ಕನ್ನಡಪ್ರಭ ವಾರ್ತೆ, ದಾವಣಗೆರೆ ನಮನ ಅಕಾಡೆಮಿ ವತಿಯಿಂದ ಮಹಾಶಿವರಾತ್ರಿಯಂದು ಸತತ 5ನೇ ವರ್ಷ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದೊಂದಿಗೆ ಶಿವಸ್ಮರಣೆ: ನೃತ್ಯ ಜಾಗರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಫೆ.26ರಂದು ರಾತ್ರಿ 9 ಗಂಟೆಯಿಂದ ಮರುದಿನ ಬೆಳಗಿನ ಜಾವ 3 ಗಂಟೆವರೆಗೆ ನಗರದ 4 ದೇವಸ್ಥಾನಗಳಲ್ಲಿ ಅಕಾಡೆಮಿ ಕಲಾವಿದರು ನೃತ್ಯಸೇವೆ ನೀಡಲಿದ್ದಾರೆ ಎಂದು ಅಕಾಡೆಮಿ ಉಪಾಧ್ಯಕ್ಷ ದಿನೇಶ ಕೆ. ಶೆಟ್ಟಿ ಹೇಳಿದರು.
ನಮನ ಅಕಾಡೆಮಿಯ ಗುರು ವಿದುಷಿ ಡಿ.ಕೆ.ಮಾಧವಿ ಮಾತನಾಡಿ, ನನ್ನನ್ನು ಒಳಗೊಂಡಂತೆ ಸಂಸ್ಥೆಯ 11 ಮಂದಿ ಕಲಾವಿದರು ಶಿವಸ್ಮರಣೆ ನೃತ್ಯ ಜಾಗರಣೆ ನಡೆಸಿಕೊಡಲಿದ್ದಾರೆ. ಒಟ್ಟು ತಲಾ 40 ನಿಮಿಷಗಳ ಕಾರ್ಯಕ್ರಮದಲ್ಲಿ ಗಂಗಾವತರಣ, ಶಿವಸ್ತುತಿ, ಗಣೇಶಸ್ತುತಿಯನ್ನು ಶಾಸ್ತ್ರೀಯ ಪದ್ಧತಿಯಲ್ಲಿ ಪ್ರಸ್ತುತಪಡಿಸಲಾಗುವುದು. ಸರದಿಯಂತೆ ನಾಲ್ಕೂ ದೇವಸ್ಥಾನಗಳಲ್ಲಿ ರಾತ್ರಿಪೂರ್ತಿ ಕಾರ್ಯಕ್ರಮ ನೀಡಲಾಗುವುದು. ಸಾರ್ವಜನಿಕರು ಪ್ರೋತ್ಸಾಹಿಸಬೇಕೆಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಅಕಾಡೆಮಿಯ ಪಿ.ಸಿ.ರಾಮನಾಥ, ಆರ್.ಎಲ್.ನಾಗಭೂಷಣ, ಕೆ.ಎನ್.ಗೋಪಾಲಕೃಷ್ಣ, ಡಿ.ಎಸ್.ಭವಾನಿ, ಸಂಸ್ಕೃತಿ ಜೆ.ಆಚಾರ್ ಇದ್ದರು.