ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪೂರ್ಣಗೊಳಿಸುವವರೆಗೆ ಟೋಲ್‌ ಸಂಗ್ರಹ ಸ್ಥಗಿತ

KannadaprabhaNewsNetwork | Published : Mar 20, 2025 1:17 AM

ಸಾರಾಂಶ

ಮಳವಳ್ಳಿ ಪಟ್ಟಣದ ಕನಕಪುರ-ಕೊಳ್ಳೇಗಾಲ ರಾಷ್ಟ್ರೀಯ ಹೆದ್ದಾರಿ-೨೦೯ರಲ್ಲಿ ಮಳವಳ್ಳಿ ವ್ಯಾಪ್ತಿಯಲ್ಲಿ ನಡೆದಿರುವ ಅವೈಜ್ಞಾನಿಕ ಕಾಮಗಾರಿಯನ್ನು ಅಂತಿಮಗೊಳಿಸುವವರೆಗೂ ಟೋಲ್ ಸಂಗ್ರಹ ನಿಲ್ಲಿಸುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಯಿತು.

ಕನ್ನಡಪ್ರಭ ವಾರ್ತೆ ಮಳವಳ್ಳಿ

ಪಟ್ಟಣದ ಕನಕಪುರ-ಕೊಳ್ಳೇಗಾಲ ರಾಷ್ಟ್ರೀಯ ಹೆದ್ದಾರಿ-೨೦೯ರಲ್ಲಿ ಮಳವಳ್ಳಿ ವ್ಯಾಪ್ತಿಯಲ್ಲಿ ನಡೆದಿರುವ ಅವೈಜ್ಞಾನಿಕ ಕಾಮಗಾರಿಯನ್ನು ಅಂತಿಮಗೊಳಿಸುವವರೆಗೂ ಟೋಲ್ ಸಂಗ್ರಹ ನಿಲ್ಲಿಸುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಯಿತು.

ಪಟ್ಟಣದ ರಾಷ್ಟ್ರೀಯ ಹೆದ್ದಾರಿಯಲ್ಲಿ ಹಲವು ಅವೈಜ್ಞಾನಿಕ ಕಾಮಗಾರಿ ನಡೆಸಿದ್ದರೂ ಕೂಡ ಟೋಲ್ ಸಂಗ್ರಹಕ್ಕೆ ಮುಂದಾದ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಜನಪರ ಸಂಘಟನೆಗಳು ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಹಾಗೂ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅವರ ಮನವಿ ಮೇರೆಗೆ ಬೆಂಗಳೂರು ವಿಧಾನಸೌಧದಲ್ಲಿ ನಡೆದ ಸಭೆಯಲ್ಲಿ ಅವೈಜ್ಞಾನಿಕ ಕಾಮಗಾರಿ ಬಗ್ಗೆ ಚರ್ಚೆ ನಡೆಸಲಾಯಿತು.

ಶಾಸಕ ಪಿ.ಎಂ.ನರೇಂದ್ರಸ್ವಾಮಿ ಮಾತನಾಡಿ, ಹಲಗೂರಿನ ಮೂರು ಸ್ಥಳಗಳ ಜಂಕ್ಷನ್‌ಗಳಲ್ಲಿ ಅಂಡರ್‌ಪಾಸ್ ನಿರ್ಮಿಸಬೇಕು. ಕನಕಪುರ-ಮಳವಳ್ಳಿ ಮುಖ್ಯರಸ್ತೆಯಲ್ಲಿ ಎರಡು ಕಡೆ ಚರಂಡಿ ನಿರ್ಮಿಸಿ ಜೋಡಿ ರಸ್ತೆಯನ್ನು ನಿರ್ಮಾಣ ಮಾಡಬೇಕು. ಯುಜಿಡಿ ಪೈಪ್‌ಗಳನ್ನು ಸ್ಥಳಾಂತರ ಮಾಡಬೇಕು. ಐಬಿ ಸರ್ಕಲ್‌ನಲ್ಲಿ ವೃತ್ತ ನಿರ್ಮಿಸಿ ಅಪಘಾತವನ್ನು ತಪ್ಪಿಸಲು ಎಡದಿಂದ ಚಲಿಸುವಂತೆ ಸೂಚನಾ ಫಲಕವನ್ನು ಅಳವಡಿಸಬೇಕು, ಪಟ್ಟಣದ ಹೊರವಲಯದಲ್ಲಿರುವ ಕಣಗಲ್ ಗೇಟ್ ಹಾಗೂ ಪಂಡಿತಹಳ್ಳಿ ಗೇಟ್‌ನ ಎರಡು ಕಡೆಯಲ್ಲಿ ವೇಗ ನಿಯಂತ್ರಿಸಲು ರಸ್ತೆ ಅಡ್ಡದಲ್ಲಿ ಉಬ್ಬುಗಳನ್ನು ಅಳವಡಿಸಬೇಕು ಹಾಗೂ ಸೂಚನಾ ಫಲಕಗಳನ್ನು ಅಳವಡಿಸಬೇಕು. ಅಲ್ಲಿಯವರೆವಿಗೂ ಟೋಲ್ ಸಂಗ್ರಹಕ್ಕೆ ಮುಂದಾಗಬಾರದು ಎಂದು ಸಭೆಯ ಗಮನಕ್ಕೆ ತಂದರು.

ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಮಾತನಾಡಿ, ಈಗಾಗಲೇ ಯುಜಿಡಿ ಸ್ಥಳಾಂತರಕ್ಕೆ ಹಣ ಬಿಡುಗಡೆಗೊಳಿಸಲಾಗಿದೆ. ಶಾಸಕರು ಸಭೆಯಲ್ಲಿ ತಿಳಿಸಿರುವ ಎಲ್ಲಾ ಕಾಮಗಾರಿಗಳನ್ನು ಹಂತ ಹಂತವಾಗಿ ಅಭಿವೃದ್ಧಿ ಪಡಿಸಲಾಗುವುದು ಎಂದು ಒಪ್ಪಿಗೆ ಪತ್ರವನ್ನು ಮುಖ್ಯ ಕಾರ್ಯದರ್ಶಿಗಳಿಗೆ ನೀಡಿದರು.

ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಅವರು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಉನ್ನತಾಧಿಕಾರಿಗಳಿಗೆ ಪತ್ರ ಬರೆದು ಅವೈಜ್ಞಾನಿಕ ಕಾಮಗಾರಿಗಳನ್ನು ಸರಿಪಡಿಸಲು ಸಭೆಯಲ್ಲಿ ಅಧಿಕಾರಿಗಳು ಒಪ್ಪಿಗೆ ಸೂಚಿಸಿದ್ದಾರೆ. ಅದರಂತೆ ತುರ್ತಾಗಿ ಕಾಮಗಾರಿಗಳನ್ನು ನಡೆಸಬೇಕೆಂದು ಸೂಚನೆ ನೀಡಿದ್ದಾರೆ.

Share this article