ಸಿದ್ದಲಿಂಗ ಪಟ್ಟಣಶೆಟ್ಟಿಗೆ ತೋಂಟದ ಶ್ರೀ ಪ್ರಶಸ್ತಿ

KannadaprabhaNewsNetwork |  
Published : Jan 11, 2026, 02:45 AM IST
ರೊಟ್ಟಿ ಜಾತ್ರೆಯಲ್ಲಿ ಭಕ್ತರು ಪ್ರಸಾದ ಸ್ವೀಕರಿಸಿದರು. | Kannada Prabha

ಸಾರಾಂಶ

ನರಗುಂದ ತಾಲೂಕಿನ ಶಿರೋಳ ಗ್ರಾಮದ ತೋಂಟದಾರ್ಯ ಜಾತ್ರೆ ನಿಮಿತ್ತ ನಡೆದ ಜಂಗಮೋತ್ಸವ ಹಾಗೂ ರೊಟ್ಟಿ ಜಾತ್ರೆಯಲ್ಲಿ ಧಾರವಾಡದ ಖ್ಯಾತ ಸಾಹಿತಿ ಪ್ರೊ. ಸಿದ್ಧಲಿಂಗ ಪಟ್ಟಣಶೆಟ್ಟಿ ಅವರಿಗೆ ''ತೋಂಟದ ಶ್ರೀ ಪ್ರಶಸ್ತಿ'', ಪರಿಸರ ವಿಜ್ಞಾನಿ ಪ್ರಕಾಶಗೌಡ ಖ್ಯಾಮನಗೌಡ್ರ ಅವರಿಗೆ ''ಗುರುಬಸವ ಸಿರಿ'' ಪ್ರಶಸ್ತಿ ಪ್ರದಾನ ಮಾಡಲಾಯಿತು.

ನರಗುಂದ: ತಾಲೂಕಿನ ಶಿರೋಳ ಗ್ರಾಮದ ತೋಂಟದಾರ್ಯ ಜಾತ್ರೆ ನಿಮಿತ್ತ ಜಂಗಮೋತ್ಸವ ಹಾಗೂ ರೊಟ್ಟಿ ಜಾತ್ರೆ ನಡೆಯಿತು.

ಈ ಸಂದರ್ಭದಲ್ಲಿ ಧಾರವಾಡದ ಖ್ಯಾತ ಸಾಹಿತಿ ಪ್ರೊ. ಸಿದ್ಧಲಿಂಗ ಪಟ್ಟಣಶೆಟ್ಟಿ ಅವರಿಗೆ ''''ತೋಂಟದ ಶ್ರೀ ಪ್ರಶಸ್ತಿ'''', ಪರಿಸರ ವಿಜ್ಞಾನಿ ಪ್ರಕಾಶಗೌಡ ಖ್ಯಾಮನಗೌಡ್ರ ಅವರಿಗೆ ''''ಗುರುಬಸವ ಸಿರಿ'''' ಪ್ರಶಸ್ತಿ ಪ್ರದಾನ ಮಾಡಲಾಯಿತು.

ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಗದುಗಿನ ಶ್ರೀ ತೋಂಟದಾರ್ಯ ಮಠದ ಸಿದ್ದರಾಮ ಶ್ರೀಗಳು, ನಮ್ಮ ಹಿಂದಿನ ಗದುಗಿನ ಮಠದ ಸಿದ್ದಲಿಂಗ ಶ್ರೀಗಳು ಈ ರೊಟ್ಟಿ ಜಾತ್ರೆಯನ್ನು ಈ ಭಾಗದಲ್ಲಿ ಪ್ರಾರಂಭ ಮಾಡಿದರು. ಈ ಭಾಗದ ಜನರ ಜಾತಿ, ಮತ ಎನ್ನದೆ ಎಲ್ಲ ಸಮುದಾಯವರು ಸೇರಿಕೊಂಡು ಈ ರೊಟ್ಟಿ ಜಾತ್ರೆ ಮಾಡುತ್ತಿದ್ದಾರೆ. ಇದು ಈಗ ಸೌಹಾರ್ದದ ಜಾತ್ರೆಯಾಗಿದೆ ಎಂದು ಹೇಳಿದರು. ರೊಟ್ಟಿ ಜಾತ್ರೆಯ ಖಡಕ್‌ ರೊಟ್ಟಿ, ಅಗಸಿ ಚಟ್ನಿ, ಹತ್ತಾರು ತಪ್ಪಲು ಪಲ್ಯ, ಧಾನ್ಯಗಳ ಮಿಶ್ರಣದ ಬಜ್ಜಿ, ಕರಿಂಡಿ ಇವು ಉತ್ತರ ಕರ್ನಾಟಕದ ಅಪ್ಪಟ ಗ್ರಾಮೀಣ ಭಾಗದ ಊಟವಾಗಿದೆ. ಸುಮಾರು ಒಂದು ತಿಂಗಳಿಂದ ಭಕ್ತರು ಎಲ್ಲ ಸಿದ್ಧತೆ ಮಾಡಿಕೊಂಡು ಜಾತ್ರೆ ಮಾಡಿದ್ದಾರೆ ಎಂದು ಹೇಳಿದರು.

25 ಚೀಲ ಜೋಳದ ಹಿಟ್ಟಿನ ರೊಟ್ಟಿಯನ್ನು ಶಿರೋಳ, ರಡ್ಡೇರನಾಗನೂರ, ಖಾನಾಪುರ, ಕಪ್ಪಲಿ, ಕಲ್ಲಾಪುರ, ಮೆಣಸಗಿ, ಗುಳಗಂದಿ, ಕರಕೀಕಟ್ಟಿ, ಭೋಪಳಾಪುರ, ಕಿತ್ತಲಿ ಗ್ರಾಮಗಳ ಭಕ್ತರು ತಯಾರಿಸಿದ್ದರು. ಸುಮಾರು 3500 ಕೆಜಿಯಷ್ಟು ರುಚಿಯಾದ ಬಜ್ಜಿ ತಯಾರಿಸಲಾಗಿತ್ತು. ಇದರೊಂದಿಗೆ 200 ಕೆಜಿ ಅಕ್ಕಿಯ ಅನ್ನಕ್ಕೆ 150 ಲೀಟರ್ ಮಜ್ಜಿಗೆ ಬೆರೆಸಿ ಹದಗೊಳಿಸಲಾಗಿತ್ತು. 15ರಿಂದ 16 ಸಾವಿರ ಬಾನದ ಉಂಡಿ ಕಟ್ಟಲಾಯಿತು. ಸುಮಾರು 15 ಸಾವಿರ ಭಕ್ತರಿಗೆ ನೀಡಲಾಯಿತು.

ಜಾತ್ರೆ ಸಮಿತಿ ಅಧ್ಯಕ್ಷ ರವಿ ಹಿರೇಮಠ ಮಾತನಾಡಿ, ರೊಟ್ಟಿ ಜಾತ್ರೆ ನೋಡಲು ಎರಡು ಕಣ್ಣು ಸಾಲದು ಎಂದು ಲಿಂಗೈಕ್ಯ ಜಗದ್ಗುರುಗಳು ಹೇಳುತ್ತಿದ್ದರು. ಚರ್ಚ್‌ಗಳಲ್ಲಿ ಗಂಟೆ ಶಬ್ದ, ಮಸೀದಿಗಳಲ್ಲಿ ಆಜಾನ್‌ ಶಬ್ದ ಪ್ರಾರ್ಥನೆ ಸಂಕೇತವಾದರೆ, ಲಿಂಗಾಯತ ಮಠಗಳಲ್ಲಿಯ ಗಂಟೆ ಶಬ್ದ ಪ್ರಸಾದದ ಸಂಕೇತವಾಗಬೇಕು ಎನ್ನುತ್ತಿದ್ದರು. ಶ್ರೀಗಳು ಮಠಕ್ಕೆ ಬರುವ ಭಕ್ತರ ಕೈಗೆ ಪುಸ್ತಕವಿಟ್ಟು, ತರ-ತರಹದ ಪ್ರಸಾದ ಮಾಡಿಸಿ ಸತ್ಕರಿಸುವ ಪರಿಯೇ ಭಿನ್ನ, ತಮ್ಮ ಮಠಗಳಲ್ಲಿ ಸಹಪಂಕ್ತಿ ಭೋಜನಕ್ಕೆ ಒತ್ತಕೊಟ್ಟ ಪರಿಣಾಮವೆ ಪ್ರತಿವರ್ಷ ಶಿರೋಳದಲ್ಲಿ ನಡೆಯುವ ರೊಟ್ಟಿ ಜಾತ್ರೆ ಎಂದರು.

ಪ್ರಶಸ್ತಿ ಪ್ರದಾನ: ಧಾರವಾಡದ ಖ್ಯಾತ ಸಾಹಿತಿ ಪ್ರೊ. ಸಿದ್ಧಲಿಂಗ ಪಟ್ಟಣಶೆಟ್ಟಿ ಅವರಿಗೆ ತೋಂಟದ ಶ್ರೀ ಪ್ರಶಸ್ತಿ ಹಾಗೂ ಪರಿಸರ ವಿಜ್ಞಾನಿ ಪ್ರಕಾಶಗೌಡ ಖ್ಯಾಮನಗೌಡ್ರ ಅವರಿಗೆ ಗುರುಬಸವ ಸಿರಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕೌಶಲ್ಯ ಕರ್ನಾಟಕ 2025ನೇ ಸಾಲಿನ ಪ್ರಶಸ್ತಿ ಪಡೆದ ಜಗದ್ಗುರು ತೋಂಟದಾರ್ಯ ವಿದ್ಯಾಪೀಠದ ಶ್ರೀ ಮಾದಾರ ಚನ್ನಯ್ಯ ಐಟಿಐ ಕಾಲೇಜಿನ ಸಿಬ್ಬಂದಿ, ಗ್ರಾಮದ ಪಿಎಚ್‌ಡಿ ಪದವಿ ಪುರಸ್ಕೃತ ವೀರಸಂಗಪ್ಪ ಬಸವರಾಜ ಮುದಕವಿ ಅವರನ್ನು ಗೌರವಿಸಲಾಯಿತು.

ಭೈರನಹಟ್ಟಿ-ಶಿರೋಳ ಮಠದ ಶಾಂತಲಿಂಗ ಶ್ರೀಗಳು, ಕೊಣ್ಣೂರ ವಿರಕ್ತಮಠದ ಡಾ. ಚನ್ನವೀರ ಶ್ರೀಗಳು, ಚಿಂಚಣಿ ಅಲ್ಲಮಪ್ರಭು ಸಿದ್ಧ ಸಂಸ್ಥಾನ ಮಠದ ನಿಯೋಜಿತ ಉತ್ತರಾಧಿಕಾರಿ ಶಿವಪ್ರಸಾದ ದೇವರು, ಅತಿಥಿಗಳಾಗಿ ಮಾಜಿ ಸಚಿವ ಬಿ.ಆರ್. ಯಾವಗಲ್, ತೋಂಟದಾರ್ಯ ವಿದ್ಯಾಪೀಠದ ಕಾರ್ಯದರ್ಶಿ ಎಸ್.ಎಸ್. ಪಟ್ಟಣಶೆಟ್ಟರ, ಬೆಳಗಾವಿಯ ಪ್ರಭಾವತಿ ಫೌಂಡೇಶನ್‌ ಅಧ್ಯಕ್ಷೆ ಪ್ರಭಾವತಿ ಮಾಸ್ತಮರಡಿ, ದತ್ತಾ ಗ್ರೂಪ್ ವ್ಯವಸ್ಥಾಪಕ ಕಿರಣ ಬೂಮಾ, ನಿರ್ದೇಶಕ ಎಸ್.ಎಚ್. ಶಿವನಗೌಡ್ರ, ಉದ್ಯಮಿಗಳಾದ ಚನ್ನಯ್ಯ ಸಂಗಳಮಠ, ಜಿಲ್ಲಾ ಗುತ್ತಿಗೆದಾರರ ಸಂಘದ ಅಧ್ಯಕ್ಷ ಸಿದ್ಧು ಪಾಟೀಲ, ಎಸ್.ವಿ. ಕುಪ್ಪಸ್ತ, ದ್ಯಾಮಣ ತೆಗ್ಗಿ, ಚಂದ್ರಶೇಖರ ಸೊಬರದ, ಸತ್ಯವಾನಪ್ಪ ಚಿಕ್ಕನರಗುಂದ, ಲಾಲಸಾಬ ಅರಗಂಟಿ, ಸಂಜು ಕಲಾಲ ಆರ್.ಐ. ನದಾಫ್‌, ಸುತ್ತಮುತ್ತಲಿನ ಗ್ರಾಮಗಳ ಶ್ರೀಮಠದ ಭಕ್ತರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೊಠಾರೋತ್ಸವ: ಚೆಲುವನಾರಾಯಣಸ್ವಾಮಿಗೆ ಪುಷ್ಪಾಲಂಕಾರ ಸೇವೆ
ಹಿಪ್ಪು ನೇರಳೆ ಮತ್ತು ರೇಷ್ಮೆ ಲಾಭದಾಯಕ ಬೆಳೆಗಳು