ಕನ್ನಡಪ್ರಭ ವಾರ್ತೆ ಭದ್ರಾವತಿ
ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ದೇಶದಲ್ಲಿ ಆರ್‌ಎಸ್‌ಎಸ್ ಹೇಗೆ ತನ್ನದೇ ಆದ ಸೈದ್ಧಾಂತಿಕ ನೆಲಗಟ್ಟಿನಲ್ಲಿ ಬಲಿಷ್ಠವಾಗಿ ಬೆಳೆದು ನಿಂತಿದೆಯೋ, ಅದೇ ರೀತಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯಾದ್ಯಂತ ಎಲ್ಲಾ ೩೧ ಜಿಲ್ಲೆಗಳಲ್ಲಿ ಬೆಳೆದು ನಿಂತಿದೆ. ಪ್ರೊ. ಬಿ.ಕೃಷ್ಣಪ್ಪ ಅವರು ೧೯೭೪ರಲ್ಲಿ ವಿಐಎಸ್‌ಎಲ್ ಕಾರ್ಮಿಕನ ಜೊತೆ ನಡೆದ ಅಸ್ಪೃಶ್ಯತೆ ನಡವಳಿಕೆ ಖಂಡಿಸಿ ಕಾರ್ಮಿಕರನ್ನು ಸಂಘಟಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಚಳವಳಿಗೆ ನಾಂದಿ ಹಾಡಿದರು ಎಂದರು.
ಸಮಿತಿ ನಡೆಸಿದ ಹೋರಾಟದ ಫಲವಾಗಿ ಬಗರ್‌ಹುಕುಂ ಚಳವಳಿ, ಬೆತ್ತಲೆ ಸೇವೆ ಪದ್ಧತಿ ನಿಷೇಧ, ಜಾತಿನಿಂದನೆ ಕಾಯಿದೆ, ಪಿಟಿಸಿಲ್ ಕಾಯಿದೆ ಸೇರಿದಂತೆ ಅನೇಕ ಕಾಯಿದೆ ಗಳು ಜಾರಿಗೆ ಬಂದಿವೆ ಎಂದರು.ಸಮಿತಿ ಜಿಲ್ಲಾ ಸಂಚಾಲಕ ಚಿನ್ನಯ್ಯ ಮಾತನಾಡಿ, ಶೋಷಿತರ ಧ್ವನಿಯಾಗಿ ಜ. ೧೯ರಂದು ಬೆಳಿಗ್ಗೆ ೧೧ ಗಂಟೆಗೆ ನಗರದ ರಂಗಪ್ಪ ವೃತ್ತ, ಜೈಭೀಮ್ ನಗರದಿಂದ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ. ಬಿ.ಎಚ್ ರಸ್ತೆ ಅಂಬೇಡ್ಕರ್ ವೃತ್ತದವರೆಗೂ ಮೆರವಣಿಗೆ ಸಾಗಲಿದೆ. ನಂತರ ಸಂವಿಧಾನ ಶಿಲ್ಪಿ ಬಾಬಾಸಾಹೇಬ್ ಅಂಬೇಡ್ಕರ್ ಹಾಗೂ ಪ್ರೊ. ಬಿ. ಕೃಷ್ಣಪ್ಪನವರ ಭಾವಚಿತ್ರಕ್ಕೆ ಗೌರವ ನಮನ ಸಲ್ಲಿಸಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ತಾಲೂಕು ಸಂಚಾಲಕ ಕೆ.ರಂಗನಾಥ, ಪ್ರಮುಖರಾದ ಕಾಣಿಕ್ ರಾಜ್, ಸಂದೀಪ, ಈಶ್ವರಪ್ಪ, ನರಸಿಂಹ, ಪ್ರಸನ್ನ ಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.