ಇಂದು ಗುದ್ನೇಶ್ವರ ಪಂಚಕಳಸ ಮಹಾರಥೋತ್ಸವ

KannadaprabhaNewsNetwork |  
Published : Dec 15, 2024, 02:03 AM IST
14ಕೆಕೆಆರ್3:ಕುಕನೂರಿನ ಗುದ್ನೇಪ್ಪನಮಠ ಶ್ರೀ ಗುದ್ನೇಶ್ವರ ಸ್ವಾಮಿ. | Kannada Prabha

ಸಾರಾಂಶ

ಪಟ್ಟಣದ ಗುದ್ನೇಪ್ಪನಮಠದ ಶ್ರೀ ಗುದ್ನೇಶ್ವರ ಸ್ವಾಮಿಯ ಪಂಚಕಳಸ ಮಹಾರಥೋತ್ಸವ ಡಿ.15ರಂದು ಸಂಜೆ 4.30ಕ್ಕೆ ಜರುಗಲಿದೆ.

ಭವ್ಯ ಪರಂಪರೆಯ ದಿವ್ಯ ತಾಣ ಗುದ್ನೇಪ್ಪನಮಠ

ಕನ್ನಡಪ್ರಭ ವಾರ್ತೆ ಕುಕನೂರು

ಪಟ್ಟಣದ ಗುದ್ನೇಪ್ಪನಮಠದ ಶ್ರೀ ಗುದ್ನೇಶ್ವರ ಸ್ವಾಮಿಯ ಪಂಚಕಳಸ ಮಹಾರಥೋತ್ಸವ ಡಿ.15ರಂದು ಸಂಜೆ 4.30ಕ್ಕೆ ಜರುಗಲಿದೆ.

ಜಾತ್ರೆ ದಿನ ಪ್ರತಿಯೊಬ್ಬರೂ ಮಾದಲಿ, ಸಜ್ಜಿ ರೊಟ್ಟಿ, ಗುರೆಳ್ಳು ಚಟ್ನಿ, ಶೆಂಗಾಚಟ್ನಿ ಮಾಡಿ ನೈವೇದ್ಯ ಅರ್ಪಿಸುತ್ತಾರೆ.

ಗುದ್ನೇಶ್ವರನ ಪಂಚಕಳಸ ರಥೋತ್ಸವಕ್ಕೆ ಐತಿಹಾಸಿಕ ಭವ್ಯ ಪರಂಪರೆ ಇದೆ. ಕುಕನೂರಿನ ಪೂರ್ವಕ್ಕೆ ಇರುವ ಗುದ್ನೇಪ್ಪನಮಠ ನಾಡಿನಲ್ಲಿಯೇ ಬಹು ವಿಶಿಷ್ಟ ಸ್ಥಳ. ಪಂಚಕಳಸ ಹೊಂದಿರುವಂತಹ ವೈಶಿಷ್ಟ್ಯತೆ ಇಲ್ಲಿದೆ. ಸಾಮಾನ್ಯವಾಗಿ ಎಲ್ಲ ರಥಗಳಿಗೆ ಒಂದೇ ಕಳಸ ಇರುವುದು ವಾಡಿಕೆ. ಆದರೆ ಈ ಗುದ್ನೇಶ್ವರನ ರಥಕ್ಕೆ ಐದು ಕಳಸಗಳಿರುವುದೊಂದು ವಿಶೇಷ.

ಗುದ್ನೇಶ್ವರ ಮಠದ ದೈವ ರುದ್ರಮುನೀಶ್ವರ ಜನ ವಾಡಿಕೆಯಲ್ಲಿ ಗುದ್ನೇಶ್ವರನೆಂದೇ ಖ್ಯಾತಿ. ರುದ್ರಮುನೀಶ್ವರರು ತಮ್ಮ ಲಿಂಗಲೀಲಾ ಶಕ್ತಿಯಿಂದ ಜನರ ಕ್ಷೋಭೆಗಳನ್ನು ದೂರೀಕರಿಸಿ ಇಂದಿಗೂ ಜನಮಾನಸದಲ್ಲಿ ಚಿರಸ್ಥಾಯಿಯಾಗಿ ನೆಲೆಸಿದ್ದಾರೆ. ರೇವಣಸಿದ್ಧ ಹಾಗೂ ಸುಂದರ ನಾಚಿಯರೇ ರುದ್ರಮನೀಶ್ವರರ ತಂದೆ-ತಾಯಿ. ಕಾಂಚಿಪುರದಿಂದ ಸಂಚಾರಗೈಯುತ್ತ ಮಂಗಳವಾಡೆಗೆ ಆಗಮಿಸಿದ ದಂಪತಿಗಳು ಈ ನಾಡಿನ ಜನರ ಸುಖ-ದುಃಖಗಳಿಗೆ ಸ್ಪಂದಿಸಿ ಸಹಕಾರ ಸಹಾಯ ನೀಡುತ್ತಾರೆ. ಮೂರು ತಿಂಗಳು ಗರ್ಭಿಣಿಯಾಗಿದ್ದ ಸುಂದರ ನಾಚಿ ತವರು ಮನೆಗೆ ಹೋಗುವ ಅಭಿಲಾಷೆ ವ್ಯಕ್ತಪಡಿಸಿದಾಗ ರೇವಣಸಿದ್ಧರು ತಮ್ಮ ಶಿವಯೋಗ ಶಕ್ತಿಯಿಂದ ಗರ್ಭದ ಕೂಸನ್ನು ಹೊರತೆಗೆದು ಭೂಮಿಯಲ್ಲಿ ಹೂಳಿಸುತ್ತಾರೆ. ಒಂಬತ್ತು ತಿಂಗಳು ತರುವಾಯದಲ್ಲಿ ಭೂಮಿಯಿಂದ ಹೊರತೆಗೆಸಿದಾಗ ಮಗು ಬೆಳದಿರುತ್ತದೆ. ಪ್ರನಾಳ ಶಿಶುವಿನ ಪ್ರಯೋಗದಂತೆ ಕೂಸು ಜನನವಾಯಿತು. ಮಗುವಿಗೆ ರುದ್ರಮುನೀಶ್ವರ ಎಂದು ನಾಮಕರಣ ಮಾಡಿದ ಎಂದು ಐತಿಹ್ಯ ಸಾರುತ್ತದೆ.

ರೇವಣಸಿದ್ಧರ ಆರೈಕೆಯೊಂದಿಗೆ ರಂಭಾಪುರಿಯಲ್ಲಿ ಬೆಳೆದ ರುದ್ರಮುನೀಶ್ವರ ಅಕ್ಷರಾಭ್ಯಾಸದಲ್ಲಿ ಪಾರಂಗತನಾಗಿ ದೇಶ ಸಂಚಾರಗೈಯುತ್ತ ಕಲ್ಯಾಣಕ್ಕೆ ಆಗಮಿಸಿದನು. ಶರಣ ಸಂದೋಹದಲ್ಲಿ ಸಮ್ಮೀಳತಗೊಂಡ ರುದ್ರಮನಿಸ್ವಾಮಿ (ಗುದ್ನೇಶ್ವರ ಸ್ವಾಮಿ) ಮಹಿಮಾಪುರುಷನಾದನು.

ಕುಕನೂರಿನ ಆಸ್ಥಾನಿಕರು ಕೊಡಮಾಡಿದ ಜಮೀನಲ್ಲಿ ಸ್ವಲ್ಪ ಸಮಯದಲ್ಲಿಯೇ ಸಮಾರು ೫೦೦ ಎಕರೆ ಭೂಮಿಯಲ್ಲಿ ಸದಾಕಾಲ ಫಸಲನ್ನು ಕೊಡುವಂತಹ ಹುಣಸೆ ಬೀಜ ಬಿತ್ತಿದರು. ಬಯಲು ನಾಡಿನಲ್ಲಿಯೂ ಸಮೃದ್ಧಿ ಬೆಳೆ ಕೊಡುವಂತಹ ಕೃಷಿ ಸಾಹಿತ್ಯ ನೀಡಿದರು. ರುದ್ರಮುನೀಶ್ವರರು ಆ ಸ್ಥಾನಿಕರ ಕರೆಯ ಮೇರೆಗೆ ಬಿತ್ತುವ ಕಾರ್ಯ ನಿಲ್ಲಿಸಿ ತಮ್ಮ ಕಾಯಕಕ್ಕೆ ಚ್ಯುತಿ ಬಂದುದಕ್ಕಾಗಿ ಲಿಂಗ ಪೂಜೆಗೈಯ್ಯುತ್ತಾ ಆ ಲಿಂಗದ ಬೆಳಕಿನಲ್ಲಿಯೇ ಬೆಳಗಾದರು. ತಾವು ಲಿಂಗ ಪೂಜೆಗೈಯುತ್ತಾ ರುದ್ರಮುನಿ ಸ್ವಾಮಿ ಗುದ್ದಿನಲ್ಲಿಯೇ ಲಿಂಗೈಕ್ಯರಾಗಿದ್ದರಿಂದ ಗುದ್ನೇಶ್ವರನೆಂದು ಕರೆಯಲಾರಂಭಿಸಿದರು. ಅಲ್ಲದೆ ಸ್ವಾಮಿಯು ಸರ್ಪದ ರೂಪದಲ್ಲಿ ಸದಾ ಇಲ್ಲಿಯೇ ನೆಲೆಸಿದ್ದಾನೆ ಎನ್ನಲಾಗುತ್ತಿದೆ.

ಪೂಜ್ಯರು ಬಿತ್ತನೆಗಾಗಿ ಬಳಸಿದ ಎತ್ತುಗಳು ಶೆಡ್ಡಿ, ಬಣವೆ ಎಲ್ಲವೂ ಶಿಲೆಯ ರೂಪ ಹೊಂದಿವೆ. ಸದ್ಯ ಅವು ಗುದ್ನೇಪ್ಪನಮಠದಲ್ಲಿವೆ. ಈಗಲೂ ಜೋಡು ಬಸವಣ್ಣನ ಗುಡಿ, ಕಲ್ಲಿನ ಬಣವೆಯನ್ನು ಈಗಲೂ ನೋಡಬಹುದಾಗಿದೆ. ಶ್ರದ್ಧೆಯಿಂದ ನಡೆದುಕೊಂಡ ಭಕ್ತರ ಇಷ್ಟಾರ್ಥಗಳೂ ಪೂರೈಸುತ್ತವೆ ಎಂಬ ನಂಬಿಕೆ ಇದೆ. ಗುದ್ನೇಪ್ಪನಮಠ ಜಾತ್ರೆಗೆ ಪೂರ್ವಕಾಲದಿಂದಲೂ ಧಾರ್ಮಿಕ ನಂಬಿಕೆಯ ಶಕ್ತಿ ಇದೆ. ಗುದ್ನೇಶ್ವರ ಸ್ವಾಮಿಯ ಪಂಚಕಳಸ ಮಹಾರಥೋತ್ಸವ ನಾಡಿನಲ್ಲಿಯೇ ವಿಶಿಷ್ಟವಾದದ್ದು. ಹಲವಾರು ಕಡೆಗಳಿಂದ ಅಪಾರ ಭಕ್ತ ಸಮೂಹ ಜಾತ್ರೆಗೆ ಆಗಮಿಸುತ್ತದೆ. ಶ್ರದ್ಧಾಭಕ್ತಿಯಿಂದ ಬೇಡಿದರೆ ಗುದ್ನೇಶ್ವರ ಸ್ವಾಮಿ ಇಷ್ಟಾರ್ಥ ಕಲ್ಪಿಸುತ್ತಾನೆ ಎನ್ನುತ್ತಾರೆ ಗುದ್ನೇಪ್ಪನಮಠದ ಶ್ರೀ ಪ್ರಭುಲಿಂಗ ದೇವರು.

ಗುದ್ನೇಶ್ವರ ಸ್ವಾಮಿಯು ಈ ಭಾಗದ ಆರಾಧ್ಯ ದೈವ. ಪಂಚಕಳಸ ಮಹಾರಥೋತ್ಸವ ನಾಡಿನಲ್ಲಿಯೇ ವಿಶೇಷವಾಗಿದೆ. ಅಲ್ಲದೆ ಗುದ್ನೇಪ್ಪನಮಠದಲ್ಲಿ ಹೆಮ್ಮರವಾಗಿ ಬೆಳೆದಿರುವ ಹುಣಸೆ ಮರಗಳು ಸ್ವಾಮಿಯ ಶಕ್ತಿ ಸಾರುತ್ತವೆ. ಗುದ್ನೇಶ್ವರ ರಥೋತ್ಸವಕ್ಕೆ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ರಥೋತ್ಸವ ವಿಜೃಂಭಣೆಯಿಂದ ಜರುಗಲಿದೆ ಎನ್ನುತ್ತಾರೆ ಭಕ್ತ ಶರಣಯ್ಯ ವಿರುಪಾಕ್ಷಯ್ಯ ಹುಣಸಿಮರದ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವ್ಯಕ್ತಿಯ ಅಕ್ರಮ ಬಂಧನದಲ್ಲಿಟ್ಟಿದ್ದಕ್ಕೆ ಸರ್ಕಾರಕ್ಕೆ ದಂಡ!
ಯಶವಂತಪುರ ಮೆಟ್ರೋ ಪ್ರವೇಶದ್ವಾರ ಸ್ಥಳಾಂತರ