ನಾಳೆ ಮುಳಗುಂದದ ಬಾಲಲೀಲಾ ಮಹಾಂತ ಶಿವಯೋಗಿಗಳ ಜಾತ್ರೆ

KannadaprabhaNewsNetwork |  
Published : Jan 30, 2026, 02:00 AM IST
ಮುಳಗುಂದ ಬಾಲಲೀಲಾ ಮಹಾಂತ ಶಿವಯೋಗಿಗಳು | Kannada Prabha

ಸಾರಾಂಶ

ಜಾತ್ರಾ ಮಹೋತ್ಸವದಂಗವಾಗಿ ಕಲಾವಿದರಿಂದ ವಚನ ಸಂಗೀತ, ನಾಟಕ, 3 ದಿನಗಳ ಕಾಲ ಉಪನ್ಯಾಸ, ಸ್ಥಳೀಯ ಶಾಲಾ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ನಾಡಿನ ಹೆಸರಾಂತ ಕಲಾವಿದರಿಂದ ಮನರಂಜನಾ, ರಸಮಂಜರಿ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ.

ಮುಳಗುಂದ: ನಾಡಿನ ಉಜ್ವಲ ಪರಂಪರೆಯಲ್ಲಿ 19ನೇ ಶತಮಾನದ ಬಾಲಲೀಲಾ ಮಹಾಂತ ಶಿವಯೋಗಿಗಳು ಮರೆಯಲಾಗದ ಮಹಾನುಭಾವರು. ಮುಳಗುಂದವನ್ನು ಪುಣ್ಯಕ್ಷೇತ್ರವನ್ನಾಗಿಸಿದ ಮಹಾತ್ಮರ 167ನೇ ಸ್ಮರಣೋತ್ಸವ ನೆನಪಿನಲ್ಲಿ ಜಾತ್ರಾ ಮಹೋತ್ಸವದ ಅಂಗವಾಗಿ ಮಹಾ ರಥೋತ್ಸವ ಜ. 31ರಂದು ಸಂಜೆ 5ಕ್ಕೆ ಮಲ್ಲಿಕಾರ್ಜುನ ಸ್ವಾಮಿಗಳ ಸಮ್ಮುಖದಲ್ಲಿ ಸಕಲವಾದ್ಯ ವೈಭವಗಳೊಂದಿಗೆ ಜರುಗಲಿದೆ.ಜಾತ್ರಾ ಮಹೋತ್ಸವದಂಗವಾಗಿ ಕಲಾವಿದರಿಂದ ವಚನ ಸಂಗೀತ, ನಾಟಕ, 3 ದಿನಗಳ ಕಾಲ ಉಪನ್ಯಾಸ, ಸ್ಥಳೀಯ ಶಾಲಾ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ನಾಡಿನ ಹೆಸರಾಂತ ಕಲಾವಿದರಿಂದ ಮನರಂಜನಾ, ರಸಮಂಜರಿ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ.ಭಕ್ತರಿಗೆ ಅನ್ನಸಂತರ್ಪಣೆ ಹಾಗೂ ಭಕ್ತರಿಂದ ಸಂಗ್ರಹಿಸಿದ ರೊಟ್ಟಿ ಜಾತ್ರೆ ಕೂಡ ನಡೆಯಲಿದೆ. ಶ್ರೀಮಠವು ವಿಶೇಷ ವಿದ್ಯುತ್ ದೀಪಾಲಂಕಾರ ಹಾಗೂ ಫಲಪುಷ್ಪದ ಅಲಂಕಾರದಿಂದ ಕಂಗೊಳಿಸುತ್ತಿದೆ.ಹಿನ್ನೆಲೆ: ಬಾಲಲೀಲಾ ಮಹಾಂತ ಶಿವಯೋಗಿಗಳು 1823ರಿಂದ 1859ರ ವರೆಗೆ ಬದುಕು ಸವೆಸಿ ನಾಡಿನ ಮನೆ ಮಾತಾಗಿದ್ದರು. ಅನುಭಾವದ ನುಡಿಯಿಂದ ಸಾಹಿತ್ಯ ಬೆಳೆಸಿದ ಖ್ಯಾತಿ ಅವರಿಗೆ ಸಲ್ಲುತ್ತದೆ. ಶಿವಯೋಗಿಗಳು ಜನಿಸಿದ್ದು ವಿಜಯಪುರ ಜಿಲ್ಲೆಯ ಯರನಾಳದಲ್ಲಿ. ತಂದೆ- ತಾಯಿಗಳ ಅಕಾಲ ಮರಣದಿಂದ ಮಗುವಿನ ಪಾಲನೆ- ಪೋಷಣೆಯನ್ನು ಆಲಮಟ್ಟಿಯ ಚೆನ್ನಮಲ್ಲಿಕಾರ್ಜುನ ಹಾಗೂ ಅನ್ನಪೂರ್ಣಾಂಬೆ ದಂಪತಿ ಮಾಡಿದರು. ಶಿವಯೋಗಿಗಳು ತಮ್ಮ 8ನೇ ವಯಸ್ಸಿನಲ್ಲಿ ಒಂದು ದಿನ ರಾತ್ರಿ ಸಮಯದಲ್ಲಿ ಎದ್ದು ದೇಶ ಪರ್ಯಟನೆಗೆ ಹೊರಟು ಮಹಾಂತಲಿಂಗ ದೇಶಿಕವರೇಣ್ಯ ಗುರುವಿನಲ್ಲಿ ವಿದ್ಯೆ ಪಡೆದರು. ಆನಂತರ ಮುಳಗುಂದಕ್ಕೆ ಬಂದು ನೆಲೆಸಿದರು.ಒಡೆಯರ್‌ ರೋಗವಾಸಿ: ಮೈಸೂರಿನ ಮುಮ್ಮಡಿ ಕೃಷ್ಣರಾಜ ಒಡೆಯರ ಅವರು ವಾಸಿಯಾಗಲಾರದ ಕಾಯಿಲೆಯಿಂದ ಬಳಲುತ್ತಿದ್ದರು. ಆಗ ದೇಶ ಸಂಚಾರದಲ್ಲಿದ್ದ ಶಿವಯೋಗಿಗಳು ತಮ್ಮ ತೀರ್ಥ ಪ್ರಸಾದ ನೀಡಿ ಒಡೆಯರ ರೋಗವನ್ನು ವಾಸಿ ಮಾಡಿದ್ದರು. ಆಗ ಮಹಾರಾಜ ಶ್ರೀಗಳಿಗೆ ಸಕಲ ಮರ್ಯಾದೆಗಳಿಂದ ಸತ್ಕರಿಸಲು ಬಂದಾಗ ಅದನ್ನು ತಿರಸ್ಕರಿಸಿ ಬರೀ ಕುಂಬಳ ಸೊರಟೆ(ಬುರುಡೆ)ಯನ್ನು ಕೇಳಿ ಪಡೆದುಕೊಂಡರು. ಅದು ಇಂದಿಗೂ ಶ್ರೀಮಠದಲ್ಲಿ ನೋಡಲು ಸಿಗುತ್ತದೆ.ಶಿವಶರಣೆ ಪಟ್ಟಣದ ಫಿರಂಗಿ ಬಸವಾಂಬೆ ತನ್ನ ಮಕ್ಕಳು ಆಕಾಲಿಕ ಮರಣಕ್ಕೆ ತುತ್ತಾದಾಗ ಅವಳಿಗೆ ಸಾಂತ್ವನ ಹೇಳಿ, ತಾವೇ ಮಗುವಾಗಿ ಅವಳ ತೊಡೆಯ ಮೇಲಾಡಿದರು. ಅದರ ಪ್ರತೀಕವಾಗಿಯೇ ಇಂದಿಗೂ ಜಾತ್ರೆಯ ಮೊದಲ ದಿನ ಶಿವಯೋಗಿಗಳ ಭಾವಚಿತ್ರವನ್ನು ತೊಟ್ಟಲಲ್ಲಿ ಹಾಕಿ ಮೆರವಣಿಗೆ ನಡೆಸಲಾಗುತ್ತದೆ. ಹೀಗೆ ಅನೇಕ ಪವಾಡಗಳನ್ನು ಮಾಡಿದ ಲೀಲಾ ಮಹಿಮರು, ಅನುಭಾವದ ಪ್ರತೀಕವಾಗಿ ಸಾಹಿತ್ಯ ಲೋಕದಲ್ಲಿ ಜನಜನಿತವಾದ ಕೈವಲ್ಯ ದರ್ಪಣ ಎಂಬ ಅಮೂಲ್ಯ ಗ್ರಂಥ ಬರೆದಿದ್ದಾರೆ.

ಗವಿಮಠ: ಶ್ರೀಮಠದ ಪರಂಪರೆಯನ್ನು ಮುದಿಮಹಾಂತಸ್ವಾಮಿಗಳು, ಬಸವಲಿಂಗ ಸ್ವಾಮಿಗಳು, ಶಿವಲಿಂಗ ಸ್ವಾಮಿಗಳು, ಮುಂದುವರಿಸಿಕೊಂಡು ಬಂದರು. 1918ರಲ್ಲಿ ಗವಿಮಠಕ್ಕೆ ಕಾಯಕಲ್ಪ ನೀಡಿ ಮರುಜೀವ ತುಂಬಿ ಅದನ್ನು ಉತ್ತರೋತ್ತರವಾಗಿ ಬೆಳೆಸಿ ಮಹಾಂತ ಶಿವಯೋಗಿ ಶಿಕ್ಷಣ ಸಂಸ್ಥೆಯನ್ನು ಹುಟ್ಟುಹಾಕಿ ಅದರ ಕೀರ್ತಿಯನ್ನು ಉತ್ತುಂಗಕ್ಕೇರಿಸಿದವರು ಧಾರವಾಡ ಮುರುಘಾಮಠದ ಮೃತ್ಯುಂಜಯಪ್ಪಗಳು.1973ರಲ್ಲಿ ಗವಿಮಠಾಧ್ಯಕ್ಷರಾಗಿ ಬಂದ ಮಲ್ಲಿಕಾರ್ಜುನ ಸ್ವಾಮಿಗಳು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ದುು ಬೆಳೆಸಿದರು. ಶರಣ ಧರ್ಮ ತತ್ವಗಳ ಪ್ರಸಾರಕ್ಕಾಗಿ ಗ್ರಂಥಮಾಲೆ, ಶರಣ ಸಂಸ್ಕೃತಿಯ ಪ್ರಸಾರಕ್ಕೆ ಪುರಾಣ- ಪ್ರವಚನ- ಉಪನ್ಯಾಸ- ಸಂಗೀತ- ವಚನ ನೃತ್ಯ-ಸಮಾಜ ಸೇವಾಕರ್ತರಿಗೆ ಸನ್ಮಾನ ಇತ್ಯಾದಿಗಳನ್ನು ಜಾತ್ರಾ ನೆಪದಲ್ಲಿ ಮಾಡಿ ಶ್ರೀಮಠದ ಕೀರ್ತಿಯನ್ನು ನಾಡಿನಲ್ಲೆಲ್ಲಾ ಹಬ್ಬುವಂತೆ ಮಾಡಿದರು. ಅಲ್ಲದೆ ಹಳೆಯದಾದ ಗವಿಮಠವನ್ನು ಭಕ್ತರೊಂದಿಗೆ ಮೂರ್ನಾಲ್ಕು ಕೋಟಿ ಹಣ ಸಂಗ್ರಹಿಸಿ ಜೀರ್ಣೋದ್ಧಾರ ಮಾಡಿ ಭವ್ಯವಾದ ನೂತನ ಮಠವನ್ನು ನಿರ್ಮಿಸಿದ್ದಾರೆ.ರೊಟ್ಟಿ ಜಾತ್ರೆ: ಬಾಲಲೀಲಾ ಮಹಾಂತ ಶಿವಯೋಗಿಗಳ ಜಾತ್ರಾ ಮಹೋತ್ಸವ ವರ್ಷದಿಂದ ವರ್ಷಕ್ಕೆ ಅದ್ಧೂರಿ, ಅರ್ಥಪೂರ್ಣವಾಗಿ ಜಾತ್ರಾ ಸಮಿತಿ ಹಾಗೂ ಭಕ್ತಾದಿಗಳ ಸಹಕಾರದಲ್ಲಿ ಸಡಗರ, ಸಂಭ್ರಮದಿಂದ ಆಚರಿಸಲಾಗುತ್ತಿದ್ದು, ಭಕ್ತರಿಗೆ ಮಹಾದಾಸೋಹ ಹಾಗೂ ರೊಟ್ಟಿ ಜಾತ್ರೆ ಕೂಡ ನಡೆಯಲಿದೆ ಎಂದು ರೈತ ಸಂಘದ ಅಧ್ಯಕ್ಷರಾದ ದೇವರಾಜ ಸಂಗನಪೇಟಿ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎತ್ತಿನಹೊಳೆ ಗುತ್ತಿಗೇಲಿ ಹಲವು ಲೋಪ : ಸಿಎಜಿ
40 ವರ್ಷ ವಯಸ್ಸಾದರೂ ಸಿಗುತ್ತದೆ ಸರ್ಕಾರಿ ಕೆಲಸ