ಶಿವಮೊಗ್ಗ: ಗುರುಪೂರ್ಣಿಮೆ ಮಹೋತ್ಸವದ ಅಂಗವಾಗಿ ಜು.10ರಂದು ಸಂಜೆ 5 ಗಂಟೆಗೆ ವಿನೋಬನಗರದ ಶುಭಮಂಗಳ ಸಮುದಾಯ ಭವನದಲ್ಲಿ ‘ಗುರು ನಾಮಾಮೃತ ಭಜೋ ಮನವೇ’ಎಂಬ ವಿಶೇಷ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಶ್ರೀಗಂಧ ಸಾಂಸ್ಕೃತಿಕ ಸಂಸ್ಥೆಯ ಖಜಾಂಚಿ ಕೆ.ಇ.ಕಾಂತೇಶ್ ತಿಳಿಸಿದರು.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಶ್ರೀಗಂಧ ಸಾಂಸ್ಕೃತಿಕ ಸಂಸ್ಥೆ, ಶ್ರೀ ಶನೈಶ್ವರ ಸ್ವಾಮಿ ದೇವಸ್ಥಾನ ಸಮಿತಿ ಟ್ರಸ್ಟ್, ಭಜನಾ ಪರಿಷತ್ ಹಾಗೂ ಜಿಲ್ಲಾ ಶ್ರೀ ಶಾಂಕರ ತತ್ವ ಪ್ರಸಾರ ಅಭಿಯಾನ ಇವರ ಸಂಯುಕ್ತಾಶ್ರಯದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.ಕಾರ್ಯಕ್ರಮದಲ್ಲಿ ವಿದ್ವಾನ್ ಎಚ್.ಎಸ್.ನಾಗರಾಜ್, ಯೋಗಾಚಾರ್ಯ ಸಿ.ವಿ.ರುದ್ರಾರಾಧ್ಯ, ಹಿರಿಯ ಶಿಕ್ಷಣ ತಜ್ಞ ಎಸ್.ಕೆ.ಶೇಷಾಚಲ, ವಿದ್ವಾನ್ ಕೇಶವಕುಮಾರ್ ಮತ್ತು ಅಚ್ಚುಮೆಚ್ಚಿನ ಶಿಕ್ಷಕಿ ಪ್ರಶಸ್ತಿ ಪುರಸ್ಕೃತರಾದ ಲೀಲಾವತಿ ಅವರನ್ನು ಗುರುವಂದನೆ ಸಲ್ಲಿಸಿ ಗೌರವಿಸಲಾಗುವುದು ಎಂದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಗಂಧ ಸಂಸ್ಥೆಯ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ವಹಿಸಲಿದ್ದು, ಮೇಲಿನ ಎಲ್ಲಾ ಸಂಸ್ಥೆಗಳ ಮುಖ್ಯಸ್ಥರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿರುವರು ಎಂದರು.ಭಜನಾ ಪರಿಷತ್ ಅಧ್ಯಕ್ಷ ಸಂದೇಶ್ ಉಪಾಧ್ಯ ಮಾತನಾಡಿ, ಆಷಾಢಮಾಸದ ಹುಣ್ಣಿಮೆಯಂದು ಆಚರಿಸಲಾಗುವ ಗುರುಪೂರ್ಣಿಮೆಯು ಹಿಂದೂ ಧರ್ಮದಲ್ಲಿ ಅತ್ಯಂತ ಮಹತ್ವದ ದಿನವಾಗಿದೆ. ಜೀವನದ ಮಾರ್ಗದರ್ಶಕರಾಗಿ ಮತ್ತು ಜ್ಞಾನ ನೀಡುವವರಾಗಿ ಕಾರ್ಯನಿರ್ವಹಿಸುವ ಗುರುಗಳಿಗೆ ಆಳವಾದ ಗೌರವ ಮತ್ತು ಕೃತಜ್ಞತೆ ವ್ಯಕ್ತಪಡಿಸುವ ಸುದಿನ. ಗುರು ಎಂಬ ಪದವು ಕತ್ತಲೆಯನ್ನು ಹೋಗಲಾಡಿಸುವವನು ಎಂದು ಅನುವಾದಿಸುತ್ತದೆ. ಈ ದಿನವು ಮಹಾಭಾರತ ಮತ್ತು ವೇದಗಳಂತಹ ಅನೇಕ ಮೂಲಭೂತ ಹಿಂದೂ ಗ್ರಂಥಗಳನ್ನು ಸಂಕಲಿಸಿ ಸಂಪಾದಿಸಿದ ಕೀರ್ತಿಗೆ ಪಾತ್ರರಾದ ವ್ಯಾಸ ಮಹರ್ಷಿಗಳನ್ನು ಹಾಗೂ ಗುರು ಪರಂಪರೆಯನ್ನು ಅತ್ಯಂತ ಶ್ರದ್ಧಾಭಕ್ತಿಯಿಂದ ಸ್ಮರಿಸಿ ಪೂಜಿಸಿ ಕೃತಜ್ಞತೆ ಸಮರ್ಪಿಸುವ ದಿನವಾಗಿದೆ ಎಂದರು.ಅಂದು ಸಂಜೆ 5.30 ರಿಂದ ಶಿವಮೊಗ್ಗದ ಎಲ್ಲಾ ಭಜನಾ ಮಂಡಳಿಗಳ ಒಕ್ಕೂಟದ ಸುಮಾರು 700ಕ್ಕೂ ಹೆಚ್ಚು ಮಾತೆಯರು ಸಾಮೂಹಿಕ ಗುರು ಭಜನಾ ಕಾರ್ಯಕ್ರಮ ನಡೆಸಿಕೊಡಲಿದ್ದು, ನಂತರ 6 ಗಂಟೆಯಿಂದ ಮಂಕುತಿಮ್ಮನ ಕಗ್ಗ ಖ್ಯಾತಿಯ ವಿದ್ವಾನ್ ಜಿ.ಎಸ್.ನಟೇಶ್ ಅವರಿಂದ ಗುರುತತ್ವ ಹಾಗೂ ಗುರು ಪರಂಪರೆ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ ಎಂದರು.ಪತ್ರಿಕಾಗೋಷ್ಠಿಯಲ್ಲಿ ಉಮೇಶ್ ಆರಾಧ್ಯ, ಟಿ.ಆರ್.ಅಶ್ವತ್ಥನಾರಾಯಣ ಶೆಟ್ಟಿ, ಸುವರ್ಣಾ ಶಂಕರ್, ಶ್ರೀಧರ್, ಮೋಹನ್ ಜಾಧವ್, ಶುಭಾ ರಾಘವೇಂದ್ರ, ರತ್ನ, ಶಾಲಿನಿ, ಸುಜಾತಾ, ಉಷಾ ಅರುಣ್, ಲಕ್ಷ್ಮಿ ಶ್ರೀಧರ್ ಇನ್ನಿತರರು ಉಪಸ್ಥಿತರಿದ್ದರು.