ಕನ್ನಡಪ್ರಭ ವಾರ್ತೆ ಬಂಟ್ವಾಳ
ಆರಂಭದಲ್ಲಿ ದಡ್ಡಲಕಾಡುವಿನ ಶ್ರೀ ಜಗದಾಂಬಿಕ ಭಜನಾ ಮಂದಿರದಲ್ಲಿ ಪ್ರಾರ್ಥಿಸಿ ಮೆರವಣಿಗೆಗೆ ಚಾಲನೆ ನೀಡಲಾಯಿತು. ಅಪಾರ ಸಂಖ್ಯೆಯಲ್ಲಿ ಸೇರಿದ್ದ ಪಾಲಕರೊಂದಿಗೆ ಮಕ್ಕಳು ಶಾಲೆಯತ್ತ ಹೆಜ್ಜೆ ಹಾಕಿದರು. ಹೊಸ ವಿದ್ಯಾರ್ಥಿಗಳನ್ನು ಶಿಕ್ಷಕರು ಪುಷ್ಪಾರ್ಚನೆಯ ಜೊತೆ ಪನ್ನೀರು ಸಿಂಪಡಿಸಿ ಸ್ವಾಗತಿಸಲಾಯಿತು.
ಶಾಲೆಯನ್ನು ಹಸಿರು ಎಳೆಗಳ ತಳಿರು ತೋರಣ, ಬಂಟಿಂಗ್ಸ್‌ಗಳಿಂದ ಅಲಂಕರಿಸಲಾಗಿತ್ತು. ಈ ಸಂದರ್ಭ ವಿದ್ಯಾರ್ಥಿಗಳ ಪಾಲಕರು ದೊಡ್ಡ ಪ್ರಮಾಣದಲ್ಲಿ ಹಸಿರುವಾಣಿ ಹೊರೆಕಾಣಿಕೆಯನ್ನು ಶಾಲೆಗೆ ಸಮರ್ಪಿಸಿದರು.ತೊಂಡೆ, ಬೆಂಡೆ, ಸೌತೆಕಾಯಿ, ಬಸಳೆ, ಕುಂಬಳ, ಬಟಾಟೆ, ಈರುಳ್ಳಿ, ತೆಂಗಿನಕಾಯಿ ಮೊದಲಾದ ಕಾಯಿ ಪಲ್ಲೆಗಳು ಸೇರಿದಂತೆ ಲೋಟ, ಬಟ್ಟಲು, ಕತ್ತಿ, ಹಾರೆ, ತೆಂಗಿನಕಾಯಿ ಸುಲಿಯವ ಸಾಧನ ಮೊದಲಾದ ಉಪಯುಕ್ತ ಸಾಮಗ್ರಿಗಳು ಶಾಲೆಗೆ ಸಂದಾಯವಾಯಿತು.
ಪ್ರಾಥಮಿಕ ಶಾಲಾ ಸಹಶಿಕ್ಷಕಿ ಹಿಲ್ಡಾ ಫರ್ನಾಂಡಿಸ್ ಹಾಗೂ ಪ್ರೌಢಶಾಲಾ ವಿಭಾಗದ ಎಸ್‌ಡಿಎಂಸಿ ಕಾರ್ಯಾಧ್ಯಕ್ಷ ಪುರುಷೋತ್ತಮ ಅಂಚನ್ ಪೂರಕ ಮಾಹಿತಿ ನೀಡಿದರು. ಈ ಸಂದರ್ಭ ವಿದ್ಯಾರ್ಥಿಗಳಿಗೆ ಸಾಂಕೇತಿಕವಾಗಿ ಸಮವಸ್ತ್ರ ಹಾಗೂ ಪುಸ್ತಕ ವಿತರಿಸಲಾಯಿತು. ವೇದಿಕೆಯಲ್ಲಿ ಟ್ರಸ್ಟಿ ರಾಮಚಂದ್ರ ಪೂಜಾರಿ ಕರೆಂಕಿ, ಶಿಕ್ಷಕರಾದ ಅನಿತಾ, ಕವಿತಾ ಉಪಸ್ಥಿತರಿದ್ದರು. ಪ್ರೌಢಶಾಲಾ ಮುಖ್ಯ ಶಿಕ್ಷಕ ರಮಾನಂದ ಸ್ವಾಗತಿಸಿದರು. ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ವಿನ್ನಿ ಸಿಂಥಿಯಾ ವಂದಿಸಿದರು. ಶಿಕ್ಷಕಿ ಜಯಶ್ರೀ ಕಾರ್ಯಕ್ರಮ ನಿರೂಪಿಸಿದರು.