ಕನ್ನಡಪ್ರಭ ವಾರ್ತೆ, ಬೆಂಗಳೂರು
ವಿವಿಧ ವೃತ್ತಿಪರ ಪದವಿ ಕೋರ್ಸುಗಳ ಪ್ರವೇಶಕ್ಕೆ ಏಪ್ರಿಲ್ 16 ಮತ್ತು 17ರಂದು ರಾಜ್ಯದ 775 ಪರೀಕ್ಷಾ ಕೇಂದ್ರಗಳಲ್ಲಿ ಸಾಮಾನ್ಯ ಪ್ರವೇಶ ಪರೀಕ್ಷೆ (ಯುಜಿ-ಸಿಇಟಿ) ನಡೆಯಲಿದ್ದು, ತಪಾಸಣೆ ಹಿನ್ನೆಲೆಯಲ್ಲಿ ಅಭ್ಯರ್ಥಿಗಳು ಒಂದೂವರೆ ಗಂಟೆ ಮುಂಚಿತವಾಗಿ ಪರೀಕ್ಷಾ ಕೇಂದ್ರಗಳಿಗೆ ಬರಬೇಕೆಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸೂಚಿಸಿದೆ.ಈ ಬಾರಿ ಪರೀಕ್ಷೆಗೆ ಒಟ್ಟು 3.31 ಲಕ್ಷ ವಿದ್ಯಾರ್ಥಿಗಳು ನೋಂದಾಯಿಸಿದ್ದಾರೆ. ಏ.16ರಂದು ಭೌತ ವಿಜ್ಞಾನ ಮತ್ತು ರಸಾಯನ ವಿಜ್ಞಾನ ಹಾಗೂ ಏ.17ರಂದು ಗಣಿತ ಮತ್ತು ಜೀವ ವಿಜ್ಞಾನ ವಿಷಯಗಳ ಪರೀಕ್ಷೆಗಳು ನಡೆಯಲಿವೆ. ಇದಕ್ಕೂ ಮುನ್ನ ಏ.15ರಂದು ಹೊರನಾಡು, ಗಡಿನಾಡು ಕನ್ನಡಿಗ ಅಭ್ಯರ್ಥಿಗಳಿಗೆ ಕನ್ನಡ ಭಾಷಾ ಪರೀಕ್ಷೆ ಬೆಂಗಳೂರು, ಮಂಗಳೂರು, ವಿಜಯಪುರ ಮತ್ತು ಬೆಳಗಾವಿ ನಗರಗಳ ಐದು ಕೇಂದ್ರಗಳಲ್ಲಿ ನಡೆಯಲಿದೆ.
ಪರೀಕ್ಷಾ ಅಕ್ರಮ ತಡೆಯುವ ಉದ್ದೇಶದಿಂದ ಕ್ಯಾಮೆರಾ ಕಣ್ಗಾವಲು, ವೆಬ್ ಕಾಸ್ಟಿಂಗ್ ಮೂಲಕ ಎಲ್ಲ 775 ಪರೀಕ್ಷಾ ಕೇಂದ್ರಗಳ ಮೇಲೆ ನಿಗಾ ವ್ಯವಸ್ಥೆ ಮಾಡಲಾಗಿದೆ. ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಮೇಲುಸ್ತುವಾರಿ ನಡೆಸಲಿದ್ದಾರೆ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.ಫೇಸ್ ರೆಕಗ್ನಿಷನ್-ಕ್ಯೂಆರ್ ಕೋಡ್ ವ್ಯವಸ್ಥೆ:
ಪೊಲೀಸ್/ ಗೃಹ ರಕ್ಷಕ ದಳದ ಸಿಬ್ಬಂದಿ ಅಭ್ಯರ್ಥಿಗಳನ್ನು ತೀವ್ರ ತಪಾಸಣೆ ಮಾಡಿ ಪರೀಕ್ಷಾ ಕೇಂದ್ರದೊಳಗೆ ಬಿಡಲಿದ್ದಾರೆ. ಹೀಗಾಗಿ ಕನಿಷ್ಠ ಒಂದೂವರೆ ಗಂಟೆ ಮುಂಚೆಯೇ ಪರೀಕ್ಷಾ ಕೇಂದ್ರಕ್ಕೆ ಅಭ್ಯರ್ಥಿಗಳು ಬಂದು ತಪಾಸಣೆಗೆ ಒಳಗಾಗಬೇಕು. ಅಭ್ಯರ್ಥಿಯ ಮುಖ ಚಹರೆ(ಫೇಸ್ ರೆಕಗ್ನಿಷನ್) ಮತ್ತು ಕ್ಯೂಆರ್ ಕೋಡ್ ವ್ಯವಸ್ಥೆ ಮೂಲಕ ಅಭ್ಯರ್ಥಿಯ ನೈಜತೆ ಪರಿಶೀಲನೆ ಮಾಡಲಾಗುತ್ತದೆ ಎಂದು ತಿಳಿಸಲಾಗಿದೆ.ವಸ್ತ್ರ ಸಂಹಿತೆ:
ಪರೀಕ್ಷೆಗೆ ಪುರುಷ/ಮಹಿಳಾ ಅಭ್ಯರ್ಥಿಗಳು ಅರ್ಧ ತೋಳಿನ ಬಟ್ಟೆ ಧರಿಸಬೇಕು. ಸಾಧ್ಯವಾದಷ್ಟು ಕಾಲರ್ ಇಲ್ಲದಿರುವುದನ್ನು ಹಾಕಿಕೊಂಡು ಬಂದರೆ ಉತ್ತಮ. ಜೇಬು ಇಲ್ಲದ/ಕಡಿಮೆ ಜೇಬುಗಳಿರುವ ಸರಳ ಪ್ಯಾಂಟ್ ಧರಿಸಬೇಕು. ಕುರ್ತಾ ಪೈಜಾಮ/ಜೀನ್ಸ್ ಪ್ಯಾಂಟ್, ಶೂ ನಿಷೇಧಿಸಲಾಗಿದೆ. ಮೊಬೈಲ್, ಪೆನ್ ಡ್ರೈವ್, ಇಯರ್ ಫೋನ್, ಮೈಕ್ರೋ ಫೋನ್ ಇತ್ಯಾದಿ ಎಲೆಕ್ಟ್ರಾನಿಕ್ ವಸ್ತುಗಳು ನಿಷಿದ್ಧ ಎಂದು ತಿಳಿಸಿದ್ದಾರೆ.----
ಪಿಯು ಪರೀಕ್ಷೆ 3ರ ಅಂಕಗಳೂ ಪರಿಗಣನೆದ್ವಿತೀಯ ಪಿಯುಸಿ ಮೊದಲ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಿರುವ ಅಥವಾ ಅನುತ್ತೀರ್ಣರಾದವರು ಫಲಿತಾಂಶವನ್ನು ಉತ್ತಮ ಮಾಡಿಕೊಳ್ಳಲು ಅವಕಾಶ ಇರುವ ಕಾರಣ ಶುಲ್ಕ ಪಾವತಿಸಿರುವ ಎಲ್ಲರೂ ಪ್ರವೇಶ ಪತ್ರ ಡೌನ್ ಲೋಡ್ ಮಾಡಿಕೊಂಡು ಪರೀಕ್ಷೆ ಬರೆಯಬೇಕು. ದ್ವಿತೀಯ ಪಿಯುಸಿಯ 3ನೇ ಪರೀಕ್ಷೆಯ ಅಂಕಗಳನ್ನು ಪಡೆದು ರ್‍ಯಾಂಕ್ ಕೊಡುವ ವ್ಯವಸ್ಥೆ ಕೂಡ ಇದೆ. ಹಾಗಾಗಿ ಯಾರೂ ಅವಕಾಶ ವಂಚಿತರಾಗಬಾರದು ಎಂದು ಪ್ರಸನ್ನ ಅವರು ಸಲಹೆ ನೀಡಿದ್ದಾರೆ.