ಗದಗ: ತಾಲೂಕಿನ ಹೊಸಹಳ್ಳಿ ಗ್ರಾಮದಲ್ಲಿ ಮೇ 25ರಂದು ಸ್ಥಳೀಯ ಬೂದೀಶ್ವರ ಮಠದ ಮಹಾರಥೋತ್ಸವ ಹಾಗೂ ಸಾಮೂಹಿಕ ವಿವಾಹಗಳು ನಡೆಯಲಿದೆ.
ಶ್ರೀಮಠದಿಂದ ಈ ಬಾರಿಯೂ ಸಾಮೂಹಿಕ ವಿವಾಹಗಳು ಆಯೋಜಿಸಲಾಗಿದ್ದು, ಮಧ್ಯಾಹ್ನ 12.30 ಗಂಟೆಗೆ ಗ್ರಾಮದ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ 27 ಜೋಡಿ ಸತಿಪತಿಗಳಾಗಲಿದ್ದಾರೆ. ವೇದಮೂರ್ತಿ ಪ್ರಭು ಹಿರೇಮಠ ಮಂತ್ರಘೋಷಗಳ ಮಧ್ಯೆ ಕಾರ್ಯಕ್ರಮ ನಡೆಯಲಿದೆ. ಸಂಜೆ ಅಭಿನವ ಬೂದೀಶ್ವರ ಸ್ವಾಮೀಜಿ ಹಾಗೂ ಬೂದೀಶ್ವರ ಶ್ರೀಗಳ ಮೂರ್ತಿಯ ಅಡ್ಡಪಲ್ಲಕ್ಕಿ ಉತ್ಸವದ ಜಂಗಮೋತ್ಸವ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಕಲ ಸಂಗೀತ ವಾದ್ಯಗಳೊಂದಿಗೆ ನೆರವೇರಲಿದೆ.
ಸಂಜೆ 6 ಗಂಟೆಯ ಬಳಿಕ ಬೂದೀಶ್ವರ ಸ್ವಾಮೀಜಿ ಮಹಾರಥೋತ್ಸವ ನೆರವೇರಲಿದೆ.ರಥೋತ್ಸವದ ಬಳಿಕ ಶ್ರೀಮಠದ ಆವರಣದಲ್ಲಿ ಧರ್ಮಸಭೆ ಇದೆ ಹಾಗೂ ರಾತ್ರಿ 7.30ಕ್ಕೆ ಕೊಪ್ಪಳದ ಶ್ರೀಗುರು ಅಭಿನವ ಮೆಲೋಡಿ ಆರ್ಕೆಸ್ಟ್ರಾದಿಂದ ರಸಮಂಜರಿ ಕಾರ್ಯಕ್ರಮವಿದೆ.
ಮೇ 26ರಂದು ಸಂಜೆ ಶ್ರೀಮಠದ ಆವರಣದಲ್ಲಿ ಅಭಿನವ ಬೂದೀಶ್ವರ ಸ್ವಾಮೀಜಿ ಅವರಿಂದ ಕಡುಬಿನ ಕಾಳಗ ನೆರವೇರಲಿದೆ. ಸಂಜೆ 7 ಗಂಟೆಗೆ ಸಂಜು ಬಸಯ್ಯ ಕಲಾತಂಡದಿಂದ ರಸಮಂಜರಿ ಕಾರ್ಯಕ್ರಮವಿದೆ.ಮೇ 27ರಂದು ಅಮಾವಾಸ್ಯೆ ಕಾರ್ಯಕ್ರಮಗಳು ಜರುಗಲಿವೆ. ಜಾತ್ರೆ ನಿಮಿತ್ತ ಶ್ರೀಮಠದಲ್ಲಿ ಮೂರು ದಿನ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಶ್ರೀಮಠದ ಪ್ರಕಟಣೆ ತಿಳಿಸಿದೆ.