ತೊಗರಿ, ಹೆಸರು, ಸಜ್ಜೆ, ಸೂರ್ಯಕಾಂತಿ ಬೀಜ ಶೀಘ್ರ ವಿತರಣೆ: ಭೀಮರಾಯ

KannadaprabhaNewsNetwork |  
Published : May 20, 2024, 01:31 AM IST
ಸುರಪುರ ನಗರದ ವಿವಿಧ ರಸಗೊಬ್ಬರದ ಅಂಗಡಿಗಳಿಗೆ ಕೃಷಿ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. | Kannada Prabha

ಸಾರಾಂಶ

ಪರವಾನಗಿ ಪಡೆದ ಗೊಬ್ಬರ, ಕೀಟನಾಶಕ, ಬೀಜ ಮಾರಾಟ ಅಂಗಡಿಗಳಲ್ಲಿ ಗುಣಮಟ್ಟ ಕಾಪಾಡಿಕೊಳ್ಳಬೇಕು. ಕಳಪೆ, ನಕಲಿ ಬಿತ್ತನೆ ಬೀಜ ಮತ್ತು ಇತರೆ ವಸ್ತುಗಳನ್ನು ಮಾರಾಟ ಮಾಡುವುದು ಕಂಡುಬಂದರೆ ಕ್ರಮ ಕೈಗೊಳ್ಳಲಾಗುವುದು.

ಕನ್ನಡಪ್ರಭ ವಾರ್ತೆ ಸುರಪುರ

ಕೃಷಿ ಇಲಾಖೆಯಿಂದ ಪರವಾನಗಿ ಪಡೆದ ಗೊಬ್ಬರ, ಕೀಟನಾಶಕ, ಬೀಜ ಮಾರಾಟ ಅಂಗಡಿಗಳಲ್ಲಿ ಗುಣಮಟ್ಟ ಕಾಪಾಡಿಕೊಳ್ಳಬೇಕು. ಕಳಪೆ, ನಕಲಿ ಬಿತ್ತನೆ ಬೀಜ ಮತ್ತು ಇತರೆ ವಸ್ತುಗಳನ್ನು ಮಾರಾಟ ಮಾಡುವುದು ಕಂಡುಬಂದರೆ ಕ್ರಮ ಕೈಗೊಳ್ಳಲಾಗುವುದು ಎಂದು ಕೃಷಿ ಸಹಾಯಕ ನಿರ್ದೇಶಕ ಭೀಮರಾಯ ಹವಾಲ್ದಾರ ಹೇಳಿದರು.

ಸುರಪುರ ಮತ್ತು ಹುಣಸಗಿ ತಾಲೂಕು ಮತ್ತು ನಗರದ ವಿವಿಧ ಗೊಬ್ಬರದ ಅಂಗಡಿಗಳಿಗೆ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿದ ಅವರು, ರೈತರು ಅಧಿಕೃತ ಮಾರಾಟಗಾರರಲ್ಲಿ ಬಿತ್ತನೆ ಬೀಜ ಖರೀದಿಸಬೇಕು. ಕಡ್ಡಾಯವಾಗಿ ರಸೀದಿ ಪಡೆಯಬೇಕು. ದರ ಕಡಿಮೆ ಇದೆ ಎಂದು ಅನಧಿಕೃತ ಮಾರಾಟಗಾರರಲ್ಲಿ ಖರೀದಿಸಿ ಮೋಸ ಹೋಗಬಾರದು ಎಂದರು.

ಕೃಷಿ ಇಲಾಖೆಯಿಂದ ಈಗಾಗಲೇ ತೊಗರಿ, ಹೆಸರು, ಸಜ್ಜೆ, ಸೂರ್ಯಕಾಂತಿ ಬಿತ್ತನೆ ಬೀಜಗಳಿಗೆ ಬೇಡಿಕೆ ಸಲ್ಲಿಸಲಾಗಿದೆ. ಒಂದು ವಾರದಲ್ಲಿ ದಾಸ್ತಾನು ಬರಲಿದ್ದು ರೈತರಿಗೆ ರಿಯಾಯತಿ ದರದಲ್ಲಿ ಪೂರೈಸಲಾಗುವುದು ಎಂದು ತಿಳಿಸಿದರು.

ಕೃಷಿ ಅಧಿಕಾರಿಗಳು ತಾಲೂಕಿನ ಕೆಂಭಾವಿ, ಹುಣಸಗಿ, ಕಕ್ಕೇರಾ ಮತ್ತು ಸುರಪುರದಲ್ಲಿ ಕಳೆದ ಒಂದು ವಾರದಿಂದ ರಸಗೊಬ್ಬರ ಅಂಗಡಿಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದೇವೆ. ಮುಂಗಾರು ಆರಂಭವಾಗಿರುವುದರಿಂದ ಬಿತ್ತನೆ ಬೀಜಗಳ ಬೇಡಿಕೆ ಹೆಚ್ಚಾಗಿದೆ. ರಸಗೊಬ್ಬರದ ಅಂಗಡಿಗಳಲ್ಲಿ ಈಗಾಗಲೇ ಸಾಕಷ್ಟು ಬಿತ್ತನೆ ಬೀಜ ಸಂಗ್ರಹಿಸಲಾಗಿದೆ ಎಂದು ತಿಳಿಸಿದರು.

ಈ ನಿಟ್ಟಿನಲ್ಲಿ ಅಂಗಡಿಗಳಲ್ಲಿ ಪರಿಶೀಲನೆ ನಡೆಸಿದ ಅಧಿಕಾರಿಗಳು ಬಿತ್ತನೆ ಬೀಜದ ಗುಣಮಟ್ಟ ಪರಿಶೀಲಿಸಲು ಮಾದರಿ ಸಂಗ್ರಹಿಸಿ ಗಂಗಾವತಿಯ ಪ್ರಯೋಗಾಲಯಕ್ಕೆ ಕಳಿಸುತ್ತಿದ್ದಾರೆ. ಬೆಳೆ ವಿಮೆ ಕುರಿತು ರೈತರಲ್ಲಿ ಯಾವುದೇ ಗೊಂದಲ ಬೇಡ ಎಂದರು.

ಸಂರಕ್ಷಣೆ, ಕರ್ನಾಟಕ ಜಿಓವಿ.ಇನ್ ಈ ಪೋರ್ಟಲ್‌ನಲ್ಲಿ ವರ್ಷ, ಆಧಾರ್ ಸಂಖ್ಯೆ ಅಥವಾ ಅರ್ಜಿ ಸಂಖ್ಯೆ ಅಥವಾ ಮೊಬೈಲ್ ಸಂಖ್ಯೆ ನಮೂದಿಸಿ ಖುದ್ದಾಗಿ ಪರಿಶೀಲಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿ ಬೇಕಾದಲ್ಲಿ ರೈತ ಸಂಪರ್ಕ ಕೇಂದ್ರಗಳಿಂದ ಸಲಹೆ ಪಡೆಯಬಹುದು ಎಂದು ತಿಳಿಸಿದರು.

ತಾಂತ್ರಿಕ ಅಧಿಕಾರಿ ವಿನಾಯಕ, ಕೃಷಿ ಅಧಿಕಾರಿಗಳಾದ ಶ್ರೀಧರ, ಸಿದ್ದಾರ್ಥ ಪಾಟೀಲ್, ಮಹಾನಂದಿ ಇದ್ದರು.

PREV

Recommended Stories

ಸೆಂಚುರಿ ಕ್ಲಬ್‌ ಸೇರಿಯೇ ಬಿಟ್ಟಿತು ಸು ಫ್ರಂ ಸೋ
ಶ್ರೀಕೃಷ್ಣನೆಂಬ ನಿತ್ಯ ಸತ್ಯನಿಗೆ ಜನ್ಮಾಷ್ಟಮೀ