ಕನ್ನಡಪ್ರಭ ವಾರ್ತೆ ಮಂಗಳೂರು
ಜಿಲ್ಲೆಯ 86 ಗ್ರಾಮಗಳನ್ನು ಸಂಭವನೀಯ ಪ್ರವಾಹ ಪೀಡಿತ, ಭೂಕುಸಿತ ಪ್ರದೇಶಗಳಾಗಿ ಗುರುತಿಸಲಾಗಿದೆ. ಈ ಗ್ರಾಮಗಳ ಒಟ್ಟು 90 ಪ್ರದೇಶಗಳಲ್ಲಿ ಪ್ರವಾಹ ಪೀಡಿತ ಹಾಗೂ 73 ಪ್ರದೇಶಗಳಲ್ಲಿ ಭೂಕುಸಿತ ಪ್ರದೇಶಗಳನ್ನು ಗುರುತಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು 97 ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಭೂಕುಸಿತ, ಪ್ರವಾಹ, ಅಗ್ನಿ ಅವಘಡ ಸೇರಿದಂತೆ ಇತರ ಯಾವುದೇ ವಿಪತ್ತುಗಳು ಸಂಭವಿಸಿದಲ್ಲಿ ಸಮರ್ಪಕವಾಗಿ ಎದುರಿಸಲು ಜಿಲ್ಲಾ ಮಟ್ಟದಲ್ಲಿ ಮಾತ್ರವಲ್ಲದೆ, ಪ್ರತಿ ಗ್ರಾ.ಪಂ., ವಾರ್ಡ್ ಮಟ್ಟದಲ್ಲಿಯೂ ಇನ್ಸಿಡೆಂಟ್ ಕಮಾಂಡರ್‌ಗಳನ್ನು ನೇಮಕ ಮಾಡಲಾಗಿದೆ. ಇವರು ಸಂಭವನೀಯ ವಿಪತ್ತು ಪ್ರದೇಶಗಳನ್ನು ಮುಂಚಿತವಾಗಿ ಗುರುತಿಸಿ, ಸ್ಥಳೀಯವಾಗಿ ಲಭ್ಯವಿರುವ ಬೋಟ್, ಮರ ಕತ್ತರಿಸುವ ಯಂತ್ರ, ಹಗ್ಗ, ಜೆಸಿಬಿ, ಕ್ರೇನ್ ಮೊದಲಾದ ರಕ್ಷಣಾ ವ್ಯವಸ್ಥೆ, ಮಾನವ ಸಂಪನ್ಮೂಲವನ್ನು ಕ್ರೋಡೀಕರಿಸಿಕೊಂಡು ಸಿದ್ಧರಾಗಿರಲು ಸೂಚಿಸಲಾಗಿದೆ ಎಂದರು.ಜಿಲ್ಲೆಯಲ್ಲಿ ನುರಿತ ಈಜು ತಜ್ಞರು, ಮುಳುಗು ತಜ್ಞರನ್ನು ತಾಲೂಕು ಹಂತದಲ್ಲಿ ಗುರುತಿಸಲಾಗಿದೆ. ಉಳ್ಳಾಲ, ಸೋಮೇಶ್ವರ, ಮೊಗವೀರಪಟ್ಣ, ಪಣಂಬೂರ, ತಣ್ಣೀರುಬಾವಿ, ಸಸಿಹಿತ್ಲು ಮತ್ತು ಸುರತ್ಕಲ್ ಕಡಲ ಕಿನಾರೆಗಳಲ್ಲಿ ಜೂನ್‌ನಿಂದ ಸೆಪ್ಟಂಬರ್‌ರೆಗೆ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸಲು ಗೃಹ ರಕ್ಷಕ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ವಿವರಿಸಿದರು.
ಮಳೆ ಹಾನಿ: ದ.ಕ. ಜಿಲ್ಲೆಯಲ್ಲಿ ಮುಂಗಾರು ಪೂರ್ವ ಪ್ರಾಕೃತಿಕ ವಿಕೋಪದಿಂದ ಒಟ್ಟು 124 ಮನೆಗಳು ಹಾನಿಗೊಳಗಾಗಿವೆ. ಸುಳ್ಯ ತಾಲೂಕಿನಲ್ಲಿ 3 ಮನೆಗಳು ಸಂಪೂರ್ಣವಾಗಿ ಹಾನಿಗೊಳಗಾಗಿದ್ದು, ವಿವಿಧ ತಾಲೂಕುಗಳಲ್ಲಿ ಒಟ್ಟು 16 ಮನೆಗಳು ತೀವ್ರವಾಗಿ ಹಾಗೂ 105 ಮನೆಗಳು ಭಾಗಶ: ಹಾನಿಗೊಳಗಾಗಿವೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಮಾಹಿತಿ ನೀಡಿದರು.
ಮಳೆಗಾಲದಲ್ಲಿ ಸಾಂಕ್ರಾಮಿಕ ರೋಗ ಹರಡದಂತೆ ಮುಂಜಾಗ್ರತಾ ಕ್ರಮ ವಹಿಸುವುದು ಹಾಗೂ ಆ್ಯಂಬುಲೆನ್ಸ್‌ಗಳನ್ನು ಸನ್ನದ್ಧವಾಗಿರಿಸಲು ಆರೋಗ್ಯ ಇಲಾಖೆಗೆ ಸೂಚನೆ ನೀಡಲಾಗಿದೆ.
ಮೀನುಗಾರಿಕಾ ನಿಷೇಧ ಅವಧಿಯಲ್ಲಿ ನಾಡದೋಣಿಗಳು ಸಮದ್ರ, ನದಿಗೆ ಹೋಗದಂತೆ ಕಟ್ಟನಿಟ್ಟಿನ ಕ್ರಮ ವಹಿಸಲು ಮೀನುಗಾರಿಕಾ ಇಲಾಖೆಗೆ ನಿರ್ದೇಶನ.ಘಾಟಿ ಪ್ರದೇಶಗಳಲ್ಲಿ ಭೂಕುಸಿತ ಸಂಭವಿಸಿದ್ದಲ್ಲಿ ವಾಹನಗಳು, ಜನಸಾಮಾನ್ಯರು ಆ ಪ್ರದೇಶಕ್ಕೆ ಪ್ರವೇಶಿಸುವ ಮುಂಚಿತವಾಗಿ ಮಾಹಿತಿ ಲಭ್ಯ ಹಾಗೂ ಬದಲಿ ರಸ್ತೆ ವ್ಯವಸ್ಥೆ ಕಲ್ಪಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಸೂಚನೆ.