ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಪಟ್ಟಣದ ಶ್ರೀಕೃಷ್ಣರಾಜ ಪದವಿ ಪೂರ್ವ ಕಾಲೇಜಿನ ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿ, ಭವಿಷ್ಯದ ಪ್ರಜೆಗಳಾದ ವಿದ್ಯಾರ್ಥಿಗಳು ಸಂಸ್ಕಾರಯುತ ಶಿಕ್ಷಣ ಪಡೆದು ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದರು.
ತಾಲೂಕಿನಲ್ಲಿ 23 ಪದವಿ ಪೂರ್ವ ಕಾಲೇಜುಗಳಿವೆ. ಪಟ್ಟಣದ ಪ್ರದೇಶದ ಕಾಲೇಜುಗಳಿಗೆ ಸೇರ ಬಯಸುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುತ್ತಿದ್ದರೆ, ಗ್ರಾಮೀಣ ಪ್ರದೇಶದ ಕಾಲೇಜುಗಳಲ್ಲಿ ದಾಖಲಾತಿ ಕುಸಿತ ಕಾಣುತ್ತಿದೆ. ವಿದ್ಯಾರ್ಥಿಗಳು ನಗರ ಪ್ರದೇಶದ ಆಕರ್ಷಣೆಯಿಂದ ಹೊರಬರಬೇಕು ಎಂದರು.ಪೋಷಕರು ತಮ್ಮ ಮಕ್ಕಳನ್ನು ತಮ್ಮ ಪರಿಸರದಲ್ಲಿರುವ ಗ್ರಾಮೀಣ ಕಾಲೇಜುಗಳಿಗೆ ದಾಖಲಾತಿ ಮಾಡುವ ಮೂಲಕ ಗ್ರಾಮೀಣ ಪ್ರದೇಶದ ಶಿಕ್ಷಣ ಸಂಸ್ಥೆಗಳನ್ನು ಉಳಿಸಿಕೊಳ್ಳುವುದರ ಜೊತೆಗೆ ಅವುಗಳ ಅಭಿವೃದ್ಧಿಗೂ ಕೈ ಜೋಡಿಸಬೇಕು ಎಂದರು.
ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಗುಬ್ಬಿ ಜಿ.ಬಿ.ಮಲ್ಲಪ್ಪ ಮಾತನಾಡಿ, ವಿದ್ಯಾರ್ಥಿಗಳು ಕಲಿಯುವ ಹಂತದಲ್ಲಿಯೇ ಒಳ್ಳೆಯದನ್ನು ಕಲಿತರೆ ಅವರ ಭವಿಷ್ಯ ಉಜ್ವಲವಾಗಿರುತ್ತದೆ. ಆದರೆ, ಇಂದು ವಿದ್ಯಾರ್ಥಿಗಳು ಶ್ರಮವಿಲ್ಲದೆ ಪ್ರತಿಫಲ ಬಯಸುತ್ತಾರೆ. ಇದರಿಂದ ಯಾವುದೇ ಪ್ರತಿಫಲ ಸಿಗುವುದಿಲ್ಲ ಎಂದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಆಡಳಿತಾಧಿಕಾರಿ ಎಸ್.ಬಿ.ಲೋಕೇಶ್ ಅಧ್ಯಕ್ಷತೆ ವಹಿಸಿದ್ದರು. ಬಂಡಿ ವಿದ್ಯಾ ಸಂಸ್ಥೆ ನಿರ್ದೇಶಕರಾದ ನಾಗರಂಗಪ್ಪ, ಪ್ರೇಂಕುಮಾರ್, ಸಮಾಜ ಸೇವಕ ಬಸವೇಗೌಡ, ತಾಲೂಕು ಕಸಾಪ ಮಾಜಿ ಅಧ್ಯಕ್ಷ ಎಂ.ಕೆ. ಹರಿಚರಣತಿಲಕ್, ಕೊರಟೀಕೆರೆ ಪ್ರೌಢಶಾಲೆ ಮುಖ್ಯ ಶಿಕ್ಷಕ ಮಹೇಶ್, ಪ್ರಾಂಶುಪಾಲ ಕೃಷ್ಣಪ್ಪ, ಗುಬ್ಬಿ ದುಶ್ಯಂತ್ ಇದ್ದರು.