ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಮಾನವನ ಸಮಸ್ಯೆಗಳಿಗೆ ವಚನಗಳಲ್ಲಿ ಪರಿಹಾರವಿದೆ ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್‌ ರಾಜ್ಯಾಧ್ಯಕ್ಷ ಡಾ.ಸಿ.ಸೋಮಶೇಖರ್ ತಿಳಿಸಿದರು.

ನಗರದ ಕುವೆಂಪು ರಂಗಮಂದಿರದಲ್ಲಿ ಏಳನೇ ಜಿಲ್ಲಾ ಶರಣ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, 12ನೇ ಶತಮಾನದಲ್ಲಿ ಬಸವಾದಿ ಶರಣರು ರಚಿಸಿದ ವಚನಗಳಲ್ಲಿ ನಮ್ಮೆಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ ಎಂದು ಹೇಳಿದರು.

ಪ್ರಸ್ತುತ ದಿನಮಾನಗಳಲ್ಲಿ ಮಕ್ಕಳಿಗೆ ವಚನ ಮತ್ತು ಅದರ ಸಾರವನ್ನು ತಿಳಿಸಿಕೊಡುವ ಅಗತ್ಯವಿದೆ. ಆ ಮೂಲಕ ಮಕ್ಕಳಲ್ಲಿ ಶರಣರ ಸಾಹಿತ್ಯದ ಬಗ್ಗೆ ಆಸಕ್ತಿ ಮೂಡಿಸುವ ಕೆಲಸವನ್ನು ನಾವೆಲ್ಲರೂ ಮಾಡಬೇಕಿದೆ ಎಂದರು.

12ನೇ ಶತಮಾನದಲ್ಲಿ ಬಸವಾದಿ ಶರಣರು ಸಾಮಾಜಿಕ ಕ್ರಾಂತಿಯನ್ನೇ ಮಾಡಿದ್ದಾರೆ. ಅದು ಇಂದಿಗೂ ಎಂದೆಂದಿಗೂ ಅವಶ್ಯಕವಾಗಿದೆ ಎಂದು ಹೇಳಿದರು.


ಸಂಸದ ಬಿ.ವೈ. ರಾಘವೇಂದ್ರ ಮಾತನಾಡಿ, ವಚನ ಸಾಹಿತ್ಯ ಮನುಕುಲಕ್ಕೆ ಶಕ್ತಿ ತುಂಬಿದೆ. ಅಲ್ಲಮನ ಭಕ್ತಿ, ಅಕ್ಕನ ಭಕ್ತಿ ಎರಡೂ ಕೂಡ ಈ ಜಿಲ್ಲೆಯ ಮಣ್ಣಿನಲ್ಲಿ ಇದೆ. ಅಂತಹ ನಾಡಿನಲ್ಲಿ ಶರಣರು ಜನ್ಮ ತಾಳಿದ್ದಾರೆ. ಈ ಜಿಲ್ಲೆಯಲ್ಲಿ ಇಂತಹ ಶರಣ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದು ಅತ್ಯಂತ ಸಂತೋಷದ ಸಂಗತಿ ಎಂದರು.

ಕಳೆದ ಒಂದು ಪೀಳಿಗೆ ಹಿಂದೆ ಪೋಷಕರು ಮಕ್ಕಳಿಗೆ ಮುಂಜಾನೆ ಮತ್ತು ಸಂಜೆ ವಚನ, ದೇವರನಾಮ ಸೇರಿದಂತೆ ಅನೇಕ ಸಂಸ್ಕಾರಗಳನ್ನು ನೀಡುತ್ತಿದ್ದರು. ಆದರೆ, ಪ್ರಸ್ತುತ ದಿನಮಾನಗಳಲ್ಲಿ ಮಕ್ಕಳಿಗೂ ಸಮಯವಿಲ್ಲ, ಅಂತಹ ಸಂಸ್ಕಾರ ನೀಡಲು ಪೋಷಕರಿಗೂ ಸಮಯವಿಲ್ಲ. ಮೊಬೈಲ್ ನೋಡಲು ಎಲ್ಲರಿಗೂ ಸಮಯವಿದೆ ಎಂದು ಮಾರ್ಮಿಕವಾಗಿ ನುಡಿದರು.

ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಸುತ್ತೂರು ಶಿವರಾತ್ರಿ ದೇಶೀಕೇಂದ್ರ ಮಹಾಸ್ವಾಮೀಜಿ ಆಶೀರ್ವಚನ ನೀಡಿ, ನಾನು, ನನ್ನದು ಮತ್ತು ದ್ವೇಷ, ಪ್ರತಿಷ್ಠೆ ಇವುಗಳನ್ನು ತೊಡೆದು ಹಾಕಿದಾಗ ಯುದ್ಧ ಎನ್ನುವಂತಹ ಸಂದರ್ಭವೇ ಬರುವುದಿಲ್ಲ. ಇದ್ಯಾವುದನ್ನೂ ಮಾಡದೇ ಇರುವುದರಿಂದ ಪ್ರಸ್ತುತ ನಮಗೆ ಯುದ್ಧದ ಕಾರ್ಮೋಡ ಎಲ್ಲೆಡೆ ಕಂಡು ಬರುತ್ತಿದೆ ಎಂದರು.

12ನೇ ಶತಮಾನದಲ್ಲಿ ಬಸವಾದಿ ಶರಣರು ರಚಿಸಿದಂತಹ ವಚನಗಳನ್ನು ನಾವು ಜಗತ್ತಿಗೆ ಸಾರಿದ್ದರೆ ಅಂಬೇಡ್ಕರ್ ಅವರು ಸಂವಿಧಾನ ರಚನೆ ಸಂದರ್ಭದಲ್ಲಿ ಮೊದಲಿಗೆ ಶರಣರ ವಚನಗಳನ್ನೇ ಉಲ್ಲೇಖಿಸುತ್ತಿದ್ದರು. ಇದನ್ನು ಸ್ವತಃ ಅಂಬೇಡ್ಕರ್ ಅವರೇ ಕಾರ್ಯಕ್ರಮವೊಂದರಲ್ಲಿ ಮಾಜಿ ಸಿಎಂ ನಿಜಲಿಂಗಪ್ಪನವರಿಗೆ ಹೇಳಿದ್ದರು ಎಂದು ಸ್ಮರಿಸಿದ ಅವರು, ಸಮಾನತೆ, ಸಂವಿಧಾನದ ಮೌಲ್ಯಗಳು ಶರಣರ ವಚನಗಳಲ್ಲಿ ಅಡಗಿವೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಶರಣ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಡಾ. ಶ್ರೀ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮೀಜಿ, ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಅಂಬ್ರಯ್ಯ ಮಠ, ಡಾ. ಧನಂಜಯ ಸರ್ಜಿ, ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಮಹಾರುದ್ರ, ಮಾಜಿ ಶಾಸಕ ಎಸ್. ರುದ್ರೇಗೌಡ, ಎಸ್.ಎಸ್. ಜ್ಯೋತಿಪ್ರಕಾಶ್, ಬೆನಕಪ್ಪ ಇತರರು ಉಪಸ್ಥಿತರಿದ್ದರು.