ಗದಗ: ಡಿ.10ರಂದು ಕೂಡಲ ಸಂಗಮದ ಬಸವಜಯ ಮೃತ್ಯುಂಜಯ ಮಹಾಸ್ವಾಮೀಜಿ ಹಾಗೂ 3ರಿಂದ 4 ಸಾವಿರ ವಕೀಲರ ನೇತೃತ್ವದಲ್ಲಿ 50 ಸಾವಿರಕ್ಕಿಂತ ಹೆಚ್ಚು ಪಂಚಮಸಾಲಿಗಳಿಂದ ಟ್ರ್ಯಾಕ್ಟರ್ ಮೂಲಕ ಬೆಳಗಾವಿಯ ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲಾಗುವುದು. ಗದಗ ಜಿಲ್ಲೆಯಿಂದ 10 ಸಾವಿರ ಹಾಗೂ ನರಗುಂದ ಮತಕ್ಷೇತ್ರದಿಂದ 3ರಿಂದ 4 ಸಾವಿರ ಜನ ಭಾಗವಹಿಸಲಿದ್ದಾರೆ ಎಂದು ಶಾಸಕ ಸಿ.ಸಿ. ಪಾಟೀಲ್ ಹೇಳಿದರು.
ಬಿಜೆಪಿ ಆಡಳಿತಾವಧಿಯಲ್ಲಿ ಶ್ರೀಗಳು ಕೂಡಲಸಂಗಮದಿಂದ ಬೆಂಗಳೂರಿನ ವರೆಗೆ ಸುಮಾರು 750 ಕಿಮೀ ಪಾದಯಾತ್ರೆ ಮಾಡಿದ್ದರು. ಅಂದಿನ ಬಿಜೆಪಿ ಸರ್ಕಾರ ಪಾದಯಾತ್ರೆಗೆ ಸಂಪೂರ್ಣ ಸಹಕಾರ ನೀಡಿತ್ತು. ನಾನು ಸಹ ಸರ್ಕಾರ ಮತ್ತು ಪಂಚಮಸಾಲಿ ಸಮಾಜದ ಕೊಂಡಿಯಾಗಿ ಕೆಲಸ ನಿರ್ವಹಿಸಿದ್ದೆ. ಇದರ ಪರಿಣಾಮ ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದಾಗ 2ಡಿ ಮೀಸಲಾತಿ ಘೋಷಿಸಿದರು. ಆದರೆ, ಕೆಲವರು ಕೊರ್ಟ್ ಕದ ತಟ್ಟಿದ್ದರಿಂದ 2ಡಿ ಜಾರಿಗೆ ತರಲು ಆಗಲಿಲ್ಲ. ನಂತರ ಮೃತ್ಯುಂಜಯ ಸ್ವಾಮೀಜಿಗಳು ರಾಷ್ಟ್ರೀಯ ಹೆದ್ದಾರಿಯಲ್ಲಿ ಇಷ್ಟಲಿಂಗ ಪೂಜೆ ಮಾಡುವ ಮೂಲಕ ವಿನೂತನ ಪ್ರತಿಭಟನೆ ಮಾಡಿದರೂ ಸರ್ಕಾರ ಸ್ಪಂದಿಸುತ್ತಿಲ್ಲ. ರಾಜಕೀಯಕ್ಕಾಗಿ ಮೀಸಲಾತಿ ಕೇಳುತ್ತಿಲ್ಲ. ಸಮಾಜದ ಮಕ್ಕಳ ಭವಿಷ್ಯಕ್ಕಾಗಿ ಮೀಸಲಾತಿ ಕೇಳುತ್ತಿದ್ದೇವೆ ಎಂದರು.
ಸರ್ಕಾರ ಹೋರಾಟ ಹತ್ತಿಕ್ಕಲು ಪೊಲೀಸರನ್ನು ಬಳಸಿಕೊಳ್ಳುವ ಸಾಧ್ಯತೆ ಇದ್ದು, ಐಜಿಯವರು ಹೋರಾಟದ ರೂಪುರೇಷ ಬಗ್ಗೆ ಸಿಎಂಗೆ ಮನವರಿಕೆ ಮಾಡಿಕೊಡಬೇಕು. ಹೋರಾಟ ತಡೆಯುವ ಯಾವುದೇ ಪ್ರಯತ್ನ ಮಾಡಬಾರದು. ಶಾಂತಯುತ ಹೋರಾಟ ಮಾಡಲು ತೀರ್ಮಾನಿಸಿದ್ದೇವೆಯೇ ವಿನಃ ಸುವರ್ಣಸೌಧದಲ್ಲಿನ ಪೀಠೋಪಕರಣ ಹೊತ್ತುಕೊಂಡು ಹೋಗುವುದಿಲ್ಲ. ಹೋರಾಟ ಹತ್ತಿಕ್ಕಲು ಅಧಿಕಾರಿಗಳನ್ನು ಬಳಸಿಕೊಳ್ಳಬಾರದು ಎಂದು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದರು.ಅಂದು ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಕೆಲವು ಕಾಂಗ್ರೆಸ್ ಶಾಸಕರು ಹೆಗಲ ಮೇಲೆ ಬಾರುಕೋಲು ಹಾಕಿಕೊಂಡು ಹೋರಾಟ ಮಾಡಿದರು. ಆದರೆ, ಈಗ ಮೀಸಲಾತಿ ಬಗ್ಗೆ ಚಕಾರ ಎತ್ತುತ್ತಿಲ್ಲ. ಕೆಲವು ಕಾಂಗ್ರೆಸ್ ಶಾಸಕರು ಪ್ರಾಮಾಣಿಕವಾಗಿ ಬೆಂಬಲ ನೀಡುತ್ತಿದ್ದಾರೆ. ಹೋರಾಟದ ಮುಂಚೂಣಿಯಲ್ಲಿ ಸಮಾಜದ ವಕೀಲರು ಇರಲಿದ್ದು, ನಂತರ ಸ್ವಾಮೀಜಿಗಳು, ಎಂ.ಬಿ. ಪಾಟೀಲ, ವಿನಯ್ ಕುಲಕರ್ಣಿ ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ ಎಂದರು.
ಕಳೆದ ನಾಲ್ಕು ವರ್ಷದಿಂದ ಬಸವಜಯ ಮೃತ್ಯುಂಜಯ ಸ್ವಾಮೀಜಿಗಳು ಮಠ ಬಿಟ್ಟು ಭಕ್ತರ ಮನೆಯಲ್ಲಿ ಪ್ರಸಾದ ಸೇವೆ ಸಲ್ಲಿಸುತ್ತಿದ್ದಾರೆ. ಸಮಾಜದ ಹಿತದೃಷ್ಟಿಯಿಂದ ನಿರಂತರವಾಗಿ ಶ್ರೀಗಳು ಹೋರಾಟದ ರೂಪುರೇಷ ಹಾಕಿಕೊಂಡು ಓಡಾಡುತ್ತಿದ್ದಾರೆ. ಅವರ ಬಗ್ಗೆ ಮಾತನಾಡುವ ನೈತಿಕತೆ ಯಾರಿಗೂ ಇಲ್ಲ. ಒಬ್ಬ ವ್ಯಕ್ತಿ ಹೋರಾಟದಿಂದ ಹಿಂದೆ ಸರಿದರೆ ಹೋರಾಟ ನಿಲ್ಲುವುದಿಲ್ಲ ಎಂದು ಶಾಸಕ ಸಿ.ಸಿ. ಪಾಟೀಲ ತಿಳಿಸಿದ್ದಾರೆ.ಬೆಳಗಾವಿಗೆ ಟ್ರ್ಯಾಕ್ಟರ್, ಕ್ರೂಸರ್ ನಿಷೇಧ
ಚಳಿಗಾಲದ ಅಧಿವೇಶನಕ್ಕೆ ಭಾರಿ ಭದ್ರತೆ ಪೊಲೀಸರು ಒದಗಿಸಿದ್ದಾರೆ. ಅಧಿವೇಶನದ ಸಮಯದಲ್ಲಿ ಪಂಚಮಸಾಲಿ ಸಮಾಜ ಬಾಂಧವರಿಂದ ಹಿಡಿದು ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಲು ಮುಂದಾಗಿದ್ದು, ಬೆಳಗಾವಿ ನಗರಕ್ಕೆ ಯಾವುದೇ ಟ್ರ್ಯಾಕ್ಟರ್ ಹಾಗೂ ಕ್ರೂಸರ್ ಪ್ರವೇಶ ಇಲ್ಲ ಅಂತ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಆದೇಶ ಹೊರಡಿಸಿದ್ದಾರೆ.