ಗದಗ: ಮುಂಡರಗಿಯ ಶ್ರೀಮಠಕ್ಕೂ ಹಾಗೂ ಗದುಗಿನ ವೀರೇಶ್ವರ ಪುಣ್ಯಾಶ್ರಮಕ್ಕೂ ಅವಿನಾಭಾವ ಸಂಬಂಧವಿದೆ ಎಂದು ಮುಂಡರಗಿಯ ಜ. ನಾಡೋಜ ಅನ್ನದಾನೀಶ್ವರ ಶಿವಯೋಗಿಗಳು ಹೇಳಿದರು.
ಈ ಹಿಂದೆ ವೀರೇಶ್ವರ ಪುಣ್ಯಾಶ್ರಮ ಆರ್ಥಿಕವಾಗಿ ಸಂಕಷ್ಟದಲ್ಲಿತ್ತು. ನಾಟಕ ಕಂಪನಿ ಮುಚ್ಚುವ ಹಂತಕ್ಕೆ ಬಂದಿತ್ತು. ಆಗ ಪುಟ್ಟರಾಜ ಕವಿ ಗವಾಯಿಗಳವರಿಗೆ ₹300 ನೀಡಿ, ಯಾವುದೇ ಕಾರಣಕ್ಕೂ ಎಷ್ಟೇ ಕಷ್ಟ ಬಂದರೂ ನಾಟಕ ಕಂಪನಿ ಮುಚ್ಚಬಾರದು ಎಂದು ಹೇಳಿದ್ದೆ. ಬಳಿಕ ಹೇಮರೆಡ್ಡಿ ಮಲ್ಲಮ್ಮ ನಾಟಕ ಒಂದು ವರ್ಷಗಳ ವರೆಗೆ ನಿರಂತರವಾಗಿ ಪ್ರದರ್ಶನಗೊಂಡು ಆರ್ಥಿಕ ಸಂಕಷ್ಟ ದೂರ ಮಾಡಿತು. ಬಸರಿಗಿಡದ ವೀರಪ್ಪ ಅವರು ತಮ್ಮ ಸಂಪತ್ತನ್ನು ದಾನ ಮಾಡಿ ವೀರೇಶ್ವರ ಪುಣ್ಯಾಶ್ರಮ ಸ್ಥಾಪನೆಗೆ ಕಾರಣವಾಗಿ ಧರ್ಮಾತ್ಮರಾಗಿದ್ದಾರೆ. ಉಭಯ ಗುರುಗಳ ಮಾರ್ಗದರ್ಶನದಂತೆ ಕಲೆ, ಸಾಹಿತ್ಯ, ಸಂಗೀತವನ್ನು ಡಾ. ಕಲ್ಲಯ್ಯಜ್ಜ ಅವರು ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ ಎಂದರು.
ಸೋಲಾಪುರದ ಬಸವಲಿಂಗೇಶ್ವರ ತುಪ್ಪಿನ ವಿರಕ್ತಮಠದ ಡಾ. ಅಭಿನವ ಬಸವಲಿಂಗ ಸ್ವಾಮಿಗಳು ಮಾತನಾಡಿ, ವೀರೇಶ್ವರ ಪುಣ್ಯಾಶ್ರಮದ ಉಭಯ ಗುರುಗಳು ಸರಳ ವ್ಯಕ್ತಿತ್ವಕ್ಕೆ ಶ್ರೀಮಂತ ಸಾಕ್ಷಿಯಾಗಿದ್ದಾರೆ. ವಸಂತ ಬಂದರೆ ಪ್ರಕೃತಿಯಲ್ಲಿ ಬದಲಾವಣೆಯಾಗುವಂತೆ, ಸಂತರು ಸಮಾಜದಲ್ಲಿ ಬಂದರೆ ಬದಲಾವಣೆ ಆಗುತ್ತದೆ. ಅಂತ ಸಂತರು ಗದುಗಿನ ವೀರೇಶ್ವರ ಪುಣ್ಯಾಶ್ರಮದಲ್ಲಿ ಬಂದು ನೆಲೆಸಿದ್ದಾರೆ. ಅವರು ಈ ನಾಡಿಗೆ ಸೂರ್ಯ-ಚಂದ್ರರು ಇದ್ದ ಹಾಗೆ, ತಂದೆ-ತಾಯಿ ನಮ್ಮನ್ನು ಜಗತ್ತಿಗೆ ತಂದರೆ, ಈ ಜಗತ್ತಿನಿಂದ ಸ್ವರ್ಗಕ್ಕೆ ಕರೆದುಕೊಂಡು ಹೋಗಲು ಗುರುಗಳಿಂದ ಮಾತ್ರ ಸಾಧ್ಯವಾಗುತ್ತದೆ ಎಂದರು.ಗುಳೇದಗುಡ್ಡದ ಒಪ್ಪತ್ತೇಶ್ವರ ಸಂಸ್ಥಾನ ಮಠದ ಶ್ರೀ ಅಭಿನವ ಒಪ್ಪತ್ತೇಶ್ವರ ಸ್ವಾಮಿಗಳು ಹಾಗೂ ಅಸುಂಡಿ ಅಧ್ಯಾತ್ಮ ವಿದ್ಯಾಶ್ರಮದ ಶ್ರೀ ಶಿವಶರಣೆ ಡಾ. ನೀಲಮ್ಮ ತಾಯಿ ಮಾತನಾಡಿದರು.
ತಾತನಗೌಡ ಪಾಟೀಲ, ಪೀರಸಾಬ ಕೌತಾಳ, ಪ್ರಕಾಶ ಬಸರಿಗಿಡದ, ಮಹಾಂತೇಶ ಕೆ., ಶೇಖಣ್ಣ ಗದ್ದಿಕೇರಿ, ಚನ್ನಬಸಯ್ಯ ಬಂಕಾಪುರಮಠ, ಶಿವಮೊಗ್ಗದ ಎಸ್. ಗುರುಪಂಚಾಕ್ಷರಿ ಇದ್ದರು. ಶಿವಮೊಗ್ಗದ ಶಾಖಾ ಆಶ್ರಮದ ಅಂಧ ವಿದ್ಯಾರ್ಥಿಗಳಿಂದ ಪ್ರಾರ್ಥನೆ ಜರುಗಿತು. ಶ್ರೀ ಕಲ್ಲಯ್ಯಜ್ಜನವರು ಅಭಾರ ಮನ್ನಣೆಗೈದರು. ಶಿವಲಿಂಗಯ್ಯಶಾಸ್ತ್ರೀ ಹಿರೇಮಠ ಸಿದ್ದಾಪುರ ಸ್ವಾಗತಿಸಿದರು. ಶಡಗರವಳ್ಳಿಯ ಶಂಕ್ರಯ್ಯ ಶಾಸ್ತ್ರೀ ಹಿರೇಮಠ ಕಾರ್ಯಕ್ರಮ ನಿರೂಪಿಸಿದರು.
ಆನಂತರ ಅಹೋರಾತ್ರಿ ನಾಡಿನ ವಿವಿಧ ಭಾಗಗಳಿಂದ ಆಗಮಿಸಿದ ಸಂಗೀತ ಕಲಾವಿದರಿಂದ ಸ್ವರ ಸಮಾರಾಧನೆ, ಸಂಗೀತ ಸಮಾರಾಧನೆ ಕಾರ್ಯಕ್ರಮ ಜರುಗಿತು.