ಹಾನಗಲ್ಲ: ಪಟ್ಟಣದ ಹೊರ ವಲಯದಲ್ಲಿ ತಡಸ ಶಿವಮೊಗ್ಗ ರಾಜ್ಯ ಹೆದ್ದಾರಿಗೆ ಬಂದೇ ಬಿಡ್ತು ಟೋಲ್! ರಸ್ತೆ ಬಳಸುವವರಿಂದ ಕರ ಸಂಗ್ರಹ! ಯಾವುದೇ ಪ್ರತಿಭಟನೆಗೂ ಬಗ್ಗದೇ ಹಾನಗಲ್ಲನಿಂದ ಹುಬ್ಬಳ್ಳಿ ಹಾಗೂ ಗದಗ ಕಡೆಗಿನ ಕರಗುದರಿ ಕ್ರಾಸ್‌ಗೂ ಸ್ವಲ್ಪ ಮೊದಲು ಟೋಲ್ ಕಲೆಕ್ಷನ್ ಸರಾಗವಾಗಿ ಸದ್ದುಗದ್ದಲವಿಲ್ಲದೆ ಸೋಮವಾರ ಆರಂಭವಾಗಿದೆ.
ದಿಢೀರನೆ ಟೋಲ್ ಸಂಗ್ರಹ ಆರಂಭಿಸಿದ್ದರಿಂದ ವಾಹನ ಚಾಲಕರು ಗಲಿಬಿಲಿಗೊಳಗಾಗಿದ್ದಾರೆ. ಕೆಲವರು ಹಣವೇ ಇಲ್ಲ ಎನ್ನುತ್ತಿದ್ದಾರೆ. ಸ್ಥಳೀಯರು ಏನಿದು? ದಿಢೀರ್ ಟೋಲ್ ಸಂಗ್ರಹ ಆರಂಭಿಸಿದರೆ ಹೇಗೆ ಎಂದು ಪ್ರಶ್ನಿಸುತ್ತಿದ್ದಾರೆ. ಸ್ಥಳೀಯರಿಗೆ ವಿನಾಯತಿ ನೀಡಿ ಎಂದೂ ಒತ್ತಾಯಿಸುತ್ತಿದ್ದಾರೆ. ಕೆಲವರು ನಮ್ಮ ಹೊಲಗಳಿಗೆ ಕೃಷಿ ಚಟುವಟಿಕೆಗೆ ಹೋಗುತ್ತಿದ್ದೇವೆ. ಇದಕ್ಕೂ ಟೋಲ್ ಕೊಡಬೇಕೆ ಎಂಬ ಪ್ರಶ್ನೆ ಕೇಳುತ್ತಿದ್ದಾರೆ. ಆದರೆ ಟೋಲ್ ಸಂಗ್ರಹಿಸುವ ಸಿಬ್ಬಂದಿ ಮಾತ್ರ, ಸಾರ್ ಮೇಲಿನವರು ಹೇಳಿದ್ದನ್ನು ಮಾಡುತ್ತಿದ್ದೇವೆ. ಇಂದು ಒಂದು ದಿನ ವಿನಾಯಿತಿ ನೀಡಬಹುದು, ನಾಳೆಯಿಂದ ಟೋಲ್ ನೀಡುವುದು ಅನಿವಾರ್ಯ ಎಂದು ತಮ್ಮ ಅಳಲು ತೋಡಿಕೊಳ್ಳುತ್ತಿದ್ದಾರೆ.
3 ವರ್ಷಗಳಿಗೆ ಗುತ್ತಿಗೆ: ದಿನಕ್ಕೆ ₹68 ಸಾವಿರಗಳಂತೆ ಒಂದು ವರ್ಷಕ್ಕೆ ₹2.25 ಕೋಟಿಗೆ ಗುತ್ತಿಗೆಯಾಗಿದೆ. 3 ವರ್ಷಗಳಿಗೆ ಸದ್ಯದ ಗುತ್ತಿಗೆ ಇದೆ. ಸ್ಥಳೀಯ ವಾಹನಗಳಿಗೆ(ವೈಟ್ ಬೋರ್ಡ್ ಕಾರು) ಮಾಸಿಕ ಪಾಸಿನ ವ್ಯವಸ್ಥೆ ಮಾಡಲಾಗಿದೆ. ಪ್ರತಿ ತಿಂಗಳಿಗೆ ₹230 ಪಾವತಿಸಿ ಸ್ಥಳೀಯರು ಪಾಸ್ ಪಡೆದುಕೊಳ್ಳಬಹುದು. ಆರ್‌ಸಿ ಬುಕ್ ಹಾಗೂ ಆಧಾರ್ ಕಾರ್ಡ್ ನೀಡಿ ಟೋಲ್ ಕಚೇರಿಯಲ್ಲಿ ಸ್ಥಳೀಯರು ಪಾಸ್ ಪಡೆದುಕೊಳ್ಳಬಹುದು. ದ್ವಿಚಕ್ರ ವಾಹನ, ಟ್ರ್ಯಾಕ್ಟರ್, ತ್ರಿಚಕ್ರ ವಾಹನಗಳಿಗೆ ಯಾವುದೇ ಶುಲ್ಕ ವಿಧಿಸುವುದಿಲ್ಲ ಎಂದು ಟೋಲ್ ಗುತ್ತಿಗೆದಾರ ಜ್ಯೋತಿಪ್ರಕಾಶ ಕೆ.ಎಂ. ತಿಳಿಸಿದರು.ಶಾಸಕರೇ ಬೆಂಬಲ: ರಸ್ತೆ ದಿವಾಳಿಯಾಗಿದೆ. ಹಠಕ್ಕೆ ಬಿದ್ದು ಟೋಲ್ ಆರಂಭಿಸಿದ್ದಾರೆ. ನ್ಯಾಯಾಲಯದ ಮೊರೆ ಹೋಗುವುದು ಈಗ ಅನಿವಾರ್ಯವಾಗಿದೆ. ಸ್ಥಳೀಯ ವಾಹನಗಳ ಮಾಲೀಕರು ಚಿಂತಿತರಾಗಿದ್ದಾರೆ. ಇಷ್ಟರಲ್ಲೇ ಸಭೆ ನಡೆಸಿ ಮುಂದಿನ ಹೋರಾಟ ನಿರ್ಣಯಿಸಲಾಗುವುದು. ಇದು ಟೋಲ್ ಸಂಗ್ರಹ ಮಾಢುವಷ್ಟು ಸರಿಯಾದ ರಸ್ತೆಯಲ್ಲ. ಹೇಳೋರು ಕೇಳೋರು ಇಲ್ಲದಂತಾಗಿದೆ. ಇದರಲ್ಲಿ ಶಾಸಕರ ಹಸ್ತಕ್ಷೇಪವಿದೆ. ಟೋಲ್ ಇರಬಾರದು ಎಂಬುದಕ್ಕೆ ಬೆಂಬಲಿಸಬೇಕಾದ ಶಾಸಕರೇ ಇದಕ್ಕೆ ಬೆಂಬಲ ನೀಡಿದ್ದಾರೆ ಎಂದು ಬಿಜೆಪಿ ರಾಜ್ಯ ಪ್ರಕೋಷ್ಟಗಳ ಸಹ ಸಂಯೋಜಕ ಭೋಜರಾಜ ಕರೂದಿ ತಿಳಿಸಿದರು.