)
ಕನ್ನಡಪ್ರಭ ವಾರ್ತೆ ದಾವಣಗೆರೆ/ಬಾಗಲಕೋಟೆ
ಟಿಕೆಟ್ ಸಿಗದಿದ್ದಕ್ಕೆ ದಾವಣಗೆರೆಯಲ್ಲಿ ಮುಸ್ಲಿಂ ಸಮುದಾಯ ಸಿಡಿದೆದ್ದಿದ್ದು, ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಸಾಧಿಕ್ ಪೈಲ್ವಾನ್ ಕಣಕ್ಕಿಳಿದಿದ್ದಾರೆ. ಪಕ್ಷದ ನಾಯಕರ ಮನವೊಲಿಕೆ ಯತ್ನಕ್ಕೆ ಬಗ್ಗದ ಪೈಲ್ವಾನ್, ಕಣದಲ್ಲಿ ಮುಂದುವರಿಯುವುದಾಗಿ ಘೋಷಿಸಿದ್ದಾರೆ. ಇದೇ ವೇಳೆ, ಕ್ಷೇತ್ರದಲ್ಲಿ ಪಕ್ಷೇತರರಾಗಿ ಹಲವರು ನಾಮಪತ್ರ ಸಲ್ಲಿಸಿದ್ದು, ಅವರಲ್ಲಿ ಬಹುತೇಕ ಅಭ್ಯರ್ಥಿಗಳು ಮುಸ್ಲಿಂ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಹೀಗಾಗಿ, ಅವರ ಮನವೊಲಿಕೆಗೂ ಕಾಂಗ್ರೆಸ್ ನಾಯಕರು ತೀವ್ರ ಕಸರತ್ತು ನಡೆಸಿದ್ದಾರೆ.
ಬಾಗಲಕೋಟೆಯಲ್ಲೂ ಕಾಂಗ್ರೆಸ್‌ಗೆ ಬಂಡಾಯದ ಬಿಸಿ ತಗುಲಿದ್ದು, ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಗೋವಿಂದರಾಜ್ ಬಳ್ಳಾರಿ ಕಣಕ್ಕಿಳಿದಿದ್ದಾರೆ. ಬಾಗಲಕೋಟೆ ನಗರ ಕಾಂಗ್ರೆಸ್ ನ ಮಾಜಿ ಪ್ರಧಾನ ಕಾರ್ಯದರ್ಶಿ, ಬಾಗಲಕೋಟೆ ನಗರಸಭೆ ಮಾಜಿ ಸದಸ್ಯರಾಗಿರುವ ಗೋವಿಂದರಾಜ್ ಬಳ್ಳಾರಿಯವರು ಉಮೇಶ ಮೇಟಿ ವಿರುದ್ಧ ಶಕ್ತಿಪ್ರದರ್ಶನಕ್ಕೆ ಸಜ್ಜಾಗಿದ್ದಾರೆ. ಕಳೆದ ಎಲೆಕ್ಷನ್ ನಲ್ಲಿ ಬಿಜೆಪಿಯ ಚರಂತಿಮಠರಿಗೆ ಎದುರಾಗಿದ್ದ ಬಂಡಾಯದ ಬಿಸಿ ಈಗ ಕಾಂಗ್ರೆಸ್ ಗೆ ಎದುರಾಗಿದೆ. ಮನವೊಲಿಕೆ ಯತ್ನದ ಮಧ್ಯೆಯೂ ಕಣದಲ್ಲಿ ಮುಂದುವರಿಯುವುದಾಗಿ ಪಟ್ಟು ಹಿಡಿದಿದ್ದಾರೆ. ಮುಂದೆ ಇಟ್ಟ ಹೆಜ್ಜೆ ಹಿಂದೆ ಇಡೋದಿಲ್ಲ ಎಂದು ಘೋಷಿಸಿದ್ದಾರೆ.ಅಭ್ಯರ್ಥಿಗಳ ಬಿರುಸಿನ ಪ್ರಚಾರ:
ಬಾಗಲಕೋಟೆಯಲ್ಲಿ ಉಪಚುನಾವಣಾ ಕಣ ರಂಗೇರಿದ್ದು, ಬಿಜೆಪಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳು ಭರ್ಜರಿ ಪ್ರಚಾರ ಕೈಗೊಂಡಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಮೇಟಿಯವರು ಬಾಗಲಕೋಟೆ ಉಸ್ತುವಾರಿ ಸಚಿವ ಆರ್ ಬಿ ತಿಮ್ಮಾಪುರ ನೇತೃತ್ವದಲ್ಲಿ ಬೆಳ್ಳಂಬೆಳಿಗ್ಗೆ ಮನೆ, ಮನೆಗೆ ತೆರಳಿ ಮತಯಾಚನೆ ನಡೆಸುತ್ತಿದ್ದಾರೆ. ಉಮೇಶ್ ಮೇಟಿಯ ಸಹೋದರ ಮಲ್ಲಿಕಾರ್ಜುನ ಮೇಟಿ, ಸಹೋದರಿ ಬಾಯಕ್ಕ ಮೇಟಿ ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು ಪ್ರಚಾರದ ವೇಳೆ ಭಾಗಿಯಾಗುತ್ತಿದ್ದಾರೆ. ಪ್ರಚಾರದ ವೇಳೆ ಜನ ಮುಖಂಡರಿಗೆ ಮಾಲೆ ಹಾಕಿ, ಆರತಿ ಮಾಡಿ, ಸ್ವಾಗತ ಕೋರುತ್ತಿದ್ದಾರೆ.
ಇದೇ ವೇಳೆ, ಬಿಜೆಪಿ ಅಭ್ಯರ್ಥಿ ಡಾ.ವೀರಣ್ಣ ಚರಂತಿಮಠ ಕೂಡ ಬಿರುಸಿನ ಪ್ರಚಾರ ಕೈಗೊಂಡಿದ್ದು, ಮತದಾರರ ಮನವೊಲಿಕೆಗೆ ಕಸರತ್ತು ಆರಂಭಿಸಿದ್ದಾರೆ. ನಗರದ ಹಲವು ವಾರ್ಡ್‌ನಲ್ಲಿ ಪಾದಯಾತ್ರೆ ಮೂಲಕ ಮನೆ, ಮನೆಗೆ ತೆರಳಿ ಮತಯಾಚನೆ ನಡೆಸಿದರು.
ದಾವಣಗೆರೆ ದಕ್ಷಿಣದಲ್ಲಿ ಬಿಜೆಪಿ ಭರ್ಜರಿ ಪ್ರಚಾರ ನಡೆಸುತ್ತಿದೆ. ಮಟ್ಟಿಕಲ್ಲು, ಬಸಾಪುರ ಸೇರಿ ಕ್ಷೇತ್ರದ ಹಲವೆಡೆ ಶ್ರೀನಿವಾಸ್ ದಾಸಕರಿಯಪ್ಪ ಬಿರುಸಿನ ಪ್ರಚಾರ ಆರಂಭಿಸಿದ್ದಾರೆ. ಬೈಕ್‌ನಲ್ಲಿ ರೌಂಡ್ಸ್ ಹಾಕಿ ಮತದಾರರ ಮನವೊಲಿಕೆಗೆ ತೀವ್ರ ಕಸರತ್ತು ನಡೆಸುತ್ತಿದ್ದಾರೆ.ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರು ಅವರು ದಾವಣಗೆರೆಯ ಎಸ್‌ಪಿಎಸ್ ನಗರ, ರಾಜೀವ್ ಗಾಂಧಿ ನಗರ ಸುತ್ತಮುತ್ತಲಿನ ಬಡಾವಣೆಗಳಲ್ಲಿ ಮನೆ, ಮನೆಗೆ ತೆರಳಿ ಪ್ರಚಾರ ನಡೆಸಿದರು. ಸ್ಥಳೀಯ ಕಾಂಗ್ರೆಸ್ ಮುಖಂಡರು ಅವರಿಗೆ ಸಾಥ್ ನೀಡಿದರು.100% ನಾಮಪತ್ರ ವಾಪಸ್ ಇಲ್ಲ ಅಷ್ಟೇ; ಸಾದಿಕ್ ಸ್ಪಷ್ಟನೆ:
ತಮ್ಮ ಸ್ಪರ್ಧೆ ಬಗ್ಗೆ ವಿಡಿಯೋ ಒಂದನ್ನು ಅವರು ಹರಿಬಿಟ್ಟಿದ್ದು, ಯಾವುದೇ ಕಾರಣಕ್ಕೂ ನಾಮಪತ್ರ ವಾಪಸ್ ಪಡೆಯಲ್ಲ ಎಂದು ಕಾಂಗ್ರೆಸ್‍ಗೆ ಸವಾಲು ಎಸೆದಿದ್ದಾರೆ. ಅಹಿಂದ ಸಮುದಾಯದ ಬೆಂಬಲದಿಂದ ಈ ಬಾರಿ ಚುನಾವಣೆ ಕಣದಲ್ಲಿ ಇದ್ದೇನೆ. ಅಹಿಂದ ಸಮುದಾಯ ಬಿಟ್ಟು ನಾನಿಲ್ಲ. ಅವರ ಆಶೀರ್ವಾದ ನನ್ನ ಮೇಲೆ ಇದೆ ಎಂದಿದ್ದಾರೆ.ನಾನು ನಾಮಪತ್ರ ವಾಪಸ್ ಪಡೆದಿದ್ದೇನೆ ಅನ್ನೋದು ಸುಳ್ಳು. ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಸುಳ್ಳು ಸುದ್ದಿ ಪ್ರಸಾರ ಮಾಡುತ್ತಿದ್ದಾರೆ. ಅಲ್ಪಸಂಖ್ಯಾತ, ಅಹಿಂದ ವರ್ಗ ಕಡೆಗಣಿಸಿದ್ದಕ್ಕೆ ರಣರಂಗದಲ್ಲಿ ನಾನು ಇದ್ದೇನೆ. ಅಲ್ಪಸಂಖ್ಯಾತರನ್ನು ಕಡೆಗಣಿಸಿದ ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸುತ್ತೇವೆ. 2028ರ ವಿಧಾನಸಭಾ ಚುನಾವಣೆಯಲ್ಲಿಯೂ ಸರ್ಕಾರಕ್ಕೆ ತಕ್ಕ ಪಾಠ ಕಲಿಸುತ್ತೇವೆ ಎಂದರು.ಇಡೀ ಕರ್ನಾಟಕದಲ್ಲಿ ಅಲ್ಪಸಂಖ್ಯಾತ ಸಮುದಾಯ ಅಸಮಾಧಾನಗೊಂಡಿದೆ. ಉಳಿದವರೆಲ್ಲರನ್ನು ಹಿಂಪಡೆಯಲು ಹೇಳಿ ನಾನೊಬ್ಬನೇ ಕಣದಲ್ಲಿ ಇರುತ್ತೇನೆ. ಪಕ್ಷೇತರ ಅಭ್ಯರ್ಥಿಗಳ ನಾಮಪತ್ರ ವಾಪಸ್ ಪಡೆಯಲು ಮಾತುಕತೆ ನಡೆಸಿದ್ದೇವೆ ಎಂದರು. ನನಗೆ ಬಹಳ ಫೋನ್‌ಗಳು ಬರುತ್ತಿವೆ. ಆದರೆ, ನಾನು ಫೋನ್ ಎತ್ತಿಲ್ಲ. ನನ್ನ ಮನವೊಲಿಸುವುದಕ್ಕೂ ಮುಂಚೆ ಅಹಿಂದ ವರ್ಗದ ಮನವೊಲಿಸಲಿ. ನೂರಕ್ಕೆ ನೂರು ನಾನು ನಾಮಪತ್ರ ವಾಪಸ್ ಪಡೆಯಲ್ಲ ಎಂದರು.