ಕನ್ನಡಪ್ರಭ ವಾರ್ತೆ ಟಿ. ನರಸೀಪುರಬುದ್ಧ ಎಂದರೆ ಪ್ರಜಾಪ್ರಭುತ್ವ ಮನುಷ್ಯತ್ವ ಪ್ರೀತಿ ದಯೆ ಕರುಣೆ ಹಾಗೂ ಸಾಮರಸ್ಯ ಸಂಕೇತ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ. ಮಹದೇವಪ್ಪ ಹೇಳಿದರು.ವರುಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ತಾಲೂಕಿನ ಕೂಡ್ಲೂರು ಗ್ರಾಮದ ಬಳಿ ಪ್ರವಾಸೋದ್ಯಮ ಇಲಾಖೆ ಅನುದಾನದಲ್ಲಿ ನಿರ್ಮಿಸಿರುವ ಗೌತಮ ಬುದ್ಧ ಎಜುಕೇಶನಲ್ ಅಂಡ್ ಕಲ್ಚರಲ್ ಟ್ರಸ್ಟ್ ನಳಂದಬುದ್ಧ ವಿಹಾರ ಲೋಕಾರ್ಪಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಮನುಷ್ಯರು ಹುಟ್ಟಿದ ಮೇಲೆ ಧರ್ಮ ಹುಟ್ಟಿದೆ. ಆ ಧರ್ಮವನ್ನು ನಾವು ಮಾಡಿಕೊಂಡಿದ್ದೇವೆ, ಧರ್ಮವು ನಮ್ಮ ನಡೆ ನುಡಿ ಆಚಾರ ವಿಚಾರಗಳು ಜೀವನ ಶೈಲಿ ಸಾಂಸ್ಕೃತಿಕ ನೆಲೆಗಟ್ಟಿನಲ್ಲಿ ನಿರ್ಮಾಣವಾಗಿದೆ ಎಂದರು.ಧರ್ಮದಿಂದ ಸಾಂಸ್ಕೃತಿಕ ಚಿಂತನೆಗಳು ಬಂದಿಲ್ಲ, ಸಾಂಸ್ಕೃತಿಕ ಚಿಂತನೆಗಳಿಂದ ಧರ್ಮ ರೂಪಿಸಲ್ಪಟ್ಟಿದೆ, 2,600 ವರ್ಷಗಳ ಹಳೆಯದಾದ ಬೌದ್ಧ ಧರ್ಮವು ಬದುಕಿನ ಮೌಲ್ಯಗಳನ್ನು, ಜೀವನೋಪಾಯದ ಮಾರ್ಗಗಳನ್ನು ಮತ್ತು ಸತ್ಯದ ಅರಿವನ್ನು ಮೂಡಿಸಿದೆ. ಜಗತ್ತಿನ ಶ್ರೇಷ್ಠ ವಿಜ್ಞಾನಿ ಆಲ್ಬರ್ಟ್ ಐನ್ಸ್ಟೈನ್ ನಾನು ಯಾವ ಧರ್ಮವನ್ನು ಪಾಲಿಸುವುದಿಲ್ಲ ಪಾಲಿಸುವುದಾದರೆ ನಾನು ಬೌದ್ಧ ಧರ್ಮವನ್ನು ಪಾಲಿಸುತ್ತೇನೆ ಏಕೆಂದರೆ ಬೌದ್ಧ ಧರ್ಮವು ವಾಸ್ತವಿಕ ಅಂಶಗಳ ಜಗತ್ತಿನಲ್ಲಿ ಸಂದೇಶಗಳನ್ನು ನೀಡಿದೆ ಎಂದು ಹೇಳಿದರೆ ವಿವೇಕಾನಂದರು ನಾನು ಬುದ್ಧರ ಸೇವಕರ ಸೇವಕ ಎಂದು ಹೇಳುವುದರ ಹಿಂದೆ ಬೌದ್ಧ ಧರ್ಮದ ಮಹತ್ವ ಎದ್ದು ಕಾಣುತ್ತದೆ ಎಂದರು.ಅಧ್ಯಕ್ಷತೆ ವಹಿಸಿದ್ದ ವಿಧಾನ ಪರಿಷತ್ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ ಮಾತನಾಡಿ, ಬೌದ್ಧ ಧರ್ಮದ ಸಿದ್ದಾಂತ ಹಾಗೂ ಧೆಯೋದ್ದೇಶಗಳು ಜಗತ್ತಿನಲ್ಲಿ ಇಂದಿಗೂ ಪ್ರಸ್ತುತವಾಗಿವೆ. ಧರ್ಮದ ಸಮಾನತೆ ಮತ್ತು ಕರುಣೆ ಎಲ್ಲಾ ಜನರನ್ನು ಆಕರ್ಷಿಸುತ್ತದೆ. ಹಿಂದುತ್ವದ ಮೂಲಭೂತವಾದ ಪ್ರಜಾಪ್ರಭುತ್ವಕ್ಕೆ ಅಪಾಯಕಾರಿಯಾಗಿದ್ದು, ಅನ್ಯ ಧರ್ಮವನ್ನು ದ್ವೇಷಿಸುವ, ಧರ್ಮಕ್ಕಾಗಿ ಅನ್ಯಾಯ ಮತ್ತು ದೌರ್ಜನ್ಯವನ್ನು ಸಮರ್ಥಿಸುವ ಸಮಾನತೆಯ ಸಮಾಜಕ್ಕೆ ಧಕ್ಕೆಯನ್ನು ತರಲಿದೆ ಎಂದು ತಿಳಿಸಿದರು.ನಂಜನಗೂಡು ಶಾಸಕ ದರ್ಶನ್ ಧ್ರುವನಾರಾಯಣ್ ಮಾತನಾಡಿ, ನಳಂದ ಬುದ್ಧ ವಿಹಾರದ ಮಾದರಿಯಲ್ಲಿಯೇ ಚಾಮರಾಜನಗರ ಬುದ್ಧ ವಿಹಾರದ ಅಭಿವೃದ್ಧಿ ಹಾಗೂ ಧರ್ದಮ ವಿಸ್ತರಣೆಗೆ ಹೆಚ್ಚಿನ ನೆರವನ್ನ ನೀಡಬೇಕೆಂದು ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದೇವೆ. ತಂದೆ ಆರ್. ಧ್ರುವನಾರಾಯಣ್ ಅವರಂತೆ ಸಮುದಾಯದ ಹಿತಕ್ಕೆ ದುಡಿಯಲು ಹಾಗೂ ಸೇವೆಯನ್ನು ಮಾಡಲು ಸದಾಕಾಲ ಸಿದ್ಧನಿದ್ದೇನೆ ಎಂದು ತಿಳಿಸಿದರು.ಉದ್ಘಾಟನೆಗೆ ಗೈರಾದ ಪಂಚಾಯತ್ ರಾಜ್ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಶುಭ ಸಂದೇಶ ರವಾನಿಸಿದ್ದರು. ಭದಂತ ಬೋಧಿಧಮ್ಮ ಝೆನ್ ಮಾಸ್ಟರ್, ಭಂತೇಜಿಗಳಾದ ಮನೋರಕ್ಕಿತ, ಬುದ್ಧ ಪ್ರಕಾಶ್, ಬೋಧಿದತ್ತ, ಡಾ. ಕಲ್ಯಾಣ ಸಿರಿ, ಸುಗತಪಾಲ, ಬುದ್ಧರತ್ನ, ಕಮಲರತ್ನ, ಬುದ್ಧಮ್ಮ ಬಿಕ್ಖುಣಿ ಹಾಗೂ ಗೌತಮಿ ಬಿಕ್ಖುಣಿ ಸಾನ್ನಿಧ್ಯ ವಹಿಸಿದ್ದರು.ವಿಧಾನಪರಿಷತ್ ಸದಸ್ಯ ಡಾ. ಡಿ. ತಿಮ್ಮಯ್ಯ, ಟ್ರಸ್ಟ್ ಅಧ್ಯಕ್ಷ ಭಂತೇ ಬೋಧಿರತ್ನ, ಗ್ರಾಪಂ ಅಧ್ಯಕ್ಷ ಸಿ. ನಿಂಗರಾಜು, ಜಿಪಂ ಮಾಜಿ ಸದಸ್ಯೆ ಶಶಿಕಲಾ ನಾಗರಾಜು, ಎಸ್.ಎನ್. ಸಿದ್ಧಾರ್ಥ, ಕೆ. ಮಹದೇವ, ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಬಿ.ಆರ್. ಪುಟ್ಟಸ್ವಾಮಿ, ಉಪಾಧ್ಯಕ್ಷ ಶಿವಣ್ಣ, ಸಹ ಕಾರ್ಯದರ್ಶಿ ಎನ್.ಲಿಂಗಪ್ಪಾಜಿ, ಖಜಾಂಚಿ ಮಹದೇವಯ್ಯ, ಟ್ರಸ್ಟಿಗಳಾದ ಪುಟ್ಟರಾಜು, ಮರಿಮಹದೇವಯ್ಯ, ಚಂದ್ರಕಲಾ, ಬಿ.ಸಿ. ಇಂದ್ರಮ್ಮ, ಹ.ರಾ. ಮಹೇಶ್, ಎಪಿಎಂಸಿ ಮಾಜಿ ಅಧ್ಯಕ್ಷ ಎನ್. ಅನಿಲ್ ಕುಮಾರ್, ತಾಪಂ ಸದಸ್ಯ ಗಣೇಶ್, ಗ್ರಾಪಂ ಮಾಜಿ ಅಧ್ಯಕ್ಷೆ ಚಂದ್ರಮ್ಮ, ಮಹದೇವಮ್ಮ ಇದ್ದರು.