ನಾಳೆ ಐತಿಹಾಸಿಕ ಮಾಗಡಿ ಅಂಬೇಡ್ಕರ್ ಹಬ್ಬ

KannadaprabhaNewsNetwork | Published : Jan 4, 2024 1:45 AM

ಸಾರಾಂಶ

ಐತಿಹಾಸಿಕ ದಿನಕ್ಕೆ ಮಾಗಡಿ ಸಾಕ್ಷಿಯಾಗಲಿದ್ದು, ಮಾಗಡಿ ಅಂಬೇಡ್ಕರ್ ಹಬ್ಬ ಜ.5 ಶುಕ್ರವಾರ ಬೆಳಗ್ಗೆ 11 ಗಂಟೆಗೆ ಡಾ. ಬಿ.ಆರ್. ಅಂಬೇಡ್ಕರ್ ರವರ ಪ್ರತಿಮೆ ಅನಾವರಣ ಕಾರ್ಯಕ್ರಮ ನಡೆಯಲಿದೆ ಎಂದು ಬೆಸ್ಕಾಂ ಮಾಜಿ ನಿರ್ದೇಶಕ ಬಿ.ವಿ.ಜಯರಾಂ ಹೇಳಿದರು.

ಬಿ.ವಿ.ಜಯರಾಂ ಸುದ್ದಿಗೋಷ್ಠಿ । ಡಾ.ಬಿ.ಆರ್. ಅಮಬೇಡ್ಕರ್ ಪ್ರತಿಮೆ ಅನಾವರಣ ।

ಕನ್ನಡಪ್ರಭ ವಾರ್ತೆ ಮಾಗಡಿ

ಐತಿಹಾಸಿಕ ದಿನಕ್ಕೆ ಮಾಗಡಿ ಸಾಕ್ಷಿಯಾಗಲಿದ್ದು, ಮಾಗಡಿ ಅಂಬೇಡ್ಕರ್ ಹಬ್ಬ ಜ.5 ಶುಕ್ರವಾರ ಬೆಳಗ್ಗೆ 11 ಗಂಟೆಗೆ ಡಾ. ಬಿ.ಆರ್. ಅಂಬೇಡ್ಕರ್ ರವರ ಪ್ರತಿಮೆ ಅನಾವರಣ ಕಾರ್ಯಕ್ರಮ ನಡೆಯಲಿದೆ ಎಂದು ಬೆಸ್ಕಾಂ ಮಾಜಿ ನಿರ್ದೇಶಕ ಬಿ.ವಿ.ಜಯರಾಂ ಹೇಳಿದರು.

ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಪುರಸಭೆ ಮುಂಭಾಗ ನಿರ್ಮಾಣವಾಗಿರುವ ಡಾ. ಬಿ. ಆರ್. ಅಂಬೇಡ್ಕರ್ ಪ್ರತಿಮೆ ಅನಾವರಣ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಜನಾಂಗದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಜಾತ್ಯಾತೀತವಾಗಿ ಕಾರ್ಯಕ್ರಮ ಮಾಡುತ್ತಿರುವುದರಿಂದ ಎಲ್ಲ ಸಮಾಜದ ಮುಖಂಡರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.

ಬೈಕ್ ರ್‍ಯಾಲಿ:

ಅಂಬೇಡ್ಕರ್ ಪ್ರತಿಮೆ ಲೋಕಾರ್ಪಣೆಯನ್ನು ಗೃಹ ಸಚಿವ ಜಿ.ಪರಮೇಶ್ವರ್ ನೆರವೇರಿಸುತ್ತಿದ್ದು, ಪಟ್ಟಣದ ಬಾಲಾಜಿ ಚಿತ್ರಮಂದಿರದಿಂದ ಅಂಬೇಡ್ಕರ್ ಪ್ರತಿಮೆ ವರೆಗೂ ಬೃಹತ್ ಬೈಕ್ ರ್‍ಯಾಲಿ ಮೂಲಕ ಅದ್ಧೂರಿ ಸ್ವಾಗತ ಕೋರಲಾಗುತ್ತದೆ. ಅಂಬೇಡ್ಕರ್ ರಸ್ತೆ ನಾಮಫಲಕ ಕೂಡ ಲೋಕಾರ್ಪಣೆ ಆಗುತ್ತಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಎಚ್.ಸಿ.ಬಾಲಕೃಷ್ಣ ವಹಿಸಿಕೊಂಡಿದ್ದಾರೆ. ಉದ್ಘಾಟನೆಯನ್ನು ಸಂಸದ ಡಿ.ಕೆ. ಸುರೇಶ್ ನೆರವೇರಿಸಲಿದ್ದು, ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಚಿತ್ರದುರ್ಗದ ಛಲವಾದಿ ಮಹಾಸಂಸ್ಥಾನ ಮಠದ ಶ್ರೀ ಬಸವನಗಿರಿದೇವ ಶರಣರು, ಮೈಸೂರಿನ ಉರಿಲಿಂಗಪೆದ್ದಿ ಮಠ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ, ಪಾಲನಹಳ್ಳಿ ಸಂಸ್ಥಾನ ಮಠದ ಡಾ. ಸಿದ್ದರಾಜ ಮಹಾಸ್ವಾಮೀಜಿ, ಚಿತ್ರದುರ್ಗದ ಭೋವಿ ಮಹಾಸಂಸ್ಥಾನ ಮಠದ ಶ್ರೀ ಸಿದ್ದರಾಮಯ್ಯ ಸ್ವಾಮೀಜಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ವಿಶೇಷ ಆಹ್ವಾನಿತರಾಗಿ ಅಂಬೇಡ್ಕರ್ ಪ್ರತಿಮೆ ನಿರ್ಮಾತೃ ಮಾಜಿ ಶಾಸಕ ಎ. ಮಂಜುನಾಥ್, ಮಾಜಿ ಸಚಿವ ಎಚ್. ಎಂ.ರೇವಣ್ಣ, ಸಮಾಜ ಸೇವಕ ಕೆ.ಬಾಗೇಗೌಡ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದು, ಬರುವಂತಹ ಎಲ್ಲಾ ಗಣ್ಯರಿಗೂ, ಅಂಬೇಡ್ಕರ್ ಅಭಿಮಾನಿಗಳಿಗೆ ಮಾಂಸಾಹಾರಿ ಹಾಗೂ ಸಸ್ಯಾಹಾರಿ ಊಟದ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

ದಲಿತ ಮುಖಂಡ ಸಿ.ಜಯರಾಂ ಮಾತನಾಡಿ, ಹಲವು ವರ್ಷಗಳ ಬೇಡಿಕೆ ಈಡೇರುತ್ತಿದ್ದು, ಪಕ್ಷಾತೀತವಾಗಿ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆ ಲೋಕಾರ್ಪಣೆ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಎಲ್ಲ ಜನಾಂಗದ ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದು ವಿಶೇಷವಾಗಿದ್ದು, ಐತಿಹಾಸಿಕ ಕಾರ್ಯಕ್ರಮವಾಗುವ ಹಿನ್ನೆಲೆ ನಮ್ಮ ಜನಾಂಗದ ಪ್ರತಿಭಾವಂತ ನೂರು ಜನ ವಿದ್ಯಾರ್ಥಿಗಳಿಗೆ ವೇದಿಕೆಯಲ್ಲಿ ಸನ್ಮಾನ ಹಾಗೂ ನಗದು ಬಹುಮಾನ ನೀಡುತ್ತಿರುವುದು ಅವಿಸ್ಮರಣೀಯವಾಗಿದೆ. ಕಾರ್ಯಕ್ರಮವನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಎಲ್ಲರ ಸಹಕಾರ ಅತಿ ಮುಖ್ಯವಾಗಿದ್ದು, 5 ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆಯಿದೆ ಎಂದು ತಿಳಿಸಿದರು.

ಕಲಾತಂಡಗಳ ಮೆರವಣಿಗೆ: ಮಾಗಡಿ ಅಂಬೇಡ್ಕರ್ ಹಬ್ಬದ ಹಿನ್ನೆಲೆ ಪಟ್ಟಣದಲ್ಲಿ ವಿವಿಧ ಕಲಾತಂಡಗಳಿಂದ ಅದ್ಧೂರಿ ಮೆರವಣಿಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಸಿದ್ದಲಿಂಗಯ್ಯನವರ ವೇದಿಕೆ ನಿರ್ಮಾಣ ಮಾಡಲಾಗಿದೆ ಎಂದು ವೇಳೆ ಗಣ್ಯರು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ತಾಲೂಕಿನ ಹಿರಿಯ ದಲಿತ ಮುಖಂಡರು ಭಾಗವಹಿಸಿದ್ದರು.

----

Share this article