ಮಣಿಪಾಲ: ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ವಿಶ್ವವಿದ್ಯಾಲಯವು ಬುಧವಾರ, ಕುಲಾಧಿಪತಿ ಪದ್ಮಭೂಷಣ ಡಾ. ರಾಮದಾಸ್ ಎಂ. ಪೈ ಅವರ 90ನೇ ಹುಟ್ಟುಹಬ್ಬವನ್ನು, ಶಿಕ್ಷಣ, ಆರೋಗ್ಯ ಮತ್ತು ಸಮುದಾಯ ಸೇವೆಗೆ ಮುಡಿಪಿಟಿದ್ದ ಅವರ ಜೀವನವನ್ನು ಪ್ರತಿಬಿಂಬಿಸುವ ಅರ್ಥಪೂರ್ಣ ಕಾರ್ಯಕ್ರಮಗಳ ಮೂಲಕ ಸ್ಮರಿಸಲಿದೆ.ಆಧುನಿಕ ಮಣಿಪಾಲದ ಶಿಲ್ಪಿ ಎನ್ನಲಾಗುವ ಡಾ. ಪೈ, ತಮ್ಮ ತಂದೆ ಡಾ. ಟಿ.ಎಂ.ಎ. ಪೈ ಅವರ ದೂರದೃಷ್ಟಿಯ ಪರಂಪರೆ ಮುನ್ನಡೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅವರ ವಿಶಿಷ್ಟ ನಾಯಕತ್ವದಲ್ಲಿ, ಮಣಿಪಾಲವು ಒಂದೇ ಸಂಸ್ಥೆಯಿಂದ ಈಗ ಭಾರತ ಮತ್ತು ವಿದೇಶಗಳಲ್ಲಿ ತನ್ನ ಬಾಹುಗಳನ್ನು ಚಾಚಿದ್ದು, ಪ್ರತಿಷ್ಠಿತ ವಿಶ್ವವಿದ್ಯಾಲಯವಾಗಿ ಗುರುತಿಸಿಕೊಂಡಿದೆ. ಅದೇ ಸಮಯದಲ್ಲಿ ಮಣಿಪಾಲ್ ಆಸ್ಪತ್ರೆಯು ದೇಶದಲ್ಲಿರುವ ಅತ್ಯಂತ ವಿಶ್ವಾಸಾರ್ಹ ಆರೋಗ್ಯ ಸೇವಾ ಸಂಸ್ಥೆಗಳಲ್ಲಿ ಒಂದಾಗಿದೆ.
ಮಾಹೆಯ ಸ್ವಯಂಸೇವಕ ಸೇವಾ ಸಂಸ್ಥೆ ಬುಧವಾರ ಬೆಳಗ್ಗೆ 9.30ಕ್ಕೆ ಮಣಿಪಾಲದ ಡಾ. ಟಿಎಂಎ ಪೈ ಹಾಲ್‌ನಲ್ಲಿ ‘ಸುಸ್ಥಿರ ಭವಿಷ್ಯಕ್ಕಾಗಿ ಹಸಿರು ಪರಿವರ್ತನೆಯ ಮುಂದಾಳತ್ವ’ ಎಂಬ ತಜ್ಞರ ವಿಚಾರಸಂಕಿರಣ, ಸುಸ್ಥಿರತೆ ಪರಿಹಾರಗಳನ್ನು ತೋರಿಸುವ ಪೋಸ್ಟರ್ ಸ್ಪರ್ಧೆ ನಡೆಸಲಿದೆ.
ಮಾಹೆಯ ಸಾರ್ವಜನಿಕ ಸಂಪರ್ಕ, ಮಾಧ್ಯಮ ಮತ್ತು ಸಾಮಾಜಿಕ ಮಾಧ್ಯಮ ವಿಭಾಗವು ರಾಷ್ಟ್ರೀಯ ಮಟ್ಟದ ಛಾಯಾಗ್ರಹಣ ಸ್ಪರ್ಧೆ ಆಯೋಜಿಸಿದ್ದು, ಇದರ ಪ್ರದರ್ಶನವನ್ನು ಡಾ. ಟಿಎಂಎ ಪೈ ಹಾಲ್‌ನಲ್ಲಿ ಸೆ 17ರಿಂದ 19 ರವರೆಗೆ ಏರ್ಪಡಿಸಿದೆ.20ರಂದು ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಇದರ ಕಾಲೇಜುಗಳ ಶಿಕ್ಷಕರ 4ನೇ ಸಮಾವೇಶವು ಮೂಡುಬಿದಿರೆಯ ಶ್ರೀ ಮಹಾವೀರ ಕಾಲೇಜಿನಲ್ಲಿ ನಡೆಯಲಿದೆ.
ಹುಟ್ಟುಹಬ್ಬದ ಮುಖ್ಯ ಆಚರಣೆಗಳು ಮಣಿಪಾಲ ಕ್ಯಾಂಪಸ್‌ನಲ್ಲಿ ನಡೆಯಲಿದೆ, ಜೊತೆಗೆ ಭಾರತದಾದ್ಯಂತ ಇರುವ ಮಣಿಪಾಲ ಗ್ರೂಪ್‌ನ ಇತರ ಕ್ಯಾಂಪಸ್‌ಗಳು ಇದೇ ರೀತಿಯ ಸ್ಮರಣಾರ್ಥ ಕಾರ್ಯಕ್ರಮಗಳ ನಡೆಯುತ್ತವೆ.