ನಾಳೆ ಮದಕರಿ ನಾಯಕನ ಪಟ್ಟಾಭಿಷೇಕ ಮಹೋತ್ಸವ

KannadaprabhaNewsNetwork |  
Published : Jun 30, 2024, 12:47 AM IST
ಚಿತ್ರದುರ್ಗ ಮೂರನೇ ಪುಟದ ಲೀಡ್ | Kannada Prabha

ಸಾರಾಂಶ

ರಾಜವೀರನ ಮದಕರಿನಾಯಕರ 270ನೇ ಪಟ್ಟಾಭಿಷೇಕ ಮಹೋತ್ಸವ ಆಚರಣೆ ಕುರಿತು ಚಿತ್ರ ನಿರ್ಮಾಪಕ ಹಾಗೂ ನಗರಸಭೆ ಮಾಜಿ ಅಧ್ಯಕ್ಷ ಬಿ.ಕಾಂತರಾಜ್ ಮಾಹಿತಿ ನೀಡಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಐತಿಹಾಸಿಕ ಚಿತ್ರದುರ್ಗವನ್ನಾಳಿದ ನಾಡದೊರೆ ರಾಜವೀರ ಮದಕರಿ ನಾಯಕನ 270ನೇ ಪಟ್ಟಾಭಿಷೇಕ ಮಹೋತ್ಸವವನ್ನು ಜುಲೈ ಒಂದರಂದು ವಿಜೃಂಭಣೆಯಿಂದ ಆಚರಿಸಲು ನಿರ್ಧರಿಸಲಾಗಿದೆ ಎಂದು ಚಿತ್ರನಿರ್ಮಾಪಕ, ನಗರಸಭೆ ಮಾಜಿ ಅಧ್ಯಕ್ಷ ಹಾಗೂ ತಾಲೂಕು ನಾಯಕ ಸಮಾಜದ ಅಧ್ಯಕ್ಷ ಬಿ.ಕಾಂತರಾಜ್ ತಿಳಿಸಿದರು.

ಶನಿವಾರ ಇಲ್ಲಿನ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು ಅಂದು ಮಧ್ಯಾಹ್ನ 12 ಗಂಟೆಗೆ ತರಾಸು ರಂಗಮಂದಿರದಲ್ಲಿ ಸಭಾ ಕಾರ್ಯಕ್ರಮ ಆಯೋಜಿಸಲಾಗಿದೆ. ಜಿಲ್ಲೆಯ ಜನಪ್ರತಿನಿಧಿಗಳು, ಸಚಿವರು ಪಾಲ್ಗೊಳ್ಳುವರು. ಇದಕ್ಕೂ ಮೊದಲು 11 ಗಂಟೆಗೆ ರಾಜವೀರ ಮದಕರಿನಾಯಕರ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಗುವುದೆಂದರು.

ನಾಯಕ ಸಮಾಜದ ವತಿಯಿಂದ ಪ್ರತಿ ವರ್ಷ ಮದಕರಿ ನಾಯಕರ ಮೂರು ಕಾರ್ಯಕ್ರಮಗಳ ಆಚರಿಸಿಕೊಂಡು ಬರಲಾಗುತ್ತಿದೆ. ಮದಕರಿನಾಯಕರ ಜಯಂತಿ, ಸ್ಮರಣೋತ್ಸವ ಹಾಗೂ ಪಟ್ಟಾಭಿಷೇಕ ಮಹೋತ್ಸವ ನಡೆಯುತ್ತಿವೆ. ಜಯಂತಿ ಆಚರಣೆಗೆ ಮೆರವಣಿಗೆ ಸೇರಿ ಅದ್ಧೂರಿ ಸ್ಪರ್ಶ ನೀಡಿದರೆ, ಸ್ಮರಣೋತ್ಸವಕ್ಕೆ ಪ್ರತಿಮೆಗೆ ಹೂ ಅಲಂಕಾರ ಮಾಡುವರ ಮೂಲಕ ನೆನಪು ಮಾಡಿಕೊಳ್ಳಲಾಗುತ್ತಿದೆ. ಪಟ್ಟಾಭಿಷೇಕ ಮಹೋತ್ಸವಕ್ಕೆ ಸಭಾ ಕಾರ್ಯಕ್ರಮ ಆಯೋಜಿಸಿ ಮದಕರಿನಾಯಕರ ಆಳ್ವಿಕೆ ಕುರಿತು ಉಪನ್ಯಾಸ ನಡೆಯಲಿವೆ. ಮದಕರಿನಾಯಕ ಯಾವುದೇ ಒಂದು ಸಮುದಾಯಕ್ಕೆ ಸೇರಿದವರಲ್ಲ. ಸರ್ವ ಸಮುದಾಯದವರು ಪಾಲ್ಗೊಂಡು ದುರ್ಗವನ್ನಾಳಿದ ದೊರೆಯ ಸಾಹಸಗಳ ಮೆಲಕು ಹಾಕುುವರೆಂದು ಹೇಳಿದರು.

ರಾಜವೀರ ಮದಕರಿನಾಯಕರ ಇತಿಹಾಸ ಯುವ ಪೀಳಿಗೆಗೆ ಪರಿಚಯಿಸುವ ಕೆಲಸ ಆಗಬೇಕಾಗಿದೆ. ಈ ನಿಟ್ಟಿನಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಮದಕರಿನಾಯಕರ ಸಾಹಸ ಪಠ್ಯವಾಗಿಡಬೇಕೆಂಬುದು ನಮ್ಮ ಬೇಡಿಕೆ. ಈ ಬಗ್ಗೆ ನಿರ್ಣಯ ಕೈಗೊಂಡು ರಾಜ್ಯ ಸರ್ಕಾರದ ಗಮನ ಸೆಳೆಯಲಾಗುವುದು. ಮದಕರಿನಾಯಕ ಥೀಂ ಪಾರ್ಕ್ ಸ್ಥಾಪಿಸುವ ಕುರಿತು ಕೇಂದ್ರ ಸರ್ಕಾರದ ಮಟ್ಟದಲ್ಲಿ ಪ್ರಯತ್ನಗಳು ನಡೆದಿವೆ. ಸಂಸದ ಗೋವಿಂದ ಕಾರಜೋಳರ ಗಮನಕ್ಕೆ ತರಲಾಗಿದೆ. ಕೇಂದ್ರದ ಹಂತದಲ್ಲಿ ಥೀಮ್ ಪಾರ್ಕ್ ಈಗಾಗಲೇ ಪ್ರಸ್ತಾಪವಾಗಿದ್ದು ಸರ್ಕಾರ ಸೂಕ್ತ ತೀರ್ಮಾನ ಕೈಗೊಳ್ಳಬೇಕಾಗಿದೆ ಎಂದರು.

ಚಿತ್ರದುರ್ಗ ಪ್ರವಾಸೋಧ್ಯಮ ನಕ್ಷೆಯಲ್ಲಿ ಇದುವರೆಗೂ ಗುರುತಿಸಿಕೊಳ್ಳಲು ಸಾಧ್ಯವಾಗಿಲ್ಲ. ರಾಜಕಾರಣಿಗಳಿಗೆ ಇಚ್ಛಾ ಶಕ್ತಿ ಕೊರತೆ ಇರುವುದರಿಂದ ದುರ್ಗದ ಇತಿಹಾಸ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಸರಿಸಲು ಸಾಧ್ಯವಾಗಿಲ್ಲ. ಥೀಂ ಪಾರ್ಕ್, ಕೋಟೆ ಅಭಿವೃದ್ಧಿ ಬಗ್ಗೆ ಸಚಿವರು, ಶಾಸಕರುಗಳಿಗೆ ಮನವಿ ಸಲ್ಲಿಸಲಾಗುವುದು. ಚಿತ್ರದುರ್ಗಕ್ಕೆ ಮದಕರಿನಾಯಕ ತನ್ನದೆ ಆದ ಕೊಡುಗೆ ಕೊಟ್ಟಿದ್ದಾರೆ. ಅದಕ್ಕೆ ಸೂಕ್ತ ಗೌರವ, ಸ್ಥಾನಮಾನ ಸಿಗುತ್ತಿಲ್ಲ. ಮದಕರಿ ನಾಯಕನ ಹೆಸರು ಬೆಳೆದರೆ ಊರು ಬೆಳೆದಂತೆ. ಇಲ್ಲಿವರೆಗೂ ಅಧಿಕಾರ ನಡೆಸಿದ ಯಾವ ರಾಜಕಾರಣಿಗಳಿಗೂ ಊರು ಅಭಿವೃದ್ಧಿಯಾಗುವುದು ಬೇಕಾಗಿಲ್ಲ. ಹನ್ನೆರಡನೆ ವರ್ಷಕ್ಕೆ ಪಟ್ಟಕ್ಕೇರಿದ ಮದಕರಿನಾಯಕನ ಅನೇಕ ವಿಚಾರಗಳು ಬೆಳಕಿಗೆ ಬರಬೇಕಿದೆ. ಹಾಗಾಗಿ ನಾಯಕ ಜನಾಂಗದಿಂದ ಪಟ್ಟಾಭಿಷೇಕ, ಜಯಂತಿ, ಸ್ಮರಣೋತ್ಸವ ಆಚರಿಸುವುದು ನಮ್ಮ ಧರ್ಮ ಎಂದು ಕಾಂತರಾಜ್ ಹೇಳಿದರು.

ನಾಯಕ ಸಮಾಜದ ಜಿಲ್ಲಾಧ್ಯಕ್ಷ ಎಚ್.ಜೆ.ಕೃಷ್ಣಮೂರ್ತಿ ಮಾತನಾಡಿ, ಎಲ್ಲಾ ಮಹಾನ್ ನಾಯಕರುಗಳನ್ನು ಒಂದೊಂದು ಜಾತಿಗೆ ಸೀಮಿತಗೊಳಿಸಲಾಗಿದೆ. ಹಾಗಾಗಿ ಸರ್ವಧರ್ಮದವರು ಮದಕರಿನಾಯಕನ ಪಟ್ಟಾಭಿಷೇಕ ಮಹೋತ್ಸವದಲ್ಲಿ ಭಾಗವಹಿಸಿದರೆ ಒಳ್ಳೆಯದು. ಊರಿನ ದೊರೆಗೆ ಗೌರವ ಸಲ್ಲಿಸುವುದು ಎಲ್ಲರ ಜವಾಬ್ದಾರಿ ಎಂದರು.

ನಾಯಕ ಸಮಾಜದ ಮುಖಂಡ ಡಿ.ಗೋಪಾಲಸ್ವಾಮಿ ನಾಯಕ ಮಾತನಾಡಿ, ಪಟ್ಟಾಭಿಷೇಕ ಮಹೋತ್ಸವ ಆಚರಣೆ ಮೂಲಕ ಮದಕರಿನಾಯಕನ ಇತಿಹಾಸ ಪರಂಪರೆಯನ್ನು ಎಲ್ಲರಿಗೂ ತಿಳಿಸಬೇಕಿದೆ. ಚಿತ್ರದುರ್ಗದ ಕೋಟೆಯನ್ನು ವಿಶ್ವಪರಂಪರೆ ಪಟ್ಟಿಯಲ್ಲಿ ಸೇರ್ಪಡೆಗೊಳಿಸುವ ಸಂಬಂಧ ವೇದಿಕೆ ಕಾರ್ಯಕ್ರಮದಲ್ಲಿ ಸಚಿವರು, ಶಾಸಕರುಗಳಿಗೆ ಮನವಿ ಅರ್ಪಿಸಲಿದ್ದಾರೆಂದು ತಿಳಿಸಿದರು. ಕಾಂಗ್ರೆಸ್ ಮುಖಂಡ ಎಚ್.ಅಂಜಿನಪ್ಪ, ಕಾಟಿಹಳ್ಳಿ ಕರಿಯಪ್ಪ, ನಗರಸಭೆ ಮಾಜಿ ಸದಸ್ಯ ತಿಪ್ಪೇಸ್ವಾಮಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಲವು ಜಿಲ್ಲೆಗಳಲ್ಲಿ ಶೀತಗಾಳಿ ತಾಪಮಾನ 5-7 ಡಿಗ್ರಿ ಇಳಿಕೆ
‘ಬಾಡಿಗೆ ತಾಯ್ತನ’ದಿಂದ ಮಗು : ವೃದ್ಧ ದಂಪತಿಯಿಂದ ಕೋರ್ಟ್‌ ಮೊರೆ