ಭಟ್ಕಳದಲ್ಲಿ ವರುಣನ ಆರ್ಭಟ: ಉಕ್ಕಿ ಹರಿದ ಹೊಳೆ, ನದಿಗಳು

KannadaprabhaNewsNetwork |  
Published : Jun 16, 2025, 11:54 PM IST
ಪೊಟೋ ಪೈಲ್ : 16ಬಿಕೆಲ್1,2,3,4,5,6 | Kannada Prabha

ಸಾರಾಂಶ

ತಾಲೂಕಿನಲ್ಲಿ ಭಾನುವಾರ ರಾತ್ರಿಯಿಂದ ಸೋಮವಾರ ಸಂಜೆವರೆಗೂ ಭಾರೀ ಮಳೆ ಸುರಿದಿದೆ.

ಭಟ್ಕಳ: ತಾಲೂಕಿನಲ್ಲಿ ಭಾನುವಾರ ರಾತ್ರಿಯಿಂದ ಸೋಮವಾರ ಸಂಜೆವರೆಗೂ ಭಾರೀ ಮಳೆ ಸುರಿದಿದೆ.ಮಳೆ ಜತೆಗೆ ಬಿರುಗಾಳಿಯೂ ಬೀಸಿದ್ದರಿಂದ ಹಲವೆಡೆ ಹಾನಿಯಾಗಿದೆ. ತಾಲೂಕಿನಲ್ಲಿ ಸೋಮವಾರ ಬೆಳಿಗ್ಗೆವರೆಗೆ 218.4 ದಾಖಲೆಯ ಮಳೆ ಸುರಿದಿದೆ. ಭಾರೀ ಮಳೆಗೆ ಮತ್ತೆ ರಂಗಿನಗಕಟ್ಟೆ, ಸಂಶುದ್ದೀನ ವೃತ್ತ ಮುಂತಾದ ಕಡೆ ಜಲಾವೃತಗೊಂಡು ಜನ ಮತ್ತು ವಾಹನ ಸಂಚಾರಕ್ಕೆ ತೊಂದರೆ ಉಂಟಾಯಿತು.

ಭಾನುವಾರ ಬೆಳಗಿನಜಾವ ಮಳೆಯ ಜತೆಗೆ ಭಾರೀ ಪ್ರಮಾಣದಲ್ಲಿ ಗಾಳಿ ಬೀಸಿದ್ದರಿಂದ ಎಲ್ಲರೂ ಆತಂಕಗೊಳ್ಳುವಂತಾಗಿತ್ತು. ಚೌತನಿ ಕುದುರೆ ಬೀರಪ್ಪ ಹೊಳೆ, ಅಗ್ಗದ ಹೊಳೆಯ ನೀರು ಉಕ್ಕಿ ರಸ್ತೆ ಮೇಲೆ ಹರಿದಿದ್ದರಿಂದ ಸಂಚಾರಕ್ಕೆ ಕೆಲ ಹೊತ್ತು ತೊಂದರೆ ಉಂಟಾಯಿತು.

ಭಾರೀ ಮಳೆಗೆ ಚೌತನಿ, ಕೋಕ್ತಿ, ಮೂಡಭಟ್ಕಳ ಸೇರಿದಂತೆ ಹಲವು ಕಡೆ ಮನೆ ಅಂಗಳದ ವರೆಗೂ ನೀರು ನುಗ್ಗಿ ಆತಂಕ ಸೃಷ್ಟಿಯಾಯಿತು. ಚೌತನಿಯ ಹೊಳೆ ತೀರ 4 ಕುಟುಂಬವನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ತಾಲೂಕಿನಲ್ಲಿ ಕಳೆದ 15 ದಿನಗಳಿಂದ ಭಾರೀ ಪ್ರಮಾಣದಲ್ಲಿ ಮಳೆ ಸುರಿಯುತ್ತಿರುವುದರಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಇಷ್ಟೊಂದು ಮಳೆ ಯಾವ ವರ್ಷವೂ ಸುರಿದಿರಲಿಲ್ಲ ಎಂದು ಜನರಾಡಿಕೊಳ್ಳುತ್ತಿದ್ದಾರೆ.

ಭಾನುವಾರ ಸುರಿದ ಭಾರಿ ಮಳೆ ಗಾಳಿಗೆ ಹಡಿನ ಗ್ರಾಮದ ಹಿಂದೂನಗರ ನಿವಾಸಿ ರಾಮ ನಾಯ್ಕ ಅವರ ಮನೆಯ ಮೇಲೆ ಹಲಸಿನ ಮರ ಬಿದ್ದು ಹಾನಿಯಾಗಿದೆ. ಮಾವಳ್ಳಿ 2 ಗ್ರಾಮದ ದಿವಾಗೇರಿ ನಿವಾಸಿ ಮಂಜುನಾಥ ನಾರಾಯಣ ನಾಯ್ಕ ಅವರ ಮನೆಯ ಮೇಲೆ ಅಡಿಕೆ ಮರ ಬಿದ್ದು ಮನೆಯ ಚಾವಣಿ ಹಾನಿಯಾಗಿದೆ. ತಲಗೋಡ ಗ್ರಾಮದ ಗೊಂಡರಕೇರಿ ನಿವಾಸಿ ತಿಮ್ಮಪ್ಪ ನಾಗಯ್ಯ ಗೊಂಡ ಮನೆಗೆ ಹೊಂದಿಕೊಂಡಿರದ ದನದ ಕೊಟ್ಟಿಗೆ ಮೇಲೆ ಮಾವಿನ ಮರ ಬಿದ್ದು ಹಾನಿಯಾಗಿದೆ.

ಮಳೆಗೆ ಹಾಡವಳ್ಳಿ ಗ್ರಾಪಂ ವ್ಯಾಪ್ತಿಯ ಕೆಕ್ಕೋಡ ಗ್ರಾಮದ ಕಾಲು ಸಂಕ ಮುರಿದು ಬಿದ್ದಿದ್ದು, ಜನರು ಸಂಚರಿಸದ ಪರಿಸ್ಥಿತಿ ನಿರ್ಮಾಣವಾಗಿದೆ. ಪುರವರ್ಗ ಮುಗಳಿಹೊಂಡದ ನಿವಾಸಿ ಗಣಪತಿ ನಾಯ್ಕಅವರ ಬೇಕರಿಯ ಅಂಗಡಿ ಚಾವಣಿ ಶೀಟ್ ಗಾಳಿ ಮಳೆಗೆ ಹಾರಿ ಹೋಗಿದ್ದು, ಬೇಕರಿಯ ಸಾಮಗ್ರಿಗಳಿಗೆ ಹಾನಿಯಾಗಿದೆ.

ಶಿರಾಲಿ 1ರ ಗ್ರಾಮದ ನಿವಾಸಿ ಮಾಸ್ತಮ್ಮ ಮಂಜುನಾಥ ನಾಯ್ಕ ಅವರ ಮನೆಯ ಮೇಲ್ಚಾವಣಿ ಮಳೆಗೆಕುಸಿದು ಬಿದ್ದು ಭಾಗಶಃ ಹಾನಿಯಾಗಿದೆ. ಮುಟ್ಟಳ್ಳಿ ನಿವಾಸಿ ಜಯಶ್ರೀ ವೆಂಕಟೇಶ ನಾಯ್ಕ ಅವರ ಮನೆ ಮೇಲ್ಛಾವಣಿ ಸೀಟ್ ಹಾರಿ ಹೋಗಿ ಮನೆಯ ಗೃಹ ಉಪಯೋಗಿ ವಸ್ತುಗಳು ಹಾನಿಯಾಗಿದೆ. ಮುಂಡಳ್ಳಿ ಮೊಗೆರಕೇರಿ ನಿವಾಸಿ ಲಕ್ಷ್ಮೀ ಗೋವಿಂದ ಮೊಗೇರ ಮನೆ ಮೇಲೆ ವಿದ್ಯುತ್ ಕಂಬ ಬಿದ್ದು ಚಾವಣಿಗೆ ಭಾಗಶಃ ಹಾನಿಯಾಗಿದ.

ಮಾರುಕೇರಿಯ ನಿವಾಸಿ ಗೌರಿ ದೇವೇಂದ್ರ ಗೊಂಡ ಅವರ ವಾಸ್ತವ್ಯದ ಮಣ್ಣಿನ‌ ಮನೆಯ ಗೋಡೆ, ಚಾವಣೆ ಕುಸಿದು ಬಿದ್ದು ಭಾಗಶಃ ಹಾನಿಯಾಗಿದೆ. ಹಡೀಲ ಗ್ರಾಮದ ನಿವಾಸಿ ಮಂಜುನಾಥ ಗಣಪಯ್ಯ ಉಪಾಧ್ಯಯ ಅವರು ಮನೆಯ ಮೇಲೆ ತೆಂಗಿನಮರ ಬಿದ್ದು ಭಾಗಶಃ ಹಾನಿಯಾಗಿದೆ. ಕಾಯ್ಕಿಣಿ ನಿವಾಸಿ ಸಣ್ಣಿ ಈಶ್ವರ್ ಮೊಗೇರ್ ಅವರ ಮನೆಯ ಮೇಲೆ ಅಡಿಕೆ ಮರ ಮುರಿದುಬಿದ್ದು ಭಾಗಶಃ ಹಾನಿಯಾಗಿದೆ. ಶಿರಾಲಿ 1 ಗ್ರಾಮದ ನಿವಾಸಿ ಬಾಬು ತಿಮ್ಮಯ್ಯ ಮೊಗೇರ ಅವರ ಮನೆಯ ಮೇಲ್ಚಾವಣಿ ಶೀಟು ಹಾರಿ ಹೋಗಿ ಭಾಗಶಃ ಹಾನಿಯಾಗಿದೆ. ಹಾನಿಗೀಡಾದ ಸ್ಥಳಕ್ಕೆ ಕಂದಾಯ ಅಧಿಕಾರಿಗಳು, ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಮಳೆ ಗಾಳಿಯ ಆರ್ಭಟಕ್ಕೆ ಹಲವು ಕಡೆ ವಿದ್ಯುತ್‌ ಕಂಬ ಮುರಿದು ಬಿದ್ದಿದೆ. ಇದರಿಂದಾಗಿ ತಾಲೂಕಿನಲ್ಲಿ ಸೋಮವಾರ ವಿದ್ಯುತ್‌ ವ್ಯತ್ಯಯ ಉಂಟಾಗಿ ತೊಂದರೆ ಉಂಟಾಯಿತು.

ತಾಲೂಕಿನ ಪ್ರಮುಖ ನದಿಗಳು ಉಕ್ಕಿ ಹರಿಯುತ್ತಿದೆ. ಗ್ರಾಮಾಂತರ ಭಾಗದಲ್ಲಿ ಅಡಕೆ, ತೆಂಗು ಸೇರಿದಂತೆ ವಿವಿಧ ಮರಗಳು ನೆಲಕ್ಕುರುಳಿ ಹಾನಿಯಾಗಿದೆ. ಭಾರೀ ಮಳೆಗೆ ಗುಡ್ಡ ಮತ್ತಿತರ ಭಾಗಗಳಿಂದ ನೀರು ಅಂದಾದುಂದಿಯಾಗಿ ಹರಿದು ಬಂದಿತ್ತು.

ಶಾಲೆಗೆ ರಜೆ ನೀಡದೇ ಇರುವುದಕ್ಕೆ ಆಕ್ರೋಶ:

ಭಟ್ಕಳ ತಾಲೂಕಿನಲ್ಲಿ ಭಾನುವಾರ ಮಧ್ಯಾಹ್ನದಿಂದ ಸೋಮವಾರ ಬೆಳಿಗ್ಗೆವರೆಗೂ ಭಾರೀ ಪ್ರಮಾಣದಲ್ಲಿ ಗಾಳಿಯೊಂದಿಗೆ ಮಳೆ ಸುರಿಯುತ್ತಿದ್ದರೂ ತಾಲೂಕು ಆಡಳಿತ ಶಾಲೆಗಳಿಗೆ ರಜೆ ನೀಡದೇ ಇರುವುದಕ್ಕೆ ಸಾರ್ವಜನಿಕರು ಮತ್ತು ಪಾಲಕರದಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಸೋಮವಾರ ಶಾಲೆಗೆ ರಜೆ ನೀಡದೇ ಇರುವುದರಿಂದ ಮಕ್ಕಳನ್ನು ಗಾಳಿ ಮಳೆಯ ಮಧ್ಯೆಯೇ ಶಾಲೆಗೆ ತಂದು ಬಿಡುತ್ತಿರುವುದು ಕಂಡು ಬಂತು. ಸೋಮವಾರ ಬೆಳಿಗ್ಗೆ ಗ್ರಾಮಾಂತರ ಸೇರಿದಂತೆ ಪಟ್ಟಣದ ಹಲವು ರಸ್ತೆಗಳು ಜಲಾವ್ರತೊಂಡು ಸಂಚಾರಕ್ಕೆ ತೊಂದರೆ ಉಂಟಾಯಿತು. ಮಕ್ಕಳನ್ನು ಜಲಾವೃತಗೊಂಡ ರಸ್ತೆಯಲ್ಲೇ ಶಾಲೆ ತಂದು ಬಿಟ್ಟಿದ್ದು, ಏನಾದರೂ ಅವಘಡ ಸಂಭವಿಸಿದರೆ ಯಾರು ಜವಾಬ್ದಾರಿ ಎಂದು ಪಾಲಕರು ಸಾಮಾಜಿಕ ಜಾಲತಾಣಗಳಲ್ಲಿ ಅಧಿಕಾರಿಗಳನ್ನು ಪ್ರಶ್ನೆ ಮಾಡಿದರು. ಪಟ್ಟಣದ ಕೆಲ ಶಿಕ್ಷಣ ಸಂಸ್ಥೆಯವರು ಭಾರೀ ಪ್ರಮಾಣದಲ್ಲಿ ಗಾಳಿ ಮಳೆ ಇರುವುದರಿಂದ ಸೋಮವಾರ ರಜೆ ಘೋಷಿಸಿದರು. ಸೋಮವಾರ ಭಾರೀ ಪ್ರಮಾಣದಲ್ಲಿ ಮಳೆಯಾಗಿದ್ದರೂ ಸಂಜೆ 7.20ರ ವರೆಗೂ ತಾಲೂಕು ಆಡಳಿತ ಶಾಲೆಗಳಿಗೆ ರಜೆ ಘೋಷಿಸಿರಲಿಲ್ಲ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಮುದಾಯ ಭವನ ನಿರ್ಮಾಣಕ್ಕೆ ಭೂಮಿ ಪೂಜೆ
ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಪೋಲಿಯೋ ಹಾಕಿಸಿ