ಸಂಡೂರು: ಸಾಧಕರಿಗೆ ಯಾವುದೂ ಕಠಿಣವಲ್ಲ. ವಿದ್ಯೆ ತ್ಯಾಗವನ್ನು ಬಯಸುತ್ತದೆ. ವಿದ್ಯೆ ಪಡೆಯಲು ಕೆಲ ಕಾಲ ಸುಖ, ಸೌಕರ್ಯಗಳನ್ನು ತ್ಯಾಗ ಮಾಡಬೇಕಾಗುತ್ತದೆ. ವಿದ್ಯೆಯಿಂದ ದೊಡ್ಡ ಗೌರವ ದೊರೆಯಲಿದೆ ಎಂದು ಬಿಕೆಜಿ ಗ್ಲೋಬಲ್ ಶಾಲೆಯ ಟ್ರಸ್ಟಿ ಬಿ. ನಾಗನಗೌಡ್ರು ಅಭಿಪ್ರಾಯಪಟ್ಟರು.
ಪಟ್ಟಣದ ಬಿಕೆಜಿ ಗ್ಲೋಬಲ್ ಶಾಲೆಯಲ್ಲಿ ಶನಿವಾರ ನಡೆದ ಸನ್ಮಾನ ಸಮಾರಂಭ ಕಾರ್ಯಕ್ರಮದಲ್ಲಿ ಇತ್ತೀಚೆಗೆ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ೬೨೫ಕ್ಕೆ ೬೨೫ ಅಂಕಗಳನ್ನು ಪಡೆದ ಬಾಗಲಕೋಟೆ ಜಿಲ್ಲೆಯ ಮೆಳ್ಳಿಗೇರಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಅಂಕಿತಾ ಬಸಪ್ಪ ಕೊಣ್ಣೂರ್ ಹಾಗೂ ಮತ್ತಿತರ ಸಾಧಕರನ್ನು ಬಿಕೆಜಿ ಕುಟುಂಬ ಹಾಗೂ ಬಿಕೆಜಿ ಸಮೂಹ ಸಂಸ್ಥೆಗಳ ವತಿಯಿಂದ ಸನ್ಮಾನಿಸಿ ಅವರು ಮಾತನಾಡಿದರು.ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.೧೦೦ರಷ್ಟು ಅಂಕ ಗಳಿಸಿ ರಾಜ್ಯಕ್ಕೆ ಪ್ರಥಮ ಸ್ಥಾನವನ್ನು ಪಡೆದ ಅಂಕಿತಾ ಬಸಪ್ಪ ಕೊಣ್ಣೂರು ಹಾಗೂ ಅದೇ ಊರಿನ ಇತರೆ ಉತ್ತಮ ಸಾಧಕರನ್ನು ಬಿಕೆಜಿ ಕುಟುಂಬ ಹಾಗೂ ಬಿಕೆಜಿ ಸಮೂಹ ಸಂಸ್ಥೆಗಳಿಂದ ಸನ್ಮಾನಿಸಲು ಹೆಮ್ಮೆ ಎನಿಸುತ್ತಿದೆ. ಈ ವಿದ್ಯಾರ್ಥಿಗಳು ಮುಂದಿನ ಹಂತಗಳಲ್ಲಿಯೂ ಉತ್ತಮ ಸಾಧನೆಯನ್ನು ಮುಂದುವರೆಸಿ, ನಾಡು ಹಾಗೂ ದೇಶದ ಕೀರ್ತಿಯನ್ನು ಹೆಚ್ಚಿಸುವಂತಾಗಲಿ ಎಂದು ಶುಭಹಾರೈಸಿದರು.
ಅಂಕಿತಾ ಬಸಪ್ಪ ಕೊಣ್ಣೂರು ಸನ್ಮಾನ ಸ್ವೀಕರಿಸಿ, ಬಿಕೆಜಿ ಸಂಸ್ಥೆಯವರು ಸನ್ಮಾನಿಸಿದ್ದು ಖುಷಿ ನೀಡಿದೆಯಲ್ಲದೆ, ಮುಂದಿನ ಹಂತಗಳಲ್ಲಿ ಇನ್ನೂ ಹೆಚ್ಚಿನ ಸಾಧನೆಗೆ ಉತ್ತೇಜನ ನೀಡಿದೆ. ಪಾಲಕರು ಹಾಗೂ ಶಿಕ್ಷಕರು ನೀಡಿದ ಪ್ರೋತ್ಸಾಹದಿಂದ ತಮಗೆ ಉತ್ತಮ ಸಾಧನೆ ಮಾಡಲು ಸಾಧ್ಯವಾಯಿತು. ಉತ್ತಮ ಸಾಧನೆಗೆ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಜೊತೆಗೆ ಕಠಿಣ ಪರಿಶ್ರಮ ಮುಖ್ಯವಾಗಿದೆ. ಹಾರ್ಡ್ ವರ್ಕ್ ಹಾಗೂ ಸ್ಮಾರ್ಟ್ ವರ್ಕ್ದಿಂದ ಉತ್ತಮ ಫಲಿತಾಂಶ ಸಾಧ್ಯವಾಗಿದೆ ಎಂದರು.ಸನ್ಮಾನ ಸ್ವೀಕರಿಸಿದ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ವಜ್ರಮಟ್ಟಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿನಿ ಸುಖನ್ಯಾ ಸಂತೋಷ್ ಪಾಟೀಲ್, ಭಾಗ್ಯಶ್ರೀ ಮಠಪತಿ ಹಾಗೂ ಜ್ಯೋತಿ ಗುರಯ್ಯ ಮಠಪತಿ ಮಾತನಾಡಿ, ಸತತ ಕಠಿಣ ಪರಿಶ್ರಮ ಸಾಧನೆಯ ರಹಸ್ಯವಾಗಿದೆ. ಅಸಾಧ್ಯ ಎಂಬ ಪದದಲ್ಲಿಯೇ ಸಾಧ್ಯ ಎಂಬ ಪದವಿದೆ. ಅ ಎಂಬ ಅಹಂಕಾರ, ಅಸೂಯೆ ತೆಗೆದು ಹಾಕಿ ಕಠಿಣ ಪರಿಶ್ರಮ ಪಟ್ಟರೆ, ಎಲ್ಲವೂ ಸಾಧ್ಯ ಎಂದರು.
ಪಾಲಕರು ಹಾಗೂ ಶಿಕ್ಷಕರ ಪ್ರೋತ್ಸಾಹದಿಂದ ತಾವು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಲು ಸಹಕಾರಿಯಾಗಿದೆ. ಶಿಕ್ಷಣ ವ್ಯಕ್ತಿತ್ವವನ್ನು ರೂಪಿಸುತ್ತದೆ. ಪ್ರತಿಯೊಬ್ಬರಿಗೆ ಜ್ಞಾನದೊಂದಿಗೆ ಸಂಸ್ಕಾರವೂ ಅಗತ್ಯವಾಗಿದೆ ಎಂದರಲ್ಲದೆ, ತಮ್ಮನ್ನು ಬಿಕೆಜಿ ಸಂಸ್ಥೆಯವರು ಸನ್ಮಾನಿಸಿದ್ದು ಹೆಚ್ಚು ಸಂತೋಷವನ್ನುಂಟು ಮಾಡಿದೆಯಲ್ಲದೆ, ಇನ್ನು ಮುಂದೆಯೂ ಉತ್ತಮ ಸಾಧನೆಗೆ ಪ್ರೇರಣೆ ನೀಡಿದೆ ಎಂದರು.ಉಪನ್ಯಾಸಕ ರವಿಕುಮಾರ್ ಸ್ವಾಗತಿಸಿ, ವಂದಿಸಿದರು. ಸನ್ಮಾನ ಕಾರ್ಯಕ್ರಮದಲ್ಲಿ ಬಿಕೆಜಿ ಗ್ಲೋಬಲ್ ಶಾಲೆಯ ಟ್ರಸ್ಟಿ ಬಿ.ಕೆ. ಬಸವರಾಜ, ಪ್ರಾಚಾರ್ಯ ಕೆ.ವಿ. ಮೋಹನ್ ರಾವ್, ಆಡಳಿತಾಧಿಕಾರಿ ಆರ್. ನಾಗರಾಜ್, ಸನ್ಮಾನಿತ ವಿದ್ಯಾರ್ಥಿಗಳ ಪಾಲಕರು, ಮುಖಂಡ ಮಹಾದೇವ ಇಂಗಳಗಿ, ಬಿಕೆಜಿ ಪಿಯು ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.