ಕನ್ನಡಪ್ರಭ ವಾರ್ತೆ ಕಲಬುರಗಿ
ಇಲ್ಲಿನ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾನಿಲಯದ ಏಳನೇ ವಾರ್ಷಿಕ ಘಟಿಕೋತ್ಸವವು ಫೆ.೨೩ರಂದು ನಡೆಯಲಿದ್ದು, ಈ ಘಟಿಕೋತ್ಸವ ಸಮಾರಂಭವು ಅತ್ಯುತ್ತಮ ಶೈಕ್ಷಣಿಕ ಸಾಧನೆ, ಶ್ಲಾಘನೀಯ ಸಂಶೋಧನಾ ಪ್ರಯತ್ನ ಮತ್ತು ಸಮಾಜಕ್ಕೆ ಶೈಕ್ಷಣೀಕ ಗಮನಾರ್ಹ ಕೊಡುಗೆಗಳನ್ನು ಗುರುತಿಸಲು ವೇದಿಕೆಯನ್ನು ಒದಗಿಸುತ್ತದೆ. ಈ ಭವ್ಯ ಸಮಾರಂಭವು ವಿಶ್ವವಿದ್ಯಾನಿಲಯ ಮತ್ತು ಅದರ ಪದವೀಧರ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಯಾಣದಲ್ಲಿ ಮಹತ್ವದ ಮೈಲಿಗಲ್ಲಾಗಲಿದೆ.ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಅವರ ನಾಯಕತ್ವದಲ್ಲಿ, ಸಿಯುಕೆ ಗುಣಮಟ್ಟದ ಬೋಧನೆ, ಸಂಶೋಧನೆ, ನಾವೀನ್ಯತೆ, ಶೈಕ್ಷಣಿಕ ಉತ್ಕೃಷ್ಟತೆ ಮತ್ತು ಸಮಗ್ರ ಅಭಿವೃದ್ಧಿಗೆ ಸಮರ್ಪಣೆಯೊಂದಿಗೆ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ. ವಾರ್ಷಿಕ ಘಟಿಕೋತ್ಸವ ಸಮಾರಂಭವು ಸಿಯುಕೆಯ ವಿದ್ಯಾರ್ಥಿಗಳು, ಅಧ್ಯಾಪಕರು ಮತ್ತು ಬೋಧಕೇತರ ಸಿಬ್ಬಂದಿ ಮಾಡಿದ ದಣಿವರಿಯದ ಶೈಕ್ಷಣಿಕ ಪ್ರಯತ್ನಗಳು ಮತ್ತು ಸಮರ್ಪಣೆಯನ್ನು ಅನಾವರಣಗೊಳಿಸಲಿದೆ.
ಲೋಕಾಯುಕ್ತರ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್ ಅವರು, ಘಟಿಕೋತ್ಸವ ಭಾಷಣ ಮಾಡಲಿದ್ದಾರೆ. ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಾಧಿಪತಿ ವಿಜಯ್ ಕೇಶವ ಗೋಖಲೆ ಸಮಾರಂಭದ ಅಧ್ಯಕ್ಷತೆ ವಹಿಸುವರು. ಸಿಯುಕೆ ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ಅವರು ಉಪಸ್ಥಿತಿ ವಹಿಸಲಿದ್ದಾರೆ.ಯುಜಿಸಿ ನಿಯಮಾವಳಿ ಮತ್ತು ಸಿಯುಕೆಯ ನಿಯಮಾವಳಿ ನಂ.೫೪ (೯) ಮತ್ತು ನಂ.೫೩ (೧೦) ಪ್ರಕಾರ ಪಿಎಚ್ಡಿ ಮತ್ತು ಎಂಫಿಲ್ ಪದವಿಗಳನ್ನು ನೀಡಲಾಗುತ್ತದೆ. ವಿಶ್ವವಿದ್ಯಾನಿಲಯವು ನೀಡುವ ಆಯಾ ಯುಜಿ ಮತ್ತು ಪಿಜಿ ಪದವಿಗಳಲ್ಲಿ ಹೆಚ್ಚಿನ ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳಿಗೆ ಚಿನ್ನದ ಪದಕಗಳನ್ನು ನೀಡಲಾಗುತ್ತದೆ.
ಈ ಘಟಿಕೋತ್ಸವದಲ್ಲಿ ಡಿಸೆಂಬರ್ ೨೦೨೨ರಂದು ಅಥವಾ ಅದಕ್ಕೂ ಮೊದಲು ಅರ್ಹತೆ ಪಡೆದಿರುವ ಸ್ನಾತಕ, ಸ್ನಾತಕೋತ್ತರ ಪದವಿಗಳು, ಹಾಗೆಯೇ ಪಿಎಚ್ಡಿ ಮತ್ತು ಎಂಫಿಲ್ ಪದವಿಗಳನ್ನು ಪಡೆದ ವಿದ್ಯಾರ್ಥಿಗಳು ತಮ್ಮ ಪದವಿಗಳನ್ನು ಪಡೆಯಲು ಅರ್ಹರಾಗಿರುತ್ತಾರೆ. ವಿಶ್ವವಿದ್ಯಾನಿಲಯವು ಅರ್ಹ ವಿದ್ಯಾರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿತ್ತು. ಒಟ್ಟು ೬೯೬ ಅಭ್ಯರ್ಥಿಗಳು ತಮ್ಮ ಪದವಿಗಳನ್ನು ಸ್ವೀಕರಿಸಲು ನೋಂದಾಯಿಸಿಕೊಂಡಿದ್ದಾರೆ. ಅದರಲ್ಲಿ ೨೯೬ ಅಭ್ಯರ್ಥಿಗಳು ಸ್ನಾತಕ ಪದವಿಗಳನ್ನು ಪಡೆಯುತ್ತಿದ್ದಾರೆ; ೩೪೭ ವಿದ್ಯಾರ್ಥಿಗಳು ಸ್ನಾತಕೋತ್ತರ ಪದವಿಗಳನ್ನು ಪಡೆಯುತ್ತಿದ್ದಾರೆ; ೪ ಅಭ್ಯರ್ಥಿಗಳು ಎಂ ಫಿಲ್ ಪದವಿಗಳನ್ನು ಪಡೆಯುತ್ತಿದ್ದಾರೆ ಮತ್ತು ೪೯ ವಿದ್ಯಾರ್ಥಿಗಳು ಪಿಎಚ್‌ಡಿ ಪದವಿಯನ್ನು ಪಡೆಯುತ್ತಿದ್ದಾರೆ.ಶೈಕ್ಷಣಿಕ ಉತ್ಕೃಷ್ಟತೆಯನ್ನು ಉತ್ತೇಜಿಸಲು ಮತ್ತು ವಿದ್ಯಾರ್ಥಿ ಶೈಕ್ಷಣಿಕ ಸಾಧನೆಗಳನ್ನು ಗುರುತಿಸಲು ವಿಶ್ವವಿದ್ಯಾಲಯವು ಚಿನ್ನದ ಪದಕಗಳನ್ನು ನೀಡುತ್ತಿದೆ. ಈ ಚಿನ್ನದ ಪದಕಗಳು ತಮ್ಮ ಶೈಕ್ಷಣಿಕ ಜೀವನದುದ್ದಕ್ಕೂ ಅರ್ಹ ವಿದ್ಯಾರ್ಥಿಗಳು ಮಾಡಿದ ಗಮನಾರ್ಹ ಸಾಧನೆಗಳು ಮತ್ತು ಕೊಡುಗೆಗಳ ಪ್ರತಿಬಿಂಬವಾಗುತ್ತವೆ.
ಈ ಘಟಿಕೋತ್ಸವದಲ್ಲಿ ವಿಶ್ವವಿದ್ಯಾಲಯವು ೪೨ ಚಿನ್ನದ ಪದಕಗಳನ್ನು ನೀಡುತ್ತಿದ್ದು, ಇವುಗಳಲ್ಲಿ ೨೯ ಚಿನ್ನದ ಪದಕಗಳನ್ನು ಸ್ನಾತಕೋತ್ತರ ವಿದ್ಯಾರ್ಥಿಗಳು, ೧೨ ಸ್ನಾತಕ ವಿದ್ಯಾರ್ಥಿಗಳು ಮತ್ತು ಮಾಹಿತಿ ಮತ್ತು ಸಂವಹನ ತಂತ್ರಜ್ಞಾನದಲ್ಲಿ ಎಂಟೆಕ್‌ನಲ್ಲಿ ಅತಿ ಹೆಚ್ಚು ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗೆ ಒಂದು ಪ್ರೊ. . ಎ.ಎಂ. ಪಠಾಣ್ ಚಿನ್ನದ ಪದಕ ನೀಡಲಾಗುತ್ತದೆ.