15 ಸಾವಿರ ಲಂಚ ಕೇಳಿದ್ರು ತೊಗೊಳ್ಳಿ ಮೇಡಂ

KannadaprabhaNewsNetwork |  
Published : Mar 25, 2026, 01:30 AM IST
24 ಟಿವಿಕೆ 1 – ತುರುವೇಕೆರೆಯ ಆಡಳಿತ ಸೌಧದ ಬಳಿ ನಡೆದ ಜನ ಸಂಪರ್ಕ ಸಭೆಯಲ್ಲಿ ಉಪವಿಭಾಗಾಧಿಕಾರಿಗಳಿಗೆ ಹಣ ನೀಡಲು ಬಂದ ರೈತ. | Kannada Prabha

ಸಾರಾಂಶ

ಸಂಪಿಗೆ ಗ್ರಾಮದ ನಾಗೇಶ್ ಎಂಬ ರೈತ ಉಪ ವಿಭಾಗಾಧಿಕಾರಿ ಸಪ್ತಶ್ರೀ ಯವರ ಬಳಿ ಮನವಿ ಪತ್ರ ಮತ್ತು 15 ಸಾವಿರ ನಗದನ್ನು ಹಿಡಿದು ಜಿಲ್ಲಾ ಅಪರ ಜಿಲ್ಲಾಧಿಕಾರಿಗಳ ಸಮ್ಮುಖವೇ ಕೈ ಮುಗಿದು ಕೇಳಿಕೊಂಡ.

ಕನ್ನಡಪ್ರಭವಾರ್ತೆ ತುರುವೇಕೆರೆ

ಮೇಡಂ. ನಿಮ್ ಕಚೇರಿ ಸಿಬ್ಬಂದಿ ನಮ್ಮ ಜಮೀನಿನಲ್ಲಿ ಆಗಿದ್ದ ತಪ್ಪಿನ ತಿದ್ದುಪಡಿ ಮಾಡಲು 20 ಸಾವಿರ ಲಂಚ ಕೇಳಿದ್ದರು. ಈಗಾಗಲೇ 5 ಸಾವಿರ ಕೊಟ್ಟಿದ್ದೇನೆ. ಉಳಿದ 15 ಸಾವಿರ ರುಗಳನ್ನು ಮೇಡಂ ಗೆ ಕೊಡಬೇಕು ಅಂತ ಹೇಳಿದ್ರು. ಅದರ ಆಡಿಯೋ ರೆಕಾರ್ಡ್ ಇದೆ. ದಯವಿಟ್ಟು ಈ ಹಣ ತೆಗೆದುಕೊಂಡು ನನ್ನ ಜಮೀನಿಗೆ ಸಂಬಂಧಿಸಿದಂತೆ ತಿದ್ದುಪಡಿ ಮಾಡಿಕೊಡಿ.

ಹೀಗೆ ಸಂಪಿಗೆ ಗ್ರಾಮದ ನಾಗೇಶ್ ಎಂಬ ರೈತ ಉಪ ವಿಭಾಗಾಧಿಕಾರಿ ಸಪ್ತಶ್ರೀ ಯವರ ಬಳಿ ಮನವಿ ಪತ್ರ ಮತ್ತು 15 ಸಾವಿರ ನಗದನ್ನು ಹಿಡಿದು ಜಿಲ್ಲಾ ಅಪರ ಜಿಲ್ಲಾಧಿಕಾರಿಗಳ ಸಮ್ಮುಖವೇ ಕೈ ಮುಗಿದು ಕೇಳಿಕೊಂಡ. ಈ ಘಟನೆ ನಡೆದ್ದದ್ದು ತಾಲೂಕು ಆಡಳಿತ ಸೌಧದ ಎದುರು ಜಿಲ್ಲಾಡಳಿತದ ವತಿಯಿಂದ ನಡೆದ ಜನ ಸಂಪರ್ಕ ಸಭೆಯ ವೇಳೆ ಸಂಪಿಗೆಯ ನಾಗೇಶ್ ಎಂಬ ರೈತ ತನ್ನ ಜಮೀನಿನ ದಾಖಲೆಯಲ್ಲಿ ಆಗಿದ್ದ ತಪ್ಪನ್ನು ಸರಿಪಡಿಸಿ ಎಂದು ಕಳೆದ ಮೂರ್ನಾಲ್ಕು ತಿಂಗಳಿನಿಂದ ತಿಪಟೂರು ಉಪವಿಭಾಗಾಧಿಕಾರಿಗಳ ಕಚೇರಿಗೆ ಅಲೆದು ಅಲೆದು ಸಾಕಾಗಿದ್ದ. ತಿದ್ದುಪಡಿ ಮಾಡಲು ಅಲ್ಲಿನ ಗುಮಾಸ್ತರು 20 ಸಾವಿರ ಲಂಚದ ಬೇಡಿಕೆ ಇಟ್ಟಿದ್ದರು. ಇದಕ್ಕೆ ಅಲ್ಲಿನ ಡಿ ಗ್ರೂಪ್ ನೌಕರನೂ ಶಾಮೀಲಾಗಿದ್ದ. ಈಗಾಗಲೇ 5 ಸಾವಿರ ಲಂಚ ನೀಡಿದ್ದೇನೆ. ಆದರೂ ಇನ್ನೂ 15 ಸಾವಿರ ರು ಕೊಡದೇ ಕೆಲಸ ಮಾಡುವುದಿಲ್ಲ ಎಂದು ಪಟ್ಟು ಹಿಡಿದಿದ್ದರು. ಅವರು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಸಂಗತಿಯನ್ನು ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದ. 15 ಸಾವಿರ ರು. ನಿಮಗೇ ನೀಡಬೇಕೆಂದು ಅವರು ಆಗ್ರಹಿಸಿದ್ದಾರೆ. ಹಾಗಾಗಿ ನಿಮಗೇ ಈ ಹಣ ನೇರವಾಗಿ ಕೊಡ್ತಾ ಇದ್ದೇನೆ. ಇದನ್ನು ತೆಗೆದುಕೊಂಡು ದಯಮಾಡಿ ನನ್ನ ಕೆಲಸ ಮಾಡಿಕೊಡಿ ಎಂದು ಕೈ ಮುಗಿದ. ಈ ಘಟನೆಯಿಂದ ವಿಚಲಿತರಾದ ಉಪವಿಭಾಗಾಧಿಕಾರಿ ಸಪ್ತಶ್ರೀ, ಏನಪ್ಪಾ. ಯಾರ ಹತ್ರ ಮಾತಾಡ್ತಾ ಇದ್ಯ. ಯಾರು ನಿನಗೆ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೋ ಅವರ ಬಗ್ಗೆ ಲಿಖಿತ ದೂರು ನೀಡು. ಕ್ರಮ ಕೈಗೊಳ್ತೇನೆ. ಹೀಗೆಲ್ಲಾ ಮಾಡಬೇಡ ಎಂದು ಸಂಪಿಗೆಯ ರೈತ ನಾಗೇಶ್ ಗೆ ಸಮಾಧಾನ ಮಾಡಿದರು. ಜಾಗಟೆ ಬಾರಿಸಿ ಪ್ರತಿಭಟನೆ

ತಾನು ಅನುಭವದಲ್ಲಿರುವ ಜಮೀನನ್ನು ಬೇರೆಯವರ ಹೆಸರಿಗೆ ಅಧಿಕಾರಿಗಳು ಮಾಡಿದ್ದಾರೆ. ನಮಗೆ ಜೀವನೋಪಾಯಕ್ಕೆ ಏನೇನೂ ಇಲ್ಲ ಎಂದು ಆರೋಪಿಸಿ ತಾಲೂಕಿನ ಜಡೆಯದ ಗೋವಿಂದ ಎಂಬ ವ್ಯಕ್ತಿ ಸಭೆಯ ಮುಂದೆ ತನಗಾದ ಅನ್ಯಾಯವನ್ನು ಹೇಳುತ್ತಾ ಜಾಗಟೆಯನ್ನು ಜೋರಾಗಿ ಬಡಿಯುತ್ತಾ ಎಲ್ಲರ ಗಮನ ಸೆಳೆದ. ಲಂಚ ಇಲ್ಲದೇ ಯಾವ ಕೆಲಸವೂ ಆಗುತ್ತಿಲ್ಲ ಎಂದು ತನ್ನ ಜೇಬಿನೊಳಗಿದ್ದ ಸುಮಾರು ಒಂದೆರೆಡು ಸಾವಿರ ರುಗಳನ್ನು ಜನರತ್ತ ಎಸೆದ. ಅಲ್ಲದೇ ಮೂಲಭೂತ ಸೌಲಭ್ಯಗಳನ್ನು ಕೊಡದೇ ಇರುವ ಬಗ್ಗೆ ಆಕ್ರೋಶಗೊಂಡು ಅಧಿಕಾರಿಗಳತ್ತ ಬೆಟ್ಟು ಮಾಡಿ ಗೋವಿಂದಾ ಗೋವಿಂದಾ ಎಂದು ಹತ್ತಾರು ಬಾರಿ ಕೂಗಿ ಕೂಗಿ ತನ್ನ ಆಕ್ರೋಶ ವ್ಯಕ್ತಪಡಿಸಿದ. ಇದರಿಂದ ಕ್ಷಣಕಾಲ ದಿಗ್ಭ್ರಮೆಗೊಂಡ ಅಪರ ಜಿಲ್ಲಾಧಿಕಾರಿ ಡಾ.ತಿಪ್ಪೇಸ್ವಾಮಿ, ಎಸಿ ಸಪ್ತಶ್ರೀ ಯವರು ಆತನನ್ನು ವೇದಿಕೆ ಬಳಿ ಕರೆದರೂ ಸಹ ಬಾರದೇ ತನ್ನ ನೋವನ್ನು ಕೂಗಾಡುತ್ತಲೇ ಹೇಳುತ್ತಿದ್ದ. ಕೊನೆಗೆ ಆತನ ಕೂಗು ಅರಣ್ಯ ರೋದನವಾಯಿತು. ಸಭೆ ಅಂತ್ಯದವರೆಗೂ ಸಹ ಆತ ಧ್ವಜಸ್ಥಂಬದ ಬಳಿ ಮೂಕನಾಗಿ ಎಲ್ಲರನ್ನೂ ನೋಡುತ್ತಾ ಕುಳಿತುಕೊಂಡ. ಇನ್ನೂ ಬಿಸಿ ಕಾವಲ್ ನಲ್ಲಿ ಕೋಟ್ಯಾಂತರ ರು ಬೆಲೆ ಬಾಳುವ 20 ಎಕರೆ ಜಮೀನಿಗೆ ಸುಳ್ಳು ದಾಖಲೆ ಸೃಷ್ಟಿಸಿ ಸರ್ಕಾರಕ್ಕೆ ವಂಚಿಸಲಾಗಿದೆ ಎಂದು ಆರೋಪಿಸಿ ಆಡಳಿತ ಸೌಧದ ಎದುರು ಪ್ರತಿಭಟನೆ ನಡೆಸುತ್ತಿದ್ದ ದಲಿತ ಸಂಘರ್ಷ ಸಮಿತಿಯವರು ಈ ಕೂಡಲೇ ತಪ್ಪಿತಸ್ಥರನ್ನು ಬಂಧಿಸಬೇಕು ಮತ್ತು ನಿಜವಾದ ಫಲಾನುಭವಿಗಳಿಗೆ ಜಮೀನನ್ನು ನೀಡಬೇಕೆಂಬ ಆಗ್ರಹವನ್ನು ಆಲಿಸಿದ ಅಪರ ಜಿಲ್ಲಾಧಿಕಾರಿ ಡಾ.ತಿಪ್ಪೇಸ್ವಾಮಿಯವರು ಕೂಡಲೇ ಎರಡೂ ದಾಖಲೆಗಳನ್ನು ಪರಿಶೀಲನೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಉಪವಿಭಾಗಾಧಿಕಾರಿಗಳಿಗೆ ಸೂಚಿಸಿದರು.

ಈ ವೇಳೆ ತಹಸೀಲ್ದಾರ್ ಎನ್. ಎ. ಕುಂಇ ಅಹಮದ್, ಇಓ ಅನಂತರಾಜ್, ಬಿಇಓ ಸೋಮಶೇಖರ್, ಎಸೈ ಟಿ.ಮೂರ್ತಿ ಸೇರಿದಂತೆ ಹಲವು ಅಧಿಕಾರಿಗಳು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಒಡೆದ ಮನಸ್ಸನ್ನು ಬೆಸೆಯುವುದೇ ನಿಜವಾದ ಧರ್ಮ: ರಂಭಾಪುರಿ ಜಗದ್ಗುರು ಶ್ರೀಗಳು
ಪಂಚಮಸಾಲಿ ನೊಗ ಹೊತ್ತಿದ್ದೇನೆ, ಮುಂದೆಯೂ ಹೊರುತ್ತೇನೆ