ಗದಗ: ನಗರದ ವೀರೇಶ್ವರ ಪುಣ್ಯಾಶ್ರಮದಲ್ಲಿ ಡಾ. ಪಂ. ಪುಟ್ಟರಾಜ ಗವಾಯಿಗಳ ಜಯಂತ್ಯುತ್ಸವ ಪ್ರಯುಕ್ತ ಮಾ. 3ರಂದು ದಿ. ಕೆ.ಎಚ್. ಪಾಟೀಲ ಅಭಿಮಾನಿ ಬಳಗದಿಂದ ಸರ್ವಧರ್ಮ ಸಾಮೂಹಿಕ ವಿವಾಹ ಹಮ್ಮಿಕೊಳ್ಳಲಾಗಿದೆ ಎಂದು ಕೆ.ಎಚ್. ಪಾಟೀಲ ಅಭಿಮಾನಿ ಬಳಗದ ಅಧ್ಯಕ್ಷ ಪೀರಸಾಬ ಕೌತಾಳ ತಿಳಿಸಿದರು.
ಮಾ. 2ರಂದು ಬರುವ ಭಕ್ತರಿಗೆ ವಸತಿ ಹಾಗೂ ಪ್ರಸಾದ ವ್ಯವಸ್ಥೆ ಮಾಡಲಾಗಿದೆ. ಜಯಂತ್ಯುತ್ಸವದ ದಿನ ಬೆಳಗ್ಗೆ 9ಕ್ಕೆ ನಗರದಲ್ಲಿ 1012 ಕುಂಭೋತ್ಸವ ನಡೆಯಲಿದ್ದು, ಸಕಲ ವಾದ್ಯಗಳೊಂದಿಗೆ ಮೆರವಣಿಗೆ ಮಾಡಲಾಗುತ್ತದೆ. ಮಧ್ಯಾಹ್ನ 12ಕ್ಕೆ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯಲಿವೆ ಎಂದರು.
ಸಾನ್ನಿಧ್ಯವನ್ನು ಜ.ಡಾ. ತೋಂಟದ ಸಿದ್ಧರಾಮ ಸ್ವಾಮೀಜಿ, ಅಭಿನವ ಕಾಡಸಿದ್ದೇಶ್ವರ ಸ್ವಾಮೀಜಿ, ಶಿವಕುಮಾರ ಸ್ವಾಮೀಜಿ, ಶಿವಶಾಂತವೀರ ಶರಣರು, ಅಭಿನವ ಪಂಚಾಕ್ಷರ ಶಿವಾಚಾರ್ಯ ಸ್ವಾಮೀಜಿ, ಫಕ್ಕೀರೇಶ್ವರ ಶಿವಾಚಾರ್ಯ ಸ್ವಾಮೀಜಿ, ಡಾ. ಕಲ್ಲಯ್ಯಜ್ಜನವರು, ನೀಲಮ್ಮ ತಾಯಿ ಅಸುಂಡಿ, ಉಜ್ಜಯಿನಿ ನಂದೀಶ್ವರಿ ಅಮ್ಮನವರು, ಮೌಲಾನಾ ಇನಾಯತವುಲ್ಲ ಫೀರಜಾದೆ ವಹಿಸುತ್ತಾರೆ ಎಂದರು.ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ. ಪಾಟೀಲ ಅಧ್ಯಕ್ಷತೆ ವಹಿಸುವರು. ಮಾಜಿ ಶಾಸಕ ಡಿ.ಆರ್. ಪಾಟೀಲ ಕಾರ್ಯಕ್ರಮ ಉದ್ಘಾಟಿಸುವರು. ಆನಂದಸ್ವಾಮಿ ಗಡ್ಡದೇವರಮಠ, ಸಿ.ಎನ್. ಶ್ರೀಧರ್, ನಂದಾ ಹಣಬರಟ್ಟಿ, ಶೇಖಣ್ಣ ಗದ್ದಿಕೇರಿ, ಡಾ. ಬಸವರಾಜ ಬಳ್ಳಾರಿ, ರಘೋತ್ತಮ ಕೊಪ್ಪರ ಸೇರಿದಂತೆ ಇತರರು ಭಾಗವಹಿಸುತ್ತಾರೆ ಎಂದರು.
ಗದಗ: ಇಲ್ಲಿಯ ಮುಳುಗುಂದ ನಾಕಾದ ಹತ್ತಿರದ ಅಡವೀಂದ್ರ ಸ್ವಾಮಿ ಮಠದಲ್ಲಿ 345ನೇ ಮಾಸಿಕ ಶಿವಾನುಭವ ಕಾರ್ಯಕ್ರಮ ಮಾ. 2ರಂದು ಸಂಜೆ 6.30ಕ್ಕೆ ಜರುಗಲಿದೆ.ಶಿವಾನುಭವ ಕಾರ್ಯಕ್ರಮದಲ್ಲಿ ಹೋಳಿ ಹುಣ್ಣಿಮೆ ಪ್ರಯುಕ್ತ ಹೋಳಿ ಸಂಭ್ರಮ, ಹೋಳಿ ಹಾಡು- ಸಂಪ್ರದಾಯ ಹಾಗೂ ಆಚರಣೆ ಕುರಿತು ಪ್ರಾತ್ಯಕ್ಷಿಕೆ ಉಪನ್ಯಾಸ ಮತ್ತು ರೇಣುಕಾಚಾರ್ಯ ಜಯಂತಿ ಹಾಗೂ ಲಿಂ. ತ್ರಿಭಾಷಾ ಕವಿ ಡಾ. ಪಂ. ಪುಟ್ಟರಾಜ ಗವಾಯಿಗಳ ಜಯಂತಿ ಕಾರ್ಯಕ್ರಮಗಳು ನಡೆಯಲಿವೆ.
ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಹುಬ್ಬಳ್ಳಿಯ ಡಾ. ರಾಮು ಮೂಲಗಿ ಅವರು ಹೋಳಿ ಸಂಭ್ರಮ ಎಂಬ ಜನಪದ ಕಾರ್ಯಕ್ರಮವನ್ನು ಪ್ರಾತ್ಯಕ್ಷಿಕೆಯ ಮೂಲಕ ನೀಡಲಿದ್ದಾರೆ. ಈ ಸಂದರ್ಭದಲ್ಲಿ ಇತ್ತೀಚೆಗೆ ಸೇವೆಯಿಂದ ನಿವೃತ್ತರಾದ ರಾಮಪ್ಪ ಕಾಶಪ್ಪನವರ ಅವರಿಗೆ ಸನ್ಮಾನ ಜರುಗಲಿದೆ.
ಶಿವಾನುಭವ ಸಮಿತಿಯ ಪ್ರಧಾನ ಕಾರ್ಯದರ್ಶಿ ಪ್ರಭುಗೌಡ ಪಾಟೀಲ, ಗುರಪ್ಪ ನಿಡಗುಂದಿ, ಸಿದ್ದಣ್ಣ ಜವಳಿ ಉಪಸ್ಥಿತರಿರುವರು ಎಂದು ಪ್ರಕಟಣೆ ತಿಳಿಸಿದೆ.