ನಾಳೆಯಿಂದ ಶ್ರೀ ದ್ಯಾಮವ್ವದೇವಿಯ ೬ನೇ ಜಾತ್ರಾ ಮಹೋತ್ಸವ

KannadaprabhaNewsNetwork | Published : Jan 21, 2024 1:33 AM

ಸಾರಾಂಶ

ಶಿರಹಟ್ಟಿ ನಗರದ ಗ್ರಾಮ ದೇವತೆ ಶ್ರೀ ದ್ಯಾಮವ್ವ ದೇವಿಯ ೬ನೇ ಜಾತ್ರಾ ಮಹೋತ್ಸವ ಜ. ೨೨ರಿಂದ ೨೫ರ ವರೆಗೆ ನಡೆಯಲಿದೆ. ಜ. ೨೨ರಂದು ಸಂಜೆ ೭.೪೫ ಗಂಟೆಯ ನಂತರ ಶ್ರೀ ದೇವಿಗೆ ನೆದರು ಬರೆಯುವ, ಪೂಜೆ ಮತ್ತು ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಜರುಗಲಿದೆ.

ಶಿರಹಟ್ಟಿ: ಶಿರಹಟ್ಟಿ ನಗರದ ಗ್ರಾಮ ದೇವತೆ ಶ್ರೀ ದ್ಯಾಮವ್ವ ದೇವಿಯ ೬ನೇ ಜಾತ್ರಾ ಮಹೋತ್ಸವ ಜ. ೨೨ರಿಂದ ೨೫ರ ವರೆಗೆ ನಡೆಯಲಿದೆ. ಜ. ೨೨ರಂದು ಸಂಜೆ ೭.೪೫ ಗಂಟೆಯ ನಂತರ ಶ್ರೀ ದೇವಿಗೆ ನೆದರು ಬರೆಯುವ, ಪೂಜೆ ಮತ್ತು ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಜರುಗಲಿದೆ.

ಜ.೨೩ರಂದು ಬೆಳಗ್ಗೆ ೬.೩೫ ಗಂಟೆಯಿಂದ ಸಾಯಂಕಾಲದ ವರೆಗೆ ಶ್ರೀ ದೇವಿಯ ೧ನೇ ದಿನದ ಗ್ರಾಮ ಸಂಚಾರ ನಡೆಯಲಿದೆ. ಅಂದು ಸಂಜೆ ೭.೩೦ ಗಂಟೆಗೆ ಶ್ರೀ ಗ್ರಾಮ ದೇವತೆ ದೇವಸ್ಥಾನ ಮುಂದಿನ ಭವ್ಯ ವೇದಿಕೆಯಲ್ಲಿ ಶ್ರೀ ಗ್ರಾಮದೇವತಾ ಮಿತ್ರ ಮಂಡಳಿ ಅರ್ಪಿಸುವ ಅದ್ಧೂರಿ ರಸಮಂಜರಿ ಕಾರ್ಯಕ್ರಮ ಜರುಗಲಿದೆ.

ಶಾಸಕ ಡಾ. ಚಂದ್ರು ಲಮಾಣಿ ಕಾರ್ಯಕ್ರಮ ಉದ್ಘಾಟನೆ ಮಾಡಲಿದ್ದಾರೆ. ಪಪಂ ಮಾಜಿ ಅಧ್ಯಕ್ಷ ನಾಗರಾಜ ಲಕ್ಕುಂಡಿ, ಡಾ. ಚಂದ್ರು ಲಮಾಣಿ ಅಭಿಮಾನಿ ಸ್ನೇಹಿತರು ಪಾಲ್ಗೊಳ್ಳಲಿದ್ದು, ಎಂ.ಕೆ. ಲಮಾಣಿ ನಿರೂಪಣೆ ಮಾಡಲಿದ್ದಾರೆ. ರಾತ್ರಿ ೯.೩೦ಕ್ಕೆ ಶ್ರೀ ದೇವಿಯು ವಾಸ್ತವ್ಯ ಮಾಡುವ ಚೌತಮನಿಕಟ್ಟಿ ಭಕ್ತಿಸುಧಾ ಹಾಗೂ ಕೋಲಾಟ ನಂತರ ೧೧.೪೫ ಕ್ಕೆ ಚೌಡಕಿ ಪದಗಳ ಕಾರ್ಯಕ್ರಮ ನಡೆಯಲಿವೆ.

ಜ.೨೪ ರಂದು ೬.೩೫ ಗಂಟೆಯಿಂದ ಸಾಯಂಕಾಲದ ವರೆಗೆ ಶ್ರೀ ದೇವಿಯ ೨ನೇ ದಿನದ ಗ್ರಾಮ ಸಂಚಾರ. ಅಂದು ಸಂಜೆ ೬.೩೦ ಗಂಟೆಗೆ ಶ್ರೀ ಗ್ರಾಮದೇವತೆ ದೇವಸ್ಥಾನ ಮುಂದಿನ ಭವ್ಯ ವೇದಿಕೆಯಲ್ಲಿ ಧರ್ಮಸಭೆ ನಡೆಯಲಿದೆ. ಹಾವೇರಿ ಜಿಲ್ಲೆ ಅಗಡಿ ಅಕ್ಕಿಮಠದ ಡಾ. ಗುರುಲಿಂಗಸ್ವಾಮೀಜಿ ಸಾನಿಧ್ಯ ವಹಿಸಲಿದ್ದು, ವರವಿ ಮೌನೇಶ್ವರ ಮಠದ ಶ್ರೀ ಮೌನೇಶ್ವರ ಮಹಾಸ್ವಾಮಿಗಳು ಉಪನ್ಯಾಸ ನೀಡಲಿದ್ದಾರೆ.

ಜಿಪಂ ಮಾಜಿ ಅಧ್ಯಕ್ಷೆ ಸುಜಾತಾ ದೊಡ್ಡಮನಿ, ಡಿ.ಎನ್. ಡಬಾಲಿ, ವಿಶ್ವನಾಥ ಕಪ್ಪತ್ತನವರ, ಸಿ.ಸಿ. ನೂರಶೆಟ್ಟರ, ಹುಮಾಯೂನ ಮಾಗಡಿ, ಅಬ್ದುಲಗನಿ ಹಾಜಿಸಾಬ ಕುಬುಸದ, ಬಸವಣ್ಣೆಪ್ಪ ತುಳಿ, ಯಲ್ಲಪ್ಪಗೌಡ ಅಣ್ಣಿಗೇರಿ, ನಿಂಗಪ್ಪ ಕರಿಗಾರ, ಪ್ರಕಾಶ ನರಗುಂದೆ, ಗಣಪತಿರಾವ ಶೇಳಕೆ, ಉಡಚಪ್ಪ ನೀಲಣ್ಣವರ, ವೀರಪ್ಪ ಬಾಳಿಕಾಯಿ, ಶಂಕ್ರಪ್ಪ ಕಾಳಗಿ, ರುದ್ರಪ್ಪ ಕರಮುಡಿ ಆಗಮಿಸಲಿದ್ದು, ಜಿ.ಬಿ. ಹೆಸರೂರ ನಿರೂಪಣೆ ಮಾಡಲಿದ್ದಾರೆ. ಚೌತಮನಿಕಟ್ಟಿ ಹತ್ತಿರ ರಾತ್ರಿ ೧೧.೪೫ಕ್ಕೆ ಡೊಳ್ಳಿನ ಪದಗಳು ನಡೆಯಲಿವೆ.

ಜ.೨೫ರಂದು (ಬನದ ಹುಣ್ಣಿಮೆ) ಮುಂ ೬ ಗಂಟೆಗೆ ಶ್ರೀ ದೇವಿಗೆ ಉಡಿ ತುಂಬುವುದು. ಬೆಳಗ್ಗೆ ೬.೧೫ ಗಂಟೆಗೆ ಶ್ರೀದುರ್ಗಾ ಹೋಮ ಮತ್ತು ಬೆಳಗ್ಗೆ ೭ ಗಂಟೆಗೆ ವೀರಗಾಸೆ ತಂಡದ ಸೇವೆ. ನಂತರ ಸಕಲ ವಾದ್ಯ ವೈಭವಗಳೊಂದಿಗೆ ಮೆರವಣಿಗೆ ಮುಖಾಂತರ ಚೌತಮನೆ ಕಟ್ಟಿಯಿಂದ ಶ್ರೀದೇವಿಯು ದೇವಸ್ಥಾನಕ್ಕೆ ಕರೆತರುವುದು. ಮಧ್ಯಾಹ್ನ ೧ ಗಂಟೆಗೆ ಮಹಾ ಅನ್ನಸಂತರ್ಪಣೆ. ಸಂಜೆ ೫.೩೦ಕ್ಕೆ ಶ್ರೀದೇವಿಯು ಗುಡಿ ತುಂಬಿಸುವುದು ಹಾಗೂ ಮಹಾ ಮಂಗಳಾರತಿ ನಡೆಯಲಿದೆ.

ಜ.೨೫ರಂದು ಸಂಜೆ ೭ ಘಂಟೆಗೆ ಶ್ರೀಗ್ರಾಮದೇವತೆ ದೇವಸ್ಥಾನ ಮುಂದಿನ ಭವ್ಯ ವೇದಿಕೆಯಲ್ಲಿ ಕೃತಜ್ಞತಾ ಸಮರ್ಪಣಾ ಸಭೆ ನಡೆಯಲಿದೆ. ವರ್ತಕರ ಸಂಘದ ಅಧ್ಯಕ್ಷ ಸೂರ್ಯಕಾಂತ ಕಪ್ಪತ್ತನವರ ಅಧ್ಯಕ್ಷತೆ ವಹಿಸಲಿದ್ದು, ನಿವೃತ್ತ ಶಿಕ್ಷಕ ಆರ್.ಬಿ. ಕಮತ ಹಾಗೂ ಪಟ್ಟಣ ಪಂಚಾಯತ ಸರ್ವ ಸದಸ್ಯರು ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ. ಎನ್.ಆರ್. ಕುಲಕರ್ಣಿ ಕೃತಜ್ಞತೆ ಸಮರ್ಪಣೆ ನಡೆಸಿಕೊಡಲಿದ್ದಾರೆ. ಎಂ.ಕೆ. ಲಮಾಣಿ ನಿರೂಪಣೆ ಮಾಡಲಿದ್ದಾರೆ.

ರಾತ್ರಿ ೮ ಗಂಟೆಗೆ ಕೀರ್ತನೆ ಶ್ರೀ ಮಹಿಷಮರ್ಧಿನಿ ಶ್ರೀ ಡಾ. ಪಂ. ಪುಟ್ಟರಾಜ ಕವಿಶಿವಯೋಗಿಗಳವರ ಶಿಷ್ಯರಾದ ವೇ. ಶ್ರೀ ಆರ್. ಶರಣಬಸವ ಶಾಸ್ತ್ರಿಗಳು ಇಲಕಲ್ಲ ಹಾಗೂ ಸಂಗಡಿಗರಿಂದ ನಡೆಯಲಿದೆ ಎಂದು ಜಾತ್ರಾ ಕಮಿಟಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share this article