ಮಲೆನಾಡು ತಾಂತ್ರಿಕ ಶಿಕ್ಷಣ ಸಮಿತಿಯ ಅಧ್ಯಕ್ಷ । ಎ.ವಿ.ಕಾಂತಮ್ಮ ಮಹಿಳಾ ಕಾಲೇಜು ರಜತ ಮಹೋತ್ಸವ
ಹಿಂದಿನ ದಿನಗಳಿಗಿಂತ ಇಂದಿನ ದಿನಗಳಲ್ಲಿ ಆಗಿರುವ ಬದಲಾವಣೆಗೆ ವಿಜ್ಞಾನದಲ್ಲಿ ಆಗಿರುವ ಹೊಸ ಹೊಸ ಅವಿಷ್ಕಾರಗಳೇ ಕಾರಣ ಎಂದು ಮಲೆನಾಡು ತಾಂತ್ರಿಕ ಶಿಕ್ಷಣ ಸಮಿತಿ ಅಧ್ಯಕ್ಷ ಅಶೋಕ್ ಹಾರನಹಳ್ಳಿ ತಿಳಿಸಿದರು.
ನಗರದ ಸಿಟಿ ಬಸ್ ನಿಲ್ದಾಣದ ಬಳಿ ಇರುವ ಎ.ವಿ.ಕಾಂತಮ್ಮ ಮಹಿಳಾ ಕಾಲೇಜು ಹಾಗೂ ಮಲೆನಾಡು ತಾಂತ್ರಿಕ ಶಿಕ್ಷಣ ಸಮಿತಿ ಜಂಟಿಯಾಗಿ ಗುರುವಾರ ಬೆಳಿಗ್ಗೆ ಎವಿಕೆ ಕಾಲೇಜು ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾಲೇಜಿನ ರಜತ ಮಹೋತ್ಸವ ನೆನಪಿನ ೩೦ನೇ ದತ್ತಿ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ‘ಯಾವುದೇ ವಿಚಾರವನ್ನು ತಿಳಿಯಬೇಕಾದರೆ ನಿಮ್ಮ ಬೆರಳ ತುದಿಯಲ್ಲಿಯೇ ಇದ್ದು, ಅದರ ಸದುಪಯೋಗ ಮಾಡಿಕೊಳ್ಳಬೇಕು. ಇಸ್ರೊ ಸಂಸ್ಥೆಯಲ್ಲಿ ಕೆಲಸ ಮಾಡಿ ಹಾಸನಕ್ಕೆ ಹೆಸರು ತಂದುಕೊಟ್ಟಿದೆ. ಇಡೀ ವಿಶ್ವಸಂಸ್ಥೆಯ ವಿಜ್ಞಾನಿಗಳ ಪರವಾಗಿ ಮತ್ತು ನಾಗರಿಕರ ಪರವಾಗಿ ಕೃತಜ್ಞತೆ ಹೇಳಬೇಕು. ಪ್ರಧಾನಿಗಳ ಮಾರ್ಗದರ್ಶನದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶಕ್ಕೆ ಹೆಸರು ತಂದು ಕೊಟ್ಟಿದೆ. ಅನೇಕ ಸಮಸ್ಯೆಗಳ ವೇಳೆಯೂ ಸ್ಪೇಸ್ ರಿಸರ್ಚ್ ಕ್ಷೇತ್ರದಲ್ಲಿ ಅದ್ಭುತವಾದ ಸಾಧನೆ ಮಾಡಿದೆ’ ಎಂದು ಹೇಳಿದರು.‘ಆ ಉಪಗ್ರಹದ ಮೂಲಕ ನಮಗೆ ಸಿಗುವ ಪ್ರತಿ ಮಾಹಿತಿಯು ಪ್ರತಿ ಜನರಿಗೂ ಉಪಯುಕ್ತವಾಗಿದೆ. ತಾಂತ್ರಿಕ ಕ್ಷೇತ್ರದಲ್ಲಿ ಒಂದು ಅದ್ಭುತವಾದ ಬದಲಾವಣೆ ಮಾಡಿದೆ. ಹಾಸನದ ಮಲೆನಾಡು ಎಂಜಿನಿಯರಿಂಗ್ ಕಾಲೇಜಿನ ಅನೇಕ ವಿದ್ಯಾರ್ಥಿಗಳು ಕೂಡ ಇಸ್ರೊ ಸಂಸ್ಥೆಯಲ್ಲಿ ಅನೇಕ ಚಟುವಟಿಕೆಗಳನ್ನು ಮಾಡಿದ್ದಾರೆ’ ಎಂದು ತಿಳಿಸಿದರು.
‘ನೋಬೆಲ್ ಪ್ರಶಸ್ತಿ ಕೊಡುವುದಾಗಿ ಗೊತ್ತು, ಆದರೆ ಅದು ಏತಕ್ಕಾಗಿ ಮಾಡಿರುವುದು ಎಂಬುದು ಯಾರಿಗೂ ಗೊತ್ತಿರುವುದಿಲ್ಲ. ಈಗಾಗಲೇ ಚಂದ್ರಯಾನ, ಆದಿತ್ಯ ಸೂರ್ಯನ ಬಳಿ ಹೋಗುವ ಯೋಜನೆ ಸೇರಿದಂತೆ ಹಲವಾರು ಉತ್ತಮ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ’ ಎಂದು ಹೇಳಿದರು.
ದತ್ತಿ ಉಪನ್ಯಾಸದಲ್ಲಿ ಇಸ್ರೋ ಬೆಂಗಳೂರಿನ ಕಂಟ್ರೋಲ್ ಸಿಸ್ಟಂ ಗ್ರೂಪ್ ವಿಭಾಗದ ಮುಖ್ಯಸ್ಥರಾದ ಸುಮಾ ಹಿರೇಮಠ ಅವರು ಪ್ರೊಜೆಕ್ಟರ್ ಮೂಲಕ ಕೆಲ ಪ್ರಮುಖ ವಿಚಾರವನ್ನು ತಿಳಿಸಿಕೊಟ್ಟರು. ಭಾಗವಹಿಸಿದ್ದ ವಿದ್ಯಾರ್ಥಿಗಳು ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದುಕೊಂಡರು. ವಿದ್ಯಾರ್ಥಿಗಳಿಗೆ ಅನುಕೂಲಕರವಾದ ಪುಸ್ತಕ ಬಿಡುಗಡೆಗೊಳಿಸಿದರು.