ಕನ್ನಡಪ್ರಭ ವಾರ್ತೆ ಬೆಂಗಳೂರು
ಬಸವನಗುಡಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌ನಲ್ಲಿ ‘ಪುಸ್ತಕ ಪ್ರಪಂಚ’ ಕೃತಿ ಬಿಡುಗಡೆ ಕಾರ್ಯಕ್ರಮ ನಡೆಯಿತು.
ಬಳಿಕ ನಡೆದ ಸಂವಾದದಲ್ಲಿ ಮಾತನಾಡಿದ ಕೃತಿಕಾರ ಜಗದೀಶಶರ್ಮಾ ಸಂಪ ‘ಪ್ರಶ್ನಿಸದೆ, ಉತ್ತರ ಕಂಡುಕೊಳ್ಳದೆ ತನ್ನಷ್ಟಕ್ಕೆ ತಾನಿದ್ದು ಕಟ್ಟುಪಾಡಿಗೆ ಒಳಗಾಗಿದ್ದರ ದುಷ್ಪರಿಣಾಮವೇನು ಎಂಬುದನ್ನು ಮಹಾಭಾರತ ಹೇಳುತ್ತದೆ. ವಿಫುಲವಾಗಿರುವ ಮಾಹಿತಿ, ಸಂಪತ್ತು, ಆಹಾರ ಲಭ್ಯತೆಯೇ ವ್ಯಾಪಕ ದುರ್ಬಳಕೆಗೆ ಕಾರಣವಾಗಿದೆ. ಅತಿಯಾದ ಅರಿವು ಕೂಡ ಇಂದು ಸಮಾಜಕ್ಕೆ ಹಾನಿಕಾರಕವಾಗಿದೆ’ ಎಂದು ಹೇಳಿದರು.ಡಾ। ನಾ.ಸೋಮೇಶ್ವರ ಮಾತನಾಡಿ, ನಾಲಿಗೆ ರುಚಿಗಿಂತ ಹೆಚ್ಚಾಗಿ ಉತ್ತಮ ಆಹಾರ ಸಂಸ್ಕೃತಿ ಬೆಳೆಸಿಕೊಂಡು ಆರೋಗ್ಯ ಕಾಪಾಡಿಕೊಳ್ಳಬೇಕು. ನಮ್ಮ ಜೀವಕೋಶಗಳಿಗೆ ಅಗತ್ಯವಿರುವ ನಾರಿನ ಪದಾರ್ಥವನ್ನು ಸೇವಿಸಬೇಕು. ವೈಜ್ಞಾನಿಕವಾದ ಪಾರಂಪರಿಕ ಆಹಾರ ಪದ್ಧತಿ ಅಳವಡಿಸಿಕೊಳ್ಳಬೇಕು. ಇಲ್ಲದಿದ್ದರೆ ನಮ್ಮ ದೇಹ, ಮನಸ್ಸು, ಅಧ್ಯಾತ್ಮಿಕ ರೋಗ ಹದಗೆಡಲು ಕಾರಣವಾಗುತ್ತದೆ ಎಂದರು.
ಏಮ್ ಹೈ ಕನ್ಸಲ್ಟಿಂಗ್ ಸಿಇಒ, ಸ್ಟಾರ್ಟ್ ಅಪ್ ಮಾರ್ಗದರ್ಶಕ ಎನ್.ರವಿಶಂಕರ್ ಸಂವಾದವನ್ನು ನಿರ್ವಹಿಸಿದರು. ಇದಕ್ಕೂ ಮುನ್ನ ‘ಕನ್ನಡಪ್ರಭ’ ಪುರವಣಿ ಸಂಪಾದಕ ಗಿರೀಶ್‌ರಾವ್ ಹತ್ವಾರ್, ಸಾವಣ್ಣ ಪ್ರಕಾಶನವು ನೈಜ ಓದುಗರಿಗೆ ಪುಸ್ತಕ ತಲುಪುವಂತೆ ಮಾಡುತ್ತಿದೆ ಎಂದು ಶ್ಲಾಘಿಸಿದರು. ಸಪ್ನ ಬುಕ್‌ಹೌಸ್ ಕನ್ನಡ ವಿಭಾಗದ ಮುಖ್ಯಸ್ಥ ಆರ್.ದೊಡ್ಡೆಗೌಡ ಮಾತನಾಡಿದರು. ಸಾವಣ್ಣ ಪ್ರಕಾಶನದ ಜಮೀಲ್ ಸುವರ್ಣ ವೇದಿಕೆಯಲ್ಲಿದ್ದರು.