ಒಳಮೀಸಲು ರೋಸ್ಟರ್‌ ವಿರೋಧಿಸಿ ನಾಳೆ ಸರ್ಕಾರದ ವಿರುದ್ಧ ಹೋರಾಟ

KannadaprabhaNewsNetwork |  
Published : Mar 23, 2026, 02:15 AM IST
Bhovi 1 | Kannada Prabha

ಸಾರಾಂಶ

ರಾಜ್ಯದಲ್ಲಿ ಪರಿಶಿಷ್ಟ ಜಾತಿಯಲ್ಲಿನ ಒಳಮೀಸಲಾತಿ ಹಾಗೂ ರೋಸ್ಟರ್‌ ಬಿಂದು ನಿಗದಿಗೂ ಮೊದಲು ಸಮುದಾಯಗಳ ಮುಖಂಡರೊಂದಿಗೆ ಸಮಾಲೋಚನಾ ಸಭೆ ನಡೆಸಬೇಕು ಎಂದು ಒತ್ತಾಯಿಸಿ, ಮಾ.24 ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದಾಗಿ ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಹೇಳಿದ್ದಾರೆ.

- ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಶ್ರೀ ನೇತೃತ್ವ

- ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆಯಲಿರುವ ಪ್ರತಿಭಟನೆಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜ್ಯದಲ್ಲಿ ಪರಿಶಿಷ್ಟ ಜಾತಿಯಲ್ಲಿನ ಒಳಮೀಸಲಾತಿ ಹಾಗೂ ರೋಸ್ಟರ್‌ ಬಿಂದು ನಿಗದಿಗೂ ಮೊದಲು ಸಮುದಾಯಗಳ ಮುಖಂಡರೊಂದಿಗೆ ಸಮಾಲೋಚನಾ ಸಭೆ ನಡೆಸಬೇಕು ಎಂದು ಒತ್ತಾಯಿಸಿ, ಮಾ.24 ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದಾಗಿ ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಹೇಳಿದ್ದಾರೆ.

ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕೇಂದ್ರದಿಂದ ದೇಶವ್ಯಾಪಿ ನಡೆಯುತ್ತಿರುವ ಜನಗಣತಿಯ ಸಮಗ್ರ ದತ್ತಾಂಶ ಬರುವವರೆಗೆ ಒಳಮೀಸಲಾತಿ ಕುರಿತು ರಾಜ್ಯ ಸರ್ಕಾರ ಏಕಪಕ್ಷೀಯ ನಿರ್ಧಾರ ಕೈಗೊಳ್ಳಬಾರದು. ಎಸ್‌ಸಿಪಿ-ಟಿಎಸ್‌ಪಿ ಹಣ ಪೂರ್ಣ ಪ್ರಮಾಣದಲ್ಲಿ ಪರಿಶಿಷ್ಟರ ಕಲ್ಯಾಣಕ್ಕೆ ಬಳಕೆಯಾಗಬೇಕು. ಪ.ಜಾತಿ (ಶೇ.17), ಪ.ಪಂಗಡಗಳ (ಶೇ.7) ಮೀಸಲಾತಿ ಹೆಚ್ಚಿಸಿರುವ ಆದೇಶವನ್ನು ಸಂವಿಧಾನದ 9ನೇ ಷೆಡ್ಯೂಲ್‌ನಲ್ಲಿ ಸೇರಿಸಲು ರಾಜ್ಯ ಸರ್ಕಾರ, ಕೇಂದ್ರಕ್ಕೆ ಮನವರಿಕೆ ಮಾಡಲು ಪ್ರಧಾನಿ ಬಳಿಗೆ ನಿಯೋಗ ಕೊಂಡೊಯ್ಯಬೇಕು ಎಂದು ಆಗ್ರಹಿಸಿದರು.

ನ್ಯಾ.ನಾಗಮೋಹನ್‌ದಾಸ್ ಆಯೋಗದ ವರದಿಯಲ್ಲಿ ಅಂಕಿ-ಅಂಶ ತಪ್ಪುಗಳಿಂದ ಕೂಡಿದ್ದು, ವರದಿ ತಿರಸ್ಕರಿಸಬೇಕು. ಉದ್ಯೋಗ ನೇಮಕಾತಿ ಕುರಿತು ಇತ್ತೀಚೆಗೆ ಹೊರಡಿಸಿರುವ ಎಲ್ಲ ರೋಸ್ಟರ್ ಹಂಚಿಕೆ ಆದೇಶ, ಸುತ್ತೋಲೆ ಹಿಂಪಡೆಯಬೇಕು. ಪ.ಜಾತಿ ಪ್ರವರ್ಗ ಎ, ಬಿ ಮತ್ತು ಸಿ ಎಂದು ನಮೂದಿಸಿ ನೀಡಲಾಗಿರುವ ಜಾತಿ ಪ್ರಮಾಣಪತ್ರ ಹಿಂಪಡೆದು ಹಳೆಯ ಜಾತಿ ಪ್ರಮಾಣಪತ್ರಗಳನ್ನೇ ಪರಿಗಣಿಸಬೇಕು ಎಂದು ಸ್ವಾಮೀಜಿ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.

ಅವೈಜ್ಞಾನಿಕವಾಗಿ ಹಂಚಿಕೆ:

ರಾಜ್ಯ ಸರ್ಕಾರ ಪರಿಶಿಷ್ಟ ಜಾತಿಗಳಿಗೆ ಅವೈಜ್ಞಾನಿಕವಾಗಿ ಒಳಮೀಸಲಾತಿ ಹಂಚಿಕೆಯಿಂದ ಬಂಜಾರ, ಭೋವಿ, ಕೊರಚ, ಕೊರಮ ಸೇರಿ 63 ಪರಿಶಿಷ್ಟ ಜಾತಿಗಳಿಗೆ ಮಾರಕವಾಗಿದೆ. ಈ ಕುರಿತು ಸಿಎಂ ಸಿದ್ದರಾಮಯ್ಯರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಇದರಿಂದ ಬಂಜಾರ, ಭೋವಿ, ಕೊರಮ, ಕೊರಚ, ಛಲವಾದಿ ಮತ್ತು ಚರ್ಮಕಾರ ಸೇರಿ ಸೂಕ್ಷ್ಮ ಪರಿಶಿಷ್ಟ ಜಾತಿಗಳ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟದಿಂದ ಒಂದು ದಿನದ ಮಟ್ಟಿಗೆ ಪ್ರತಿಭಟನೆ ನಡೆಸಲಾಗುವುದು. ಈ ವೇಳೆ ರಾಜ್ಯದ ವಿವಿಧ ಭಾಗಗಳಿಂದ ಲಕ್ಷಕ್ಕೂ ಅಧಿಕ ಜನ ಭಾಗಿಯಾಗುವ ಮೂಲಕ ಸರ್ಕಾರಕ್ಕೆ ನಮ್ಮ ಶಕ್ತಿ ತೋರಿಸಲಿದ್ದೇವೆ ಎಂದು ತಿಳಿಸಿದರು.

ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟದ ಡಾ. ಎಚ್. ರವಿ ಮಾಕಳಿ, ರಾಘವೇಂದ್ರ ನಾಯ್ಕ್‌ ಮತ್ತು ಅನಂತನಾಯ್ಕ್ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಂಗಳೂರಿಗೆ ಬಂತು ಎಲ್‌ಪಿಜಿ ಹಡಗು
ನತ್ತಬೆಲೆ ಡೇರಿ ಅಧ್ಯಕ್ಷರಾಗಿ ಶಾಸಕ ನಾರಾಯಣಸ್ವಾಮಿ ಅವಿರೋಧ ಆಯ್ಕೆ