ತಾಲೂಕಿನ ಜಿ.ಹೊಸಹಳ್ಳಿ ಬಳಿ ಆರಂಭವಾದ ಟೋಲ್ ತೆರಿಗೆ ಸಂಗ್ರಹಕ್ಕೆ ಎರಡು ಬಾರಿ ವಿರೋಧಿಸಿ ಪ್ರತಿಭಟನೆ ನಡೆಸಿದ್ದ ರೈತರಿಂದ 15 ದಿನ ಗಡುವು ಪಡೆದಿದ್ದ ಶಾಸಕ ಎಸ್.ಆರ್.ಶ್ರೀನಿವಾಸ್ ಸೋಮವಾರ ಸಭೆ ನಡೆಸಿದರು.
ಕನ್ನಡಪ್ರಭ ವಾರ್ತೆ ಗುಬ್ಬಿ
ತಾಲೂಕಿನ ಜಿ.ಹೊಸಹಳ್ಳಿ ಬಳಿ ಆರಂಭವಾದ ಟೋಲ್ ತೆರಿಗೆ ಸಂಗ್ರಹಕ್ಕೆ ಎರಡು ಬಾರಿ ವಿರೋಧಿಸಿ ಪ್ರತಿಭಟನೆ ನಡೆಸಿದ್ದ ರೈತರಿಂದ 15 ದಿನ ಗಡುವು ಪಡೆದಿದ್ದ ಶಾಸಕ ಎಸ್.ಆರ್.ಶ್ರೀನಿವಾಸ್ ಸೋಮವಾರ ಸಭೆ ನಡೆಸಿದರು. ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ರೈತಾಪಿ ವರ್ಗ ಓಡಾಡುವ ಈ ರಸ್ತೆಗೆ ವಾಹನ ತೆರಿಗೆ ಹಾಕುವುದು ಸರಿಯಲ್ಲ. ಯಾವ ಹೆದ್ದಾರಿ ನಿಯಮ ಪಾಲಿಸದೆ ಕಳೆದ ಹತ್ತು ವರ್ಷದ ಹಿಂದೆ ನಿರ್ಮಾಣವಾದ ಕೇಶಿಪ್ ರಸ್ತೆಗೆ ದಿಢೀರ್ ಅವೈಜ್ಞಾನಿಕ ಟೋಲ್ ನಿರ್ಮಾಣ ಮಾಡಿ ರೈತರಿಗೆ ಗಾಯದ ಮೇಲೆ ಬರೆ ಎಳೆದಂತೆ ನೋವು ಕೊಡಲು ಹೊರಟಿರುವುದು ಖಂಡನೀಯ ಎಂದು ನೇರ ಚರ್ಚೆಗೆ ಇಳಿದರು. ರೈತ ಸಂಘದ ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ಮಾತನಾಡಿ , ಸ್ಥಳೀಯ ರೈತರಿಗೆ ಅನಾನುಕೂಲ ಮಾಡುವ ಟೋಲ್ ಇಲ್ಲಿ ಅನಾವಶ್ಯಕ. ಯಾವುದೇ ಕೈಗಾರಿಕಾ ವಲಯ ಇಲ್ಲದ ಈ ಭಾಗದ ರಸ್ತೆ ಕೇವಲ ರೈತರು ಬಳಸುತ್ತಾರೆ. ಈ ಬಗ್ಗೆ ಎರಡು ಬಾರಿ ಪ್ರತಿಭಟನೆ ನಡೆದಿದೆ. ಈಗ ಗಡುವು ಪಡೆದು ಸಭೆ ನಡೆಸಿದ್ದೀರಿ. ಹದಿನೈದು ದಿನದ ಗಡುವು ಮುಗಿದಿದೆ. ಟೋಲ್ ತೆರವು ಮಾಡದಿದ್ದರೆ ರೈತರ ಆಕ್ರೋಶ ಕಟ್ಟೆ ಒಡೆಯುತ್ತದೆ ಎಂದು ಎಚ್ಚರಿಕೆ ನೀಡಿದರು. ಜೆಡಿಎಸ್ ಮುಖಂಡ ಹೊನ್ನಗಿರಿಗೌಡ ಮಾತನಾಡಿ, ರೈತರು ಹಾಗೂ ಸರ್ಕಾರದ ಮಧ್ಯೆ ಶಾಸಕರು ಸೇತುವೆ ಆಗಿ ಕೆಲಸ ಮಾಡಬೇಕಿದೆ. ರೈತರ ಬವಣೆ ಅರಿತ ಶಾಸಕರು ಸಂಬಂಧಪಟ್ಟ ಸಚಿವರು ಹಾಗೂ ಅಧಿಕಾರಿಗಳ ಜೊತೆ ಚರ್ಚಿಸಿ ರೈತರ ಪರ ನಿಲುವು ತೋರುವ ತೀರ್ಮಾನ ಕೈಗೊಳ್ಳಬೇಕು. ಟೋಲ್ ಗುತ್ತಿಗೆದಾರ ಶಾಸಕರಿಗೆ ತಿಳಿಸಿದ್ದೇವೆ ಎನ್ನುತ್ತಾರೆ. ಆದರೆ ನಮ್ಮ ಗಮನಕ್ಕೆ ಬಂದಿಲ್ಲ ಎಂದು ಶಾಸಕರು ಹೇಳುತ್ತಾರೆ. ಈ ಗೊಂದಲ ಮೂಡುವ ಬದಲು ರೈತರು ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಒಟ್ಟಿಗೆ ಚರ್ಚಿಸಿ ಒಂದು ತೀರ್ಮಾನ ಕೈಗೊಳ್ಳಿ ಎಂದು ತಿಳಿಸಿದರು. ಎಪಿಎಂಸಿ ಮಾಜಿ ಅಧ್ಯಕ್ಷ ಕಳ್ಳಿಪಾಳ್ಯ ಲೋಕೇಶ್ ಮಾತನಾಡಿ ಎರಡು ಕಿಮೀ ವ್ಯಾಪ್ತಿಯ ಜನರಿಗೆ ಮಾತ್ರ ವಾಹನ ಸಂಚಾರ ಅನುವು ಮಾಡುವುದು ಸರಿಯಲ್ಲ. ಇಡೀ ತಾಲೂಕಿನ ಜನರಿಗೆ ಅನುಕೂಲ ಆಗಬೇಕು. ಇಲ್ಲವಾದರೆ ಟೋಲ್ ನಿರ್ಮಾಣ ಅಗತ್ಯವಿಲ್ಲ. ರೈತರು ಮುಂದಿನ ಹೋರಾಟಕ್ಕೆ ಬಂದರೆ ಟೋಲ್ ಕಿತ್ತೊಗೆಯುವ ಅವಕಾಶ ಹೆಚ್ಚಿದೆ. ಈ ಸಭೆಯಲ್ಲಿ ರೈತರ ಪರ ತೀರ್ಮಾನ ಕೈಗೊಳ್ಳಿ ಎಂದು ತಿಳಿಸಿದರು.ಎಲ್ಲಾ ರೈತರ ಮಾತುಗಳನ್ನು ಆಲಿಸಿದ ಶಾಸಕ ಎಸ್.ಆರ್.ಶ್ರೀನಿವಾಸ್ ಮಾತನಾಡಿ, ಸರ್ಕಾರ ಗುತ್ತಿಗೆ ಕರಾರು ಈ ಹಿಂದೆಯೇ ಮಾಡಿದೆ. ಕರಾರು ನಿಯಮ ಸರ್ಕಾರ ಬದಲಿಸಲು ಸಾಧ್ಯವಿಲ್ಲ. ಗುತ್ತಿಗೆದಾರ ಅಧಿಕಾರಿಗಳ ಜೊತೆ ಚರ್ಚಿಸಿ ಒಂದು ಒಪ್ಪಂದ ಮಾಡಬಹುದಾಗಿದೆ. ತಾಲೂಕಿನ ಎಲ್ಲಾ ವಾಹನಗಳಿಗೆ ಪಾಸ್ ವ್ಯವಸ್ಥೆ ಮಾಡಲು ಚರ್ಚೆ ಮಾಡುತ್ತೇನೆ. ಅಥವಾ ನನ್ನ ಕ್ಷೇತ್ರದಿಂದ ಹೊರ ಭಾಗಕ್ಕೆ ಟೋಲ್ ಸ್ಥಳಾಂತರ ಮಾಡಲು ಅವಕಾಶ ಇದ್ದರೆ ಚರ್ಚಿಸುತ್ತೇನೆ ಎಂದು ಭರವಸೆ ನೀಡಿ ಒಂದು ದಿನದಲ್ಲಿ ಅಧಿಕಾರಿಗಳ ಸಭೆ ನಡೆಸುತ್ತೇನೆ. ರೈತ ಪರ ತೀರ್ಮಾನಕ್ಕೆ ಬದ್ದನಾಗುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಒಟ್ಟಾರೆ ಎರಡು ಗಂಟೆ ನಡೆದ ಸಭೆಯಲ್ಲಿ ಯಾವುದೇ ತಾರ್ಕಿಕ ಅಂತ್ಯ ಕಾಣದ ಚರ್ಚೆ ಮುಂದಿನ ಅಧಿಕಾರಿಗಳ ಸಭೆಯಲ್ಲಿ ಶಾಸಕರ ತೀರ್ಮಾನ ತಿಳಿದು ರೈತರ ಹೋರಾಟದ ಸ್ವರೂಪ ತಿಳಿಸುವುದಾಗಿ ರೈತ ಮುಖಂಡರು ತಿಳಿಸಿ ತಾತ್ಕಾಲಿಕವಾಗಿ ಸಭೆ ಅಂತ್ಯಗೊಳಿಸಿದರು. ಸಭೆಯಲ್ಲಿ ತಹಸೀಲ್ದಾರ್ ಆರತಿ.ಬಿ, ತಾಪಂ ಇಓ ರಂಗನಾಥ್, ಸಿಪಿಐ ರಾಘವೇಂದ್ರ, ರೈತ ಸಂಘದ ತಾಲ್ಲೂಕು ಅಧ್ಯಕ್ಷ ವೆಂಕಟೇಗೌಡ, ಪ್ರಧಾನ ಕಾರ್ಯದರ್ಶಿ ಸಿ.ಜಿ.ಲೋಕೇಶ್, ಜಿಲ್ಲಾ ಕಾರ್ಯದರ್ಶಿ ಶಂಕರಪ್ಪ, ಗ್ರಾಪಂ ಸದಸ್ಯ ರೇಣುಕಾಪ್ರಸಾದ್, ಜಿ.ಎಂ.ಶಿವಾನಂದ್, ರೈತಸಂಘದ ಸಿ.ಟಿ.ಕುಮಾರ್, ಗುರುಚನ್ನಬಸವಪ್ಪ, ಯತೀಶ್, ಪ್ರಕಾಶ್, ವೀರಭದ್ರೇಗೌಡ ಇನ್ನಿತರರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.