ಮೇಕೆದಾಟುವಿಗೆ ಈಗಲೇ ಅನುಮತಿ ಕೊಡಿಸಿಬಿಡಿ: ಗೌಡರಿಗೆ ಸಿಎಂ ಮನವಿ

KannadaprabhaNewsNetwork | Published : Apr 20, 2024 1:02 AM

ಸಾರಾಂಶ

ಮೋದಿಯೊಂದಿಗಿನ ಆತ್ಮೀಯ ಸಂಬಂಧವನ್ನು ಬಳಸಿಕೊಂಡು ಈಗಲೇ ಮೇಕೆದಾಟುವಿಗೆ ಅನುಮತಿ ಕೊಡಿಸಿಬಿಡಿ ಎಂದು ದೇವೇಗೌಡರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಬೇಲೂರು/ದೊಡ್ಡಬಳ್ಳಾಪುರ/ಸಕಲೇಶಪುರ

ಮೋದಿಯವರಿಗೂ, ನನಗೂ ಅವಿನಾಭಾವ ಸಂಬಂಧ ಇದೆ ಎಂದು ದೇವೇಗೌಡರು ಹೇಳುತ್ತಾರೆ. ಈಗ ಬೆಂಗಳೂರಲ್ಲಿ ಕುಡಿಯಲು ನೀರಿಲ್ಲ. ರಾಜ್ಯದಲ್ಲಿ ತೀವ್ರ ಬರಗಾಲವಿದೆ. ಮೋದಿಯೊಂದಿಗಿನ ಆತ್ಮೀಯ ಸಂಬಂಧವನ್ನು ಬಳಸಿಕೊಂಡು ಈಗಲೇ ಮೇಕೆದಾಟುವಿಗೆ ಅನುಮತಿ ಕೊಡಿಸಿಬಿಡಿ ಎಂದು ದೇವೇಗೌಡರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.

ಬೇಲೂರು, ಸಕಲೇಶಪುರ ಹಾಗೂ ದೊಡ್ಡಬಳ್ಳಾಪುರಗಳಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದ ಮುಖ್ಯಮಂತ್ರಿ ದೇವೇಗೌಡರ ವಿರುದ್ಧ ಹರಿಹಾಯ್ದರು. ಎನ್‌ಡಿಎ ಮತ್ತೆ ಅಧಿಕಾರಕ್ಕೆ ಬಂದರೆ ಮೇಕೆದಾಟು ಯೋಜನೆ ಆರಂಭಿಸುತ್ತೇವೆ ಎನ್ನುತ್ತಿದ್ದಾರೆ. ಯೋಜನೆಗೆ ಈಗಲೇ ಅನುಮತಿ ಕೊಡಿಸಿಬಿಡಿ ಎಂದು ಮನವಿ ಮಾಡಿದರು.

ಕರ್ನಾಟಕದ 223 ತಾಲೂಕಿನಲ್ಲಿ ಬರಗಾಲವಿದೆ ಎಂದು ರಾಜ್ಯ ಸರ್ಕಾರ ಆದೇಶ ಮಾಡಿ ಪರಿಹಾರ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದರೂ ಈವರೆಗೆ ನಯಾಪೈಸೆ ಅನುದಾನ ಬಂದಿಲ್ಲ. ರೈತರ ನಾಯಕ ಎಂದು ಹೇಳಿಕೊಳ್ಳುವ ದೇವೇಗೌಡ ಹಾಗೂ ಮೊಮ್ಮಗ ಸಂಸದ ಪ್ರಜ್ವಲ್ ರೇವಣ್ಣ, ಈವರೆಗೂ ಇದರ ಬಗ್ಗೆ ಚಕಾರವೆತ್ತದೆ ಮೌನವಾಗಿದ್ದಾರೆ. ಇಂತಹವರನ್ನು ಮತ್ತೆ ಲೋಕಸಭೆಗೆ ಆಯ್ಕೆ ಮಾಡುವ ಬಗ್ಗೆ ಮತದಾರರು ಚಿಂತನೆ ಮಾಡಬೇಕಿದೆ ಎಂದು ಹೇಳಿದರು.

ಕೇಂದ್ರದ 15ನೇ ಹಣಕಾಸು ಆಯೋಗದ ಶಿಫಾರಸ್ಸಿನನ್ವಯ ರಾಜ್ಯಕ್ಕೆ ಬರಬೇಕಾದ ಹಣವನ್ನು ಇನ್ನೂ ಕೊಟ್ಟಿಲ್ಲ. ಇದನ್ನೇಕೆ ಜೆಡಿಎಸ್‌ನವರು ಕೇಂದ್ರದ ಗಮನಕ್ಕೆ ತಂದಿಲ್ಲ ಎಂದು ಕಿಡಿಕಾರಿದರು.

ಚುನಾವಣೆ ಆದ ಮೇಲೆ ಸರ್ಕಾರ ಬಿದ್ದು ಹೋಗುತ್ತೆ ಎಂದು ಗೌಡರು ಭವಿಷ್ಯ ಹೇಳಿದ್ದಾರೆ, ಬೀಳಲು ಇದು ಮಡಿಕೆಯಲ್ಲ?. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಚುನಾವಣೆ ಬಳಿಕ ಗ್ಯಾರಂಟಿ ನಿಂತು ಹೋಗುತ್ತೆ ಎಂದು ಹೇಳುತ್ತಾರೆ. ನಮ್ಮ ಗ್ಯಾರಂಟಿ ಎಂದಿಗೂ ಶಾಶ್ವತ. ಹಾಸನ, ಮಂಡ್ಯ, ಕೋಲಾರ, ಬೆಂಗಳೂರು ಗ್ರಾಮಾಂತರದಲ್ಲೂ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸುತ್ತದೆ. ಸಿದ್ದರಾಮಯ್ಯಗೆ ಗರ್ವಭಂಗ ಮಾಡುತ್ತೇವೆ ಎನ್ನುತ್ತಿದ್ದಾರೆ. ನನಗೆ ಗರ್ವನೇ ಇಲ್ಲ, ಇನ್ನು ಭಂಗ ಎಲ್ಲಿ ಮಾಡುತ್ತೀರಿ ಎಂದು ತಿರುಗೇಟು ನೀಡಿದರು.

ಬಿಜೆಪಿಯಾಗಲಿ, ಮೋದಿಯವರಾಗಲಿ ಕೊಟ್ಟ ಮಾತಲ್ಲಿ ಒಂದನ್ನೂ ಈಡೇರಿಸಲಿಲ್ಲ. ಬದಲಿಗೆ ಹೇಳಿದ್ದಕ್ಕೆ ಉಲ್ಟಾ ಅನಾಹುತಗಳನ್ನೇ ಮಾಡಿದ್ದಾರೆ. ಕೊರೋನಾ ಸಂದರ್ಭದಲ್ಲೂ ಕೋಟಿ, ಕೋಟಿ ಕೊಳ್ಳೆ ಹೊಡೆದವರನ್ನು ಕ್ಷಮಿಸಲು ಸಾಧ್ಯವೇ?. ಕೋವಿಡ್ ಹಗರಣದ ತನಿಖೆ ನಡೆಯುತ್ತಿದೆ. ಹಗರಣ ನಡೆದಿರುವುದಕ್ಕೆ ಸಾಕಷ್ಟು ಸಾಕ್ಷ್ಯಗಳಿರುವ ಬಗ್ಗೆ ನನಗೆ ಮಾಹಿತಿ ಇದೆ. ತನಿಖೆ ಪೂರ್ಣಗೊಂಡ ಬಳಿಕ ಭ್ರಷ್ಟಾಚಾರಿಗೆ ತಕ್ಕ ಶಾಸ್ತಿ ಆಗುತ್ತದೆ ಎಂದರು.

ನಮ್ಮದು 4 ವರ್ಷಗಳ ಸರ್ಕಾರವಲ್ಲ, 10 ವರ್ಷಗಳ ಸರ್ಕಾರ: ಡಿಕೆಶಿನಮ್ಮದು 4 ವರ್ಷಗಳ ಸರ್ಕಾರವಲ್ಲ, ಬದಲಿಗೆ 10 ವರ್ಷಗಳ ಸರ್ಕಾರ. ನಮ್ಮ ಗ್ಯಾರಂಟಿಯನ್ನು ಯಾರಿಂದಲೂ ಮುಟ್ಟಲು ಸಾಧ್ಯವಿಲ್ಲ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.ಸಕಲೇಶಪುರ ಪಟ್ಟಣದಲ್ಲಿ ಶುಕ್ರವಾರ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್‌ ಪಟೇಲ್‌ ಪರ ಚುನಾವಣೆ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ದೇವೇಗೌಡರು ಈ ಸರ್ಕಾರ ಬಿದ್ದು ಹೋಗಲಿದೆ ಎಂದಿದ್ದಾರೆ. ಬಿದ್ದು ಹೋಗಲು ಅದೇನು ಮಡಕೇನಾ?. ರಾಹುಲ್‌ ಗಾಂಧಿಯವರು ಅಂದು ಜೆಡಿಎಸ್‌, ಬಿಜೆಪಿಯ ಬಿ ಟೀಂ ಎಂದಿದ್ದರು. ಆದರೆ, ಜೆಡಿಎಸ್‌ನವರು ಈಗ ಬಿ ಟೀಂ ಬಿಟ್ಟು, ಬಿಜೆಪಿಯ ಪಾರ್ಟ್‌ನರ್ ಆಗಿದ್ದಾರೆ. ದೇವೇಗೌಡರ ಒಬ್ಬ ಮಗ, ಇನ್ನೊಬ್ಬ ಮೊಮ್ಮಗ, ಮತ್ತೊಬ್ಬ ಅಳಿಯ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಬೇರೆ ಯಾವ ಅಭ್ಯರ್ಥಿಯೂ ಅವರಿಗೆ ಸಿಗಲಿಲ್ಲವಾ? ಎಂದು ಅವರು ಪ್ರಶ್ನಿಸಿದರು.

ಲೋಕಸಭಾ ಚುನಾವಣೆ ಬಳಿಕ ಗ್ಯಾರಂಟಿ ನಿಲ್ಲಲಿದೆ ಎಂದು ಅಪಪ್ರಚಾರ ನಡೆಸುತ್ತಿದ್ದಾರೆ. ಆದರೆ, ನಮ್ಮ ಗ್ಯಾರಂಟಿ ಮುಂದುವರಿಯಲಿದೆ ಎಂದು ಸ್ಪಷ್ಟಪಡಿಸಿದರು.ಕಾಂಗ್ರೆಸ್ ಸರ್ಕಾರ ನೀಡಿದ ಐತಿಹಾಸಿಕ ಕಾರ್ಯಕ್ರಮಗಳ ಮುಂದೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ತಂದಿರುವ ಯಾವ ಯೋಜನೆಗಳೂ ಜನರ ಮನಗೆಲ್ಲಲು ಸಾಧ್ಯವಾಗಿಲ್ಲ. ಚುನಾವಣೆ ನಂತರ ಜೆಡಿಎಸ್ ಇರಲ್ಲ. ದೇಶದಲ್ಲಿ ನಿಜವಾದ ಜಾತ್ಯತೀತ ಪಕ್ಷವೆಂದರೆ ಕಾಂಗ್ರೆಸ್. ಮಂಡ್ಯ, ಹಾಸನ ಹಾಗೂ ಬೆಂಗಳೂರು ಗ್ರಾಮಾಂತರದಲ್ಲಿನ ಜೆಡಿಎಸ್ ಅಭ್ಯರ್ಥಿಗಳು ಯಾರೂ ಗೆಲ್ಲುವುದಿಲ್ಲ ಎಂದು ತಿಳಿಸಿದರು.

Share this article