ನಾಳೆ ರೋಟರಿ ಸಂಸ್ಥೆಯ ದಶಮಾನೋತ್ಸವ

KannadaprabhaNewsNetwork |  
Published : Jul 09, 2025, 12:22 AM IST
ಫೋಟೊ:೦೮ಕೆಪಿಸೊರಬ-೦೧ : ಸೊರಬದ ಪ್ರವಾಸಿ ಮಂದಿರದಲ್ಲಿ ರೋಟರಿ ಕ್ಲಬ್ ಪದಗ್ರಹಣ ಮತ್ತು ದಶಮಾನೋತ್ಸವ ಸಮಾರಂಭದ ಕುರಿತು ಪೂರ್ವಭಾವಿ ಸಭೆ ನಡೆಯಿತು. | Kannada Prabha

ಸಾರಾಂಶ

ಪ್ರಸಕ್ತ ಸಾಲಿನಲ್ಲಿ ರೋಟರಿ ಸಂಸ್ಥೆಗೆ ೧೦ ವಸಂತಗಳು ತುಂಬಲಿದ್ದು, ದಶಮಾನೋತ್ಸವ ಕಾರ್ಯಕ್ರಮ ಮತ್ತು ೨೦೨೫-೨೬ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವನ್ನು ಜು.೧೦ರಂದು ಸೊರಬ ಪಟ್ಟಣದ ಶ್ರೀರಂಗ ಕನ್ವೆನ್‌ಷನ್ ಹಾಲ್‌ನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ರೋಟರಿ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಡಾ.ಎಚ್.ಇ.ಜ್ಞಾನೇಶ್ ತಿಳಿಸಿದರು.

ಸೊರಬ: ಪ್ರಸಕ್ತ ಸಾಲಿನಲ್ಲಿ ರೋಟರಿ ಸಂಸ್ಥೆಗೆ ೧೦ ವಸಂತಗಳು ತುಂಬಲಿದ್ದು, ದಶಮಾನೋತ್ಸವ ಕಾರ್ಯಕ್ರಮ ಮತ್ತು ೨೦೨೫-೨೬ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವನ್ನು ಜು.೧೦ರಂದು ಸೊರಬ ಪಟ್ಟಣದ ಶ್ರೀರಂಗ ಕನ್ವೆನ್‌ಷನ್ ಹಾಲ್‌ನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ರೋಟರಿ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಡಾ.ಎಚ್.ಇ.ಜ್ಞಾನೇಶ್ ತಿಳಿಸಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ರೋಟರಿ ಕ್ಲಬ್ ಪದಗ್ರಹಣ ಸಮಾರಂಭ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಸಮಾಜಕ್ಕಾಗಿ ದುಡಿಯುವ ಮತ್ತು ಅತ್ಯಂತ ಕೆಳಸ್ಥರದಲ್ಲಿ ಬದುಕುತ್ತಿರುವವರ ಬಗ್ಗೆ ಕಾಳಜಿ ಹೊಂದಿ ಸೇವಾ ಮನೋಭಾವದೊಂದಿಗೆ ೨೦೧೫ರಲ್ಲಿ ತಾಲೂಕಿನಲ್ಲಿ ಸ್ಥಾಪನೆಯಾದ ರೋಟರಿ ಸಂಸ್ಥೆಗೆ ೧೦ ವರ್ಷಗಳು ತುಂಬಿದ್ದು, ಈ ದಶ ವಸಂತಗಳಲ್ಲಿ ಸೇವಾ ಕಾರ್ಯಗಳನ್ನು ಮಾಡುವ ಮೂಲಕ ತಾಲೂಕಿನ ಜನಮಾನಸದಲ್ಲಿ ಅಚ್ಚಳಿಯದೇ ಉಳಿದಿದೆ ಎಂದರು.ಜಗತ್ತನ್ನು ಕಾಡಿದ ಕರೋನಾ ಸಮಯದಲ್ಲಿ ಮತ್ತು ಅತಿವೃಷ್ಟಿ, ಅನಾವೃಷ್ಟಿ ಸಂದರ್ಭದಲ್ಲಿಯೂ ರೈತ ಸಮೂಹಕ್ಕೆ ನೆರವು ನೀಡುವ ಮೂಲಕ ಆತ್ಮಸ್ಥೈರ್ಯ ತುಂಬಿದ್ದೇವೆ. ಕ್ರೀಡಾ ಪ್ರೋತ್ಸಾಹ, ಶಾಲಾ, ಕಾಲೇಜು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಮತ್ತು ಗುಣಮಟ್ಟವನ್ನು ಹೆಚ್ಚಿಸಲು ತಜ್ಞ ಶಿಕ್ಷಕರಿಂದ ಶೈಕ್ಷಣಿಕ ಕಾರ್ಯಾಗಾರ ನಡೆಸಲಾಗಿದೆ. ಇದೂ ಅಲ್ಲದೇ ಪರಿಸರ ಸಂರಕ್ಷಣೆ, ಸಮಾಜಕ್ಕೆ ಕಂಟಕವಾಗುವ ಹಲವು ಸಮಸ್ಯೆಗಳ ಬಗ್ಗೆ ಸಾರ್ವಜನಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಜಾಗೃತಿ ಜಾಥಾ ನಡೆಸಲಾಗಿದೆ ಎಂದ ಅವರು, ಮುಂದಿನ ದಿನಗಳಲ್ಲಿ ಇತ್ತೀಚೆಗೆ ಕಾಡುತ್ತಿರುವ ಹೃದಯಾಘಾತ ಸಮಸ್ಯೆಗೆ ಜಾಗೃತಿ ಮತ್ತು ತಜ್ಞ ವೈದ್ಯರಿಂದ ಹೃದಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.ಜು.೧೦ರಂದು ನಡೆಯಲಿರುವ ೨೦೨೫-೨೬ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣದ ಜತೆಗೆ ೧೦ನೇ ವರ್ಷದ ಸವಿನೆನಪಿಗಾಗಿ ನವಚೇತನ ಬುದ್ಧಿಮಾಂದ್ಯ ಶಾಲೆಯ ಕಾರ್ಯದರ್ಶಿ ರಾಮಪ್ಪ ಚೌಡಿಕೊಪ್ಪ, ಸಮಾಜ ಸೇವಕ ರಾಜಪ್ಪ ಮಾಸ್ತರ್, ಅರ್ಚಕ ವೇ. ನಾರಾಯಣ ಭಟ್ ಮರಾಠೆ, ಶ್ರೀ ಸ್ವಾಮಿ ವಿವೇಕಾನಂದ ಬೋಧನ ಸಂಸ್ಥೆಯ ಅಧ್ಯಕ್ಷ ದಿವಾಕರ ಭಾವೆ, ಆಶಾಕಿರಣ್ ಶಾಲೆಯ ಅಧ್ಯಕ್ಷ ಯು.ಸಂಗಪ್ಪ, ವೈದ್ಯ ಡಾ.ಯು.ಕೆ.ಶೆಟ್ಟಿ ಮತ್ತು ಕೃಷಿ ಮಹಿಳೆ ಸುಮನಾ ಸುಬ್ಬರಾವ್ ಮಳಲಗದ್ದೆ ಅವರನ್ನು ಸನ್ಮಾನಿಸಲಾಗುವುದು ಎಂದು ತಿಳಿಸಿದರು.ರೋಟರಿ ಸಂಸ್ಥೆಯ ಅಧ್ಯಕ್ಷ ನಿರಂಜನ ದೊಡ್ಮನೆ ಕುಪ್ಪಗಡ್ಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಭೆಯಲ್ಲಿ ಮಾಜಿ ಅಧ್ಯಕ್ಷ ಡಾ. ಎ.ಎಸ್.ನಾಗರಾಜ, ನಿಯೋಜಿತ ಅಧ್ಯಕ್ಷ ಜೆ.ಎಸ್.ಮಹಾಂತೇಶ್, ನಾಗರಾಜ ಗುತ್ತಿ, ಕೃಷ್ಣಪ್ಪ ಓಟೂರು, ಯಶೋಧರ, ಸಂತೋಷ್ ಮತ್ತಿತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತಂಗಡಗಿ, ನಾಲತವಾಡಗೆ ಪಿಯು ಕಾಲೇಜು ಪರಿಶೀಲಿಸಿ ಮಂಜೂರು
ಲಗಾನಿ ಹೆಸರಿನಲ್ಲಿ ಕಬ್ಬು ಬೆಳೆಗಾರರ ಲೂಟಿ