆಗಾಗಿ ಒಬ್ಬರು ಡಿವೈಎಸ್‍ಪಿ, ಮೂವರು ಇನ್ಸ್‍ಪೆಕ್ಟರ್, ಆರು ಪಿಎಸ್‍ಐಗಳು, 10 ಎಎಸ್‍ಐಗಳು, ಒಂದು ಡಿಆರ್ ವಾಹನ ಸೇರಿದಂತೆ 70ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ.ಹನುಮ ಜಯಂತಿಯನ್ನು ಹಿಂದೂ ಮುಸ್ಲಿಂ ಎನ್ನದೆ ಇಬ್ಬರೂ ಶಾಂತಿಯುವಾಗಿ ಸೌಹಾರ್ದತೆಯಿಂದ ಆಚರಿಸಬೇಕು. ನಿಜಗಲ್ ಬೆಟ್ಟ ಹಿಂದಿನಿಂದಲೂ ಹಿಂದೂ-ಮುಸ್ಲಿಂ ಭಾವೈಕತ್ಯೆಯ ತಾಣವಾಗಿದ್ದು ಎರಡೂ ಧರ್ಮದವರು ಅನ್ಯೋನ್ಯವಾಗಿ ದೇವರ ಪೂಜೆ ಹಾಗೂ ಮಸೀದಿ, ದರ್ಗಾಗಳ ಪೂಜೆ ನಡೆಸುತ್ತಿದ್ದಾರೆ. ಒಂದು ವೇಳೆ ಕೋಮುಗಲಭೆ ಸೃಷ್ಟಿಸಲು ಹುನ್ನಾರ ನಡೆಸಿದರೆ ಮುಲಾಜಿಲ್ಲದೆ ಕಾನೂನು ಕ್ರಮ ಕೈಗೊಂಡು ಬಂಧಿಸಲಾಗುತ್ತದೆ. ಹಾಗಾಗಿ ಶಾಂತಿಯಿಂದ ಹನುಮಜಯಂತಿ ಆಚರಿಸುವಂತೆ ಎಂದು ದಾಬಸ್‍ಪೇಟೆ ಪೊಲೀಸ್ ಠಾಣಾ ಇನ್ಸ್ ಪೆಕ್ಟರ್ ರಾಜು ತಿಳಿಸಿದ್ದಾರೆ.
ಪೋಟೋ 3 : ಬೆಟ್ಟದಲ್ಲಿರುವ ಅಧಿದೇವರು ಸಿದ್ದಪ್ಪಸ್ವಾಮಿ