ಮತ ಪಟ್ಟಿಗೆ ಸೇರ್ಪಡೆಗೆ ಇಂದೇ ಕಡೇ ದಿನ: ಜಿಲ್ಲಾಧಿಕಾರಿ ಟಿ.ವೆಂಕಟೇಶ್

KannadaprabhaNewsNetwork |  
Published : Mar 25, 2024, 12:47 AM IST
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಭಾನುವಾರ  ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆ ನಡೆಯಿತು.- | Kannada Prabha

ಸಾರಾಂಶ

ಚಿತ್ರದುರ್ಗದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಭಾನುವಾರ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆ ನಡೆಯಿತು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಮತಪಟ್ಟಿಗೆ ಹೆಸರು ಸೇರ್ಪಡೆ ಮಾಡಲು ಮಾರ್ಚ್ 25 ಕಡೆಯ ದಿನವಾಗಿದೆ ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಭಾನುವಾರ ಜರುಗಿದ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆಯಲ್ಲಿ ಅವರು ಮಾತನಾಡಿದರು.

ನಮೂನೆ-6ರಲ್ಲಿ ಮತಪಟ್ಟಿಗೆ ಹೆಸರು ಸೇರಿಸಲು ಅರ್ಜಿ ಸಲ್ಲಿಸಬಹದು. ಆನ್ಲೈನ್ ಮೂಲಕ ಸಲ್ಲಿಸಿದ ಅರ್ಜಿಗಳನ್ನು ಸಹ ಪರಿಗಣಿಸಲಾಗುವುದು. ನಮೂನೆ 8 ಸಲ್ಲಿಸುವ ತಿದ್ದುಪಡಿ ಅವಧಿ ಮುಕ್ತಾಯವಾಗಿದೆ. ಈಗಾಗಲೇ ಮತಪಟ್ಟಿ ಪರಿಷ್ಕರಣೆ ಕಾರ್ಯ ಪೂರ್ಣಗೊಂಡಿದ್ದು. ಮೃತಪಟ್ಟ ಹಾಗೂ ಸ್ಥಳಾಂತರಗೊಂಡ ಹೆಸರುಗಳನ್ನು ಮತ ಪಟ್ಟಿಯಿಂದ ತೆಗೆದುಹಾಕಲಾಗಿದೆ.

ಜಿಲ್ಲೆಯಲ್ಲಿ 85 ವರ್ಷ ಮೇಲ್ಪಟ್ಟ 17,723 ಮತದಾರರಿದ್ದಾರೆ. ಚುನಾವಣೆ ಆಯೋಗ ಇವರಿಗೆ ಮನೆಯಿಂದಲೇ ಮತದಾನ ಮಾಡಲು ಅವಕಾಶ ಕಲ್ಪಿಸಿದೆ. ಬಿ.ಎಲ್.ಒ(ಮತಗಟ್ಟೆ ಅಧಿಕಾರಿ)ಗಳು ಮನೆ ಮನೆಗೆ ತೆರಳಿ 85 ವರ್ಷ ಮೇಲ್ಪಟ್ಟವರಿಗೆ ಫಾರಂ12 ಡಿ, ನೀಡಿ ಸ್ವೀಕೃತಿ ಪಡೆಯುತ್ತಿದ್ದಾರೆ. ಮತಗಟ್ಟೆಗೆ ಆಗಮಿಸಲು ಸಾಧ್ಯವಿಲ್ಲದ ಹಾಸಿಗೆ ಹಿಡಿದ ವೃದ್ಧರು ಮನೆಯಿಂದಲೇ ಮತ ಚಲಾಯಿಸಲು ಆಯ್ಕೆ ಮಾಡಿಕೊಳ್ಳಬಹುದು. ಇದೇ ಮಾದರಿಯಲ್ಲಿ ಶೇ.40 ಕ್ಕಿಂತಲೂ ಹೆಚ್ಚಿನ ಅಂಗವೈಕಲ್ಯ ಇರುವ ವಿಕಲಚೇತನರಿಗೂ ಮನೆಯಿಂದಲೇ ಮತ ಚಲಾಯಿಸಲು ಅವಕಾಶ ಕಲ್ಪಿಸಲಾಗಿದೆ. ಜಿಲ್ಲೆಯಲ್ಲಿ 31926 ವಿಕಲಚೇತನ ಮತದಾದರು ಇದ್ದು, ಇವರಿಗೆ ಫಾರಂ 12 ಡಿ ವಿತರಿಸುವ ಕಾರ್ಯ ಪ್ರಗತಿಯಲ್ಲಿದೆ.

ಮನೆಯಿಂದ ಮತ ಚಲಾಯಿಸಲು ಆಯ್ಕೆ ಮಾಡಿಕೊಂಡವರ ವಿವರಗಳನ್ನು ಆಯಾ ಕ್ಷೇತ್ರವಾರು ಸಹಾಯಕ ಚುನಾವಣಾ ಅಧಿಕಾರಿಗಳು ಪ್ರತ್ಯೇಕ ಪಟ್ಟಿ ಸಿದ್ದಪಡಿಸುವರು. ಮತದಾರರ ಭೌಗೋಳಿಕ ಸಾಮ್ಯತೆ ಆಧರಿಸಿ ಮತದಾನಕ್ಕೆ ಅನುಕೂಲವಾಗುವಂತೆ ಮಾರ್ಗಗಳನ್ನು ರಚಿಸಲಾಗುವುದು. ಮತಗಟ್ಟೆ ಅಧಿಕಾರಿಗಳು ಮನೆ ಬಾಗಿಲಿಗೆ ತೆರಳಿ ಅಂಚೆ ಮತ ಪತ್ರದ ಮೂಲಕ ಮತದಾನ ಮಾಡಲು ಅವಕಾಶ ನೀಡುವರು. ಮನೆಯಿಂದ ಮತದಾನ ಮಾಡುವ ಮೊದಲ ದಿನದಂದು ಯಾರಾದರು ಮತದಾನದಿಂದ ಪ್ರಕ್ರಿಯೆಯಿಂದ ತಪ್ಪಿಹೊದರೇ, ಎರೆಡನೇ ಬಾರಿ ಮನೆ ಬಾಗಿಲಿಗೆ ತೆರಳಿ ಮತದಾನಕ್ಕೆ ಅವಕಾಶ ನೀಡಲಾಗುವುದು. ಈ ಎಲ್ಲಾ ವಿವರಗಳನ್ನು ರಾಜಕೀಯ ಪಕ್ಷಗಳ ಬೂತ್ ಮಟ್ಟದ ಏಜೆಂಟರುಗಳಿಗೆ ಆಯಾ ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿಗಳು ನೀಡುವರು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಿಳಿಸಿದರು.

ಜಿಲ್ಲೆಯಲ್ಲಿ 3861 ಅಗತ್ಯ ಸೇವಾ ಮತದಾರರು ಇದ್ದು, ಇವರಿಗೂ ಫಾರಂ 12 ಡಿ ನೀಡಲಾಗಿದೆ. ಇವರಿಗೆ ಮತದಾನದ ಪೂರ್ವದಲ್ಲಿ 3 ದಿನಗಳ ಕಾಲ ಪೆಸಿಲಿಟಿ ಸೆಂಟರ್ ಮತದಾನಕ್ಕೆ ಅವಕಾಶ ಕಲ್ಪಿಸಲಾಗುವುದು. ಈಗಾಗಲೇ 30 ಸಾವಿರಕ್ಕೂ ಅಧಿಕ ಮತದಾದರ ಗುರುತಿನ ಚೀಟಿಗಳನ್ನು ಅಂಚೆ ಮೂಲಕ ರವಾನೆ ಮಾಡಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಈ ಸಂದರ್ಭದಲ್ಲಿ ಮಾಹಿತಿ ನೀಡಿದರು.

ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರತಿನಿಧಿಗಳಾದ ಡಿ.ಎನ್.ಮೈಲಾರಪ್ಪ, ಸಿ.ಜಿ.ನಾಸಿರುದ್ದೀನ್, ಬಿಜೆಪಿ ಪಕ್ಷದ ಜಿಲ್ಲಾ ಕಾರ್ಯದರ್ಶಿ ಬಿ.ಯಶವಂತ್‌ಕುಮಾರ್, ಜೆಡಿಎಸ್ ಪಕ್ಷದ ಜಿಲ್ಲಾ ಮಹಾಪ್ರಧಾನ ಕಾರ್ಯದರ್ಶಿ, ಡಿ.ಗೋಪಾಲಸ್ವಾಮಿ ನಾಯಕ್, ಬಿ.ಎಸ್.ಪಿ ಪಕ್ಷದ ಲಕ್ಷ್ಮಮ್ಮ, ಸಿಪಿಎಂ ಪಕ್ಷದ ಸುರೇಶ್ ಬಾಬು ಸೇರಿದಂತೆ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿಶೇಷ ಅಗತ್ಯತೆಯುಳ್ಳ 50 ಮಕ್ಕಳ ವೈದ್ಯಕೀಯ ಮೌಲ್ಯಾಂಕನ: ಟಿ. ಮಂಜುನಾಥ್
ಕ್ರೀಡಾಂಗಣ ಕಟ್ಟಲು ಸ್ಥಳ ಮಂಜೂರು