ಉಡುಪಿ : ಪ್ರಧಾನಿಯಾಗಿ ನರೇಂದ್ರ ಮೋದಿಯವರು ಶುಕ್ರವಾರ ಪ್ರಥಮ ಬಾರಿಗೆ ಉಡುಪಿಯ ಶ್ರೀಕೃಷ್ಣಮಠಕ್ಕೆ ಭೇಟಿ ನೀಡುತ್ತಿದ್ದು, ಅವರ ಭವ್ಯ ಸ್ವಾಗತಕ್ಕೆ ಕೃಷ್ಣನಗರಿ ಸಜ್ಜಾಗಿದೆ. 1 ಕಿ.ಮೀ. ಭರ್ಜರಿ ರೋಡ್ ಶೋ ಮೂಲಕ ರಥಬೀದಿಗೆ ಆಗಮಿಸಲಿರುವ ಮೋದಿ, ಬಳಿಕ, ಕೃಷ್ಣಮಠದಲ್ಲಿ ಸುವರ್ಣ ಕನಕನ ಕಿಂಡಿ ಉದ್ಘಾಟಿಸಿ, ಕೃಷ್ಣನ ದರ್ಶನ ಪಡೆಯಲಿದ್ದಾರೆ.
ಬಳಿಕ, ಪುತ್ತಿಗೆ ಮಠದಲ್ಲಿ ಸುವರ್ಣ ತೀರ್ಥ ಮಂಟಪ ಕೃಷ್ಣಾರ್ಪಣೆಗೊಳಿಸಿ, ಪರ್ಯಾಯ ಮದುಪೇಂದ್ರ ತೀರ್ಥ ಸಂಸ್ಥಾನ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಶ್ರೀಪಾದರು ಆಯೋಜಿಸಿರುವ ‘ಲಕ್ಷ ಕಂಠ ಗೀತಾ ಪಾರಾಯಣ’ದಲ್ಲಿ ಪಾಲ್ಗೊಂಡು ಭಗವದ್ಗೀತೆಯ 10 ಶ್ಲೋಕಗಳನ್ನು ಸ್ವತಃ ಪಠಣ ಮಾಡಲಿದ್ದಾರೆ. ಮೋದಿ ಭೇಟಿ ಹಿನ್ನೆಲೆಯಲ್ಲಿ ಇಡೀ ಉಡುಪಿ ಕೇಸರಿಮಯವಾಗಿದ್ದು, ಎಲ್ಲೆಡೆ ಬಿಗಿ ಪೊಲೀಸ್ ಭದ್ರತೆ ಏರ್ಪಡಿಸಲಾಗಿದೆ.
ಬೆಳಗ್ಗೆ 11ಕ್ಕೆ ವಿಶೇಷ ವಿಮಾನದಲ್ಲಿ ಮಂಗಳೂರಿಗೆ ಬಂದಿಳಿಯುವ ಮೋದಿ, ಅಲ್ಲಿಂದ ಸೇನಾ ಹೆಲಿಕಾಪ್ಟರ್‌ನಲ್ಲಿ ಉಡುಪಿಗೆ ಆಗಮಿಸಲಿದ್ದಾರೆ. ಬಳಿಕ, ನಾರಾಯಣಗುರು ವೃತ್ತದಿಂದ ಕಲ್ಸಂಕ ವೃತ್ತದವರೆಗೆ 1 ಕಿ.ಮೀ. ಭರ್ಜರಿ ರೋಡ್ ಶೋ ನಡೆಸಲಿದ್ದಾರೆ. ನಂತರ, ರಥಬೀದಿಗೆ ಆಗಮಿಸುವ ಮೋದಿ, ಸುವರ್ಣ ಕನಕನ ಕಿಂಡಿ ಉದ್ಘಾಟಿಸಿ, ಕನಕದಾಸರ ಗುಡಿ ದರ್ಶನ ಮಾಡಲಿದ್ದಾರೆ. ಮಠದೊಳಗೆ ಬಂದು ಮಧ್ವ ಸರೋವರದಲ್ಲಿ ತೀರ್ಥ ಪ್ರೋಕ್ಷಣೆಗೈದು ಶ್ರೀಕೃಷ್ಣನ ದರ್ಶನ ಪಡೆಯಲಿದ್ದಾರೆ. ಶ್ರೀ ಕೃಷ್ಣನ ಪಾರಂಪರಿಕ ಚಿನ್ನಾಭರಣಗಳು, ಚಿನ್ನದ ಪಾಲಕ್ಕಿಗಳನ್ನು ವೀಕ್ಷಿಸಿ, ಸರ್ವಜ್ಞ ಪೀಠದ ದರ್ಶನ ಪಡೆಯಲಿದ್ದಾರೆ. ಇದೇ ಸಂದರ್ಭದಲ್ಲಿ ಶ್ರೀಕೃಷ್ಣನ ಎದುರು ಪುತ್ತಿಗೆ ಶ್ರೀಗಳಿಂದ ಗೀತಾ ಲೇಖನ ಯಜ್ಞ ದೀಕ್ಷೆ ಸ್ವೀಕರಿಸುತ್ತಾರೆ.
ನಂತರ, ಚಂದ್ರಶಾಲೆಯಲ್ಲಿ ಪೇಜಾವರ ಶ್ರೀಗಳು ಮತ್ತು ಅಷ್ಟ ಮಠಾಧೀಶರನ್ನು ಭೇಟಿ ಮಾಡಿ, ಪ್ರಸಾದ ಸ್ವೀಕರಿಸಲಿದ್ದಾರೆ. ಬಳಿಕ, ಪರ್ಯಾಯ ಶ್ರೀಗಳ ಸಂನ್ಯಾಸ ದೀಕ್ಷೆಯ 50ನೇ ವರ್ಷಾಚರಣೆಯ ಅಂಗವಾಗಿ ಪುತ್ತಿಗೆ ಮಠದಲ್ಲಿ ₹2 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಸುವರ್ಣ ತೀರ್ಥ ಮಂಟಪ ಉದ್ಘಾಟಿಸಲಿದ್ದಾರೆ.
ಅಲ್ಲಿಂದ ನೇರವಾಗಿ ‘ಲಕ್ಷ ಕಂಠ ಗೀತಾ ಪಾರಾಯಣ’ ಸಭಾಂಗಣಕ್ಕೆ ಆಗಮಿಸಲಿದ್ದಾರೆ. ಪರ್ಯಾಯ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಶ್ರೀಪಾದರು ಒಂದು ಕೋಟಿಗೂ ಅಧಿಕ ಭಕ್ತರಿಂದ ಭಗವದ್ಗೀತೆ ಲೇಖನ ಅಭಿಯಾನವನ್ನು ನಡೆಸಿದ್ದು, ಅದರ ಕೃಷ್ಣಾರ್ಪಣೆಯಂಗವಾಗಿ ಶುಕ್ರವಾರ ಒಂದು ಲಕ್ಷಕ್ಕೂ ಅಧಿಕ ಮಂದಿ ಭಗವದ್ಗೀತೆಯನ್ನು ಬೆಳಗ್ಗೆ 9 ಗಂಟೆಯಿಂದ ಏಕಕಾಲದಲ್ಲಿ ಪಠಿಸಲಿದ್ದಾರೆ. ಈ ಕಾರ್ಯಕ್ರಮದ ಕೊನೆಯಲ್ಲಿ, ಮಧ್ಯಾಹ್ನ 12 ಗಂಟೆಗೆ ಪ್ರಧಾನಿ ಮೋದಿ ಅವರು ಭಗವದ್ಗೀತೆಯ 18ನೇ ಅಧ್ಯಾಯದ ಕೊನೆಯ 10 ಶ್ಲೋಕ ಹಾಗೂ ಪುರುಷೋತ್ತಮ ಯೋಗದ ಶ್ಲೋಕಗಳನ್ನು ಪಠಿಸಲಿದ್ದಾರೆ. ನಂತರ, ನಡೆಯುವ ಸಮಾರಂಭದಲ್ಲಿ ಗೀತಾ ಸಂದೇಶ ನೀಡಲಿದ್ದಾರೆ. ಈ ವೇಳೆ, ಮೋದಿಯವರನ್ನು ಪುತ್ತಿಗೆ ಶ್ರೀಗಳು ವಿಶಿಷ್ಟ ರೀತಿಯಲ್ಲಿ ಸನ್ಮಾನಿಸಲಿದ್ದಾರೆ.
ಬಳಿಕ, ಮಧ್ಯಾಹ್ನ 3.15ಕ್ಕೆ ಉಡುಪಿಯಿಂದ ಸೇನಾ ಹೆಲಿಕಾಪ್ಟರ್‌ನಲ್ಲಿ ಪರ್ತಗಾಳಿ ಮಠದ ಗುರುಪರಂಪರೆಯ 550ನೇ ವರ್ಷಾಚರಣೆಯಲ್ಲಿ ಭಾಗವಹಿಸಲು ಗೋವಾಕ್ಕೆ ತೆರಳುತ್ತಾರೆ. ಗೋವಾದ ಕೆನಕೋನಾದಲ್ಲಿರುವ ಗೋಕರ್ಣ ಪರ್ತಗಾಳಿ ಜೀವೊತ್ತಮ ಮಠಕ್ಕೆ ಭೇಟಿ ನೀಡಿ, ಮಠದ 550ನೇ ವರ್ಷಾಚರಣೆಯಾದ ‘ಸಾರ್ಧ ಪಂಚ ಶತಮಾನೋತ್ಸವ’ದಲ್ಲಿ ಭಾಗವಹಿಸಲಿದ್ದಾರೆ.
ಬಳಿಕ, ಗೋಕರ್ಣ ಪರ್ತಗಾಳಿ ಜೀವೊತ್ತಮ ಮಠದಲ್ಲಿ ಕಂಚಿನಿಂದ ಮಾಡಲಾದ ಪ್ರಭು ಶ್ರೀ ರಾಮನ 77 ಅಡಿ ಎತ್ತರದ ಪ್ರತಿಮೆಯನ್ನು ಅನಾವರಣಗೊಳಿಸಲಿದ್ದಾರೆ. ಗುಜರಾತ್‌ನಲ್ಲಿ ಏಕತಾ ಪ್ರತಿಮೆಯನ್ನು ವಿನ್ಯಾಸಗೊಳಿಸಿದ ಶಿಲ್ಪಿ ರಾಮ್ ಸುತಾರ್ ಅವರು ಈ ಶ್ರೀರಾಮನ ಪ್ರತಿಮೆಯನ್ನು ನಿರ್ಮಿಸಿದ್ದು, ವಿಶ್ವದಲ್ಲೇ ಅತಿ ಎತ್ತರದ ಶ್ರೀರಾಮನ ಪ್ರತಿಮೆ ಎಂಬ ಖ್ಯಾತಿಗೆ ಇದು ಒಳಗಾಗಿದೆ.
ನಂತರ, ಮಠ ಅಭಿವೃದ್ಧಿಪಡಿಸಿದ ‘ರಾಮಾಯಣ ಥೀಮ್‌ಪಾರ್ಕ್ ಉದ್ಯಾನವನ’ವನ್ನು ಉದ್ಘಾಟಿಸಲಿದ್ದಾರೆ. ವಿಶೇಷ ಅಂಚೆ ಚೀಟಿ ಮತ್ತು ಕಾರ್ಯಕ್ರಮದ ಸ್ಮರಣಾರ್ಥ ನಾಣ್ಯವನ್ನು ಕೂಡ ಬಿಡುಗಡೆ ಮಾಡಲಿದ್ದಾರೆ.
ಉಡುಪಿಗೆ ಗಣ್ಯರ ದಂಡು:
ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಸಚಿವ ಭೈರತಿ ಸುರೇಶ್, ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ, ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ಉಡುಪಿ ಜಿಲ್ಲೆಯ ಶಾಸಕರು ಭಾಗವಹಿಸಲಿದ್ದಾರೆ. ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು ಮೋದಿಯನ್ನು ಸ್ವಾಗತಿಸಲಿದ್ದಾರೆ.7,000 ಪೊಲೀಸರ ಸರ್ಪಗಾವಲು:
ಮೋದಿ ಭೇಟಿ ಹಿನ್ನೆಲೆಯಲ್ಲಿ ಉಡುಪಿಯಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಮೋದಿಯವರ ರೋಡ್ ಶೋ ನಡೆಯಲಿರುವ ಮಾರ್ಗದ ಇಕ್ಕೆಲಗಳಲ್ಲಿ 30 ಸಾವಿರ ಮಂದಿ ನಿಂತು ಮೋದಿ ಅವರನ್ನು ನೋಡುವುದಕ್ಕೆ ಬ್ಯಾರಿಕೇಡ್ ಹಾಕಿ ವ್ಯವಸ್ಥೆ ಮಾಡಲಾಗಿದೆ, ಬಂದೋಬಸ್ತ್‌ಗೆ 7 ಜಿಲ್ಲೆಗಳಿಂದ ಸಶಸ್ತ್ರ ಮೀಸಲು ಪಡೆ, ಬಾಂಬ್ ಸ್ಕ್ವಾಡ್, ರ್‍ಯಾಪಿಡ್ ಆಕ್ಷನ್ ಫೋರ್ಸ್, ಆ್ಯಂಟಿ ಟೆರರಿಸ್ಟ್ ಸ್ಕ್ವಾಡ್ ಸೇರಿದಂತೆ 7,000 ಮಂದಿ ಪೊಲೀಸರನ್ನು ಉಡುಪಿಗೆ ಕರೆಸಿಕೊಳ್ಳಲಾಗಿದೆ.
ಮೋದಿಗೆ ಶ್ರೀಗಳಿಂದ 4 ಆಗ್ರಹಗಳು:
ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರಿಗೆ
* ಉಡುಪಿ ಕಾರಿಡಾರ್ ನಿರ್ಮಾಣ ಮಾಡಬೇಕು,
* ಗೀತಾಜಯಂತಿಗೆ ರಾಷ್ಟ್ರೀಯ ರಜೆ ನೀಡಬೇಕು
* ಸಮಗ್ರ ಗೋರಕ್ಷಣೆ ಕಾನೂನು ಜಾರಿ ಮಾಡಬೇಕು
* ಸಮಾನ ನಾಗರಿಕ ಸಂಹಿತೆ ಜಾರಿ ಮಾಡಬೇಕು ಎಂಬ ಬೇಡಿಕೆಗಳ ಬಗ್ಗೆ ಪರ್ಯಾಯ ಪುತ್ತಿಗೆ ಮಠಾಧೀಶ ಸುಗುಣೇಂದ್ರ ತೀರ್ಥ ಸ್ವಾಮೀಜಿ ಆಗ್ರಹಪೂರ್ವಕ ಮನವಿ ಸಲ್ಲಿಸಲಿದ್ದಾರೆ.