ಇಂದಿನ ಯುವಪೀಳಿಗೆ ದೇಶದ ಸಂಪತ್ತು: ಶಾಸಕ ಜಿಟಿಡಿ

KannadaprabhaNewsNetwork |  
Published : Jan 28, 2026, 01:15 AM IST
26 | Kannada Prabha

ಸಾರಾಂಶ

ದೇಶದ ಏಕತೆ, ಅಖಂಡತೆ, ಸಮಗ್ರತೆ ಐಕ್ಯತೆ, ಬದ್ಧತೆ, ಆರ್ಥಿಕತೆ ಎಲ್ಲಾ ದೃಷ್ಟಿಯಿಂದಲೂ ಒಟ್ಟಾಗಿ ಸೇರಿಸಿ ಭಾರತ ಒಂದೇ ಎನ್ನುವ ಸಂದೇಶ ನೀಡಿದ್ದಾರೆ. ತ್ಯಾಗ, ಬಲಿದಾನಗಳಿಂದ ಸ್ವಾತಂತ್ರ್ಯ ತಂದುಕೊಟ್ಟಿದ್ದಾರೆ. ಅಂತಹ ಹೋರಾಟ ಮಾಡಿದ ಮಹನೀಯರನ್ನು ಸ್ಮರಿಸಿಕೊಳ್ಳಬೇಕು. ಅವರು ಹಾಕಿಕೊಟ್ಟ ಹಾದಿಯಲ್ಲಿ ಸಾಗಬೇಕು.

ಕನ್ನಡಪ್ರಭ ವಾರ್ತೆ ಮೈಸೂರು

ಇಂದಿನ ಯುವಪೀಳಿಗೆ ದೇಶದ ಸಂಪತ್ತು. ಮುಂದಿನ ದಿನಗಳಲ್ಲಿ ನಾಯಕತ್ವ ಕೊಡುವವರಾಗಿದ್ದಾರೆ. ಬುದ್ಧ, ಬಸವ, ಡಾ.ಬಿ.ಆರ್. ಅಂಬೇಡ್ಕರ್, ಮಹಾತ್ಮ ಗಾಂಧೀಜಿ ಅವರ ಆದರ್ಶವನ್ನು ನಾವು ಪಾಲಿಸಬೇಕು ಎಂದು ಶಾಸಕ ಜಿ.ಟಿ. ದೇವೇಗೌಡ ಸಲಹೆ ನೀಡಿದರು.

ಚಾಮುಂಡೇಶ್ವರಿ ಕ್ಷೇತ್ರದ ವ್ಯಾಪ್ತಿಗೆ ಬರುವ ಐಶ್ವರ್ಯ ರಾಯಲ್ ಬಡಾವಣೆಯಲ್ಲಿ ಆಯೋಜಿಸಿದ್ದ 77ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಬಡಾವಣೆಯ ಎಲ್ಲರೂ ಒಟ್ಟಾಗಿ ಸೇರಿ ಗಣರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಿರುವುದು ಸಂತಸದ ವಿಚಾರ. ಸ್ಥಳೀಯವಾಗಿ ಒಟ್ಟಾಗಿ ರಾಷ್ಟ್ರೀಯ ಹಬ್ಬಗಳನ್ನು ಆಚರಣೆ ಮಾಡುವುದರಿಂದ ಒಂದಾಗಬಹುದಾಗಿದೆ ಎಂದರು.

ದೇಶದ ಏಕತೆ, ಅಖಂಡತೆ, ಸಮಗ್ರತೆ ಐಕ್ಯತೆ, ಬದ್ಧತೆ, ಆರ್ಥಿಕತೆ ಎಲ್ಲಾ ದೃಷ್ಟಿಯಿಂದಲೂ ಒಟ್ಟಾಗಿ ಸೇರಿಸಿ ಭಾರತ ಒಂದೇ ಎನ್ನುವ ಸಂದೇಶ ನೀಡಿದ್ದಾರೆ. ತ್ಯಾಗ, ಬಲಿದಾನಗಳಿಂದ ಸ್ವಾತಂತ್ರ್ಯ ತಂದುಕೊಟ್ಟಿದ್ದಾರೆ. ಅಂತಹ ಹೋರಾಟ ಮಾಡಿದ ಮಹನೀಯರನ್ನು ಸ್ಮರಿಸಿಕೊಳ್ಳಬೇಕು. ಅವರು ಹಾಕಿಕೊಟ್ಟ ಹಾದಿಯಲ್ಲಿ ಸಾಗಬೇಕು ಎಂದು ಅವರು ಸಲಹೆ ನೀಡಿದರು.

ಅಸಮಾನತೆ ತೊಲಗಿಸಿ ಸಮಾನತೆ ತರಬೇಕು. ಜಾತೀಯತೆ ಬಿಟ್ಟು ನಾವೆಲ್ಲರೂ ಸಮಾನರು ಎನ್ನುವುದನ್ನು ಹೇಳಬೇಕು. ನಾವೆಲ್ಲರೂ ಒಂದೇ ಭಾರತೀಯರು, ಸಮಾನತೆಯುಳ್ಳವರು ಎನ್ನುವ ಆಶಯ ಇಟ್ಟುಕೊಂಡು ಸಮಾಜಕ್ಕೆ ಶ್ರಮಿಸಬೇಕು ಎಂದರು.

ಪ್ರಪಂಚಕ್ಕೆ ಭಾರತ ಮಾದರಿಯಾಗಿದೆ. ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಅನೇಕರು ದೇಶಕ್ಕೆ ಭದ್ರವಾದ ಬುನಾದಿಯನ್ನು ಹಾಕಿಕೊಟ್ಟಿದ್ದಾರೆ. ಯುವ ಸಮಾಜಕ್ಕೆ ಆದರ್ಶಗಳನ್ನು ಪ್ರಾಮಾಣಿಕವಾಗಿ ತಿಳಿಸಬೇಕು. ನಮ್ಮ ಕರ್ತವ್ಯವನ್ನು ಅರಿತು ದೇಶ ಸೇವೆ ಮಾಡಬೇಕು ಎಂದು ಅವರು ಹೇಳಿದರು.

ಡಾ.ಬಿ.ಆರ್. ಅಂಬೇಡ್ಕರ್ ಪ್ರಪಂಚವೇ ಮೆಚ್ಚುವಂತಹ ಸಂವಿಧಾನ ಕೊಟ್ಟಿದ್ದಾರೆ. ಸಾಮಾಜಿಕ ನ್ಯಾಯ ಎಲ್ಲರಿಗೂ ಸಿಗಬೇಕು ಎನ್ನುವಂತೆ ಅಂಬೇಡ್ಕರ್ ಕಂಡಿರುವ ಕನಸು ನನಸಾಗಬೇಕು. ಸಂವಿಧಾನ ನಮಗೆ ಎಲ್ಲವನ್ನೂ ನೀಡಿದೆ. ಪ್ರತಿಯೊಬ್ಬರ ಹಕ್ಕನ್ನು ಕಾಪಾಡುತ್ತಿದೆ. ಇಂದು ದೇಶ ನಡೆಯುತ್ತಿರುವುದು ಸಂವಿಧಾನದ ತಳಹದಿಯಲ್ಲಿ. ಹೀಗಾಗಿ, ನಾವೆಲ್ಲರೂ ಸಂವಿಧಾನಕ್ಕೆ ಗೌರವ ನೀಡಿ ಯುವ ಪೀಳಿಗೆಗೆ ಮಾರ್ಗದರ್ಶನ ಮಾಡಬೇಕು ಎಂದರು.

ಐಶ್ವರ್ಯ ರಾಯಲ್ ಬಡಾವಣೆ ಸೇರಿದಂತೆ ಸುತ್ತಮುತ್ತಲಿನ ಬಡಾವಣೆಗಳಿಗೆ ಶೀಘ್ರದಲ್ಲಿ ಕುಡಿಯುವ ನೀರನ್ನು ಒದಗಿಸಲಾಗುವುದು. ಪೈಪ್ ಲೈನ್ ಕಾಮಗಾರಿಗೆ ಟೆಂಡರ್ ಆಗಿದ್ದು, ಫೆಬ್ರವರಿ ಮಾಹೆಯಲ್ಲಿ ಎಲ್ಲರಿಗೂ ಕಬಿನಿ ನೀರನ್ನು ಒದಗಿಸಲಾಗುವುದು ಎಂದು ಅವರು ಭರವಸೆ ನೀಡಿದರು.

ಮುಖಂಡರಾದ ಜಯಕುಮಾರ್, ಕೆ. ಚಂದ್ರಶೇಖರ್, ಆನಂದ್, ಮುಖ್ಯಾಧಿಕಾರಿ ಸುಜಯ್, ಎಂ.ಎಂ. ಗ್ರೀನ್ಸ್ ಅಸೋಸಿಯೇಷನ್ ಕಾರ್ಯದರ್ಶಿ ಮೋಹನ್‌ ಕುಮಾರ್ ಮೊದಲಾದವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮುಖ್ಯಮಂತ್ರಿ ಸಿದ್ದರಾಮಯ್ಯ ನನ್ನ ಪಾಲಿನ ಶ್ರೀರಾಮ : ಶಾಸಕ ಪ್ರದೀಪ್‌ ಈಶ್ವರ್‌
ಜಿ ರಾಮ್‌ ಜಿ ವಿರುದ್ಧ ಸಿಡಿದೆದ್ದ ಕಾಂಗ್ರೆಸ್‌ ಪಡೆ - ದುಡಿವ ಕೈಗಳ ಅನ್ನ ಕಸಿವ ಕಾಯ್ದೆ