ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಜೀವನ ಮೌಲ್ಯಗಳನ್ನು ಕಲಿಸದ ಶಿಕ್ಷಣ ಕೇವಲ ಅಕ್ಷರ ಕಲಿಯಾಗುತ್ತದೆ ಎಂದು ಗ್ರಾಮ ಭಾರತಿ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಎಸ್.ಸಿ.ಕಿರಣ್‌ಕುಮಾರ್ ಅಭಿಪ್ರಾಯಪಟ್ಟರು.ಪಟ್ಟಣದ ಗ್ರಾಮ ಭಾರತಿ ವಿದ್ಯಾ ಸಂಸ್ಥೆ ಆವರಣದಲ್ಲಿ ತಾಲೂಕು ಕ್ಷೇತ್ರ ಶಿಕ್ಷಣ ಇಲಾಖೆ, ಕ್ಷೇತ್ರ ಸಂಪನ್ಮೂಲ ಕೇಂದ್ರ ಮತ್ತು ಗ್ರಾಮ ಭಾರತಿ ವಿದ್ಯಾಸಂಸ್ಥೆ ಅಶ್ರಯದಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಬಹುತೇಕ ಶಾಲೆಗಳಲ್ಲಿ ಕೇವಲ ಪಠ್ಯಾಧಾರಿತ ಅಕ್ಷರ ಕಲಿಕೆಗೆ ಸೀಮಿತವಾಗಿದೆ. ನಮ್ಮ ಬೋಧನಾ ವಿಧಾನಗಳಲ್ಲಿ ಬದಲಾವಣೆ ಆಗಬೇಕು. ಅಂಕಗಳಿಕೆಗೆ ನೀಡುವಷ್ಟೇ ಪ್ರಧಾನತೆಯನ್ನು ಜೀವನ ಮೌಲ್ಯಗಳ ಕಲಿಕೆಗೂ ನೀಡಬೇಕು. ವಿದ್ಯೆ ಕಲಿತವರು ಮಾನವೀಯ ಗುಣಗಳನ್ನು ಬೆಳೆಸಿಕೊಂಡು ಸಮಾಜ ಮುಖಿಯಾದರೆ ಮಾತ್ರ ಯಶಸ್ಸು ಸಾಧ್ಯ ಎಂದರು.ಗುರಿ ಸಾಧನೆಗೆ ಶಿಕ್ಷಣ ಬೇಕು. ಆದರೆ, ಅಕ್ಷರಸ್ಥರಿಗಿಂತಲೂ ಮಾನವತೆಯನ್ನು ಮೈದುಂಬಿಕೊಂಡ ವಿದ್ಯಾವಂತರು ಬೇಕು. ಇದಕ್ಕಾಗಿ ಶಿಕ್ಷಣದಲ್ಲಿ ಮಕ್ಕಳಿಗೆ ಶಿಸ್ತು ಪ್ರಧಾನವಾಗಬೇಕು. ಹಣಗಳಿಕೆ ಬದುಕಿನ ಬೆಳವಣಿಗೆಯೇ ಹೊರತು ಜೀವನದ ಯಶಸ್ಸು ಅಲ್ಲ ಎಂದರು.ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಚಂದ್ರಶೇಖರ್ ಮಾತನಾಡಿ, ಪ್ರತಿಭೆ ಸಾಧಕರ ಸ್ವತ್ತೇ ಹೊರತು ಸೋಮಾರಿಗಳದ್ದಲ್ಲ. ಪ್ರತಿಯೊಬ್ಬರಲ್ಲೂ ಸುಪ್ತ ಪ್ರತಿಭೆ ಇರುತ್ತದೆ. ಅದರ ಅನಾವರಣಕ್ಕೆ ಸೂಕ್ತ ವೇದಿಕೆ ಮತ್ತು ಸಮುದಾಯದ ಪ್ರೋತ್ಸಾಹ ಬೇಕಾಗುತ್ತದೆ ಎಂದರು.
ಸ್ಪರ್ಧೆಗಳಲ್ಲಿ ಭಾಗವಹಿಸಿರುವ ಮಕ್ಕಳು ಯಾವುದೇ ಹಿಂಜರಿಕೆಯಿಲ್ಲದೆ ತಮ್ಮ ಪ್ರತಿಭೆ ಪ್ರದರ್ಶಿಸಬೇಕು. ಇದರಿಂದ ಮಕ್ಕಳಲ್ಲಿ ಆತ್ಮ ವಿಶ್ವಾಸ ಹೆಚ್ಚುತ್ತದೆ. ಜಾಗತಿಕ ಸ್ಪರ್ಧಾತ್ಮಕ ಬದುಕಿಗೆ ಪೋಷಕರು ತಮ್ಮ ಮಕ್ಕಳನ್ನು ಸಜ್ಜುಗೊಳಿಸಬೇಕು ಎಂದರು.ಕಾರ್ಯಕ್ರಮದಲ್ಲಿ ತಾಲೂಕು ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಎಸ್.ಎಂ.ಬಸವರಾಜು, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಚ್.ಆರ್.ಪೂರ್ಣಚಂದ್ರ ತೇಜಸ್ವಿ, ಕ್ಷೇತ್ರ ಸಮನ್ವಯ ಅಧಿಕಾರಿ ಮಂಜುನಾಥ್ ಮಾತನಾಡಿದರು.
ಈ ವೇಳೆ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕರ ಸಂಘದ ಅಧ್ಯಕ್ಷ ಪ್ರಭುಕುಮಾರ್, ಶಿಕ್ಷಣಾಧಿಕಾರಿಗಳ ಸಂಘದ ಅಧ್ಯಕ್ಷ ಪುಟ್ಟರಾಜು, ಶಿಕ್ಷಣ ಇಲಾಖೆ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಆರ್.ಕೆ.ರಮೇಶ್, ಪರಿಶಿಷ್ಟ ಜಾತಿ ಪಂಗಡದ ಶಿಕ್ಷಕ ಸಂಘಟನೆ ಅಧ್ಯಕ್ಷ ಯೋಗೇಶ್, ಪಾಂಡವಪುರ ಲೋಕೇಶ್, ಶಿಕ್ಷಕ ಸಂಘಟನೆ ಪದಾಧಿಕಾರಿಗಳಾದ ಹೇಮಣ್ಣ, ಮೋಹನಕುಮಾರಿ, ದಿನೇಶ್, ಶೀಳನೆರೆ ಶಿವಕುಮಾರ್, ಎಚ್.ಎನ್.ಕೃಷ್ಣ ಸೇರಿದಂತೆ ವಿವಿಧ ಶಾಲಾ ಶಿಕ್ಷಕರು, ತೀರ್ಪುಗಾರರು ಮತ್ತು ಸ್ಪರ್ಧಾಳು ವಿದ್ಯಾರ್ಥಿಗಳು ಹಾಜರಿದ್ದರು.