ರಸ್ತೆ ಕಾಮಗಾರಿ ನಡೆಸದಿದ್ದರೆ ಟೋಲ್ ಬಂದ್: ಶಾಸಕ ದಿನಕರ ಶೆಟ್ಟಿ

KannadaprabhaNewsNetwork |  
Published : Oct 14, 2025, 01:02 AM IST
ಫೋಟೋ : ೧೩ಕೆಎಂಟಿ_ಒಸಿಟಿ_ಕೆಪಿ೧ : ತಾಲೂಕುಸೌಧದಲ್ಲಿ ಶಾಸಕ ದಿನಕರ ಶೆಟ್ಟಿ ಅಧ್ಯಕ್ಷತೆಯಲ್ಲಿ ರಾಷ್ಟೀಯ ಹೆದ್ದಾರಿ ಮತ್ತು ಬಿಎಸ್‌ಎನ್‌ಎಲ್ ಕಾಮಗಾರಿಗೆ ಸಂಬಂಧಿಸಿ ಅಧಿಕಾರಿಗಳ ಸಭೆ ನಡೆಸಲಾಯಿತು. ಉಪವಿಭಾಗಾಧಿಕಾರಿ ಪಿ. ಶ್ರವಣಕುಮಾರ, ಗ್ರೇಡ್ ೨ ತಹಸೀಲ್ದಾರ ಸತೀಶ ಗೌಡ ಇತರರು ಇದ್ದರು.  | Kannada Prabha

ಸಾರಾಂಶ

ಮಳೆ ಕಡಿಮೆಯಾಗಿರುವುದರಿಂದ ರಸ್ತೆ ಕಾಮಗಾರಿಗೆ ಸಮಸ್ಯೆಯಿಲ್ಲ. ತಕ್ಷಣದಿಂದಲೇ ರಾಷ್ಟ್ರೀಯ ಹೆದ್ದಾರಿ ೬೬ರ ಚತುಷ್ಪಥ ಕಾಮಗಾರಿಯನ್ನು ವೇಗವಾಗಿ ಮುಂದುವರಿಸಬೇಕು.

ಅಧಿಕಾರಿಗಳ ಪ್ರಗತಿ ಪರಿಶೀಲನೆ ಸಭೆಯಲ್ಲಿ ಎಚ್ಚರಿಕೆಕನ್ನಡಪ್ರಭ ವಾರ್ತೆ ಕುಮಟಾ

ಮಳೆ ಕಡಿಮೆಯಾಗಿರುವುದರಿಂದ ರಸ್ತೆ ಕಾಮಗಾರಿಗೆ ಸಮಸ್ಯೆಯಿಲ್ಲ. ತಕ್ಷಣದಿಂದಲೇ ರಾಷ್ಟ್ರೀಯ ಹೆದ್ದಾರಿ ೬೬ರ ಚತುಷ್ಪಥ ಕಾಮಗಾರಿಯನ್ನು ವೇಗವಾಗಿ ಮುಂದುವರಿಸಬೇಕು. ಒಂದು ತಿಂಗಳಲ್ಲಿ ನಿರೀಕ್ಷಿತ ಪ್ರಗತಿ ಕಾಣದಿದ್ದಲ್ಲಿ ಜಿಲ್ಲಾಧಿಕಾರಿಗೆ ಪತ್ರ ಬರೆದು ಟೋಲ್ ಬಂದ್ ಮಾಡಲು ಸೂಚಿಸಲಾಗುವುದು ಎಂದು ಶಾಸಕ ದಿನಕರ ಶೆಟ್ಟಿ ಎಚ್ಚರಿಕೆ ನೀಡಿದರು.

ತಾಲೂಕು ಸೌಧದಲ್ಲಿ ಸೋಮವಾರ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಐಆರ್‌ಬಿ, ಆರ್.ಎನ್.ಎಸ್. ಕಂಪನಿ, ಆರಣ್ಯ ಇಲಾಖೆ, ಬಿಎಸ್‌ಎನ್‌ಎಲ್ ಅಧಿಕಾರಿಗಳ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಳೆದ ೨೦ ದಿನಗಳಿಂದ ಬಹುತೇಕ ಮಳೆ ಕಡಿಮೆಯಾಗಿದೆ. ಕಳೆದ ಮೀಟಿಂಗ್ ಬಳಿಕ ಈವರೆಗೆ ಮಾಡಲಾದ ಚತುಷ್ಪಥ ಕಾಮಗಾರಿಯ ಪ್ರಗತಿಯೇನು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಕನ್ಸಲ್ಟಂಟ್ ಎಂಜಿನಿಯರ್ ದಯಾನಂದ ಅವರನ್ನು ಶಾಸಕ ಶೆಟ್ಟಿ ಪ್ರಶ್ನಿಸಿದರು. ೧೦೦ ಮೀಟರ್ ಚರಂಡಿ ನಿರ್ಮಿಸಿದ್ದೇವೆ ಎಂದು ಅವರು ಉತ್ತರಿಸಿದಾಗ ಪ್ರತಿಕ್ರಿಯಿಸಿದ ಶಾಸಕರು, ನೀವು ಸರಿಯಾಗಿ ಐಆರ್‌ಬಿ ಕಾಮಗಾರಿಯ ಪ್ರಗತಿ ನಿಗಾ ವಹಿಸಿಲ್ಲ. ಐಆರ್‌ಬಿಗೆ ಟೋಲ್ ಆರಂಭಿಸಲು ಅನುಮತಿಸಿದ್ದೇ ನಮ್ಮ ತಪ್ಪು. ಇಂದೇ ನೀವು ಲಿಖಿತವಾಗಿ ಏನೇನು ಕಾಮಗಾರಿ ಮಾಡುತ್ತೀರಿ ಎಂದು ವಿವರ ಕೊಡಬೇಕು. ಪ್ರತಿ ತಿಂಗಳು ಇದೇ ರೀತಿ ಸಭೆ ಮಾಡಿ ಪ್ರಗತಿ ಪರಿಶೀಲಿಸಲಾಗುವುದು. ಮುಂದಿನ ಸಭೆಗೆ ಸಂಬಂಧಪಟ್ಟ ಮೇಲಧಿಕಾರಿಗಳು ಕಡ್ಡಾಯವಾಗಿ ಹಾಜರಿರಬೇಕು. ಕಾಮಗಾರಿಯಲ್ಲಿ ನಿರೀಕ್ಷಿತ ಪ್ರಗತಿ ಇಲ್ಲದಿದ್ದರೆ ಜಿಲ್ಲಾಧಿಕಾರಿ ಮೂಲಕ ಟೋಲ್ ಬಂದ್ ಮಾಡಬೇಕಾಗುತ್ತದೆ. ನಿಮ್ಮನ್ನು ಸಭೆಯಿಂದ ಮನೆಗೆ ಬಿಡುವುದಿಲ್ಲ, ಉಪವಿಭಾಗಾಧಿಕಾರಿ ಕೊಠಡಿಯಲ್ಲೇ ಕೂಡಿಸುತ್ತೇವೆ ಎಂದು ತಿಳಿಸಿದರು.

ಚತುಷ್ಪಥ ಕಾಮಗಾರಿಯಲ್ಲಿ ಹೊನ್ಮಾಂವ ಬಳಿ ಕಾಂಡ್ಲಾ ಗಿಡಗಳ ಕಟಾವಾದ ಕೂಡಲೇ ಸೇತುವೆ ಕಾರ್ಯ ಆರಂಭಿಸುತ್ತೇವೆ. ಉಳಿದಂತೆ ಅಳ್ವೇಕೋಡಿಯಲ್ಲಿ ಭೂಸಂಬಂಧಿತ ಪರಿಹಾರ ವಿತರಣೆಯೂ ಆಗಿದೆ ಎಂದು ಐಆರ್‌ಬಿ ಎಂಜಿನಿಯರ್ ಮಲ್ಲಿಕಾರ್ಜುನ ಮಾಹಿತಿ ನೀಡಿದರು. ತಕ್ಷಣ ಕಾಂಡ್ಲಾ ಕಟಾವಿಗೆ ಕ್ರಮ ವಹಿಸುವಂತೆ ಆರ್‌ಎಫ್‌ಒ ರಾಜು ನಾಯ್ಕ ಹಾಗೂ ಡಿಆರ್‌ಎಫ್‌ಒ ರಾಘವೇಂದ್ರಗೆ ಸೂಚಿಸಿದರು.

ಕುಮಟಾ-ಶಿರಸಿ ರಾ.ಹೆ. ೭೬೭(ಇ) ರಸ್ತೆಯಲ್ಲಿ ಕಾಮಗಾರಿಯ ಈವರೆಗಿನ ಪ್ರಗತಿ ನೋಡಿದರೆ ಕಾಮಗಾರಿ ನಡೆಸುತ್ತಿರುವ ಆರ್‌ಎನ್‌ಎಸ್ ಕಂಪನಿ ತನ್ನ ವಿಶ್ವಾಸ ಕಳೆದುಕೊಂಡಿದೆ ಎನ್ನಬೇಕಿದೆ. ಕಾಮಗಾರಿ ಮಾಡುವವರು ಜನರ ವಿಶ್ವಾಸ ಉಳಿಸಿಕೊಳ್ಳಬೇಕು. ಡಿಸೆಂಬರ್ ಅಂತ್ಯದೊಳಗೆ ಕಾಮಗಾರಿ ಸಂಪೂರ್ಣಗೊಳ್ಳಲೇಬೇಕು ಎಂದು ಆರ್‌ಎನ್‌ಎಸ್ ಕಂಪನಿಯ ಎಂಡಿ ನಿತೀಶ್ ಶೆಟ್ಟಿ ಹಾಗೂ ಎಂಜಿನಿಯರ್ ಆರ್.ಬಿ. ಪಾಟೀಲಗೆ ಹೇಳಿದರು.

ಯೋಜಿತ ಪ್ರದೇಶದಲ್ಲಿ ೫೨೬ ಮರಗಳ ಕಟಾವು ಆಗಬೇಕಿದೆ ಎಂದು ಆರ್.ಬಿ. ಪಾಟೀಲ ತಿಳಿಸಿದಾಗ, ಅರಣ್ಯ ಇಲಾಖೆಯ ಅನುಮತಿ ಮತ್ತು ಸಹಕಾರದಿಂದ ಕೂಡಲೇ ಮರಕಟಾವು ಆರಂಭಿಸಬೇಕು. ಬಾಕಿ ಇರುವ ೭ ಕಿಮಿ ರಸ್ತೆ ಕಾಮಗಾರಿಯನ್ನು ವೇಗವಾಗಿ ಪೂರ್ಣಗೊಳಿಸಬೇಕು. ಜನ ನಮ್ಮನ್ನು ಬೈಯುತ್ತಿದ್ದಾರೆ. ಮುಂದಿನ ಸಭೆಯಲ್ಲಿ ಸಬೂಬುಗಳ ಪುನರಾವರ್ತನೆಯಾದರೆ ಸಹಿಸುವುದಿಲ್ಲ ಎಂದು ಎಚ್ಚರಿಸಿದರು. ಕಾಮಗಾರಿಯ ಪ್ರತಿನಿತ್ಯದ ಪ್ರಗತಿಯ ನಿಗಾವಣೆಗೆ ತಹಸೀಲ್ದಾರ ಕಚೇರಿಯ ಅಧಿಕಾರಿಯನ್ನು ನಿಯೋಜಿಸುವಂತೆ ಉಪವಿಭಾಗಾಧಿಕಾರಿಗೆ ಸೂಚಿಸಿದರು.

ಬಿಎಸ್‌ಎನ್‌ಎಲ್ ಟವರ್ ಸ್ಥಾಪನೆಯ ವಿಳಂಬದ ಕುರಿತು ಯಲವಳ್ಳಿ ಗ್ರಾಮಸ್ಥರು ಸಭೆಯಲ್ಲಿ ಆಗ್ರಹಿಸಿದರು. ಬಿಎಸ್‌ಎನ್‌ಎಲ್ ಎಂಜಿನಿಯರ್ ಮಾತನಾಡಿ, ಯಲವಳ್ಳಿಯಲ್ಲಿ ಮುಂದಿನ ೧೦ ದಿನದಲ್ಲಿ ಟವರ್ ಕಾರ್ಯಾಚರಿಸಲಿದೆ. ನಾಗೂರಿನಲ್ಲಿ ಸ್ಥಳ ಹಸ್ತಾಂತರ ಆಗದಿರುವ ಕಾರಣ ವಿಳಂಬವಾಗಿದ್ದು ೨ ತಿಂಗಳಲ್ಲಿ ಟವರ್ ಕಾರ್ಯಾರಂಭವಾಗಲಿದೆ ಎಂದು ಸ್ಪಷ್ಟಪಡಿಸಿದರು.

ಸಭೆಯಲ್ಲಿ ಉಪವಿಭಾಗಾಧಿಕಾರಿ ಪಿ. ಶ್ರವಣಕುಮಾರ, ಗ್ರೇಡ್-೨ ತಹಸೀಲ್ದಾರ್ ಸತೀಶ ಗೌಡ, ಕತಗಾಲ ಆರ್‌ಎಫ್‌ಒ ಪ್ರೀತಿ ನಾಯ್ಕ, ಪಿಎಸ್‌ಐ ಮಂಜುನಾಥ ಗೌಡರ ಇತರರಿದ್ದರು.

PREV

Recommended Stories

ದೀಪಾವಳಿ ಹಬ್ಬ : ಕೆಎಸ್ಸಾರ್ಟಿಸಿಯಿಂದ 2500 ಹೆಚ್ಚುವರಿ ಬಸ್‌
ಆರೆಸ್ಸೆಸ್‌ ಚಟುವಟಿಕೆ ನಿಷೇಧ ಬಗ್ಗೆ ತಮಿಳುನಾಡು ಮಾದರಿ ಪರಿಶೀಲನೆ : ಸಿದ್ದರಾಮಯ್ಯ