ಮುಂಡರಗಿ: ಉತ್ತರ ಕರ್ನಾಟಕದ ಸಹ್ಯಾದ್ರಿ ಕಪ್ಪತ್ತಗುಡ್ಡದ ಉಳಿವಿಗೆ ಕಾರಣರಾದವರು ಗದುಗಿನ ಲಿಂಗೈಕ್ಯ ಜಗದ್ಗುರು ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮೀಜಿಯವರು ಎಂದು ಜಿಲ್ಲಾ ವನ್ಯಜೀವಿ ಪರಿಪಾಲಕ, ಪರಿಸರವಾದಿ ಪ್ರೊ. ಸಿ.ಎಸ್. ಅರಸನಾಳ ಹೇಳಿದರು.
ಕಾರ್ಯಕ್ರಮವನ್ನು ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷಕುಮಾರ ಕೆಂಚಪ್ಪನವರ ಮಾತನಾಡಿ, ಇಂದು ಕಪ್ಪತ್ತಗುಡ್ಡ ನೋಡುಗರ ಕಣ್ಮನ ಸೆಳೆಯುತ್ತಿದೆ ಎಂದರೆ ಅದಕ್ಕೆ ಪ್ರಮುಖ ಕಾರಣವೇ ಗದುಗಿನ ಲಿಂ.ಜಗದ್ಗುರುಗಳು ಸೇರಿದಂತೆ ಈ ನಾಡಿನ ವಿವಿಧ ಸ್ವಾಮೀಜಿಯವರು ಹಾಗೂ ಪರಿಸರವಾದಿಗಳು, ಇಲಾಖೆಯ ಎಲ್ಲ ಹಂತದ ಅಧಿಕಾರಿಗಳು ಕಾರಣ. ಇತ್ತೀಚಿನ ವರ್ಷಗಳಲ್ಲಿ ಕಪ್ಪತ್ತಗುಡ್ಡವನ್ನು ವೀಕ್ಷಿಸಲು ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದ್ದು, ಅಲ್ಲಿ ಪ್ಲಾಸ್ಟಿಕ್ ಸೇರಿದಂತೆ ಅನೇಕ ಪರಿಸರಕ್ಕೆ ಹಾನಿಯಾಗುವಂತಹ ವಸ್ತುಗಳನ್ನು ತಂದು ಬಿಸಾಕಿ ಹೋಗುತ್ತಿದ್ದಾರೆ. ಅದು ನಿಲ್ಲಬೇಕು. ಇಲ್ಲಿಗೆ ಬಂದು ಎಲ್ಲೆಂದರಲ್ಲಿ ತ್ಯಾಜ್ಯ ಹಾಕುವುದರಿಂದ ಇಲ್ಲಿನ ಪರಿಸರಕ್ಕೆ ಸಾಕಷ್ಟು ಹಾನಿಯುಂಟಾಗುತ್ತದೆ. ಜತೆಗೆ ಇಲ್ಲಿನ ಅನೇಕ ಔಷಧಿ ಸಸ್ಯಗಳು, ಪ್ರಾಣಿ ಪಕ್ಷಿಗಳು ಸಾವನ್ನಪ್ಪುವಂತಾಗುತ್ತವೆ. ಆದ್ದರಿಂದ ಕಪ್ಪತ್ತಗುಡ್ಡವನ್ನು ಪರಿಸರಕ್ಕೆ ಹಾನಿಯುಂಟು ಮಾಡುವ ವಸ್ತುಗಳಿಂದ ದೂರ ಇಡಬೇಕು. ಮನೆಗಳಲ್ಲಿಯೂ ಸಹ ಪಾಸ್ಟೀಕ್ ಬಿಟ್ಟು ಬಟ್ಟೆಚೀಲ ಉಪಯೋಗಿಸಬೇಕು. ಇಲ್ಲಿ ಅನೇಕ ತರಹದ ಕಾಡುಪ್ರಾಣಿಗಳಿವೆ. ಜಿಲ್ಲೆಯ ಮಾಗಡಿ ಕೆರೆಗೆ ವಿದೇಶದಿಂದ ಪಕ್ಷಿಗಳು ಬರುತ್ತಿದ್ದು, ಅವುಗಳನ್ನು ಸಹ ನೋಡಲು ಸಾವಿರಾರು ಜನ ಬರುತ್ತಾರೆ. ಅಲ್ಲಿನ ಕೆರೆಗಳಲ್ಲಿಯೂ ಸಹ ಪ್ಲಾಸ್ಟಿಕ್ ಎಸೆಯುತ್ತಿದ್ದು, ಇದರಿಂದ ಅತ್ಯಂತ ಸುಂದರವಾದ ಪಕ್ಷಿಗಳು ಸಾಯುತ್ತವೆ. ಆದ್ದರಿಂದ ಪ್ಲಾಸ್ಟಿಕ್ ನಿಷೇಧಿಸುವ ಮೂಲಕ ಪರಿಸರ ಕಾಯ್ದುಕೊಳ್ಳಲು ಎಲ್ಲರೂ ಬದ್ಧರಾಗಬೇಕು ಎಂದರು.
ಮಾಜಿ ಸಚಿವ ಹಾಗೂ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಎಸ್.ಎಸ್. ಪಾಟೀಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಪ್ಪತ್ತಗುಡ್ಡ ನಮ್ಮ ಸಂಪತ್ತು. ನಾವು ಚಿಕ್ಕವರಿದ್ದಾಗಿನಿಂದಲೂ ಕಪ್ಪತ್ತಗುಡ್ಡಕ್ಕೆ ಸಾಕಷ್ಟು ಇತಿಹಾಸವಿದೆ. ಕಪ್ಪತ್ತಗುಡ್ಡ ಇರುವುದರಿಂದಾಗಿ ಉತ್ತಮ ಪರಿಸರ ಹಾಗೂ ಶುದ್ಧ ಗಾಳಿ ಬೀಸಲು ಕಾರಣವಾಗಿದೆ. ಅದಕ್ಕೆ ಗದುಗಿನ ಶ್ರೀಗಳ ಕೊಡುಗೆಯೂ ಸಹ ಅಪಾರವಾಗಿದೆ. ಇಂದಿನ ಮಕ್ಕಳಿಗೆ ಕಪ್ಪತ್ತಗುಡ್ಡವನ್ನು ತೋರಿಸಿ ಅದರ ಸಮಗ್ರ ಪರಿಚಯವನ್ನು ಮಾಡಿಕೊಡಬೇಕು ಎಂದರು. ಕಪ್ಪತ್ ಹಿಲ್ಸ್ ವಲಯ ಅರಣ್ಯಾಧಿಕಾರಿ ಮಂಜುನಾಥ ಮೇಗಳಮನಿ ಮಾತನಾಡಿದರು.ಕಾರ್ಯಕ್ರಮದಲ್ಲಿ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಕೊಟ್ರೇಶ ಅಂಗಡಿ, ನಾಗೇಶ ಹುಬ್ಬಳ್ಳಿ, ಪ್ರಾಚಾರ್ಯ ಶರಣಕುಮಾರ ಬುಗುಟಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಕಾರ್ಯಕ್ರಮಕ್ಕೂ ಪೂರ್ವದಲ್ಲಿ ಶಾಲಾ ಆವರಣದಲ್ಲಿ ಸಸಿಗಳನ್ನು ನೆಡುವ ಮೂಲಕ ವನ ಮಹೋತ್ಸವ ಆಚರಿಸಲಾಯಿತು. ನವ್ಯಾ ರೇವಣಕರ್ ಸ್ವಾಗತಿಸಿ, ಮುಷ್ಕಾನ್ ಬೆಳಗಟ್ಟಿ ನಿರೂಪಿಸಿದರು.