ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ತಾಲೂಕಿನ ಬೇಗೂರು ಸುತ್ತ ಮುತ್ತ ಶುಕ್ರವಾರ ಸಂಜೆ ಸುರಿದ ಧಾರಾಕಾರ ಮಳೆಗೆ ಹಳ್ಳ ಕೊಳ್ಳಗಳಲ್ಲಿ ನೀರು ಹರಿದಾಡಿದ್ದು,ಗಾಳಿ ಇಲ್ಲದೆ ಮಳೆ ಸುಮಾರು ಒಂದು ಗಂಟೆಗಳ ಕಾಲ ಸುರಿದಿದೆ. ಬೇಗೂರು ಬಳಿಯ ಪೊಲೀಸ್ ಠಾಣೆ ಹಳ್ಳ, ಐಟಿಐ ಬಳಿ ಹಳ್ಳ ಹಾಗೂ ಬಿಎಂಪಿ ಪೆಟ್ರೋಲ್ ಬಂಕ್ ಬಳಿಯ ಮೈಸೂರು-ಊಟಿ ಹೆದ್ದಾರಿಯಲ್ಲಿ ಮಳೆ ನೀರು ಹರಿದು ವಾಹನಗಳ ಸಂಚಾರ ಅಸ್ತವ್ಯಸ್ಥಗೊಂಡಿತ್ತು.ಬೇಗೂರು ಗ್ರಾಮದೊಳಗೆ ಮಳೆಯ ನೀರು ನಿಂತು ರಸ್ತೆಗಳೆಲ್ಲ ಕೆಸರು ಮಯವಾಗಿದೆ. ಕಮರಹಳ್ಳಿ ಕೆರೆಗೆ ಮಳೆಯ ನೀರು ತುಸು ರಭಸವಾಗಿ ಹರಿಯುತ್ತಿದ್ದು, ಕೋಟೆಕೆರೆ ರಸ್ತೆಯ ಲಿಟಲ್ ಫ್ಲವರ್ ಶಾಲೆಯ ಪಶ್ಚಿಮ ಭಾಗದ ಸರ್ಕಾರಿ ಜಾಗದಲ್ಲಿ ನೀರು ಹರಿದಾಡಿದೆ.
ಗಾಳಿಯ ವೇಗ ಇಲ್ಲದ ಕಾರಣ ಬೇಗೂರು ಸುತ್ತ ಮುತ್ತಲಿನ ಗ್ರಾಮದಲ್ಲಿ ಮಳೆ ಸುರಿದ ಕಾರಣ ಕನಿಷ್ಠ ಒಂದು ವಾರಗಳ ಕಾಲ ಬಿತ್ತನೆ ಮಾಡಲು ಆಗಲ್ಲ ಎಂದು ಬೇಗೂರು ಗ್ರಾಮದ ನಾಗಪ್ಪ ಹೇಳಿದ್ದಾರೆ. ಯುಗಾದಿ ಹಬ್ಬದ ಬಳಿಕ ಬೇಗೂರು ಭಾಗದಲ್ಲಿ ಮಳೆ ಬಂದರೂ ಅಷ್ಟು ಜೋರಾಗಿ ಬಿದ್ದಿರಲಿಲ್ಲ.ಶುಕ್ರವಾರ ಸಂಜೆ ಬಿದ್ದ ಮಳೆಗೆ ಜಮೀನಿನಲ್ಲಿ ನೀರು ನಿಂತಿದೆ. ಹತ್ತಿ, ಸೂರ್ಯಕಾಂತಿ ಬಿತ್ತನೆ ಮಾಡಿದ ಜಮೀನಿನಲ್ಲೂ ನೀರು ನಿಂತಿದ್ದು ಕೆಲ ಜಮೀನಿನಲ್ಲಿ ಬೀಜಗಳು ನೀರಿನಲ್ಲಿ ಕೊಚ್ಚಿಹೋಗಿವೆ.ರೈತರ ಸಂತಸ: ಬೇಗೂರು ಭಾಗದಲ್ಲಿ ಕಳೆದ ವರ್ಷ ಮುಂಗಾರು ಆರಂಭವಾದರೂ ಮಳೆ ಸಮರ್ಪಕವಾಗಿ ಬೀಳದ ಕಾರಣ ಬರದ ಛಾಯೆ ಎದುರಾಗಿತ್ತು. ಶುಕ್ರವಾರ ಸಂಜೆ ಬಿದ್ದ ಮಳೆಗೆ ರೈತರ ಮುಖದಲ್ಲಿ ಸಂತಸ ಕಂಡು ಬಂತು.
ವಾಹನ ಸವಾರರ ಪರದಾಟ: ಬೇಗೂರು ಬಳಿ ಬಿಎಂಪಿ ಪೆಟ್ರೋಲ್ ಬಂಕ್ ಮುಂದಿನ ಪಶ್ಚಿಮ ಭಾಗದ ಹಳ್ಳದಿಂದ ಹರಿದು ಬಂದ ನೀರು ಹೆದ್ದಾರಿ ಮೇಲೆ ಹರಿದ ಕಾರಣ ಮೈಸೂರು-ಊಟಿ ಹೆದ್ದಾರಿಯ ತೆರಳುತ್ತಿದ್ದ ಎರಡು ಬದಿ ವಾಹನಗಳು ಗಂಟೆಗಟ್ಟಲೇ ನಿಂತು ನಿಧಾನವಾಗಿ ಸಂಚರಿಸುವ ಸಮಯದಲ್ಲಿ ಟ್ರಾಫಿಕ್ ಜಾಮ್ ಆಗಿ ಸವಾರರು ಪರದಾಡಿಸಿದರು.