ಕನ್ನಡಪ್ರಭ ವಾರ್ತೆ ಬೆಳಗಾವಿ
ಕೆಎಲ್‍ಇ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ ಆ್ಯಂಡ್ ರಿಸರ್ಚ್ ಕಾಹೆರನ 14ನೇ ಘಟಿಕೋತ್ಸವವು ಮೇ.27 ರಂದು ಬೆಳಗ್ಗೆ 11 ಗಂಟೆಗೆ ನಗರದ ಜೆಎನ್‍ಎಂಸಿ ಆವರಣದಲ್ಲಿರುವ ಕೆಎಲ್‍ಇ ಸೆಂಟಿನರಿ ಕನ್ವೇಷಣ ಸೆಂಟರದಲ್ಲಿ ಜರುಗಲಿದೆ ಎಂದು ಕೆಎಲ್‍ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಹೇಳಿದರು.ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ಮುಖ್ಯ ಅತಿಥಿಗಳಾಗಿ ಘಟಿಕೋತ್ಸವವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ರಾಜ್ಯಪಾಲ ಥಾವರ್ ಚಂದ ಗೆಹ್ಲೋಟ್ ಗೌರವ ಅತಿಥಿಗಳಾಗಿ ಆಗಮಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಪ್ರಥಮ ಬಾರಿಗೆ ವಿಶ್ವವಿದ್ಯಾಲಯವು ಯುಎಸ್‍ಎ ಫಿಲ್ಡೇಲ್ಫಿಯಾದ ಥಾಮಸ್ ಜೆಫರಸನ್ ವಿಶ್ವವಿದ್ಯಾಲಯದ ವೈಸ್ ಪ್ರೊವೊಸ್ಟ್ ಡಾ.ರಿರ್ಚಡ್ ಜಾಕೋಬ್ ಡೆರ್ಮನ್ ಅವರಿಗೆ ಗೌರವ ಡಾಕ್ಟರೇಟ್ ಪದವಿಯನ್ನು ಪ್ರದಾನ ಮಾಡಲಾಗುತ್ತಿದೆ ಎಂದರು.ಕೆಎಲ್‍ಇ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ ಆ್ಯಂಡ್ ರಿಸಚ್‌ರ್ಗೆ ಭಾರತ ಸರ್ಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದಿಂದ ಡೀಮ್ಡ್-ಟು-ಬಿ-ಯುನಿವರ್ಸಿಟಿ ಸ್ಥಾನಮಾನವನ್ನು 2006 ಏಪ್ರಿಲ್ 13 ರಂದು ಪಡೆದುಕೊಂಡ ಹೆಗ್ಗಳಿಕೆ. ವಿಶ್ವವಿದ್ಯಾಲಯವು ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತಾ ಮಂಡಳಿಯಿಂದ 3ನೇ ಬಾರಿಗೆ, ಎ+ ಗ್ರೇಡ್‍ನೊಂದಿಗೆ ಮರುಮಾನ್ಯತೆ ಪಡೆದಿದೆ ಮತ್ತು ಭಾರತ ಸರ್ಕಾರದ ಶಿಕ್ಷಣ ಸಚಿವಾಲಯದಿಂದ ಎ ವರ್ಗದಲ್ಲಿ ಹೊಂದಿದೆ. ಕಾಹೆರ್‍ಗೆ ಧನಸಹಾಯ ಆಯೋಗವು ಸ್ಥಾನಮಾನವನ್ನು ನೀಡಿದೆ. ಇದು ವಿಶ್ವವಿದ್ಯಾಲಯದ ಉನ್ನತ ಗುಣಮಟ್ಟದ ಶಿಕ್ಷಣ ಮತ್ತು ಸಂಶೋಧನೆಗಳನ್ನು ಗುರುತಿಸಿ ನೀಡಿದ ಸ್ಥಾನಮಾನವಾಗಿದೆ ಎಂದು ತಿಳಿಸಿದರು.
ಕಾಹೆರ್ 11 ಘಟಕ:ಜವಾಹರಲಾಲ ನೆಹರು ವೈದ್ಯಕೀಯ ಮಹಾವಿದ್ಯಾಲಯ ಬೆಳಗಾವಿ, ಕೆಎಲ್‍ಇ ಜಗದ್ಗುರು ಗಂಗಾಧರ ಮಹಾಸ್ವಾಮಿಗಳು ಮೂರುಸಾವಿರಮಠ ವೈದ್ಯಕೀಯ ಮಹಾವಿದ್ಯಾಲಯ ಹುಬ್ಬಳ್ಳಿ, ಕೆಎಲ್‍ಇ ವಿಶ್ವನಾಥ ಕತ್ತಿ ದಂತ ವಿಜ್ಞಾನ ಮಹಾವಿದ್ಯಾಲಯ ಬೆಳಗಾವಿ, ಕೆಎಲ್‍ಇ ಶ್ರೀ ಬಿ.ಎಂ.ಕಂಕಣವಾಡಿ ಆಯುರ್ವೇದ ಮಹಾವಿದ್ಯಾಲಯ ಬೆಳಗಾವಿ, ಕೆಎಲ್‍ಇ ಔಷಧೀಯ ಮಹಾವಿದ್ಯಾಲಯ ಹುಬ್ಬಳ್ಳಿ, ಕೆಎಲ್‍ಇ ಔಷಧೀಯ ಮಹಾವಿದ್ಯಾಲಯ ಬೆಂಗಳೂರು, ಕೆಎಲ್‍ಇ ಔಷಧೀಯ ಮಹಾವಿದ್ಯಾಲಯ ಬೆಳಗಾವಿ, ಕೆಎಲ್‍ಇ ಭೌತಚಿಕಿತ್ಸಾ ಮಹಾವಿದ್ಯಾಲಯ ಬೆಳಗಾವಿ, ಕೆಎಲ್‍ಇ ಭೌತಚಿಕಿತ್ಸಾ ಮಹಾವಿದ್ಯಾಲಯ ಹುಬ್ಬಳ್ಳಿ, ಕೆಎಲ್‍ಇ ಶುಶ್ರೂಷಾ ವಿಜ್ಞಾನ ಮಹಾವಿದ್ಯಾಲಯ ಬೆಳಗಾವಿ, ಕೆಎಲ್‍ಇ ಹೋಮಿಯೋಪಥಿಕ್ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಬೆಳಗಾವಿ ಪ್ರಮುಖ ವೈದ್ಯಕೀಯ ಕಾಲೇಜುಗಳಾಗಿ ಗುಣಾತ್ಮಕವಾದ ಶಿಕ್ಷಣವನ್ನು ನೀಡುತ್ತಿವೆ ಎಂದು ವಿವರಿಸಿದರು.ಕಾಹೆರ್‌ವು ಭಾರತ ಸರ್ಕಾರದ ರಾಷ್ಟ್ರೀಯ ಸಾಂಸ್ಥಿಕ ಶ್ರೇಯಾಂಕ ಚೌಕಟ್ಟಿನಲ್ಲಿ ಅಗ್ರ 100 ವಿಶ್ವವಿದ್ಯಾಲಯಗಳಲ್ಲಿ ಗುರುತಿಸಲ್ಪಟ್ಟಿದೆ. ವಿಶ್ವವಿದ್ಯಾಲಯವು ಪಿಎಚ್‌ಡಿ, ಸೂಪರ್-ಸ್ಪೆಶಾಲಿಟಿ ಪದವಿ, ಸ್ನಾತಕೋತ್ತರ ಪದವಿ, ಪಿಜಿ ಡಿಪ್ಲೋಮಾ, ಪದವಿ ಕಾರ್ಯಕ್ರಮಗಳು, ಫೆಲೋಶಿಪ್ ಕಾರ್ಯಕ್ರಮಗಳು, ಪ್ರಮಾಣೀಕೃತ ಕೋರ್ಸ್‍ಗಳನ್ನು ನಡೆಸುತ್ತಿದೆ. ಕಾಹೆರ್ ಸುಮಾರು ₹15 ಕೋಟಿ ವೆಚ್ಚದಲ್ಲಿ ಸುಧಾರಿತ ಸಿಮ್ಯುಲೇಶನ್ ತರಬೇತಿ ಕೇಂದ್ರವನ್ನು ಸ್ಥಾಪಿಸಿದೆ. ಇದು ದೇಶದ ಅತ್ಯುತ್ತಮ ಸಿಮ್ಯುಲೇಶನ್ ಕೇಂದ್ರಗಳಲ್ಲಿ ಒಂದಾಗಿದೆ ಮತ್ತು ಉತ್ತರ ಕರ್ನಾಟಕದಲ್ಲಿ ಮೊದಲನೆಯದು ಎಂಬ ಹೆಗ್ಗಳಿಕೆಯನ್ನು ಪಡೆದಿದೆ ಎಂದು ತಿಳಿಸಿದರು.ಅತ್ಯಾಧುನಿಕ ಪರೀಕ್ಷಾ ವಿಧಾನ ಕ್ರಮ:
ಇ-ಪ್ಯಾಡ್‌ಗಳನ್ನು ಬಳಸುವ ಮೂಲಕ ವಿದ್ಯಾರ್ಥಿಗಳಿಗೆ ಕಾಹೆರ್ ಡಿಜಿಟಲ್ ಆಧಾರಿತ ಪೇಪರ್‍ಲೆಸ್ ಪರೀಕ್ಷೆಗಳನ್ನು (ಇ-ಪ್ಯಾಡ್ ಸಿಸ್ಟಮ್) ಪರಿಚಯಿಸಿದೆ. ವಾರ್ಷಿಕ 100 ವಿದ್ಯಾರ್ಥಿಗಳನ್ನು ಹೊಂದಿದ ದಂತ, ಆಯುರ್ವೇದ, ಹೋಮಿಯೋಪತಿ, ಫಾರ್ಮಸಿ, ನಸಿರ್ಂಗ್ ಮತ್ತು ಫಿಸಿಯೋಥೆರಪಿ ವಿಭಾಗದಡಿ ಇರುವ ಎಲ್ಲ ವಿದ್ಯಾರ್ಥಿಗಳಿಗೆ ಪರೀಕ್ಷೆಗಳನ್ನು ನಡೆಸುತ್ತಿದೆ. ಈಗಾಗಲೇ 80 ಪರೀಕ್ಷೆಗಳು ಈ ಪ್ಯಾಡ್ ಮೂಲಕ ಜರುಗಿವೆ. ವಿದ್ಯಾರ್ಥಿಗಳು ಈ ಕುರಿತು ಉತ್ತಮವಾಗಿ ಸ್ಪಂದಿಸಿದ್ದಾರೆ. ಕೆಎಲ್‍ಇ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ ಆ್ಯಂಡ್ ರಿಸರ್ಚ್‍ವು ಟ್ರಾನ್ಸಲೇಷನಲ್ ರಿಸರ್ಚ್‍ನಲ್ಲೂ ಮುಂಚೂಣಿಯಲ್ಲಿದೆ ಎಂದರು.ಸಂಶೋಧನೆಗೆ ಹೆಚ್ಚು ಒತ್ತು:ಕಾಹೆರ್ ಸಂಶೋಧನೆಗೆ ಮೀಸಲಾದ 3 ಕೇಂದ್ರಗಳನ್ನು ಹೊಂದಿದೆ. ಮಹಿಳೆಯರ ಮತ್ತು ಮಕ್ಕಳ ಸಂಶೋಧನಾ ಘಟಕ, ಡಾ.ಪ್ರಭಾಕರ ಕೋರೆ ಮೂಲ ವಿಜ್ಞಾನ ಸಂಶೋಧನಾ ಕೇಂದ್ರ ಮತ್ತು ಕೇಂದ್ರ ಕ್ಲಿನಿಕಲ್ ಟ್ರಯಲ್ ಯೂನಿಟ್ ಜಾಗತಿಕ ಮನ್ನಣೆ ಗಳಿಸಿವೆ. ಈ ಸಂಶೋಧನಾ ಕೇಂದ್ರಗಳು ಹೆಸರಾಂತ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವಿಶ್ವವಿದ್ಯಾಲಯಗಳೊಂದಿಗೆ ಒಡಂಬಡಿಕೆಗಳನ್ನು ಸಾಧಿಸಿರುವುದು ವಿಶೇಷ ಎಂದರು.ಗೋಷ್ಠಿಯಲ್ಲಿ ಕಾಹೆರನ ಉಪಕುಲಪತಿ ಡಾ.ನೀತಿನ್ ಗಂಗಾನೆ, ಕುಲಸಚಿವ ಡಾ.ಎಂ.ಎಸ್.ಗಣಾಚಾರಿ, ಡಾ.ತೇಜಸ್ವಿ ಪ್ರಧಾನ, ಜೆಎನ್‍ಎಂಸಿ ಪ್ರಾಚಾರ್ಯ ಡಾ.ಎನ್‍ಎಸ್ ಮಹಾಂತಶೆಟ್ಟಿ, ಡಾ.ರಾಜೇಶ ಪವಾರ, ಡಾ.ವಿಶ್ವನಾಥ ಪಟ್ಟಣಶೆಟ್ಟಿ ಉಪಸ್ಥಿತರಿದ್ದರು.
-------ಕೋಟ್....ಘಟಿಕೋತ್ಸವದಲ್ಲಿ ಒಟ್ಟು 1739 ವೈದ್ಯಕೀಯ ವಿವಿಧ ಕೋರ್ಸ್‌ಗಳಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಪದವಿ ಪ್ರದಾನವನ್ನು ಮಾಡಲಾಗುವುದು. ಅದರಲ್ಲಿ 45 ಚಿನ್ನದ ಪದಕ ವಿಜೇತರಿದ್ದಾರೆ. 30 ಪಿಎಚ್‌ಡಿ ಪದವೀಧರರು, 13 ಪೋಸ್ಟ್ ಡಾಕ್ಟರಲ್(ಡಿಎಂ/ಎಂ.ಸಿಎಚ್) 644 ಪೋಸ್ಟ್ ಡಾಕ್ಟರೇಟ್ಸ್, 1023 ಅಂಡರ್ ಗ್ರ್ಯಾಜುಯೆಟ್ಸ್, ಪೋಸ್ಟ್ ಗ್ರ್ಯಾಜುಯೆಟ್ ಡಿಪ್ಲೋಮಾ, 4 ಡಿಪ್ಲೋಮಾ, 5 ಫೆಲೋಶಿಫ್, 11 ಸರ್ಟಿಫೀಕೆಟ್ ಕೋರ್ಸ್ ವಿದ್ಯಾರ್ಥಿಗಳು ಘಟಿಕೋತ್ಸವದಲ್ಲಿ ಪದವಿ ಪಡೆಯಲಿದ್ದಾರೆ.-ಡಾ.ಪ್ರಭಾಕರ ಕೋರೆ, ಕೆಎಲ್‍ಇ ಸಂಸ್ಥೆಯ ಕಾರ್ಯಾಧ್ಯಕ್ಷ, ಮಾಜಿ ಸಂಸದರು.