- ಗುತ್ತಿದುರ್ಗ ಕಾರ್ಯಕ್ರಮದಲ್ಲಿ ಬೇಸಾಯ ತಜ್ಞ ಬಿ.ಒ.ಮಲ್ಲಿಕಾರ್ಜುನ - - - ಕನ್ನಡಪ್ರಭ ವಾರ್ತೆ, ದಾವಣಗೆರೆ ಬರ ನಿರೋಧಕ ಹಾಗೂ ಮಧ್ಯಮ ಅವಧಿ ತೊಗರಿ ತಳಿಯಾದ ಟಿಎಸ್-3 ಆರ್ ಮೆಕ್ಕೆಜೋಳದಲ್ಲಿ ಅಂತರ ಬೆಳೆಯಾಗಿ ಬೆಳೆಯಬೇಕು ಎಂದು ಬೇಸಾಯ ತಜ್ಞ ಬಿ.ಒ. ಮಲ್ಲಿಕಾರ್ಜುನ ಅಭಿಪ್ರಾಯಪಟ್ಟರು.
ಜಗಳೂರು ತಾಲೂಕಿನ ಗುತ್ತಿದುರ್ಗ ಗ್ರಾಮದಲ್ಲಿ ದಾವಣಗೆರೆಯ ಐಸಿಎಆರ್- ತರಳಬಾಳು ಕೃಷಿ ವಿಜ್ಞಾನ ಕೇಂದ್ರ ವತಿಯಿಂದ ನಡೆದ "ಮೆಕ್ಕೆಜೋಳದಲ್ಲಿ ಅಂತರ ಬೆಳೆಯಾಗಿ ತೊಗರಿ ಬೆಳೆ ಮುಂಚೂಣಿ " ಪ್ರಾತ್ಯಕ್ಷಿಕೆ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಹವಾಮಾನ ವೈಪರೀತ್ಯ ಹಿನ್ನೆಲೆ ಮೆಕ್ಕೆಜೋಳವನ್ನು ಏಕ ಬೆಳೆಯಾಗಿ ಬೆಳೆದಾಗ ನಷ್ಟವಾಗಬಹುದು. ಆ ಕಾರಣದಿಂದ ಮೆಕ್ಕೆಜೋಳದಲ್ಲಿ ಅಂತರ ಬೆಳೆಯಾಗಿ ದ್ವಿದಳ ಧಾನ್ಯ ತೊಗರಿ ಕೃಷಿ ಸೂಕ್ತ. ಪ್ರತಿ ಎಕರೆ ತೊಗರಿ ಬೀಜಕ್ಕೆ ಶಿಫಾರಸು ಮಾಡಿದ ಜೈವಿಕ ಗೊಬ್ಬರಗಳಾದ ರೈಸೋಬಿಯಂ ಮತ್ತು ರಂಜಕ ಕರಿಗಿಸುವ ಗೊಬ್ಬರದಿಂದ ಬೀಜೋಪಚಾರ ಮಾಡಿ ಬಿತ್ತನೆ ಮಾಡಬೇಕು. ಇದರಿಂದ ಶೇ.25ರಷ್ಟು ರಾಸಾಯನಿಕ ಗೊಬ್ಬರದಲ್ಲಿ ಕಡಿತಗೊಳಿಸಬಹುದು ಎಂದು ತಿಳಿಸಿದರು.
ಕೇಂದ್ರದ ಮುಖ್ಯಸ್ಥ ಡಾ. ಟಿ.ಎನ್. ದೇವರಾಜ ಮಾತನಾಡಿ, ಆಧುನಿಕ ತಂತ್ರಜ್ಞಾನಗಳು ಹಾಗೂ ಅಧಿಕ ಇಳುವರಿ ಕೊಡುವ ತಳಿಗಳ ಬಳಕೆಯನ್ನು ರೈತರು ಮಾಡಬೇಕು ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ರೈತರಿಗೆ ಒಳ ಸುರಿವುಗಳಾದ ತೊಗರಿ ಬೀಜ ಹಾಗೂ ಜೈವಿಕ ಗೊಬ್ಬರಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಮಣ್ಣು ವಿಜ್ಞಾನಿ ಎಚ್.ಎಂ. ಸಣ್ಣಗೌಡ, ಸಸ್ಯ ಸಂರಕ್ಷಣಾ ತಜ್ಞ ಡಾ. ಟಿ.ಜಿ. ಅವಿನಾಶ, ರೈತ ಉತ್ಪಾದಕ ಕಂಪನಿಯ ನಿರ್ದೇಶಕ ಬಸವನಗೌಡ, ಪ್ರಗತಿಪರ ರೈತರು ಭಾಗವಹಿಸಿದ್ದರು.
- - - -31ಕೆಡಿವಿಜಿ39ಃ:ಜಗಳೂರು ತಾಲೂಕು ಗುತ್ತಿದುರ್ಗದಲ್ಲಿ "ಮೆಕ್ಕೆಜೋಳದಲ್ಲಿ ಅಂತರ ಬೆಳೆಯಾಗಿ ತೊಗರಿ ಬೆಳೆ ಮುಂಚೂಣಿ " ಪ್ರಾತ್ಯಕ್ಷಿಕೆಯ ತರಬೇತಿ ಕಾರ್ಯಕ್ರಮ ನಡೆಯಿತು.