ಲಿಂ. ತೋಂಟದ ಸಿದ್ದಲಿಂಗ ಸ್ವಾಮೀಜಿ ಕನ್ನಡಪ್ರೇಮ ಮಾದರಿ: ಡಾ. ಸಿದ್ದರಾಮ ಸ್ವಾಮೀಜಿ

KannadaprabhaNewsNetwork |  
Published : Oct 22, 2025, 01:03 AM IST
21ಎಂಡಿಜಿ2, ಮುಂಡರಗಿ ತಾಲೂಕಿನ ಡಂಬಳ ಗ್ರಾಮದಲ್ಲಿ ಜರುಗಿದ ಲಿಂ. ಜ.ಡಾ.ತೋಂಟದ ಸಿದ್ದಲಿಂಗ ಮಹಾಸ್ವಾಮಿಜಿ 7ನೇ ಪುಣ್ಯಸ್ಮರಣೋತ್ಸವ ಕಾರ್ಯಕ್ರಮದಲ್ಲಿ ವಿಶ್ರಾಂತ ಪ್ರಾ.ಸಿ.ಎಸ್.ಅರಸನಾಳ ಮಾತನಾಡಿದರು.  | Kannada Prabha

ಸಾರಾಂಶ

ಸಿದ್ದಲಿಂಗ ಸ್ವಾಮೀಜಿಯವರು ಉತ್ತರ ಕರ್ನಾಟಕದ ಸಹ್ಯಾದ್ರಿ ಎಂದೇ ಪ್ರಸಿದ್ಧಿ ಪಡೆದಿರುವ ಕಪ್ಪತಗುಡ್ಡ ವನ್ಯಜೀವಿಧಾಮ ಎಂದು ಘೋಷಣೆ ಮಾಡಲು ಹೋರಾಟ ಮಾಡಿ ಸರ್ಕಾರದ ಗಮನ ಸೆಳೆದಿದ್ದರಿಂದ ಇಂದು ಕಪ್ಪತಗುಡ್ಡ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದೆ.

ಮುಂಡರಗಿ: ಗದುಗಿನ ಲಿಂ. ಡಾ. ತೋಂಟದ ಸಿದ್ಧಲಿಂಗ ಸ್ವಾಮೀಜಿಯವರ ಪರಿಸರಪ್ರೇಮ, ಪುಸ್ತಕ ಪ್ರೇಮ, ಸಾಮಾಜಿಕ ಕಳಕಳಿ, ಧಾರ್ಮಿಕ ಚಿಂತನೆ ಮತ್ತು ಶೈಕ್ಷಣಿಕ ಕ್ರಾಂತಿ ಹೀಗೆ ಎಲ್ಲ ರಂಗಗಳಲ್ಲಿಯೂ ಇತಿಹಾಸ ನಿರ್ಮಿಸುವ ಕಾರ್ಯ ಮಾಡಿದ್ದಾರೆ ಎಂದು ತೋಂಟದ ಡಾ. ಸಿದ್ದರಾಮ ಸ್ವಾಮೀಜಿ ತಿಳಿಸಿದರು.

ಸೋಮವಾರ ತಾಲೂಕಿನ ಡಂಬಳ ಗ್ರಾಮದ ತೋಂಟದಾರ್ಯ ಮಠದಲ್ಲಿ ಲಿಂ. ಡಾ. ತೋಂಟದ ಸಿದ್ಧಲಿಂಗ ಸ್ವಾಮೀಜಿಯವರ 7ನೇ ಪುಣ್ಯಸ್ಮರಣೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಸಿದ್ದಲಿಂಗ ಸ್ವಾಮೀಜಿಯವರು ಉತ್ತರ ಕರ್ನಾಟಕದ ಸಹ್ಯಾದ್ರಿ ಎಂದೇ ಪ್ರಸಿದ್ಧಿ ಪಡೆದಿರುವ ಕಪ್ಪತಗುಡ್ಡ ವನ್ಯಜೀವಿಧಾಮ ಎಂದು ಘೋಷಣೆ ಮಾಡಲು ಹೋರಾಟ ಮಾಡಿ ಸರ್ಕಾರದ ಗಮನ ಸೆಳೆದಿದ್ದರಿಂದ ಇಂದು ಕಪ್ಪತಗುಡ್ಡ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದೆ. ಕನ್ನಡದ ಜಗದ್ಗುರುಗಳೆಂದೇ ಹೆಸರು ಮಾಡಿದ್ದ ಶ್ರೀಗಳ ಕನ್ನಡಪ್ರೇಮ ಎಲ್ಲರೂ ಮೆಚ್ಚುವಂತದ್ದು. ಶ್ರೀಗಳು ಸರ್ವ ಜನಾಂಗವನ್ನು ಪ್ರೀತಿಸುವ ಶಾಂತಿಯ ತೋಟದಂತೆ ಮಠವನ್ನು ಕಟ್ಟಿ ಬೆಳೆಸಿದರು. ಹೀಗಾಗಿ ಇವರಿಗೆ ಕೇಂದ್ರ ಸರ್ಕಾರ ಕೋಮು ಸೌಹಾರ್ದ ಪ್ರಶಸ್ತಿ ನೀಡಿ ಗೌರವಿಸಿತ್ತು ಎಂದರು.

ಮಾಜಿ ಸಚಿವ ಎಸ್.ಎಸ್. ಪಾಟೀಲ ಮಾತನಾಡಿ, ಲಿಂ. ಡಾ. ತೋಂಟದ ಸಿದ್ಧಲಿಂಗ ಸ್ವಾಮೀಜಿ ಲಿಂಗೈಕ್ಯರಾಗಿ 7 ವರ್ಷವಾದರೂ ಅವರು ನಮ್ಮೊಂದಿಗೆ ಇದ್ದಾರೆ ಅನ್ನುವ ಮನಸ್ಸು ನಮ್ಮದಾಗಿದೆ. ಶ್ರೀಗಳು ಸಮಾಜ ಮೆಚ್ಚುವಂತಹ ಸಾಮಾಜಿಕ ಕಾರ್ಯ ಮಾಡಿದವರು. ಸಾಧಕನಿಗೆ ಸಾವು ಅಂತ್ಯವಲ್ಲ, ಸಾವಿನ ನಂತರವೂ ಬದುಕುವವನೇ ಸಾಧಕ. ನಮಗೆಲ್ಲ ಶ್ರೀಗಳ ಒಡನಾಟ ದೊರಕಿದ್ದು ನಮ್ಮೆಲ್ಲರ ಪುಣ್ಯ ಎಂದರು.

ವಿಶ್ರಾಂತ ಪ್ರಾಚಾರ್ಯ ಸಿ.ಎಸ್. ಅರಸನಾಳ ಮಾತನಾಡಿ, ಪರಿಸರ ಸಂರಕ್ಷಣೆ ಮತ್ತು ಕಪ್ಪತಗುಡ್ಡದ ಉಳಿವಿಗಾಗಿ ಲಿಂ. ತೋಂಟದ ಶ್ರೀಗಳು ತೂಕಬದ್ಧ ಹೋರಾಟ ಮಾಡಿದ್ದಾರೆ. ಜಿಲ್ಲೆಯಿಂದ ಪೋಸ್ಕೋ ಕಂಪನಿಯನ್ನು ಓಡಿಸಲು ಶ್ರೀಗಳ ಹೋರಾಟವೇ ಕಾರಣ. ಕಪ್ಪತಗುಡ್ಡಕ್ಕೆ ಕಂಟಕ ಬಂದಾಗಲೆಲ್ಲ ಅವರು ದಿಟ್ಟವಾದ ನಿಲುವು ಮತ್ತು ಹೋರಾಟಕ್ಕಿಳಿಯುತ್ತಿದ್ದರು ಎಂದರು. ಪ್ರಾರಂಭದಲ್ಲಿ ಶ್ರೀಗಳ ಮೂರ್ತಿಗೆ ಪೂಜೆ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ಜಿ.ವಿ. ಹಿರೇಮಠ, ಮರಿತೆಮ್ಮಪ್ಪ ಆದಮ್ಮನವರ, ವಿರುಪಾಕ್ಷಪ್ಪ ಲಕ್ಕುಂಡಿ, ಕೆ.ಬಿ. ಕಂಬಳಿ, ಎಂ.ಬಿ. ತಾಂಬೋಟಿ, ಅಶೋಕ ಮಾನೆ ಸೇರಿ ಅನೇಕರು ಉಪಸ್ಥಿತರಿದ್ದರು. ಮೃತುಂಜ್ಯಯ ಹಿರೇಮಠ ಹಾಗೂ ಸಂಗಡಿಗರಿಂದ ಸಂಗೀತ ಸೇವೆ ಜರುಗಿತು. ರಮೇಶ ಕೊರ್ಲಹಳ್ಳಿ ಸ್ವಾಗತಿ, ನಿರೂಪಿಸಿ, ವಂದಿಸಿದರು.

PREV

Recommended Stories

ಬೆಂಗಳೂರು : ದೀಪಾವಳಿ ವೇಳೆ ವಾಯುಮಾಲಿನ್ಯ ಹೆಚ್ಚಾಗಲಿಲ್ಲ, ಭಾರೀ ಇಳಿಕೆ!
ಹೊಸೂರಿಗೆ ಮೆಟ್ರೋ ವಿಸ್ತರಣೆ ಅಸಾಧ್ಯ : ರಾಜ್ಯ ಸರ್ಕಾರಕ್ಕೆ ಬಿಎಂಆರ್‌ಸಿಎಲ್‌ ವರದಿ