ನಾಳೆ ಕುವೆಂಪು ವಿವಿ 16955 ಮಕ್ಕಳಿಗೆ ಪದವಿ: ಪ್ರೊ.ಶರತ್ ಅನಂತಮೂರ್ತಿ

KannadaprabhaNewsNetwork |  
Published : May 05, 2026, 01:45 AM IST
ಪೋಟೋ: 04ಎಸ್‌ಎಂಜಿಕೆಪಿ03ಶಿವಮೊಗ್ಗದ ಪತ್ರಿಕಾಭವನದಲ್ಲಿ ಸೋಮವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಕುವೆಂಪು ವಿವಿ ಕುಲಪತಿ ಪ್ರೊ.ಶರತ್ ಅನಂತಮೂರ್ತಿ ಮಾತನಾಡಿದರು.  | Kannada Prabha

ಸಾರಾಂಶ

ಶಂಕರಘಟ್ಟದಲ್ಲಿರುವ ಕುವೆಂಪು ವಿವಿ ಆವರಣದಲ್ಲಿ ಮೇ 6ರಂದು ನಡೆಯಲಿರುವ 35ನೇ ಘಟಿಕೋತ್ಸವದಲ್ಲಿ 7015 ಪುರುಷರು ಹಾಗೂ 9940 ಮಹಿಳೆಯರು ಸೇರಿ ಒಟ್ಟು 16955 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುತ್ತಿದೆ ಎಂದು ಕುವೆಂಪು ವಿವಿ ಕುಲಪತಿ ಪ್ರೊ.ಶರತ್ ಅನಂತಮೂರ್ತಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಶಂಕರಘಟ್ಟದಲ್ಲಿರುವ ಕುವೆಂಪು ವಿವಿ ಆವರಣದಲ್ಲಿ ಮೇ 6ರಂದು ನಡೆಯಲಿರುವ 35ನೇ ಘಟಿಕೋತ್ಸವದಲ್ಲಿ 7015 ಪುರುಷರು ಹಾಗೂ 9940 ಮಹಿಳೆಯರು ಸೇರಿ ಒಟ್ಟು 16955 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುತ್ತಿದೆ ಎಂದು ಕುವೆಂಪು ವಿವಿ ಕುಲಪತಿ ಪ್ರೊ.ಶರತ್ ಅನಂತಮೂರ್ತಿ ತಿಳಿಸಿದರು.

ನಗರದಲ್ಲಿ ಸೋಮವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಈ ಘಟಿಕೋತ್ಸವದಲ್ಲಿ 155 ಸ್ವರ್ಣ ಪದಕಗಳ ಪೈಕಿ 68 ಮಹಿಳೆಯರು ಹಾಗೂ 11 ಪುರುಷರು ಸೇರಿ 79 ವಿದ್ಯಾರ್ಥಿಗಳು ಹಂಚಿಕೊಂಡಿದ್ದಾರೆ. 21 ನಗದು ಬಹುಮಾನಗಳ ಪೈಕಿ 5 ಪುರುಷರು ಹಾಗೂ 24 ಮಹಿಳೆಯರು ಸೇರಿ ಒಟ್ಟು 29 ವಿದ್ಯಾರ್ಥಿಗಳು ಹಂಚಿಕೊಂಡಿದ್ದಾರೆ. ಇನ್ನು 106 ಪುರುಷರು, 57 ಮಹಿಳೆಯರು ಸೇರಿ ಒಟ್ಟು 163 ಅಭ್ಯರ್ಥಿಗಳಿಗೆ ಪಿಎಚ್‌ಡಿ ಪದವಿ ಪ್ರದಾನ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಅಂದು ಬೆಳಗ್ಗೆ 10.30ಕ್ಕೆ 35ನೇ ಘಟಿಕೋತ್ಸವ ಅಗ್ರಸ್ಥಾನವನ್ನು ವಿಶ್ವವಿದ್ಯಾಲಯಗಳ ಕುಲಾಧಿಪತಿ, ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋಟ್ ವಹಿಸಲಿದ್ದು, ನ್ಯಾಕ್ ಮತ್ತು ರಾಷ್ಟ್ರೀಯ ಶೈಕ್ಷಣಿಕ ತಂತ್ರಜ್ಞಾನ ಫೋರಮ್ ಅಧ್ಯಕ್ಷ ಪ್ರೊ.ಅನಿಲ್ ಡಿ.ಸಹಸ್ರಬುದ್ಧೆ ಘಟಿಕೋತ್ಸವ ಭಾಷಣ ಮಾಡುವರು ಎಂದರು.

ಎಚ್‌.ಎಂ.ಅಭಿಶೇಕ್‌ಗೆ 10 ಸ್ವರ್ಣ ಪದಕ:

ಜ್ಞಾನಸಹ್ಯಾದ್ರಿಯ ಕನ್ನಡ ಭಾರತಿ ವಿಭಾಗದ ವಿದ್ಯಾರ್ಥಿ ಎಚ್.ಎಂ.ಅಭಿಶೇಕ್ ಅತೀ ಹೆಚ್ಚು 10 ಸ್ವರ್ಣ ಪದಕ ಹಾಗೂ 2 ನಗದು ಬಹುಮಾನ ಪಡೆದರೆ, ರಕ್ಷಾ ಅವರು ಎಂಸ್ಸಿಯಲ್ಲಿ (ಪರಿಸರ ವಿಜ್ಞಾನ) 7 ಸ್ವರ್ಣಪದಕ ಪಡೆದಿದ್ದಾರೆ. ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಸೃಷ್ಟಿ ಆರ್. ಎಂಎಸ್ಸಿ (ಜೈವಿಕ ತಂತ್ರಜ್ಞಾನ ವಿಷಯದಲ್ಲಿ 6 ಸ್ವರ್ಣ ಪದಕ ಪಡೆದಿದ್ದು ಸಹ್ಯಾದ್ರಿ ವಾಣಿಜ್ಯ ಕಾಲೇಜಿನ ಸಹನಾ ಗಣೇಶ್ ಶೇಟ್ ಎಂಬಿಎನಲ್ಲಿ 5 ಸ್ವರ್ಣ ಪದಕ, ಒಂದು ನಗದು ಬಹುಮಾನ ಪಡೆದಿದ್ದಾರೆ. ಅಲ್ಲದೆ ಎಸ್. ಸಜನಾ ಎಂಎನಲ್ಲಿ (ಸಮಾಜಶಾಸ್ತ್ರ) 5 ಸ್ವರ್ಣ ಪದಕ ಪಡೆದಿದ್ದಾರೆ. ಎಲ್.ಅಭಿಲಾಷ್ ಎಂಎಸ್ಸಿಯಲ್ಲಿ (ಗಣಿತಶಾಸ್ತ್ರ) 4 ಸ್ವರ್ಣ ಪದಕ ಹಾಗೂ 2 ನಗದು ಬಹುಮಾನ ಪಡೆದಿದ್ದಾರೆ ಎಂದು ವಿವರಿಸಿದರು.

ಈ ಬಾರಿ ಘಟಿಕೋತ್ಸವದಲ್ಲಿ ಕಲಾ ನಿಕಾಯದಲ್ಲಿ 63, ವಾಣಿಜ್ಯಶಾಸ್ತ್ರದಲ್ಲಿ 6, ಶಿಕ್ಷಣ ನಿಕಾಯದಲ್ಲಿ 9, ಕಾನೂನು ನಿಕಾಯದಲ್ಲಿ 1, ವಿಜ್ಞಾನದಲ್ಲಿ 84 ಪಿಎಚ್‌ಡಿಗಳಲ್ಲಿ 106 ಪುರುಷರು, 57 ಮಹಿಳೆಯರು ಸೇರಿ ಒಟ್ಟು 163 ಅಭ್ಯರ್ಥಿಗಳಿಗೆ ಪಿಎಚ್.ಡಿ.ಪದವಿ ಪ್ರದಾನ ಮಾಡಲಾಗುವುದು ಎಂದರು.

ದೂರಶಿಕ್ಷಣದಲ್ಲಿ 172 ಎಂ.ಎ., 2814 ಬಿ.ಎ., ಎಂಕಾಂ-66, ಎಂ.ಬಿ.ಎ.-16, ಬಿ.ಕಾಂ-579, ಬಿಬಿಎ-70, ಎಲ್.ಎಲ್.ಎಂ-4, ಎಂ.ಎಸ್ಸಿ-115, ಎಂ.ಎಲ್.ಐ.ಎಸ್ಸಿ-1, ಬಿ.ಎಸ್ಸಿ-521 ಮತ್ತು ಬಿ.ಎಲ್.ಐ.ಎಸ್ಸಿ-1 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುವುದು ಎಂದರು.

ಪರೀಕ್ಷಾಂಗ ಕುಲಸಚಿವ ಪ್ರೊ.ತಿಮ್ಮರಾಯಪ್ಪ, ಕುಲಸಚಿವ ಹೇಮಂತ್ ಎನ್. ಇತರರು ಇದ್ದರು.

ಡಿಜಿಟಲ್‌ ಮೌಲ್ಯಮಾಪನದಲ್ಲಿ ಅಕ್ರಮ ಒಪ್ಪುವುದಿಲ್ಲ

ಕುವೆಂಪು ವಿಶ್ವವಿದ್ಯಾಲಯದ ಪದವಿ ಪರೀಕ್ಷಾ ಡಿಜಿಟಲ್ ಮೌಲ್ಯಮಾಪನದಲ್ಲಿ ಅಕ್ರಮ ನಡೆದಿದೆ ಎನ್ನುವುದನ್ನು ನಾವು ಒಪ್ಪುವುದಿಲ್ಲ ಎಂದು ವಿವಿ ಕುಲಪತಿ ಪ್ರೊ.ಶರತ್ ಅನಂತಮೂರ್ತಿ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿ, ತಮ್ಮ ವಿಶ್ವವಿದ್ಯಾಲಯ ಪಾರದರ್ಶಕತೆ, ಬೇಗ ಫಲಿತಾಂಶ ನೀಡುವುದು ಹಾಗೂ ಖರ್ಚು ಕಡಿಮೆ ಮಾಡುವುದೂ ಸೇರಿದಂತೆ ಹಲವು ಉಪಕ್ರಮಗಳಿಗೆ ಆದ್ಯತೆ ನೀಡುತ್ತಿದೆ. ಸರ್ಕಾರದಿಂದ ಅಗತ್ಯ ಅನುದಾನ ಬರದಿದ್ದ ಕಾರಣ ಆಂತರಿಕ ಹಣಕಾಸು ವ್ಯವಸ್ಥೆ ತಂದುಕೊಂಡಿದ್ದೇವೆ. ಆದರೂ ಕೆಲವು ತಾಂತ್ರಿಕ ಕಾರಣಗಳಿಂದ ಪದವಿ ಪರೀಕ್ಷೆ ಫಲಿತಾಂಶ ನೀಡುವಲ್ಲಿ ವಿಳಂಬವಾಗುತ್ತಿದೆ ಎಂಬುದನ್ನು ಒಪ್ಪಿಕೊಂಡರು.

ಇತ್ತೀಚೆಗೆ ವಿವಿಯಲ್ಲಿ ಎನ್.ಎಸ್.ಯು.ಐ. ವಿದ್ಯಾರ್ಥಿ ಸಂಘಟನೆಯಿಂದ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿದ ಕುಲಪತಿಗಳು, ಅವರ ಮೇಲೆ ಎಫ್‌ಐಆರ್ ಆಗಿದೆ. ಇಲ್ಲಿಯವರೆಗೂ ವಿವಿಯಲ್ಲಿ ಹಿಂಸಾತ್ಮಕ ಘಟನೆಗಳು ನಡೆದಿರಲಿಲ್ಲ. ಈ ಘಟನೆ ವಿದ್ಯಾರ್ಥಿಗಳಿಂದ ನಡೆದಿದ್ದಲ್ಲ. ಯುಯುಸಿಎಂಎಸ್ ಸಾಫ್ಟ್‌ವೇರ್‌ನ ಅಡಚಣೆಯಿಂದ ಈ ಎಲ್ಲ ರಾದ್ದಾಂತಗಳು ನಡೆಯುತ್ತಿವೆ. ಈಗ ಆ ಸಾಫ್ಟ್‌ವೇರ್ ಅನ್ನು ಸರಿಪಡಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇಂತಹ ವಿಳಂಬ ಆಗುವುದಿಲ್ಲ ಎಂದರು.

ಡಬ್ಬಲ್ ದ ಡ್ಯುರೇಷನ್ ಪರೀಕ್ಷಾ ಅವಕಾಶಕ್ಕೆ ಆಗ್ರಹ

ತಮಗೆ ಪರೀಕ್ಷೆ ಬರೆಯಲು ಡಬ್ಬಲ್ ದ ಡ್ಯೂರೇಷನ್ ಪದ್ದತಿಯಲ್ಲಿ ಈ ಬಾರಿ ಅವಕಾಶ ನೀಡಬೇಕು ಎಂದು ಕುವೆಂಪು ವಿವಿ ಪದವಿ ಕಾಲೇಜುಗಳ ಹಳೆ ವಿದ್ಯಾರ್ಥಿಗಳು ವಿವಿಯ ಕುಲಪತಿ ಪ್ರೊ.ಶರತ್ ಅನಂತಮೂರ್ತಿ ಮತ್ತು ಪರೀಕ್ಷಾಂಗ ಕುಲಸಚಿವ ಪ್ರೊ.ತಿಮ್ಮರಾಯಪ್ಪ ಅವರಿಗೆ ಮನವಿ ಮನವಿ ಸಲ್ಲಿಸಿದರು.

ತಾವು 2010-11ನೇ ಸಾಲಿನಿಂದ 2018-19 ನೇ ಸಾಲಿನ ವರೆಗೆ ಓದಿದ ನನ್ ಎನ್.ಇ.ಪಿ. ವಿದ್ಯಾರ್ಥಿಗಳು. ಕುಟುಂಬದ ಬಡತನ, ಅನಾರೋಗ್ಯ ಇನ್ನಿತರ ಅನಿವಾರ್ಯ ಕಾರಣಗಳಿಂದ ಕೆಲ ವಿಷಯಗಳಲ್ಲಿ ಅನುತ್ತೀರ್ಣರಾಗಿದ್ದೇವೆ. ಪದವಿ ಮುಗಿಸಲು ಸಾಧ್ಯವಾಗಲಿಲ್ಲ. ಕಳೆದ ವರ್ಷ ಒಂದು ಅವಕಾಶ ನೀಡಿದ್ದರೂ ವಿಶ್ವವಿದ್ಯಾಲಯ ಮುಂಚಿತವಾಗಿ ಅಭ್ಯರ್ಥಿಗಳಿಗೆ ಇದರ ಮಾಹಿತಿ ತಿಳಿಸದೇ ಇದ್ದಿದ್ದರಿಂದ ಪರೀಕ್ಷಾ ವಂಚಿತರಾಗಿದ್ದೆವು. ಈ ಹಿನ್ನೆಲೆಯಲ್ಲಿ ಮಾನವೀಯತೆ ದೃಷ್ಟಿಯಿಂದ ಈ ಬಾರಿ ಒಂದು ಅವಕಾಶ ನೀಡಿ ನಮ್ಮ ಜೀವನಕ್ಕೆ ಬೆಳಕಾಗಬೇಕು ಎಂದು ವಿದ್ಯಾರ್ಥಿಗಳ ನಿಯೋಗ ವಿವಿ ಅಧಿಕಾರಿಗಳನ್ನು ಕೇಳಿಕೊಂಡಿತು.

ಹಳೆಯ ವಿದ್ಯಾರ್ಥಿಗಳಾದ ಎಂ.ಸಿಂಧು , ಪ್ರಾರ್ಥನಾ, ಜಗದೀಶ್, ಕವಿತ, ಪರಶುರಾಮ್ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭವಿಷ್ಯದ ಪೀಳಿಗೆಗೆ ಧಾರ್ಮಿಕ ಪ್ರಜ್ಞೆ ಮೂಡಿಸುವ ಕೆಲಸ ಆಗಲಿ: ನಿಖಿಲ್
ಹಳ್ಳಿಗಳಲ್ಲಿ ನಿರ್ಮಿಸುವ ಮಹಾದ್ವಾರಗಳು ನಮ್ಮ ಸಂಸ್ಕೃತಿಯ ಪ್ರತೀಕ: ಚಲುವರಾಯಸ್ವಾಮಿ