ಇಂದು ಐತಿಹಾಸಿಕ ಕುಕನೂರು ಮಹಾಮಾಯೆ ದೇವಿ ರಥೋತ್ಸವ

KannadaprabhaNewsNetwork |  
Published : Oct 19, 2026, 02:30 AM IST
18ಕೆಕೆಆರ್1:ಗಗನ ನೋಟಗಾರ, ಪಪಂ ಸದಸ್ಯರು, ಕುಕನೂರು | Kannada Prabha

ಸಾರಾಂಶ

ಮಹಾಮಾಯೆ ದೇವಸ್ಥಾನ ಭಕ್ತಕೋಟಿಯ ಶ್ರದ್ಧಾಕೇಂದ್ರ. ಶರಣೆಂದು ಸತ್ಯ ಸಂಕಲ್ಪದಿಂದ ಆರಾಧಿಸುವ ಭಕ್ತರಿಗೆ ಮಹಾಮಾಯೆ ಸನ್ಮಂಗಲದಾತೆ

ಅಮರೇಶ್ವರಸ್ವಾಮಿ ಕಂದಗಲ್ಲಮಠ ಕುಕನೂರು

ಜಿಲ್ಲೆ ಹಾಗೂ ಹೊರರಾಜ್ಯದ ಭಕ್ತರ ಪಾಲಿನ ಆರಾಧ್ಯ ಶಕ್ತಿಮಾತೆ ಎಂದು ಪೂಜಿಸಲ್ಪಡುವ ಜ್ಯೇಷ್ಠತಾ ದೇವಿ ಎಂದೇ ಪ್ರಸಿದ್ಧಿ ಪಡೆದಿರುವ ಕುಕನೂರು ಮಹಾಮಾಯೆ (ಕುಕನೂರು ದ್ಯಾಮವ್ವ) ದೇವಿಯ ಶಕ್ತಿ ವಿಶಿಷ್ಟ ಆಗಿದ್ದು, ಅ. 20ರ ಸಂಜೆ ೪ ಗಂಟೆಗೆ ಮಹಾನವಮಿ ದಿನ ದೇವಿಯ ಮಹಾರಥೋತ್ಸವ ವಿಜೃಂಭಣೆಯಿಂದ ಸಾವಿರಾರು ಭಕ್ತರ ಸಾಕ್ಷಿಯಾಗಿ ಜರುಗಲಿದೆ.

ಮಹಾಮಾಯೆ ದೇವಸ್ಥಾನ ಭಕ್ತಕೋಟಿಯ ಶ್ರದ್ಧಾಕೇಂದ್ರ. ಶರಣೆಂದು ಸತ್ಯ ಸಂಕಲ್ಪದಿಂದ ಆರಾಧಿಸುವ ಭಕ್ತರಿಗೆ ಮಹಾಮಾಯೆ ಸನ್ಮಂಗಲದಾತೆ. ಮಹಾಮಾಯಾ ಕುಕನೂರಲ್ಲಿ ನೆಲೆಸಲು ಪುರಾಣದಲ್ಲಿ ಒಂದು ಪ್ರಸಂಗವಿದೆ. ಕುಂತಳನಗರವನ್ನು ಚಂದ್ರಹಾಸ ರಾಜ ಆಳುತ್ತಿದ್ದ. ಆಗ ಆತನು ಒಮ್ಮೆ ಉಗ್ರ ತಪಸ್ಸು ಆಚರಿಸಿ ಈ ದೇವಿಯ ಸಾಕ್ಷಾತ್ಕಾರ ಪಡೆದನಂತೆ, ಅನಂತರ ದೇವಿಯ ಮೂರ್ತಿ ಪ್ರತಿಷ್ಠಾಪಿಸಿದನು. ಆಗಿನಿಂದ ಕುಕನೂರಿನಲ್ಲಿ ಸರ್ವ ಮಂಗಳೆಯಾಗಿ ಭಕ್ತರನ್ನು ದೇವಿ ಪೊರೆಯುತ್ತಿದ್ದಾಳೆ.

ದೇವಸ್ಥಾನದ ಆವರಣದಲ್ಲಿ ನವಲಿಂಗೇಶ್ವರ ಮೂರ್ತಿ ಪ್ರತಿಷ್ಠಾಪಿಸಲ್ಪಟ್ಟಿವೆ. ದೇವಸ್ಥಾನದಲ್ಲಿರುವ ಪುಷ್ಕರಣಿ ಅಭಿವೃದ್ಧಿ, ಶುದ್ಧ ಕುಡಿಯುವ ನೀರಿನ ಘಟಕವನ್ನು ಸ್ಥಾಪಿಸಲಾಗಿದೆ. ಶ್ರೇಷ್ಠ ವೈದಿಕರ ಮಾರ್ಗದರ್ಶನದಲ್ಲಿ ದೇವಸ್ಥಾನದ ಮಹಾದ್ವಾರದ ಎದುರುಗಡೆ ದೀಪಸ್ತಂಭ, ಮಹಾದ್ವಾರದ ಎದುರುಗಡೆ ೧೪ ಟನ್ ತೂಕದ ೪೦ ಅಡಿ ಎತ್ತರದ ಗರುಡಗಂಭ ಸ್ಥಾಪಿಸಲಾಗಿದೆ.

೧೭ ಶಾಸನಗಳ ಐತಿಹ್ಯ: ಕುಕನೂರು ಪಟ್ಟಣ ೭ರಿಂದ ೧೬ನೇ ಶತಮಾನಗಳ ನಡುವಿನ ೧೭ ಶಾಸನಗಳಲ್ಲಿ ತನ್ನ ಐತಿಹ್ಯ ಹೊಂದಿದೆ. ಕುಂತಳಪುರ ಹೆಸರಿನ ಕುಕನೂರು ಪಟ್ಟಣವು ತನ್ನ ಸುತ್ತಮುತ್ತಲಿನ ಹತ್ತಾರು ಪುರಾತನ ದೇವಾಲಯ, ಮಂಟಪಗಳು ಮತ್ತು ೧೪ ಶಿಲಾಶಾಸನಗಳನ್ನು ಹೊಂದಿದ್ದು, ಇಂದೊಂದು ಭವ್ಯ ಪರಂಪರೆಯ ನಾಡು ಎಂದೇ ಬಿಂಬಿತ. ಪುರಾತನ ಕಾಲದ ರಾಜರ ಆಡಳಿತಾವಧಿಯಲ್ಲಿ ಇದೊಂದು ಅಗ್ರಹಾರವಾಗಿದ್ದು, ತನ್ನದೆಯಾದ ಕೆಲವೊಂದು ವಿಶೇಷತೆಗಳನ್ನು ಒಳಗೊಂಡು ನಂಬಿಕೆಗೆ ಪಾತ್ರವಾಗಿದೆ.

ದುಷ್ಟರ ಅಟ್ಟಹಾಸವನ್ನು ಸಹಿಸದೇ ಆತಂಕದಲ್ಲೇ ಜೀವನ ಸಾಗಿಸುತ್ತಿದ್ದ ಗ್ರಾಮದ ಜನರ ಶಾಂತಿ ಬದುಕಿಗಾಗಿ ದೇವತೆಗಳು ನಾನಾ ರೂಪದಲ್ಲಿ ಅವತಾರ ಎತ್ತಿ ದುಷ್ಟ ಶಕ್ತಿಗಳನ್ನು ಸಂಹರಿಸಿದ ಪುರಾವೆಗಳು ಇಲ್ಲಿವೆ. ಅಂತಹ ಶಕ್ತಿ ದೇವತೆಯಾದ ಮಹಾಮಾಯೆ (ದ್ಯಾಮವ್ವ) ದೇವಿಯು ಕುಕನೂರು ಪಟ್ಟಣದಲ್ಲಿ ನೆಲೆಸಿದ್ದು, ಕುಕನೂರು ಸಂಕಷ್ಟ ಪರಿಹರಿಸುವ ಮಾತೃಮಯಿ ಆಗಿದ್ದಾಳೆ. ಪ್ರಖ್ಯಾತ ರಾಜ ಮಹಾರಾಜರ ಆಳ್ವಿಕೆಗೆ ಒಳಪಟ್ಟ ಈ ಭಾಗ ಹಿಂದೆ ಯಲಂಬರಗಿ ಎನ್ನುವ ಇಂದಿನ ಯಲಬುರ್ಗಾ ರಾಜಧಾನಿಯಾದ ಕುಕನೂರು ಸ್ಥಳದಲ್ಲಿ ಆಳ್ವಿಕೆ ನಡೆಸಿದ ಸಿಂಧಕುಲದ ಮಹಾಮಂಡಲೇಶ್ವರ ಮಹಾಮಾಯೆ ದೇವಿಗೆ ಜ್ಯೇಷ್ಠಾದೇವಿ, ಗ್ರಾಮದ ಅನುಷ್ಠಾನ ದೇವತೆ, ಭಗವತೆ ಪ್ರತ್ಯಕ್ಷ ಜಗದಂಬಿಕೆ ಎಂಬ ನಾನಾ ರೀತಿಯಲ್ಲಿ ವರ್ಣೀಸಿ ಪೂಜಿಸಿ ಪುನೀತರಾಗಿದ್ದಾರೆ ಎನ್ನುವುದನ್ನು ಇತಿಹಾಸ ಹೇಳುತ್ತದೆ.

ದಕ್ಷಿಣಾಭಿಮುಖಿ ಮಾಯೆ: ಮಹಾಮಾಯೆ ಮಂದಿರಕ್ಕೆ ಪೂರ್ವದ್ವಾರವಿದ್ದರೂ ದಕ್ಷಿಣಾಭಿಮುಖವಾಗಿ ನಿಂತಿದ್ದಾಳೆ. ಸಾಕ್ಷಾತ್ ಪರಮೇಶ್ವರನೆ ಪಾರ್ವತಿ ಹಾಗೂ ಕ್ಷೇತ್ರಪಾಲಕನೊಂದಿಗೆ ಈ ಸ್ಥಳಕ್ಕೆ ಆಗಮಿಸಿದ್ದರೆಂದು ಪುರಾಣಗಳು ಕೊಂಡಾಡುತ್ತಿವೆ.

ದೇವಸ್ಥಾನದ ಆವರಣದಲ್ಲಿ ಶಿವನ ೧೧ ರೂಪಗಳು. ದೇವಿಯ ೧೮ ರೂಪಗಳನ್ನು ಇಲ್ಲಿ ಕಾಣಬಹುದು. ಒಂದೇ ಕಡೆ ಎರಡು ಶಕ್ತಿಶಾಲಿ ದೇವತೆಗಳು ನೆಲೆಸಿರುವುದು ವಿರಳ. ಆದರೆ ಈ ಮಹಾಮಾಯೆ ಪಕ್ಕದಲ್ಲಿ ಮಹಾಕಾಳಿ ಎಂಬ ಹೆಸರಿನ ಸಂರಕ್ಷಕ ಇದ್ದಾನೆಂದು ಇಲ್ಲಿನ ಶಾಸನ ಪ್ರಸ್ತುತಪಡಿಸುತ್ತಿದೆ.

ನವಲಿಂಗೇಶ್ವರ ದೇವಸ್ಥಾನ: ಪಟ್ಟಣದ ಆರಾಧ್ಯದೇವಿ ಮಹಾಮಾಯಿ ದೇವಸ್ಥಾನದ ಆವರಣದಲ್ಲಿರುವ ನವಲಿಂಗೇಶ್ವರ ದೇವಸ್ಥಾನ ಪ್ರಸಿದ್ಧಿಯಾಗಿದೆ. ಇದು ಒಂಬತ್ತು ಗರ್ಭಗುಡಿಗಳಿಂದ ಕೂಡಿದ ದೇವಾಲಯ ಜತೆಗೆ ಇವುಗಳಿಗೆ ಸಭಾಂಗಣಗಳಿವೆ. ಪ್ರತಿಯೊಂದು ಗರ್ಭಗುಡಿಯಲ್ಲಿ ಒಂದೊಂದು ಶಿವಲಿಂಗಗಳಿವೆ.

ದ್ಯಾಂಪೂರದಲ್ಲಿವೆ ಮಹಾಮಾಯಾ ಪಾದಗಳು: ತಾಲೂಕಿನ ದ್ಯಾಂಪೂರು ಗ್ರಾಮದಲ್ಲಿ ಕುಕನೂರು ಮಹಾಮಾಯಾ ಪಾದಗಳು ಇವೆ. ಮೊದಲು ದೇವಿ ದ್ಯಾಂಪೂರು ಗ್ರಾಮಕ್ಕೆ ಆಗಮಿಸಿದ್ದಳು. ನಂತರ ಕುಕನೂರಿಗೆ ಹೋದಳು ಎಂಬ ಮಾತು ಸಹ ಇವೆ. ದೇವಿಯ ಜಾತ್ರೆ ಪ್ರಯುಕ್ತ ನಾನಾ ಕಡೆಯಿಂದ ಜನರು ಕುಕನೂರಿಗೆ ಇಂದು ಪಾದಯಾತ್ರೆ ಮೂಲಕ ಸಹ ಆಗಮಿಸುತ್ತಿದ್ದಾರೆ. ಹಾವೇರಿ, ಗದಗ, ಧಾರವಾಡ, ಬೆಳಗಾವಿ, ಬಳ್ಳಾರಿ ನಾನಾ ಭಾಗದಲ್ಲಿ ದೇವಿಯ ಭಕ್ತರು ಅಪಾರ ಪ್ರಮಾಣದಲ್ಲಿದ್ದಾರೆ.

ಮಹಾಮಾಯಾ ದೇವಿ ಶಕ್ತಿಯ ರೂಪ. ದೇವಸ್ಥಾನಕ್ಕೆ ಪ್ರಸಿದ್ಧವಾದ ಐತಿಹ್ಯ ಇದೆ. ದೇವಿಯ ಜಾತ್ರೆ ಶ್ರದ್ಧಾ, ಭಕ್ತಿಯ ಸಂಕೇತ. ದೇವಿಯನ್ನು ಭಕ್ತಿಯಿಂದ ಆರಾಧಿಸಿದರೆ ಬೇಡಿದ್ದನ್ನು ನೀಡುವ ಸನ್ಮಂಗಲದಾತೆ ಆಗಿದ್ದಾಳೆ. ಜಾತ್ರೆಗೆ ರಾಜ್ಯದ ನಾನಾ ಕಡೆಯಿಂದ ಭಕ್ತವೃಂದ ಆಗಮಿಸಲಿದೆ ಎಂದು ಕುಕನೂರು ಪಟ್ಟಣ ಪಂಚಾಯಿತಿ ಸದಸ್ಯ ಗಗನ ನೋಟಗಾರ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿಕ್ಷಕರ ಸಮಸ್ಯೆಗಳ ಬಗ್ಗೆ ಬಿಜೆಪಿಗೆ ಕಾಳಜಿಯಿಲ್ಲ: ಸಚಿವ ಶಿವರಾಜ ತಂಗಡಗಿ
ಹೇಮಗುಡ್ಡದಲ್ಲಿ ಜಂಬೂ ಸವಾರಿ ಮೆರವಣಿಗೆಗೆ ದಿನಗಣನೆ