ಇಂದು ಬನ್ನಿಮಹಾಂಕಾಳಿ ಅಮ್ಮನವರ ಅದ್ಧೂರಿ ಕರಗ

KannadaprabhaNewsNetwork |  
Published : Jul 07, 2025, 11:48 PM IST
1.ರಾಮನಗರದ ಮಂಡಿ ಪೇಟೆಯಲ್ಲಿರುವ ಬನ್ನಿಮಹಾಂಕಾಳಿ ಅಮ್ಮನವರ ದೇವಾಲಯ | Kannada Prabha

ಸಾರಾಂಶ

‘ರಾಮನಗರದಲ್ಲಿ ಬನ್ನಿಮಹಾಂಕಾಳಿ ಕರಗವೇ ಮೊದಲು ಪ್ರಾರಂಭವಾಗಿದ್ದು, ಈಗ ನಗರದಲ್ಲಿ ಒಂಬತ್ತು ಕರಗಗಳ ಉತ್ಸವ ನಡೆಯುತ್ತದೆ.

ಕನ್ನಡಪ್ರಭ ವಾರ್ತೆ ರಾಮನಗರ

ನಗರದ ಶಕ್ತಿ ದೇವತೆ ಮಂಡಿಪೇಟೆಯಲ್ಲಿರುವ ಬನ್ನಿಮಹಾಂಕಾಳಿ ಅಮ್ಮನವರ ಕರಗ ಮಹೋತ್ಸವ ಜು. 8 ರಂದು ನಡೆದರೆ, ಅಗ್ನಿಕೊಂಡ ಮಹೋತ್ಸವ ಜು. 9ರಂದು ನೆರವೇರಲಿದೆ.ಸುಮಾರು 400 ವರ್ಷಗಳಿಂದ ಇಲ್ಲಿನ ಭಕ್ತರು ಆರಾಧಿಸುತ್ತಾ ಬಂದಿದ್ದಾರೆ. ಹಿಂದೆ ಮೈಸೂರು ರಾಜರ ಆಸ್ಥಾನದಲ್ಲಿದ್ದ ಭಕ್ಷಿ ಬಾಲಾಜಿ ಅವರು ಕೊಲ್ಲಾಪುರಕ್ಕೆ ಹೋಗಿದ್ದ ಸಂದರ್ಭದಲ್ಲಿ ರಾತ್ರಿಯ ವೇಳೆಯಲ್ಲಿ ಅವರಿಗೆ ಕನಸೊಂದು ಬಿದ್ದಿತ್ತು. ಅವರ ಕನಸಿನಲ್ಲಿ ದೇವಿಯು ಕಾಣಿಸಿಕೊಂಡು ತನಗೊಂದು ನೆಲೆ ಕಾಣಿಸುವಂತೆ ಭಕ್ಷಿ ಬಾಲಾಜಿ ಅವರಲ್ಲಿ ಕೋರಿದಳು.

ಇದರಿಂದ ಸಂತೋಷಗೊಂಡ ಅವರು ಎಲ್ಲಿ ಎಂದು ಕೇಳಲಾಗಿ ದೇವಿಯು ‘ನಾನು ನಿನ್ನ ಬಂಡಿಯ ಹಿಂದೆ ಬರುತ್ತೇನೆ. ಎಲ್ಲಿ ನನ್ನ ಗೆಜ್ಜೆಯ ನಾದ ನಿಲ್ಲುತ್ತದೆಯೋ ಅಲ್ಲಿ ನನಗೆ ಗುಡಿಯನ್ನು ಕಟ್ಟಿಸು’ ಎಂದು ತಿಳಿಸಿದಳು.ಕೊಲ್ಲಾಪುರದಿಂದ ಮೈಸೂರಿಗೆ ಎತ್ತಿನ ಬಂಡಿಯಲ್ಲಿ ಹಿಂದಿರುಗುವಾಗ ಎತ್ತಿನ ಬಂಡಿಯ ಹಿಂದೆ ಬರುತ್ತಿದ್ದ ಗೆಜ್ಜೆಯ ನಾದ ಅಂದಿನ ಕ್ಲೋಸ್ ಪೇಟೆ ಬಳಿಯಲ್ಲಿದ್ದ ಬನ್ನಿ ಮರದ ಕೆಳಗೆ ನಿಂತಿತು. ಈ ಸ್ಥಳದಲ್ಲಿ ತನ್ನನ್ನು ಪ್ರತಿಷ್ಠಾಪನೆ ಮಾಡುವಂತೆ ದೇವಿಯು ಭಕ್ಷಿ ಬಾಲಾಜಿ ಅವರನ್ನು ಕೋರಿದಳು. ಆದ್ದರಿಂದ ಬನ್ನಿ ಮರದ ಕೆಳಗೆ ದೇವಿಯನ್ನು ಪ್ರತಿಷ್ಠಾಪನೆ ಮಾಡಲಾಯಿತು. ಅಂದಿನಿಂದ ದೇವಿಯನ್ನು ಬಂಡಿ ಹಿಂದೆ ಬಂದ ಕಾರಣ ‘ಬಂಡಿ ಮಹಾಂಕಾಳಿ’ ಎಂತಲೂ ಮತ್ತು ಬನ್ನಿ ಮರದ ಕೆಳಗೆ ಸ್ಥಾಪಿತವಾಗಿದ್ದರಿಂದ ‘ಬನ್ನಿ ಮಹಾಂಕಾಳಿ’ ಎಂತಲೂ, ಎರಡು ಹೆಸರಿನಿಂದ ಕರೆಯುತ್ತಾರೆ.

ಅಂದಿನಿಂದ ಇಂದಿನವರೆಗೂ ಅಮ್ಮನವರನ್ನು ವರ್ಷಕ್ಕೊಮ್ಮೆ ಅದ್ಧೂರಿಯಾಗಿ ಕರಗದ ಮೂಲಕ ಆರಾಧಿಸಲಾಗುತ್ತದೆ. ಪ್ರಾರಂಭದಲ್ಲಿ ಧರ್ಮಲಿಂಗು ಎನ್ನುವವರು ಬೆಟ್ಟದ ಮಲ್ಲಿಗೆ ಮತ್ತು ಬೇವಿಸೊಪ್ಪಿನ ಕಳಸ ಹೊತ್ತು ಅಗ್ನಿಕೊಂಡ ಪ್ರವೇಶ ಮಾಡುತಿದ್ದರು. ಈಗ ಆರ್.ಎನ್. ಯೋಗೇಶ್ ಕರಗವನ್ನು 21ನೇ ಬಾರಿಗೆ ಧರಿಸುತ್ತಿದ್ದಾರೆ.

‘ರಾಮನಗರದಲ್ಲಿ ಬನ್ನಿಮಹಾಂಕಾಳಿ ಕರಗವೇ ಮೊದಲು ಪ್ರಾರಂಭವಾಗಿದ್ದು, ಈಗ ನಗರದಲ್ಲಿ ಒಂಬತ್ತು ಕರಗಗಳ ಉತ್ಸವ ನಡೆಯುತ್ತದೆ. ಮೊದಲು ಕರಗ ಮಧ್ಯರಾತ್ರಿ 2 ಗಂಟೆಗೆ ಪ್ರಾರಂಭವಾಗಿ ನಗರದಲ್ಲಿ ಸಂಚರಿಸಿ ಬೆಳಿಗ್ಗೆ 5 ಗಂಟೆಗೆಲ್ಲಾ ಅಗ್ನಿಕೊಂಡ ಪ್ರವೇಶ ಮಾಡುತಿತ್ತು’ ಎಂದು ದೇವಾಲಯದ ಅರ್ಚಕ ಎಂ.ಎಸ್. ವಿನಯ್ ಕುಮಾರ್ ತಿಳಿಸಿದರು.

‘ಆದರೆ ಈಗ ರಾಮನಗರ ನಗರ ವ್ಯಾಪ್ತಿ ಹೆಚ್ಚಾಗಿ ಬೆಳೆಯುತ್ತಿದೆ. ಈಗ ರಾತ್ರಿ 10 ಗಂಟೆಗೆ ಕರಗ ದೇವಾಲಯದಿಂದ ಹೊರಟರೆ ಅಗ್ನಿಕೊಂಡ ಪ್ರವೇಶಿಸುವುದು ಬೆಳಿಗ್ಗೆ 8 ಗಂಟೆಯಾಗುತ್ತದೆ’ ಎಂದರು.

ರೋಗರುಜಿನ ಬರುವುದಿಲ್ಲ:

‘ಬನ್ನಿಮಹಾಂಕಾಳಿ ದೇವಿಯು ಪ್ರತಿಷ್ಠಾಪನೆಗೊಂಡಾಗಿನಿಂದಲೂ ಇದುವರೆಗೆ ಹಳೆ ರಾಮನಗರ ಪ್ರಾಂತ್ಯದ ಭಾಗದಲ್ಲಿ ಯಾವುದೆ ಸಾಮೂಹಿಕ ಕಾಯಿಲೆಗಳಾಗಲಿ ಅಥವಾ ರೋಗ ರುಜಿನಗಳಾಗಲಿ ಬರುವುದಿಲ್ಲ ಎಂಬುದು ಇಲ್ಲಿನ ನಾಗರಿಕರ ನಂಬಿಕೆಯಾಗಿದೆ’ ಎಂದು ಹಿರಿಯ ಅರ್ಚಕ ಎಂ.ಎಸ್. ಸತ್ಯನಾರಾಯಣ ತಿಳಿಸಿದರು.

-----7ಕೆಆರ್ ಎಂಎನ್ 1,2.ಜೆಪಿಜಿ1.ರಾಮನಗರದ ಮಂಡಿ ಪೇಟೆಯಲ್ಲಿರುವ ಬನ್ನಿಮಹಾಂಕಾಳಿ ಅಮ್ಮನವರ ದೇವಾಲಯ2. ಬನ್ನಿಮಹಾಂಕಾಳಿ ಅಮ್ಮನವರ ಮೂರ್ತಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಒಳಮೀಸಲು ಹೆಚ್ಚಳ: ಸಿದ್ದು vs ಬೆಲ್ಲದ್‌ ಜಟಾಪಟಿ
ಎಚ್ಚೆತ್ತ ಬೆಂ.ವಿವಿ: ಲೋಪ ಸರಿಪಡಿಸಿ 400 ವಿದ್ಯಾರ್ಥಿಗಳ ಫಲಿತಾಂಶ ಪ್ರಕಟ