ಮಕ್ಕಳಿಗೆ, ಯುವಕರಿಗೆ ಕ್ರೀಡೆಯಲ್ಲಿ ಆಸಕ್ತಿ ಹೆಚ್ಚಲಿ: ರಾಜಶೇಖರ ಹಿಟ್ನಾಳ

KannadaprabhaNewsNetwork | Published : May 26, 2024 1:37 AM

ಸಾರಾಂಶ

ಮಕ್ಕಳಲ್ಲಿ, ಯುವಕರಲ್ಲಿ ಕ್ರೀಡೆ ಬಗ್ಗೆ ಆಸಕ್ತಿ ಬೆಳೆಯಬೇಕು.

ಕೊಪ್ಪಳ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಹೇಳಿಕೆ, ಬ್ಯಾಡ್ಮಿಂಟನ್ ಪಂದ್ಯಾವಳಿಗೆ ಚಾಲನೆಕನ್ನಡಪ್ರಭ ವಾರ್ತೆ ಕೊಪ್ಪಳ

ಮಕ್ಕಳಲ್ಲಿ, ಯುವಕರಲ್ಲಿ ಕ್ರೀಡೆ ಬಗ್ಗೆ ಆಸಕ್ತಿ ಬೆಳೆಯಬೇಕು. ಪಂದ್ಯಾವಳಿ ಆಯೋಜನೆಯಿಂದ ಕ್ರೀಡೆ ಬಗ್ಗೆ ಕುತೂಹಲ ಹಾಗೂ ಭಾಗಿಯಾಗುವ ಮನೋಭಾವ ಮೂಡುತ್ತದೆ ಎಂದು ಕೊಪ್ಪಳ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ಹಿಟ್ನಾಳ ಹೇಳಿದರು.

ನಗರದ ತಾಲೂಕು ಕ್ರೀಡಾಂಗಣದಲ್ಲಿ ಜಿಲ್ಲಾ ಬ್ಯಾಡ್ಮಿಂಟನ್ ಅಸೋಸಿಯೇಷನ್ ಹಾಗೂ ಬ್ಲೂಸ್ಟಾರ್ ಬಾಲ್ ಬ್ಯಾಡ್ಮಿಂಟನ್ ಅಸೋಸಿಯೇಷನ್ ಸಹಯೋಗದಲ್ಲಿ ಜರುಗಿದ ರಾಜ್ಯಮಟ್ಟದ ಪುರುಷರ ಬಾಲ್ ಬ್ಯಾಡ್ಮಿಂಟನ್ ಪಂದ್ಯಾವಳಿಗೆ ಚಾಲನೆ ನೀಡಿದ ಅವರು, ಕ್ರೀಡೆ ಬಗ್ಗೆ ಇತ್ತೀಚಿನ ದಿನಗಳಲ್ಲಿ ಆಸಕ್ತಿ ಕಡಿಮೆ ಆಗುತ್ತಿದೆ. ಪಂದ್ಯಾವಳಿಗಳ ಆಯೋಜನೆಯಿಂದ ಕ್ರೀಡೆ ಬಗ್ಗೆ ಹೆಚ್ಚು ಆಸಕ್ತಿ ಮೂಡಲು ಸಾಧ್ಯ. ಕಳೆದ 40 ವರ್ಷಗಳಿಂದ ಸಕ್ರಿಯವಾಗಿರುವ ಬ್ಯಾಡ್ಮಿಂಟನ್ ಅಸೋಸಿಯೇಷನ್‌ನಿಂದ ಕೊಪ್ಪಳದಲ್ಲಿ ಪಂದ್ಯಾವಳಿ ಆಯೋಜಿಸಿರುವುದರಿಂದ ಈ ಭಾಗದ ಯುವಕರಿಗೂ, ಮಕ್ಕಳಿಗೂ ಆಸಕ್ತಿ ಬೆಳೆಯುತ್ತದೆ ಎಂದರು.

ವಾಣಿಜ್ಯೋದ್ಯಮಿ ಶ್ರೀನಿವಾಸ ಗುಪ್ತಾ ಮಾತನಾಡಿ, ಕ್ರೀಡೆಗಳು ಮನುಷ್ಯನ ದೈಹಿಕ ಮತ್ತು ಮಾನಸಿಕ ಸದೃಡತೆಗೆ ಸಹಕಾರಿಯಾಗುತ್ತವೆ. ಈ ನಿಟ್ಟಿನಲ್ಲಿ ಬಾಲ್ ಬ್ಯಾಡ್ಮಿಂಟನ್ ಆಯೋಜನೆಯಿಂದ ಇಂತಹ ಕ್ರೀಡೆಗಳತ್ತ ಒಲವು ಬೆಳೆಯುತ್ತದೆ ಎಂದರು.

ಕ್ವಾರ್ಟರ್ ಫೈನಲ್ ಪ್ರವೇಶ:

ರಾಜ್ಯಮಟ್ಟದ ಪುರುಷರ ಬಾಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ 20 ತಂಡಗಳು ಭಾಗವಹಿಸಿದ್ದವು. ಎಂಟು ತಂಡಗಳು ಕ್ವಾರ್ಟರ್ ಫೈನಲ್ ಹಂತ ತಲುಪಿದ್ದು, ಚಿನ್ಮಯಿ ತಂಡದ ವಿರುದ್ಧ ತುಮಕೂರು ಗಾಂಧಿನಗರ, ವಿಜಯನಗರ ವಿರುದ್ಧ ಬನಶಂಕರಿ, ಸಹ್ಯಾದ್ರಿ ತಂಡದ ವಿರುದ್ಧ ಬಳ್ಳಾರಿ ಹಾಗೂ ಬೆಂಗಳೂರಿನ ಆರ್.ಆರ್. ನಗರ ವಿರುದ್ಧ ಕೊಪ್ಪಳದ ಬ್ಲೂ ಸ್ಟಾರ್ ತಂಡ ಸೆಣಸಲಿವೆ.

ಬಾಲ್ ಬ್ಯಾಡ್ಮಿಂಟನ್ ಅಸೋಸಿಯೇಷನ್ ಆಫ್ ಕರ್ನಾಟಕದ ರಾಜ್ಯಾಧ್ಯಕ್ಷ ರಾಘವೇಂದ್ರ ಪ್ರಸಾದ್, ಬ್ಲೂ ಸ್ಟಾರ್ ಬಾಲ್ ಬ್ಯಾಡ್ಮಿಂಟನ್ ಅಸೋಸಿಯೇಷನ್ ಜಿಲ್ಲಾಧ್ಯಕ್ಷ ಈಶ್ವರಪ್ಪ ಬೊಮ್ಮನಾಳ, ಬಾಲ್ ಬ್ಯಾಡ್ಮಿಂಟನ್ ಅಸೋಸಿಯೇಷನ್ ಜಿಲ್ಲಾಧ್ಯಕ್ಷ ಪ್ರಕಾಶ ಹೆಬ್ಬಾಳ, ಉಪಾಧ್ಯಕ್ಷ ಪ್ರಭು ನಿಡಶೇಸಿ, ಕಾರ್ಯದರ್ಶಿ ಸಿದ್ದು ಬುಳ್ಳಾ ಇನ್ನಿತರರಿದ್ದರು.

Share this article